ಬೆಂಗಳೂರಿಗೆ ಕಟ್ಟಡ ಕುಸಿಯುವ ಗ್ರಹಣ ಹಿಡಿದಿದೆ. ಅಲ್ಲಲ್ಲಿ ನಗರದಲ್ಲಿ ಕಟ್ಟಡ ಕುಸಿದು ಭೀತಿ ಉಂಟು ಮಾಡಿದೆ. ಈಗಾಗಲೇ ನಗರದಲ್ಲಿ ಸಾಲು ಸಾಲಾಗಿ ಕಟ್ಟಡಗಳು ಕುಸಿದಿದೆ. ಇನ್ನಷ್ಟು ಕಟ್ಟಡಗಳು ಕುಸಿಯುವ ಹಂತದಲ್ಲಿವೆ. ಹೀಗಾಗಿ ಬೆಂಗಳೂರು ಮಹಾನಗರ ಪಾಲಿಕೆ ನಗರದಲ್ಲಿನ ಶಿಥಿಲಾವಸ್ಥೆಯಲ್ಲಿರುವ ಕಟ್ಟಡಗಳನ್ನು ಪತ್ತೆ ಮಾಡಲು ರ್ಯಾಪಿಡ್ ಬಿಲ್ಡಿಂಗ್ ಸರ್ವೇ ನಡೆಸುತ್ತಿದೆ.
ಬೆಂಗಳೂರಿನಲ್ಲಿ ಅನಧಿಕೃತವವಾಗಿ ಯಾರಾದರೂ ಕಟ್ಟಡಗಳು, ಮಹಡಿಗಳು ನಿರ್ಮಾಣ ಮಾಡಿದ್ರೆ ಅಥವಾ ಕಟ್ಟಡಗಳಲ್ಲಿ ಬಿರುಕು ಬಿಟ್ಟಿದ್ದರೂ ಗಮನ ಹರಿಸಿದೇ ಇದ್ದರೆ ಅಂಥವರಿಗೆ ಸಂಕಷ್ಟ ಎದುರಾಗಿದೆ. ಯಾಕೆಂದ್ರೆ ಬಿಬಿಎಂಪಿ ಆಯುಕ್ತ ಗೌರವ್ ಗುಪ್ತಾ ರ್ಯಾಪಿಡ್ ಬಿಲ್ಡಿಂಗ್ ಸರ್ವೇಗೆ ಸೂಚಿಸಿದ್ದಾರೆ. ಹೌದು, ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಶಿಥಿಲಾವಸ್ಥೆಯಲ್ಲಿರುವ ಕಟ್ಟಡಗಳನ್ನು ಪತ್ತೆ ಮಾಡಲು ಬಿಬಿಎಂಪಿ ರ್ಯಾಪಿಡ್ ಬಿಲ್ಡಿಂಗ್ ಸರ್ವೇ ನಡೆಸುತ್ತಿದೆ. ಈಗಾಗಲೇ ಈ ಸರ್ವೇಯಲ್ಲಿ ಸುಮಾರು 500ಕ್ಕೂ ಅಧಿಕ ಕಟ್ಟಡಗಳು ಶಿಥಿಲಾವಸ್ಥೆಯಲ್ಲಿರುವುದಾಗಿ ಪತ್ತೆಯಾಗಿದೆ.
ನಗರದಲ್ಲಿ ಕುಸಿಯುವ ಹಂತದಲ್ಲಿರುವ ಕಟ್ಟಡಗಳಗೆಷ್ಟು ಗೊತ್ತೇ.!?
ಈ ಹಿಂದೆ ಸರ್ವೇ ಮಾಡಿ 185 ಕಟ್ಟಡಗಳು ಕುಸಿಯುವ ಭೀತಿ ಎದುರಿಸುತ್ತಿದೆ ಎಂದಿತ್ತು ಪಾಲಿಕೆ. ಆದರೀಗ ರ್ಯಾಪಿಡ್ ಬಿಲ್ಡಿಂಗ್ ಸರ್ವೇಯಲ್ಲಿ 185 ರಿಂದ ಕುಸಿಯುವ ಭೀತಯಲ್ಲಿರುವ ಕಟ್ಟಡಗಳ ಸಂಖ್ಯೆ ಏರಿಕೆಯಾಗಿದೆ. ನಗರದಲ್ಲಿ ಕುಸಿಯುವ ಆತಂಕದಲ್ಲಿನ ಕಟ್ಟಡಗಳ ಸಂಖ್ಯೆ ಈಗ 185 ರಿಂದ 500ಕ್ಕೆ ಏರಿಕೆಯಾಗಿದೆ. ನಗರಕ್ಕೆ ಕಂಟಕವಾಗಿರುವ ಕಟ್ಟಡಗಳು ಈ ಬಿಬಿಎಂಪಿ ರ್ಯಾಪಿಡ್ ಸರ್ವೇನಲ್ಲಿ ಪತ್ತೆಯಾಗಿದೆ .
ವಾರ್ಡ್ ಮಟ್ಟದಲ್ಲಿ ಶಿಥಿಲಾವಸ್ಥೆಯಲ್ಲಿರುವ ಕಟ್ಟಡ ಮಾಹಿತಿ ಕಲೆ!
ಎಂಟು ವಲಯಗಳಲ್ಲಿ ಬಿರುಸಾಗಿ ನಡೆಯುತ್ತಿರುವ ರ್ಯಾಪಿಡ್ ಬಿಲ್ಡಿಂಗ್ ಸರ್ವೇ ಕಾರ್ಯ, ಪ್ರತಿ ವಲಯದ ಜಂಟಿ ಆಯುಕ್ತರ ಉಸ್ತುವರಿಯಲ್ಲಿ ನಡೆಯುತ್ತಿದೆ. ಬಿಬಿಎಂಪಿಯ ಈ ರ್ಯಾಪಿಡ್ ಸರ್ವೇ ಒಟ್ಟು ಮೂರು ರೀತಿಯಲ್ಲಿ ನಡೆಯುತ್ತಿದೆ. ರೆಡ್, ಯೆಲ್ಲೋ, ಗ್ರೀನ್ ಝೋನ್.. ಮೂರು ಮಾದರಿಯಲ್ಲಿ ಸರ್ವೇ ಪಾಲಿಕೆ ನಡೆಸುತ್ತಿದೆ. ಕಟ್ಟಡದಲ್ಲಿ ಆತಂಕಕಾರಿ ಬಿರುಕು, ಹಳೆಯ ಕಟ್ಟಡಗಳು ರೆಡ್ ಝೋನ್. ಅನಧಿಕೃತವಾಗಿ ಮಹಡಿ ನಿರ್ಮಾಣ, ಫುಟ್ ಪಾತ್ ಮೇಲೆ ಕಟ್ಟಡ ನಿರ್ಮಾಣ ಮಾಡಿದ್ರೆ ಯೆಲ್ಲೋ ಝೋನ್. ಕಟ್ಟಡಗಳಿಗೆ ಯಾವುದೇ ಹಾನಿಯಿಲ್ಲದೆ ದಾಖಲೆ ಎಲ್ಲವೂ ಸರಿಯಾಗಿದ್ರೆ ಗ್ರೀನ್ ಝೋನ್. ಹೀಗೆ ಮೂರು ರೀತಿಯಲ್ಲಿ ಬಿಬಿಎಂಪಿ ರ್ಯಾಪಿಡ್ ಬಿಲ್ಡಿಂಗ್ ಸರ್ವೇ ಕಾರ್ಯ ಕೈಗೊಂಡಿದೆ. ಇನ್ನು ಪಾಲಿಕೆ ಕೊಟ್ಟಿರುವುದಕ್ಕಿಂತ ಹೆಚ್ಚಿನ ಮಹಡಿ ಕಟ್ಟಿದ್ದರೆ ಮುಲಾಜಿಲ್ಲದೆ ತೆರವು ಮಾಡಲಾಗುವುದು ಎಂದು ಬಿಬಿಎಂಪಿ ಸ್ಪಷ್ಟ ಪಡಿಸಿದೆ. ಅಲ್ದೆ, ಪ್ರತಿ ದಿನ ಸರ್ವೇಯ ವರದಿ ಮುಖ್ಯ ಆಯುಕ್ತರಿಗೆ ಜಂಟಿ ಆಯುಕ್ತರೇ ಒಪ್ಪಿಸಬೇಕು. ಈಗಾಗಲೇ ಮಳೆ ಕೂಡ ಭಾರಿ ಅನಾಹುತಗಳನ್ನು ತಂದೊಡ್ಡುತ್ತಿದ್ದು ಮಣ್ಣೂ ತೇವಗೊಂಡು ಗೋಡೆಗಳು ಹಾಗೂ ಕಟ್ಟಡಗಳ ತಳ ಹಠಾತ್ತನೇ ಕುಸಿಯುತ್ತಿದೆ. ಹೀಗಾಗಿ ಆದಷ್ಟು ಬೇಗ ಸರ್ವೇ ಮುಗಿಸಿ ಬೆಂಗಳೂರನ್ನ ದುರಂತಗಳಿಂದ ತಪ್ಪಿಸಲು ಬಿಬಿಎಂಪಿ ಶತಪ್ರಯತ್ನ ಮಾಡುತ್ತಿದೆ.