ಅಕ್ಟೋಬರ್ 30ಕ್ಕೆ ಉಪ ಚುನಾವಣೆ. ಬಿಜೆಪಿ ಮತ್ತು ಕಾಂಗ್ರೆಸಿನ ಘಟಾನುಘಟಿಗಳೆಲ್ಲ ಪ್ರಚಾರಕ್ಕೆ ಬರುತ್ತಲೇ ಇದ್ದಾರೆ. ಈ ನಾಯಕರ ಅಬ್ಬರ, ಟೀಕೆ-ಪ್ರತಿಟೀಕೆಗಳ ದಾಳಿ ಜೋರಾಗಿಯೇ ಇದೆ.
ಆದರೆ ಹಾನಗಲ್ನ ಗ್ರಾಮಗಳಿಗೆ ಭೇಟಿ ನೀಡಿದರೆ, ಅಲ್ಲಿ ಕಾಂಗ್ರೆಸಿನ ಶ್ರೀನಿವಾಸ್ ಮುಂದಿರುವಂತೆ ಕಾಣುತ್ತದೆ. ಬಿಜೆಪಿಯ ಶಿವರಾಜ್ ಸಜ್ಜನ್ ಬಹುತೇಕ ಗ್ರಾಮಗಳಲ್ಲಿ ಇನ್ನೂ ಅಪರಿಚಿತ. ಅವರು ಕಮಲ ಚಿಹ್ನೆ, ಧನಶಕ್ತಿ ಮತ್ತು ಆಡಳಿತ ಪಕ್ಷದ ನೆರವನ್ನು ನೆಚ್ಚಿಕೊಂಡಿದ್ದಾರೆ. ಇನ್ನೊಂದು ಕಡೆ ಮಾನೆ ಗ್ರಾಮಗಳಲ್ಲಿ ಸಂಚರಿಸುತ್ತ ಜನರ ನಡುವೆ ಒಲವು ಸಂಪಾದಿಸುತ್ತಿದ್ದಾರೆ.
ಫಲಿತಾಂಶ ಜನರದ್ದೋ ಅಥವಾ ಹಣದ್ದೋ ಎಂಬುದಕ್ಕೆ ಕಾಯಬೇಕಿದೆ. ಪ್ರತಿಧ್ವನಿ ಜೊತೆ ಸಂಪರ್ಕದಲ್ಲಿರುವ ಧಾರವಾಡದ ಹಿರಿಯ ಪತ್ರಕರ್ತರೊಬ್ಬರು ಮತ್ತು ಅವರ ಸ್ನೇಹಿತರು 3 ದಿನ ಕ್ಷೇತ್ರದಲ್ಲಿ ಸುತ್ತಾಡಿ ಸುಮಾರು 36 ಗ್ರಾಮಗಳಲ್ಲಿ ಜನರೊಂದಿಗೆ ಮಾತನಾಡಿದ ವಿವರಗಳನ್ನು ನಮ್ಮ ಜೊತೆ ಹಂಚಿಕೊಂಡಿದ್ದಾರೆ. ಇದರಾಚೆಯೂ ಪ್ರತಿಧ್ವನಿ ಬೇರೆ ಮೂಲಗಳಿಂದ ಮಾಹಿತಿ ಪಡೆದಿದೆ. ಇದರ ಒಟ್ಟು ವಿಶ್ಲೇಷಣೆಯ ಪ್ರಕಾರ ಕಾಂಗ್ರೆಸ್ ಮುಂದಿದೆ ಎನ್ನುವುದಕ್ಕಿಂತ ಶ್ರೀನಿವಾಸ್ ಮಾನೆ ಮುಂದಿದ್ದಾರೆ.
ಈ ಚುನಾವಣೆಯ ರೋಚಕತೆ ಮತ್ತು ಸೊಬಗು ಇರುವುದೇ ಇಲ್ಲಿ. ರಾಜ್ಯ ನಾಯಕರು ಅಬ್ಬರದ ಪ್ರಚಾರ ಮಾಡುತ್ತಿದ್ದರೆ ಶ್ರೀನಿವಾಸ್ ಮಾನೆ ಗ್ರಾಮಗಳಲ್ಲಿ ಮನೆಮನೆಗೆ ಭೇಟಿ ಇಡುತ್ತಿದ್ದಾರೆ. ಇದನ್ನು ಅವರು ಮೂರೂವರೆ ವರ್ಷಗಳಿಂದ ಮಾಡುತ್ತ ಬಂದಿದ್ದಾರೆ. ಅದಕ್ಕೆ ಸಾಕ್ಷಿ ಎಂಬಂತೆ ಹಳ್ಳಿಗಳ ಜನ ಹೂ ಸುರಿಸಿ ಅವರನ್ನು ಸ್ವಾಗತ ಮಾಡುತ್ತಿದ್ದಾರ.
ಇನ್ನೊಂದು ಕಡೆ ಶಿವರಾಜ್ ಸಜ್ಜನರ್ ಹಾವೇರಿ ಜಿಲ್ಲೆಯವರೇ ಆದರೂ ಹಾನಗಲ್ ಕ್ಷೇತ್ರಕ್ಕೆ ಅಪರಿಚಿತರು. ಅವರು ಇಲ್ಲಿವರೆಗೆ ಮಾಡಿಕೊಂಡು ಬಂದ ರಾಜಕಾರಣದ ಹಿಂದೆ ತಂತ್ರ ಮತ್ತು ಧನಶಕ್ತಿ ಕೆಲಸ ಮಾಡಿವೆ ಎನ್ನಲಾಗಿದೆ. ಸಜ್ಜನ್ ವಿರುದ್ಧ ಇರುವ ಭ್ರಷ್ಟಾಚಾರ ಮತ್ತು ಜಾತಿವಾದಿ ಆರೋಪಗಳು ಈ ಚುನಾವಣೆಯಲ್ಲಿ ಪ್ರಭಾವ ಬೀರಬಹುದೇ ಎಂಬುದನ್ನು ಊಹಿಸುವುದು ಕಷ್ಟ.
ಚುನಾವಣಾ ವರದಿ ಬರೆಯುತ್ತ ‘ಪ್ರತಿಧ್ವನಿ’ಗೆ’ ಸಜ್ಜನ್ ವಿರುದ್ಧದ ಭ್ರಷ್ಟಾಚಾರ ಮತ್ತು ಜಾತಿವಾದದ ಆರೋಪಗಳು ಕಂಡುಬಂದವು. ಈ ಕುರಿತ ದಾಖಲೆಗಳೂ ‘ಪ್ರತಿಧ್ವನಿ’’ಗೆ ಲಭ್ಯವಾಗಿವೆ. ಆದರೆ ಈ ಭ್ರಷ್ಟಾಚಾರದ ಅಂಶ ಚುನಾವಣೆಯಲ್ಲಿ ನೆಗೆಟಿವ್ ಆಗುತ್ತಾ ಎಂಬ ಬಗ್ಗೆ ಈಗಲೇ ಹೇಳಲು ಸಾಧ್ಯವಿಲ್ಲ.
ಮುಂದಿನ ಎರಡು ಉಪಶೀರ್ಷಿಕೆಗಳಲ್ಲಿ ಸಜ್ಜನ್ ಮತ್ತು ಮಾನೆಯವರ ವ್ಯಕ್ತಿತ್ವ, ನಿಲುವು, ರಾಜಕಾರಣದ ಶೈಲಿಯ ವಿವರಗಳನ್ನು ನಿಮ್ಮ ಮುಂದೆ ಪ್ರತಿಧ್ವನಿ ಇಡುತ್ತಿದೆ. ಇದೆಲ್ಲದಕ್ಕೂ ಆಧಾರಗಳಿವೆ ಮತ್ತು ಜನರ ಪ್ರತಿಕ್ರಿಯೆಗಳಿವೆ.
ಬಿಜೆಪಿಯ ಶಿವರಾಜ್ ಸಜ್ಜನರ್ ಅವಿಭಜಿತ ಧಾರವಾಡ ಜಿಲ್ಲೆಯಲ್ಲಿ ಜಿಲ್ಲಾ ಪಂಚಾಯತ ಸದಸ್ಯರಾಗಿದ್ದರು-ಜೆಡಿಯು ಪಕ್ಷದಿಂದ. 2004ರ ಅಸೆಂಬ್ಲಿ ಚುನಾವಣೆಯಲ್ಲಿ ಹಾವೇರಿ ಕ್ಷೇತ್ರದಿಂದ ಅವರು ಗೆದ್ದರು. ಇಲ್ಲಿ ಅವರೊಂದು (ಕು)ತಂತ್ರ ಹೆಣೆಯುತ್ತಾರೆ. ಹಾವೇರಿಯ ಖ್ಯಾತ ವಕೀಲರಾಗಿದ್ದ ಭೀಮಕ್ಕನವರ್ ಅವರಿಗೆ ಜೆಡಿಯು ಟಿಕೆಟ್ ಕೊಡಿಸಿ, ಅವರ ಗೆಲುವಿಗೆ ಶ್ರಮಿಸುವುದಾಗಿ ಹೇಳುತ್ತಾರೆ. ಕಾಂಗ್ರೆಸ್ನಿಂದ ಮಾಜಿ ಸಚಿವ ಬಸವರಾಜ ಶಿವಣ್ಣವರ್ ಅವರು ಎಂದಿನಂತೆ ಕಾಂಗ್ರೆಸ್ ಕ್ಯಾಂಡಿಡೇಟ್. ಆಗ ಸಜ್ಜನ್ ಆಟ ಶುರುವಾಗುತ್ತದೆ. ಅವರು ಬಿಜೆಪಿಯಿಂದ ಟಿಕೆಟ್ ಪಡೆದು ಭೀಮಕ್ಕನವರ್ಗೆ ಆಘಾತ ಮೂಡಿಸುತ್ತಾರೆ. ಕಾಂಗ್ರೆಸ್ ಮತ್ತು ಜನತಾ ಪರಿವಾರದ ಮತಗಳ ವಿಭಜನೆಯಾಗಿ ಅಲ್ಪ ಮತಗಳಿಂದ ಸಜ್ಜನ್ ವಿಧಾನಸಭೆ ಮೆಟ್ಟಿಲು ಏರುತ್ತಾರೆ. ಇದು ಸಜ್ಜನ್ ರಾಜಕಾರಣದ ಒಂದು ಸ್ಯಾಂಪಲ್.
ಮುಂದೆ ಬಸವರಾಜ್ ಬೊಮ್ಮಾಯಿ ಅವರು ಸವಣೂರು-ಶಿಗ್ಗಾವ್ ಕ್ಷೇತ್ರದಿಂದ ಚುನಾಯಿತರಾದ ನಂತರ, ಸ್ಥಳೀಯ ಸಂಸ್ಥೆಗಳ ಎಂಎಲ್ಸಿ ಸ್ಥಾನ ಖಾಲಿ ಬೀಳುತ್ತದೆ. ಆಗ ಅಲ್ಲಿ ಸಜ್ಜನ್ ಎಂಟ್ರಿ ಆಗುತ್ತದೆ. ಆಗ ಅವರು ಕಾಂಗ್ರೆಸ್ನ ಮಾನೆ ಅವರನ್ನು ಸೋಲಿಸಿ 14 ತಿಂಗಳ ಅಧಿಕಾರ ಅನುಭವಿಸುತ್ತಾರೆ. ಮುಂದಿನ ವಿಧಾನ ಪರಿಷತ್ ಚುನಾವಣೆಯಲ್ಲಿ ಇದೇ ಮಾನೆ ಎದುರು ದಯನೀಯ ಸೋಲು ಕಾಣುತ್ತಾರೆ. ಈಗ ಅದೇ ಮಾನೆ ಮತ್ತು ಸಜ್ಜನ್ ಹಾನಗಲ್ನಲ್ಲಿ ಮುಖಾಮುಖಿಯಾಗಿದ್ದಾರೆ.
ಭ್ರಷ್ಟಾಚಾರದ ಆರೋಪಗಳು: ಶಿವರಾಜ್ ಸಜ್ಜನರ್ ಸಕ್ಕರೆ ಕಾರ್ಖಾನೆಯೊಂದನ್ನು ದಿವಾಳಿ ಎಬ್ಬಿಸಿದ ಆರೋಪ ಎದುರಿಸಿ, ವಿಚಾರಣೆಯ ನಂತರ ಅವರ ತಪ್ಪು ಬಯಲಿಗೆ ಬಂದಿತ್ತು. ವಿಚಾರಣಾ ಆಯೋಗ ಸಜ್ಜನರಿಂದ 33 ಲಕ್ಷ ವಸೂಲಿ ಮಾಡುವಂತೆ ತಿಳಿಸಿತ್ತು. ಆಗ ಹಾವೇರಿ ಡಿಸಿಯಾಗಿದ್ದ ವಸ್ತ್ರದ್ ಅವರು ಈ ಬಗ್ಗೆ ಕ್ರಮ ಕೈಗೊಳ್ಳಲಿಲ್ಲ. ನಂತರ ಸಜ್ಜನ್ ಸ್ಟೇ ತಂದುಕೊಂಡು ನಿರಾಳರಾಗಿದ್ದಾರೆ.
ಇದು ಸಂಗೂರು ಕಾರ್ಖಾನೆ ದಿವಾಳಿಯಾದ ಕತೆ. ಹಿಂದೆ ರೈತ ಹಿತೈಷಿಯಾದ ತಾವರೆ ಫಕೀರಪ್ಪ ಮತ್ತು ಆ ಭಾಗದ ಖ್ಯಾತ ಹೋರಾಟಗಾರರಾಗಿದ್ದ ಎಂ.ಎಸ್ ಶಂಕರಿಕೊಪ್ಪ ಅವರು ರೈತರ ಶೇರುಗಳಿಂದ ಸಹಕಾರಿ ಸಕ್ಕರೆ ಕಾರ್ಖಾನೆ ಆರಂಬಿಸಿದ್ದರು. ಮುಂದೊಂದು ದಿನ ಶಿವರಾಜ್ ಸಜ್ಜನರ್ ಈ ಕಾರ್ಖಾನೆಯ ಆಡಳಿತ ಮಂಡಳಿಯ ಉಪಾಧ್ಯಕ್ಷರಾದರು. ಆಗ ದಿ||ಸಿ.ಎಂ. ಉದಾಸಿ ಅಧ್ಯಕ್ಷರು. ಸಕ್ರಿಯ ರಾಜಕಾರಣದಲ್ಲಿದ್ದ ಉದಾಸಿ ಎಲ್ಲ ಜವಾಬ್ದಾರಿಯನ್ನು ಸಜ್ಜನ್ ಅವರಿಗೆ ನೀಡಿದರು. ಕಾರ್ಖಾನೆಯ ಕಬ್ಬು ಅರೆಯುವ ಸಾಮರ್ಥ್ಯವನ್ನು 1200 ಟನ್ಗಳಿಂದ 1800 ಟನ್ಗೆ ಏರಿಸುವುದಾಗಿ ಘೋಷಿಸಿದ ಸಜ್ಜನ್, ಕಾರ್ಖಾನೆಯ ಅಕೌಂಟುಗಳಿಂದ ಅಪಾರ ಹಣ ವಿತ್ಡ್ರಾ ಮಾಡಿ ಸೆಕೆಂಡ್ ಹ್ಯಾಂಡ್ ಯಂತ್ರೋಪಕರಣ ಖರೀದಿಸಿ ಕಾರ್ಖಾಬೆಗೆ 20 ಕೋಟಿ ನಷ್ಟ ಮಾಡಿದರು. ದಿವಾಳಿಯಾದ ಸಹಕಾರಿ ಕಾರ್ಖಾನೆಯಿಂದ ಸಾವಿರಾರು ರೈತರು ಮತ್ತು ಕೆಲಸಗಾರರು ಬೀದಿಗೆ ಬಿದ್ದರು. ಮುಂದೆ ವಿಚಾರಣಾ ಆಯೋಗ ನಡೆಸಿದ ತನಿಖೆಯಲ್ಲಿ ಸಜ್ಜನ್ ಪಾತ್ರ ಬಯಲಾಗಿತ್ತು.
ಸರ್ಕಾರಿ ಜಮೀನು ಕಬಳಿಕೆ?: ಹಾವೇರಿ ಸಮೀಪದ ಗೌರಾಪುರ ಗುಡ್ಡದ ಬಳಿ 25 ಎಕರೆ 22 ಗುಂಟೆ ಜಮೀನನ್ನು ಅತಿ ಕಡಿಮೆ ದರದಲ್ಲಿ ಸಜ್ಜನರ್ ಅವರ ಫಾರ್ಚೂನ್ ಅಗ್ರೋ ಇಂಡಸ್ಟ್ರಿಗೆ ತಹಸೀಲ್ದಾರ್ ಮಂಜೂರು ಮಾಡುತ್ತಾರೆ. ಅಲ್ಲಿ ಹತ್ತಿ ಜಿನ್ನಿಂಗ್ ಫ್ಯಾಕ್ಟರಿ ಮತ್ತು ಇತರ ಅಗ್ರೋ ಇಂಡಸ್ಟ್ರಿ ಶುರು ಮಾಡಿದ ಅವರು ಇವೆಲ್ಲವನ್ನೂ ಕಾಟಾಚಾರಕ್ಕೆ ಮಾಡಿದ್ದರಿಂದ ಹತ್ತಿ ಬೆಳೆಗಾರರು, ಕಾರ್ಮಿಕರು ಮತ್ತು ಹಮಾಲರು ಬೀದಿಗೆ ಬೀಳುತ್ತಾರೆ.
ದಲಿತ ವಿರೋಧಿ ಸಜ್ಜನ್: ಸಜ್ಜನ್ ಪುಟ್ಟಾಪೂರಾ ಜಾತಿವಾದಿ. ಲಿಂಗಾಯತರ ಗಾಣಿಗ ಸಮುದಾಯಕ್ಕೆ ಸೇರಿದ ಅವರು ಪಂಚಮಸಾಲಿಗಳ ಓಟು ಪಡೆದ ನಂತರ ಅವರನ್ನೇ ತುಳಿಯಲು ಯತ್ನಿಸಿದ ಆರೋಪ ಇವೆ. ಅದಕ್ಕಿಂತ ಮುಖ್ಯವಾಗಿ ಕೋಮುವಾದಿ ಆಗಿರುವ ಇವರು ಪಕ್ಕಾ ದಲಿತ ವಿರೋಧಿ. ಹಿಂದೊಂದರ ಸಭೆಯಲ್ಲಿ ,’ ದಲಿತರೇ ಎಚ್ಚರವಾಗಿರಿ. ಕಂಬಾಲಪಲ್ಲಿ ಘಟನೆ ನೆನಪಿಸಿಕೊಳ್ಳಿ’ ಎಂದು ಎಚ್ಚರಿಸಿದ್ದ ಆರೋಪವೂ ಇದೆ.
ಈಗ ಸಜ್ಜನ್ ನಂಬಿರುವುದು ಬೊಮ್ಮಾಯಿ ಸರ್ಕಾರದ ಆಡಳಿತ ಯಂತ್ರದ ನೆರವು, ಧನಶಕ್ತಿ ಮತ್ತು ಚುನಾವಣಾ (ಕು)ತಂತ್ರಗಳನ್ನು.
ಜನರ ನಡುವೆ ಜನಸಾಮಾನ್ಯರಾದ ಮಾನೆ
ಪ್ರಸ್ತುತ ವೃತ್ತಿ ರಾಜಕಾರಣದಲ್ಲಿ ಕಾಂಗ್ರೆಸ್ನ ಶ್ರೀನಿವಾಸ್ ಮಾನೆ ವಿಭಿನ್ನ ಎನಿಸಿದ್ದಾರೆ ಆದರೆ ಜನಪರವಾದ ರಾಜಕಾರಣ ಮಾಡುತ್ತಿದ್ದಾರೆ. ಕಳೆದ ಸಲ ಅವರು ಸೀನಿಯರ್ ಉದಾಸಿ ವಿರುದ್ಧ ನಿಂತಾಗ ಅವರಿಗೆ ಪ್ರಚಾರಕ್ಕೆ ದೊರೆತಿದ್ದು ಕೇವಲ 12 ದಿನ. ಈ ಸಲ ತಿಂಗಳು ಕಾಲ ದೊರೆತಿದೆ. ಅದಕ್ಕೂ ಮುಖ್ಯವಾದುದು ತಮ್ಮದೇ ಸಾಮಾಜಿಕ ಸಂಸ್ಥೆ ಮತ್ತು ತಮ್ಮ ಗೆಳೆಯರ ಸಂಸ್ಥೆಗಳ ನೆರವು ಪಡೆದು ಜನರನ್ನು ಸಂಕಷ್ಟ ಕಾಲದಲ್ಲಿ ಪಾರು ಮಾಡಿದ್ದಾರೆ. ಕಳೆದ ಮೂರೂವರೆ ವರ್ಷಗಳಿಂದ ಅವರು ಹಾನಗಲ್ನ ಹಳ್ಳಿ ಹಳ್ಳಿಗಳ ಜನತೆಗೆ ವೈದ್ಯಕೀಯ ಸೌಲಭ್ಯ ಒದಗಿಸಲು ನೆರವಾಗಿದ್ದಾರೆ.
ಲಾಕ್ ಡೌನ್ ಸಂದರ್ಭದಲ್ಲಿ ಅವರು ಮಹತ್ತರ ಸಹಾಯ ಮಾಡಿದ್ದಾರೆ. ತಾಲೂಕೂ ಆಸ್ಪತ್ರೆಯ ವೆಂಟಿಲೇಟರರ್ಗಳನ್ನು ರಿಪೇರಿ ಮಾಡಿಸಿಕೊಟ್ಟಿದ್ದಾರೆ. ಸ್ನೇಹಿತರು ಮತ್ತು ಸಂಘ ಸಂಸ್ಥೆಗಳ ನೆರವಿನಿಂದ ಆಕ್ಸಿಜನ್ ಕಾನ್ಸೆಂಟ್ರೇಟರ್ಗಳನ್ನು ಖರೀದಿಸಿ ಸರ್ಕಾರಿ ಆಸ್ಪತ್ರೆಗಳಿಗೆ ನೀಡಿದ್ದಾರೆ.
ಎಲ್ಲಕ್ಕೂ ಮುಖ್ಯವಾದ ಅಂಶಗಳು: ಲಾಕ್ ಡೌನ್ ಸಂದರ್ಭದಲ್ಲಿ ಸುಮಾರು 35 ಸಾವಿರ ಕುಟುಂಬಗಳಿಗೆ ಆಹಾರದ ಕಿಟ್ ಗಳನ್ನು ಒದಗಸಿದ್ದಾರೆ. ಆಶಾ, ಅಂಗನವಾಡಿ ಮತ್ತು ಬಿಸಿಯೂಟ ಕಾರ್ಯಕರ್ತರಿಗೆ ವಿಶೇಷ ನೆರವು ನೀಡಿದ್ದಾರೆ. ಕರ್ನಾಟಕದಲ್ಲೇ ಅಪರೂಪ ಅನಿಸಬಹುದಾದ ಒಂದು ಕೆಲಸ ಅವರು ಮಾಡಿದ್ದಾರೆ.. ಬೀದಿ ಬದಿ ವ್ಯಾಪಾರಸ್ಥರು, ದರ್ಜಿಗಳು, ಕ್ಷೌರಿಕರು, ಹಮಾಲರು ಮುಂತಾದ ಶ್ರಮಿಕ ಸಮುದಾಯದ 3 ಸಾವಿರ ಕುಟುಂಬಗಳಳ ಅಕೌಂಟುಗಳಿಗೆ ತಲಾ 2 ಸಾವಿರ ರೂಪಾಯಿ ಡಿಪಾಸಿಟ್ ಮಾಡಿದ್ದಾರೆ.
ಕೋವಿಡ್ ಸಂದರ್ಭದಲ್ಲಿ ಮಾನೆ ಜನರ ನಡುವೆಯೇ ಇದ್ದು ಸಾಕಷ್ಟು ವೈದ್ಯಕೀಯ ವ್ಯವಸ್ಥೆ ಒದಗಿಸಿದ್ದಾರೆ. ಅಂಬುಲೆನ್ಸ್, ಔಷಧಿ, ಹೀಗೆಲ್ಲ ಕೆಲಸ ಮಾಡಿದ್ದಾರೆ. ಇದೊಂದು ತರಹ ದೆಹಲಿಯಲ್ಲಿ ಕಾಂಗ್ರೆಸ್ ಯುವ ಘಟಕದ ಅಧ್ಯಕ್ಷ ಶ್ರೀನಿವಾಸ್ (ಶಿವಮೊಗ್ಗದವರು) ಮಾಡಿದ ತರಹದ ಸೇವೆಯೇ ಆಗಿದೆ.
ಸಜ್ಜನ್ ಮತ್ತು ಮಾನೆ ಕುರಿತ ಸವಿವರಗಳನ್ನು ‘ಪ್ರತಿಧ್ವನಿ’ ಕೊಟ್ಟಿದೆ. ಒಂದು ರೀತಿಯಲ್ಲಿ ಇದು ಧನ ರಾಜಕಾರಣ ಮತ್ತು ಜನ ರಾಜಕಾರಣದ ನಡುವಿನ ಚುನಾವಣೆ.
ಗೆಲುವು ಯಾರದ್ದು ಎಂಬುದನ್ನು ಫಲಿತಾಂಶ ಬರುವವರೆಗೂ ಕಾಯಬೇಕು ಅಲ್ಲವೇ?