ಕೋವಿಡ್ 19 ಸಾಂಕ್ರಾಮಿಕ ರೋಗದಿಂದ ಹಣಕಾಸಿನ ಸಮಸ್ಯೆಗಳನ್ನು ಎದುರಿಸಿದ ಹಲವಾರು ಪೋಷಕರು ತಮ್ಮ ಮಕ್ಕಳನ್ನು ಖಾಸಗಿ ಶಾಲೆಗಳಿಂದ ಬಿಡಿಸಿ ಸರಕಾರಿ ಶಾಲೆಗಳಿಗೆ ಸೇರಿಸುತ್ತಿದ್ದಾರೆ. ಖಾಸಗಿ ಶಾಲೆಗಳ ದುಬಾರಿ ಶುಲ್ಕವನ್ನು ಪಾವತಿಸಲಾಗದೆ ಪೋಷಕರು ಈ ನಿರ್ಧಾರವನ್ನು ತೆಗೆದುಕೊಳ್ಳುತ್ತಿದ್ದಾರೆ ಎಂದು ಕೇಳಿಬಂದಿದೆ. ಸಾಂಕ್ರಾಮಿಕದ ನಡುವೆ ತರಗತಿಗಳು ಆನ್ಲೈನ್ ನಡೆಯುತ್ತಿರುವುದರಿಂದ ಶುಲ್ಕಗಳು ಇಷ್ಟು ದುಬಾರಿಯಾಗಿ ಇರತಕ್ಕದ್ದಲ್ಲ ಎಂಬುದು ಬಹುತೇಕ ಪೋಷಕರ ವಾದ.
ಯಾಕೆ ಈ ಬದಲಾವಣೆ
2020 ರ ದಿಗ್ಬಂಧನದಲ್ಲಿ ಬಹುತೇಕ ಶಾಲೆಗಳು ಮುಚ್ಚಿದ್ದು, ಮಕ್ಕಳ ಶಿಕ್ಷಣಾಭ್ಯಾಸದ ಮೇಲೆ ಬಾರಿ ಪರಿಣಾಮವನ್ನು ಬೀರಿದೆ. ದೇಶದಾದ್ಯಂತ ಶಾಲೆಗಳು ಆನ್ಲೈನ್ ಮಾಧ್ಯಮಕ್ಕೆ ಬದಲಾದ ಕಾರಣ, ಶಾಲೆಯ ಟ್ಯೂಷನ್ ಫೀ ಜೊತೆಗೆ ಮಕ್ಕಳಿಗೆ ಲ್ಯಾಪ್ಟಾಪ್ ಅಥವಾ ಸ್ಮಾರ್ಟ್ ಫೋನ್ ಹೊಂದಿಸಿಕೊಟ್ಟು ಇಂಟರ್ನೆಟ್ ಪ್ಯಾಕ್ ಗಳಿಗೂ ಪೋಷಕರು ಖರ್ಚು ಮಾಡಬೇಕಾಗಿದೆ. ಕೋವಿಡ್ 19 ರ ಆರೋಗ್ಯ ದೃಷ್ಟಿಕೋನವನ್ನು ಹೊರತುಪಡಿಸಿ ಅನೇಕರು ತಮ್ಮ ಉದ್ಯೋಗವನ್ನು ಕಳೆದುಕೊಂಡು ಆರ್ಥಿಕ ಸಂಕಷ್ಟಗಳಿಗೆ ಒಳಗಾದರು. ಕೆಲಸಗಳ ಕೊರತೆಯಿಂದ ವಲಸೆ ಕಾರ್ಮಿಕರು ತಮ್ಮ ಊರುಗಳಿಗೆ ಒಂದೆಡೆ ವಾಪಸ್ಸಾದರೆ, ದೊಡ್ಡ ದೊಡ್ಡ ಕಂಪನಿಗಳಲ್ಲಿ ಕೆಲಸ ಮಾಡುತ್ತಿದ್ದವರೂ ಉದ್ಯೋಗ ಕಳೆದುಕೊಂಡು ಹಣಕಾಸಿನ ಬಿಕ್ಕಟ್ಟುಗಳನ್ನು ಎದುರಿಸಬೇಕಾಯಿತು.
ಸರಕಾರಿ ಶಾಲೆಗಳಿಗೆ ವಿದ್ಯಾರ್ಥಿಗಳು ಯಾವ ಯಾವ ರಾಜ್ಯಗಳಲ್ಲಿ ಹೆಚ್ಚು ಸೇರಿದರು
ಗುಜರಾತ್ ನ ರಾಜ್ಯ ಶಿಕ್ಷಣ ಇಲಾಖೆಯ ಪ್ರಕಾರ 2.82 ಲಕ್ಷ ವಿದ್ಯಾರ್ಥಿಗಳು 2021-22 ರ ಶೈಕ್ಷಣಿಕ ವರ್ಷದಲ್ಲಿ ಸರಕಾರಿ ಶಾಲೆಗಳಿಗೆ ವರ್ಗಾಯಿಸಿಕೊಂಡಿದ್ದಾರೆ. ಹಾಗೆಯೇ ದೆಹಲಿಯಲ್ಲಿ 1.58 ಲಕ್ಷ ವಿದ್ಯಾರ್ಥಿಗಳು ಈ ದಾರಿಯನ್ನು ಹಿಡಿದಿದ್ದಾರೆ. ತೆಲಂಗಾಣದ ಶಿಕ್ಷಣ ಇಲಾಖೆಯ ಅಧಿಕಾರಿ ಒಬ್ಬರ ಪ್ರಕಾರ 1.25 ಲಕ್ಷ ವಿದ್ಯಾರ್ಥಿಗಳು ಪ್ರಸ್ತುತ ಶೈಕ್ಷಣಿಕ ವರ್ಷದಲ್ಲಿ ಖಾಸಗಿ ಶಾಲೆಗಳನ್ನು ಬಿಟ್ಟು ಸರಕಾರಿ ಶಾಲೆಗಳನ್ನು ಸೇರಿದ್ದಾರೆ. ಇದು ಕಳೆದ ವರ್ಷದ ಸಂಖ್ಯೆಗಳಿಗೆ ಹೋಲಿಸಿದರೆ 40% ರಷ್ಟು ಏರಿಕೆ. ಹರಿಯಾಣ ರಾಜ್ಯದಲ್ಲಿ ಈ ಸಂಖ್ಯೆ ಎರಡು ಲಕ್ಷ ಆಗಿದ್ದರೆ, ಮಧ್ಯ ಪ್ರದೇಶದಲ್ಲಿ 1,29,126 ವಿದ್ಯಾರ್ಥಿಗಳು 2021 ರ ಏಪ್ರಿಲ್ ಮತ್ತು ಸೆಪ್ಟೆಂಬರ್ ನಡುವೆ ಸರಕಾರಿ ಶಾಲೆಗಳನ್ನು ಸೇರಿದ್ದಾರೆ.
ಪಂಜಾಬ್ ನಲ್ಲಿ ಸಾಂಕ್ರಾಮಿಕದ ನಡುವೆ 1.85.480 ವಿದ್ಯಾರ್ಥಿಗಳು ಸರಕಾರಿ ಶಾಲೆಗಳನ್ನು ಸೇರಿರುವಾಗ, ಉತ್ತರ ಪ್ರದೇಶದ ಪ್ರಾಥಮಿಕ ಮತ್ತು ಉನ್ನತ ಪ್ರಾಥಮಿಕ ಹಂತಗಳ ದಾಖಲಾತಿ ಸುಮಾರು 5% ರಷ್ಟು ಹೆಚ್ಚಾಗಿದೆ.
ಪೋಷಕರ ಮಾತುಗಳೇನು
ಮೂರನೆಯ ತರಗತಿ ವಿದ್ಯಾರ್ಥಿಯೊಬ್ಬರ ತಾಯಿಯಾದ ಮೀನಾ ಅವರು ಅವರ ಮಗನನ್ನು ದೆಹಲಿಯಲ್ಲಿ ಸರಕಾರಿ ಶಾಲೆಗೆ ದಾಖಿಲಿಸಿದ್ದಾರೆ. ಅವರ ಮಗ ಈ ಹಿಂದೆ ಓದುತ್ತಿದ್ದ ಖಾಸಗಿ ಶಾಲೆಯ ಶುಲ್ಕವನ್ನು ಮೀನಾ ಅವರಿಗೆ ಪಾವತಿಸಲು ಸಾಧ್ಯವಾಗದಿರುವ ಕಾರಣ ಅವರು ಈ ನಿರ್ಧಾರವನ್ನು ತೆಗೆದುಕೊಂಡಿರುವುದಾಗಿ ಹೇಳುತ್ತಾರೆ. “ಆನ್ಲೈನ್ ತರಗತಿಗಳು ನನ್ನ ಮಗನಿಗೆ ಯಾವುದೇ ರೀತಿಯಲ್ಲಿ ಉಪಯೋಗವಾಗುತ್ತಿಲ್ಲ. ಸಾಂಕ್ರಾಮಿಕ ಕಾರಣದಿಂದಾಗಿ ನನಗೆ ಮತ್ತು ನನ್ನ ಪತಿಗೆ ಸರಿಯಾಗಿ ವೇತನ ಪಾವತಿಯಾಗುತ್ತಿಲ್ಲ. ಹಾಗಾಗಿ ಸರಕಾರಿ ಶಾಲೆಯತ್ತ ನಾವು ಮುಖ ಮಾಡಿದೆವು,” ಎನ್ನುತ್ತಾರೆ ಮೀನಾ. ಜೊತೆಗೆ, ಸರಕಾರಿ ಶಾಲೆಯ ಶಿಕ್ಷಕರ ನಡುವಳಿಕೆ ಅವರ ಮಗನಿಗೆ ಆತ್ಮೀಯವಾಗಿದೆ. ಖಾಸಗಿ ಶಾಲೆಯ ಶಿಕ್ಷಕರು ಮಕ್ಕಳತ್ತ ಹೆಚ್ಚು ಗಮನ ವಹಿಸುತ್ತಿರಲಿಲ್ಲ ಎಂಬುದು ಅವರ ಅಭಿಪ್ರಾಯ. ಆದರೆ ಸರಕಾರಿ ಶಾಕೆಯಲ್ಲಿ ಶಿಕ್ಷಕರು ಮಕ್ಕಳ ಕುರಿತು ಅಧಿಕ ಕಾಳಜಿಯನ್ನು ವಹಿಸುತ್ತಿದ್ದಾರೆ ಎಂದು ಕುಟುಂಬ ಹಂಚಿಕೊಂಡಿದೆ.
ಆದರೆ ದೆಹಲಿಯ ಖಾಸಗಿ ಶಾಲೆಯೊಂದು ಶುಲ್ಕದಲ್ಲಿ ರಿಯಾಯಿತಿ ನೀಡಿರುವುದಾಗಿ ಹೇಳಿದೆ. “ನಾವು ಶುಲ್ಕವನ್ನು ತಕ್ಕ ಮಟ್ಟಿಗೆ ಕಡಿಮೆ ಮಾಡಿಕೊಂಡಿದ್ದೇವೆ. ಆದರೆ ಪೋಷಕರು ಟಿ.ಸಿ. ಪಡೆಯಲು ಮಾತ್ರ ಬರುತ್ತಿದ್ದಾರೆ,” ಎನ್ನುತ್ತದೆ ಆ ಶಾಲೆಯ ದಾಖಲಾತಿ ವಿಭಾಗ. ದೆಹಲಿಯ ಪ್ರೋಗ್ರೆಸಿವ್ ಪ್ರೈವೇಟ್ ಸ್ಕೂಲ್ಸ್ ಅಸೋಸಿಯೆಷನ್ ನ ಅಧ್ಯಕ್ಷರಾದ ಅನಿಲ್ ಕೌಶಿಕ್ ಅವರು ನಿರುದ್ಯೋಗವೇ ಈ ವಿದ್ಯಮಾನಕ್ಕೆ ಕಾರಣ ಎಂದು ಹೇಳಿದ್ದಾರೆ. ಜೊತೆಗೆ, ಮೂರನೇ ಅಲೆಯ ಬಗ್ಗೆ ಮಾತುಕತೆಗಳು ನಡೆಯುತ್ತಿದ್ದ ಕಾರಣ ಪೋಷಕರಿಗೆ ತಮ್ಮ ಮಕ್ಕಳ ಆರೋಗ್ಯದ ಬಗ್ಗೆ ಚಿಂತೆಯಿತ್ತು ಎಂದು ಹೇಳಿದ್ದಾರೆ.
ಇತರೆ ಕಾರಣಗಳು
ಬಹುತೇಕ ಪೋಷಕರಿಗೆ ತಮ್ಮ ಮಕ್ಕಳು ಸರಕಾರಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣವನ್ನು ಪಡೆಯುತ್ತಾರೆ ಎಂದು ಮನವರಿಕೆಯಾಗಿದೆ. ಈ ಬದಲಾವಣೆಗೆ ಇದೂ ಸಹ ಒಂದು ಕಾರಣ. ಉದಾಹರಣೆಗೆ, ಹರಿಯಾಣಾ ಮತ್ತು ರಾಜಸ್ಥಾನದಲ್ಲಿ ಸರಕಾರಗಳು ಸರಕಾರಿ ಶಾಲಾ ವಿದ್ಯಾರ್ಥಿಗಳಿಗೆ ಟ್ಯಾಬ್ಲೆಟ್ ಮತ್ತು ಲ್ಯಾಪ್ಟಾಪ್ ಗಳನ್ನು ಉಚಿತವಾಗಿ ವಿತರಿಸುವುದಾಗಿ ಘೋಷಿಸಿವೆ. ಸಾಂಕ್ರಾಮಿಕದ ಸಂದರ್ಭದಲ್ಲಿ ಭಾರತದಲ್ಲಿ ಸೃಷ್ಟಿಯಾಗಿರುವ ಡಿಜಿಟಲ್ ಡಿವೈಡನ್ನು ಕಡಿಮೆ ಮಾಡಲು ಈ ಯೋಜನೆಯನ್ನು ತರಲಾಗಿದೆ.
ಆಂಧ್ರ ಪ್ರದೇಶದಲ್ಲಿ ‘ಜಗನನ್ನ ಅಮ್ಮ ಒಡಿ” ಎಂಬ ಯೋಜನೆಯನ್ನು ಘೋಷಿಸಲಾಗಿದೆ. ಇದರ ಅಡಿ ಸರಕಾರಿ ಶಾಲೆಗಳಲ್ಲಿ ಒಂದರಿಂದ ಹನ್ನೆರಡನೇ ತರಗತಿ ವರೆಗು ಓದುತ್ತಿರುವ ವಿದ್ಯಾರ್ಥಿಗಳ ತಾಯಂದಿರಿಗೆ ವಾರ್ಷಿಕವಾಗಿ 15,000 ರುಪಾಯಿಗಳನ್ನು ಸಹಾಯಧನವಾಗಿ ನೀಡಲಾಗುತ್ತದೆ. ಸರಕಾರಿ ಶಾಲೆಗಳು ಕಳೆದ ವರ್ಷಕ್ಕೆ ಹೋಲಿಸಿದಾಗ ತಮ್ಮ ಸೌಕರ್ಯ ಮತ್ತು ಸಂಪನ್ಮೂಲಗಳನ್ನು ಅಭಿವೃದ್ಧಿ ಪಡಿಸುತ್ತಾ ಇರುವುದನ್ನು ಮತ್ತು ಶಿಕ್ಷಕರು ವಿದ್ಯಾರ್ಥಿಗಳಿಗೆ ಪಾಠ ಮಾಡಲು ಕಾತುರರಾಗಿರುವುದನ್ನು ಇಲ್ಲಿ ಮುಖ್ಯವಾಗಿ ನಾವು ಗಮನಿಸಬೇಕು.
ರಾಜ್ಯ ಸರಕಾರಗಳು ಎದುರಿಸಲಿರುವ ಸವಾಲುಗಳು
ಹೆಚ್ಚಿರುವ ವಿದ್ಯಾರ್ಥಿಗಳ ಸಂಖ್ಯೆಯನ್ನು ನಿರ್ವಹಿಸುತ್ತಾ ಹೇಗೆ ಗುಣಮಟ್ಟದ ಶಿಕ್ಷಣವನ್ನು ನೀಡಲಾಗುತ್ತದೆ ಎಂಬುದೇ ರಾಜ್ಯ ಸರಕಾರಗಳ ಎದುರಿನ ಸವಾಲುಗಳು. ಪೋಷಕರು ಸರಕಾರಿ ಶಾಲೆಗಳ ಮೇಲಿಟ್ಟಿರುವ ನಂಬಿಕೆಯನ್ನು ಉಳಿಸಿಕೊಳ್ಳುವುದು ರಾಜ್ಯ ಸರಕಾರಗಳ ಜವಾಬ್ದಾರಿಯಾಗಿದೆ. ಖಾಸಗಿ ಶಾಲೆಗಳಿಂದ ಬಂದಂತಹ ವಿದ್ಯಾರ್ಥಿಗಳು ಮತ್ತು ಸರಕಾರಿ ಶಾಲೆಗಳ ಶಿಕ್ಷಕರು – ಎಲ್ಲರೂ ಹೊಸ ವಾತಾವರಣಕ್ಕೆ ಈಗ ಹೊಂದುಕೊಳ್ಳಬೇಕಿದೆ.
ಮತ್ತೊಂದೆಡೆ ಈ ವಿದ್ಯಮಾನ ಖಾಸಗಿ ಶಾಲೆಗಳ ಹಣಕಾಸಿನ ಮೇಲೆ ಪ್ರಭಾವ ಬೀರಿ ಹಲವಾರು ಶಿಕ್ಷಕರು ತಮ್ಮ ಕೆಲಸವನ್ನು ಕಳೆದುಕೊಳ್ಳಬಹುದು. ಇದರ ಜೊತೆಗೆ ಈ ಬದಲಾವಣೆ ಕೇವಲ ತಾತ್ಕಾಲಿಕ ಎಂಬುದು ಖಾಸಗಿ ಶಾಲೆಗಳ ನಂಬಿಕೆ. ಖಾಸಗಿ ಶಾಲೆಗಳ ಶಿಕ್ಷಣದ ಗುಣಮಟ್ಟವನ್ನು ಸರಕಾರಿ ಶಾಲೆಗಳಿಗೆ ಹೋಲಿಸಲಾಗುವುದಿಲ್ಲ ಎಂಬುದು ಖಾಸಗಿ ಶಾಲೆಗಳ ಭಾವನೆ. ಇದೀಗ, ಸರಕಾರಿ ಶಾಲೆಗಳು ಸೌಕರ್ಯಗಳನ್ನು ಅಭಿವೃದ್ಧಿಪಡಿಸಿಕೊಂಡು ಉನ್ನತ ಗುಣಮಟ್ಟದ ಶಿಕ್ಷಣವನ್ನು ನೀಡುವ ಮೂಲಕ ತಮ್ಮ ಸಾಮಾರ್ಥ್ಯವನ್ನು ಸಾಬೀತು ಪಡಿಸಬೇಕು.
ಮೂಲ: ಇಂಡಿಯಾ ಟುಡೇ