ರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ನರರೋಗ ವಿಜ್ಞಾನ ಸಂಸ್ಥೆ (ನಿಮ್ಹಾನ್ಸ್) 25ನೇ ಘಟಿಕೋತ್ಸವದ ಬ್ಯಾನರ್ನಲ್ಲಿ ಮೂರು ಭಾಷೆಯನ್ನು ಬಳಸಿದ್ದು, ಅದರಲ್ಲಿ ಮೊದಲನೇ ಸ್ಥಾನವನ್ನು ಹಿಂದಿಗೆ ನೀಡಿ ಎಡರನೇ ಸ್ಥಾನವನ್ನು ಇಂಗ್ಲೀಷ್ಗೆ ನೀಡಿ, ಕಡೆಯ ಅಂದರೆ ಮೂರನೇ ಸ್ಥಾನವನ್ನು ಕನ್ನಡಕ್ಕೆ ನೀಡಿರುವುದು ಈಗ ಕನ್ನಡಿಗರ ಕಣ್ಣು ಕೆಂಪಾಗಿಸಿದೆ. ನಿಮ್ಹಾನ್ಸ್ ಮತ್ತು ಸರ್ಕಾರದ ಈ ಒಂದು ನಡೆಯನ್ನು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಸೇರಿದಂತೆ ಹಲವರು ಟ್ವೀಟ್ ಮಾಡಿ ಕಿಡಿಕಾರಿದ್ದಾರೆ.
ಈ ಕುರಿತು ಸರಣಿ ಟ್ವೀಟ್ ಮಾಡಿರುವ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ, ರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ನರರೋಗ ವಿಜ್ಞಾನ ಸಂಸ್ಥೆ (ನಿಮ್ಹಾನ್ಸ್) 25ನೇ ಘಟಿಕೋತ್ಸವದಲ್ಲಿ ಹಿಂದಿಗೆ ಅಗ್ರಸ್ಥಾನ! ಇಂಗ್ಲೀಷ್ʼಗೆ ದ್ವಿತೀಯ ಸ್ಥಾನ! ಕನ್ನಡಕ್ಕೆ ಮೂರನೇ ಸ್ಥಾನ!! ಅಯ್ಯೋ.. ಕನ್ನಡ ಕಟುಕರ ಕೈಯ್ಯಲ್ಲಿ ಸಿಕ್ಕಿಕೊಂಡಿದೆ ಎನ್ನುವುದಕ್ಕೆ ಇದಕ್ಕಿಂತ ನಿದರ್ಶನ ಇನ್ನೊಂದಿಲ್ಲ ಎಂದಿದ್ದಾರೆ.
ವೇದಿಕೆಯ ಮೇಲೆ ರಾಜ್ಯದ ಮುಖ್ಯಮಂತ್ರಿ, ಒಬ್ಬ ಸಚಿವರು, ಇಬ್ಬರು ಸಂಸದರು ಇದ್ದರು. ಸಾವಿರಾರು ವರ್ಷಗಳ ಘನ ಇತಿಹಾಸವುಳ್ಳ ಅಭಿಜಾತ ಭಾಷೆ ಕನ್ನಡವನ್ನು 3ನೇ ಸ್ಥಾನಕ್ಕಿಳಿಸಿದ್ದ ಆ ವೇದಿಕೆಯ ಮೇಲೆ ಕೂರಲು ಅವರಿಗೆ ಮನಃಸಾಕ್ಷಿಯಾದರೂ ಹೇಗೆ ಬಂತು? ಈ ಮೂವರ ಕನ್ನಡಾಭಿಮಾನ ಶೂನ್ಯತೆಗೆ ನನ್ನ ಧಿಕ್ಕಾರ ಎಂದು ಟ್ವೀಟ್ ಮಾಡಿದ್ದಾರೆ.
ರಾಷ್ಟ್ರೀಯ ಪಕ್ಷಗಳ ದಾದಾಗಿರಿ ದಿನೇದಿನೆ ಹೆಚ್ಚುತ್ತಿದೆ. ನಮ್ಮ ನಾಡು-ನುಡಿಯ ಮೇಲೆ ದಿಲ್ಲಿ ರಾಜಕಾರಣ ನಡೆಸುತ್ತಿರುವ ಆಕ್ರಮಣ ಸ್ವಾತಂತ್ರ್ಯಕ್ಕೂ ಮುನ್ನ ವಿದೇಶಿ ಆಕ್ರಮಣಕಾರರು ನಡೆಸಿದ ದಾಳಿಗಿಂತ ಹೇಯವಾಗಿದೆ. ದೇಶ ಮೊದಲು ಎಂದು ಕೂಗುವ ನಾಲಿಗೆಗಳಿಗೆ ಕರ್ನಾಟಕದಲ್ಲಿ ಕನ್ನಡವೇ ಮೊದಲು ಎಂದು ಹೇಳಲು ಏನಾಗಿದೆ? ಎಂದು ಪ್ರಶ್ನಿಸಿದ್ದಾರೆ.
ದೇಶ ಮೊದಲು ಎಂದು ಕೂಗುವ ನಾಲಿಗೆಗಳಿಗೆ ಕರ್ನಾಟಕದಲ್ಲಿ ಕನ್ನಡವೇ ಮೊದಲು ಎಂದು ಹೇಳಲು ಏನಾಗಿದೆ? ಕನ್ನಡವನ್ನು ಕರ್ನಾಟದಿಂದಲೇ ಮೂಲೋತ್ಪಾಟನೆ ಮಾಡಬೇಕು ಎಂಬುದು ಬಿಜೆಪಿಯ ಹಿಡನ್ ಅಜೆಂಡಾವೇ? ಎಂದು ಪ್ರಶ್ನಿಸಿದ್ದಾರೆ.
ಕನ್ನಡಕ್ಕೆ ಆಗುತ್ತಿರುವ ಅನ್ಯಾಯಗಳು ಒಂದೆರಡಲ್ಲ. ಕೇಂದ್ರ ಪರೀಕ್ಷೆಯಲ್ಲಿ ಅನ್ಯಾಯ, ನೇಮಕಾತಿಯಲ್ಲಿ ನಮ್ಮವರ ಕಡೆಗಣನೆ. ಒಕ್ಕೂಟ ವ್ಯವಸ್ಥೆಯಲ್ಲಿ ಪರಕೀಯರಂತೆ ಎರಡನೇ ದರ್ಜೆ ಪ್ರಜೆಗಳಾಗಿ ನಾವು ಕೊಳೆಯಬೇಕಾ? ಸ್ವಾಭಿಮಾನಿ ಕನ್ನಡಿರೆಲ್ಲರೂ ಸಿಡಿದೇಳೋಣ. ಕರ್ನಾಟಕದಲ್ಲಿ ಕನ್ನಡವೇ ಮೊದಲು ಎಂದು ಟ್ವೀಟಿಸಿದ್ದಾರೆ.
ನಿಮ್ಹಾನ್ಸ್ 25ನೇ ಘಟಿಕೋತ್ಸವದ ಬ್ಯಾನರ್ನಲ್ಲಿ ಕನ್ನಡಕ್ಕೆ ತೃತೀಯ ಸ್ಥಾನ ನೀಡಿರುವ ಕುರಿತು ಸಮಾಜಿಕ ಜಾಲತಾಣದಲ್ಲಿ ಹಲವರು ಸರ್ಕಾರವನ್ನು ಟೀಕಿಸಿದ್ದು, 1925ರಲ್ಲಿ ಮೆದುಳಿಗೆ ಸಂಬಂಧಿಸಿದ ರೋಗಿಗಳ ಅರೈಕೆಗಾಗಿ ಮೈಸೂರು ಅರಸರು Mental Hospital ಅನ್ನು ಪ್ರಾರಂಬ ಮಾಡಿದ್ದರು, 1954ರಲ್ಲಿ ಭಾರತ ಸರಕಾರ ಈ ಆಸ್ಪತ್ರೆಯನ್ನು ತನ್ನ ತೆಕ್ಕೆಗೆ ತೆಗೆದುಕೊಂಡಿತು. ಇದನ್ನು ಇಂದು ನಿಮ್ಹಾನ್ಸ್ ಎಂದು ಕರೆಯಲಾಗುತ್ತದೆ. ಕನ್ನಡಿಗರು ಸ್ತಾಪಿಸಿದ ಸಂಸ್ತೆಯಲ್ಲಿ ಕನ್ನಡ ಮೂರನೇ ಸ್ತಾನದಲ್ಲಿದೆ ಎಂದಿದ್ದಾರೆ.