ರಾಜ್ಯದ ಎಲ್ಲ ಸರ್ಕಾರಿ ಶಾಲಾ-ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಅ.4ರಿಂದ ಶೇ.100 ಹಾಜರಾತಿ ಜತೆಗೆ ಪೂರ್ಣ ಪ್ರಮಾಣದಲ್ಲಿ ಭೌತಿಕ ತರಗತಿ ನಡೆಸಲು ಅವಕಾಶ ಕಲ್ಪಿಸಿದೆ.
ಈ ಹಿಂದೆ ಅ.1ರಿಂದಲೇ ಶೇ.100 ಹಾಜರಾತಿಗೆ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಅವರು ಸೂಚನೆ ನೀಡಿದ್ದರು.
ಸುತ್ತೋಲೆ ಪ್ರಕಾರ ಎಲ್ಲ ಸರ್ಕಾರಿ ಅನುದಾನಿತ, ಅನುದಾನರಹಿತ ಖಾಸಗಿ ಶಾಲೆಗಳೂ ಕೋವಿಡ್ ಮಾರ್ಗಸೂಚಿಗಳನ್ನು ಅನುಸರಿಸಿ ಅ.4ರಿಂದ ಬೆಳಗ್ಗೆಯಿಂದ ಸಂಜೆವರೆಗೂ ಪೂರ್ಣ ಪ್ರಮಾಣದಲ್ಲಿ ತರಗತಿ ನಡೆಸಬೇಕು. ಭೌತಿಕ ಹಾಜರಾತಿ ಕಡ್ಡಾಯ ಇರುವುದಿಲ್ಲ.
ಶಾಲಾ ಮಕ್ಕಳ ಪ್ರಯಾಣಕ್ಕೆ ಅನುಕೂಲ ಕಲ್ಪಿಸುವುದಕ್ಕಾಗಿ ಬಿಎಂಟಿಸಿ ಹೆಚ್ಚುವರಿಯಾಗಿ 100 ಬಸ್‌ಗಳನ್ನು ಕಾರ್ಯಾಚರಣೆ ಮಾಡಲು ನಿರ್ಧರಿಸಿದೆ. ಅ.4ರಿಂದಲೇ ಹೆಚ್ಚುವರಿ ಬಸ್‌ಗಳ ಸಂಚಾರ ಆರಂಭವಾಗಲಿದೆ. ಸದ್ಯಕ್ಕೆ ನಗರದಲ್ಲಿ 4,953 ಬಸ್‌ಗಳು ಕಾರ್ಯಾಚರಣೆ ನಡೆಸುತ್ತಿದ್ದು, 100 ಬಸ್ ಸೇರ್ಪಡೆ ಆಗುವುದರಿಂದ ಒಟ್ಟಾರೆಯಾಗಿ 5,053 ಬಸ್‌ಗಳು ಸಂಚರಿಸಲಿವೆ.






