ಮಾಜಿ ಪ್ರಧಾನಿ ಮನಮೋಹನ್ ಸಿಂಗ್(89) ತೀವ್ರ ಜ್ವರ ಮತ್ತು ಅನಾರೋಗ್ಯದ ಹಿನ್ನೆಲೆ ಅವರನ್ನು ದೆಹಲಿಯ ಏಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ. ರಾಜ್ಯಸಭಾ ಸದಸ್ಯರಾಗಿರುವ ಸಿಂಗ್ಗೆ ಈ ವರ್ಷದ ಪ್ರಾರಂಭದಲ್ಲಿ ಕೋವಿಡ್ ಸೋಂಕಿಗೆ ತುತ್ತಾಗಿದ್ದರು.
ಅವರ ಆರೋಗ್ಯ ಸ್ಥಿರವಾಗಿದೆ ಎಂದು ತಿಳಿದು ಬಂದಿದೆ. ಈ ಬಗ್ಗೆ ಟ್ವೀಟ್ ಮಾಡಿರುವ ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಣವ್ ಜಾ ʻʻಮಾಜಿ ಪ್ರಧಾನಿ ಮನಮೋಹನ್ ಸಿಂಗ್ರವರ ಆರೋಗ್ಯ ಸ್ಥಿರವಾಗಿದೆ ಅವರ ಆರೋಗ್ಯಕ್ಕೆ ಸಂಬಂಧಿಸಿದಂತೆ ಕೆಲವು ಆಧಾರರಹಿತ ವದಂತಿಗಳಿವೆ. ಅವರಿಗೆ ಪ್ರತಿನಿತ್ಯವು ಚಿಕಿತ್ಸೆ ನೀಡಲಾಗುತ್ತಿದೆ. ನಾವು ಅವರ ಆರೋಗ್ಯದ ಕುರಿತು ಯಾವುದೇ ಅಪಡೇಟ್ ಇದ್ದರು ಅದನ್ನು ಹಂಚಿಕೊಳ್ಳುತ್ತೇವೆ ವಿಶೇಷ ಕಾಳಜಿ ವಹಿಸಿರುವ ಮಾಧ್ಯಮದ ಸ್ನೇಹಿತರಿಗೆ ಧನ್ಯವಾದಗಳುʼʼ ಎಂದು ಟ್ವೀಟ್ ಮಾಡಿದ್ದಾರೆ.
ಈ ಬಗ್ಗೆ ಏಮ್ಸ್ ಆಸ್ಪತ್ರೆಯ ವೈದ್ಯರು ಸ್ಪಷ್ಟನೆ ನೀಡಿದ್ದು ಮನಮೋಹನ್ ಸಿಂಗ್ರವರ ಆರೋಗ್ಯ ಸ್ಥಿರವಾಗಿದ್ದು ಅವರು ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ ಯಾರು ಆತಂಕಕ್ಕೆ ಒಳಗಾಗಬೇಡಿ ಎಂದು ವೈದ್ಯರು ಹೇಳಿದ್ದಾರೆ.
ಈಗಾಗಲೇ ವಿಷಯ ತಿಳಿಯುತ್ತಿದ್ದಂತೆ ಸಿಂಗ್ರವರ ಆರೋಗ್ಯ ವಿಚಾರಿಸಲು ಅಸ್ಪತ್ರೆಗೆ ನಾಯಕರ ದಂಡೆ ದೌಡಾಯಿಸಿದೆ. ಕೇಂದ್ರ ಆರೋಗ್ಯ ಸಚಿವರಾದ ಮನ್ಸುಖ್ ಮಾಂಡವೀಯಾ ಆಸ್ಪತ್ರೆಗೆ ಬೇಟಿ ನೀಡಿ ಈ ಬಗ್ಗೆ ವೈದ್ಯರ ಜೊತೆ ಸಮಾಲೋಚನೆ ನಡೆಸಿದ್ದಾರೆ. ಸಿಂಗ್ರವರು ಆದಷ್ಟು ಬೇಗ ಗುಣಮುಖರಾಗಲಿ ಎಂದು ಪ್ರಧಾನಿ ಮೋದಿ ಟ್ವೀಟ್ ಮಾಡಿದ್ದಾರೆ.