ಹೊಸಪೇಟೆ (ಈಗ ವಿಜಯನಗರ) ನಗರದಲ್ಲಿ ಭವ್ಯವಾದ ವೇದಿಕೆಗಳು ಸಿದ್ಧವಾಗಿವೆ. ಇಲ್ಲಿವರೆಗೂ ಯಾವ ಹೊಸ ಜಿಲ್ಲೆಯ ಉದ್ಘಾಟನೆಯೂ ಇಂತಹ ಅದ್ದೂರಿತನದಿಂದ ಜರುಗಿಲ್ಲ. ಆದರೆ ಸರ್ಕಾರಿ ವೆಚ್ಚದಲ್ಲಿ ಈ ವೈಭವದ ಸಮಾರಂಭ ಹಮ್ಮಿಕೊಳ್ಳಲಾಗಿದೆ.
ಅಕ್ಟೋಬರ್ 2 ಮತ್ತು 3ರಂದು ನಡೆಯುವ ಈ ಸಮಾರಂಭಕ್ಕೆ ವಿಜಯನಗರ ಉತ್ಸವ ಎಂದು ಕರೆಯಲಾಗಿದೆ.
ಅಕ್ಟೋಬರ್ 2 ಮತ್ತು 3 ಈ ದಿನಗಳನ್ನು ಫಿಕ್ಸ್ ಮಾಡಿದ್ದು ಸಚಿವ ಆನಂದಸಿಂಗ್. ಅಕ್ಟೋಬರ್ 2 ಗಾಂಧಿ ಜಯಂತಿ ಎಂದು ನೀವೆಲ್ಲ ಸುಮ್ಮನಾಗಬೇಡಿ. ಅಕ್ಟೋಬರ್ 3 ಆನಂದಸಿಂಗ್ ಜನ್ಮದಿನ!
ಇದಕ್ಕಾಗಿ ಅದ್ದೂರಿ ಸೆಟ್‍ಗಳು ಮತ್ತು ವೇದಿಕೆಗಳನ್ನು ನಿರ್ಮಿಸಲಾಗಿದೆ. ಜಿಲ್ಲಾಡಳಿತ ಮತ್ತು ಪ್ರವಾಸೋದ್ಯಮ ಇಲಾಖೆಯ ಅನುದಾನ ಹೀಗೆ ಪೋಲಾಗುತ್ತಿದೆ.
ಇದೆಲ್ಲದರ ಮೂಲ ಸೂತ್ರಧಾರ ಪ್ರವಾಸೋದ್ಯಮ ಸಚಿವ, ಹೊಸಪೇಟೆ ಶಾಸಕ ಆನಂದಸಿಂಗ್. ಸೂಕ್ಷ್ಮವಾಗಿ ಗಮನಿಸುತ್ತ ಹೋದರೆ, ಇಡೀ ಸರ್ಕಾರ ತನ್ನ ಪರವಿದೆ ಎಂದು ಬಿಂಬಿಸಲು ಆನಂದಸಿಂಗ್ ಹೊರಟಿದ್ದಾರೆ. ಯಾರ ಎದುರು ಬಿಂಬಿಸಿಕೊಳ್ಳುತ್ತಾರೆ? ಇಲ್ಲೇ ಇರುವುದು ಪಾಯಿಂಟ್! ಸದ್ಯ ಹೊಸಪೇಟೆಯ ಪ್ರತಿಷ್ಠಿತ ಲಾಡ್ಜ್‍ಗಳಲ್ಲಿ ಬೆಂಗಳೂರು ಮೂಲದ ರಿಯಲ್ ಎಸ್ಟೇಟ್ ಕಂಪನಿಗಳ ಮಾಲೀಕರು ಅಥವಾ ಅವರ ಪ್ರತಿನಿಧಿಗಳು ಬೀಡು ಬಿಟ್ಟಿದ್ದಾರೆ ಮತ್ತು ಇನ್ನೂ ಬರುತ್ತಲೇ ಇದ್ದಾರೆ.
ಗಣಿ ಉದ್ಯಮದ ಕುಸಿತದ ನಂತರ ಆನಂದಸಿಂಗ್ ರಿಯಲ್ ಎಸ್ಟೇಟ್ ಬಿಸಿನೆಸ್ ಹಾದಿ ತುಳಿದರು. ಅವರು ಪಟ್ಟು ಬಿಡದೇ ವಿಜಯನಗರ ಜಿಲ್ಲೆ ಸ್ಥಾಪನೆಗೆ ಮುಂದಾದರು. ಬಳ್ಳಾರಿಯ ರೆಡ್ಡಿಗಳು ಮೊದಲು ಇದಕ್ಕೆ ವಿರೋಧ ಮಾಡಿದರೂ ನಂತರ ಮೌನಕ್ಕೆ ಜಾರಿದರು.
ಹೊಸ ಜಿಲ್ಲೆಯಿಂದ ಹೊಸಪೇಟೆ (ವಿಜಯನಗರ) ಜಿಲ್ಲೆಯ ಮಧ್ಯಮ ಮತ್ತು ಬಡ ವರ್ಗದ ಜನರಿಗೇನೂ ಖುಷಿಯಾಗಿಲ್ಲ. ಖುಷಿ ಇರಲಿ, ಅವರಿಗೆ ತಾಪತ್ರಯವೇ ಆಗಿದೆ. ಮನೆ ಬಾಡಿಗೆ ದರ ಹೆಚ್ಚಿವೆ, ಸೈಟುಗಳ ಬೆಲೆ ಏರಿಕೆಯಾಗಿವೆ. ಪಕ್ಕದಲ್ಲಿಯೇ ಐತಿಹಾಸಿಕ ಪ್ರವಾಸಿ ಸ್ಥಳ ಹಂಪಿ ಇರುವುದರಿಂದ ಹೊಸಪೇಟೆಯ ಸುತ್ತಲಿನ ಭೂಮಿಗೆ ಈಗ ಅಪಾರ ಬೆಲೆ ಬಂದಿದೆ.
ಇದನ್ನೆಲ್ಲ ಲೆಕ್ಕ ಹಾಕಿಯೇ 6 ತಿಂಗಳ ಹಿಂದೆಯೇ ಕೆಲವು ಗಣಿ ಉದ್ಯಮಿಗಳು ಹೊಸಪೇಟೆಯ ಸುತ್ತಮುತ್ತಲಿನ ಭೂಮಿಯನ್ನು ಖರೀದಿಸಿ ಕುಳಿತಿದ್ದಾರೆ. ಹೀಗೆ ಖರೀದಿಸಿದವರಲ್ಲಿ ಸಚಿವರಾದ ಆನಂದಸಿಂಗ್ ಮತ್ತು ಶ್ರೀರಾಮುಲು ಬೇನಾಮಿಗಳೂ ಇದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಇದೇನೂ ಆಶ್ಚರ್ಯದ ವಿಷಯವಲ್ಲ ಬಿಡಿ.
6 ತಿಂಗಳ ಹಿಂದೆ ಎಕರೆ ಭೂಮಿಗೆ 40 ಲಕ್ಷ ರೂ. ಇದ್ದರೆ ಈಗ ಅದರ ಮೌಲ್ಯ ಕೋಟಿ ರೂಪಾಯಿ ದಾಟಿದೆ. ಇಲ್ಲಿ ಹೋಟೆಲ್, ರೆಸಾರ್ಟ್ ನಿರ್ಮಿಸಲು ಬಯಸಿದ ಬೆಂಗಳೂರು ಮತ್ತು ಹೈದರಾಬಾದ್ ಉದ್ಯಮಿಗಳು ವಿಜಯನಗರ ಉತ್ಸವದಲ್ಲಿ ಪಾಲ್ಗೊಳ್ಳಲಿದ್ದಾರೆ. ತಮ್ಮೆದುರು ವೇದಿಕೆ ಮೇಲೆ ಸರ್ಕಾರವೇ ಕಾಣುವಾಗ ಅವರ ಉತ್ಸಾಹ ಇನ್ನಷ್ಟು ಹೆಚ್ಚಲಿದೆ.
ಪಕ್ಕಾ ಬಿಸಿನೆಸ್ ಮೈಂಡ್ ಹೊಂದಿರುವ ಆನಂದಸಿಂಗ್ ಆಟವಿದು. ಈ ಆಟಕ್ಕೆ ಸಿಎಂ ಬಸವರಾಜ ಬೊಮ್ಮಾಯಿ ಮತ್ತು ಮಾಜಿ ಸಿಎಂ ಯಡಿಯೂರಪ್ಪ ಆಶೀರ್ವಾದ ಮಾಡುತ್ತಿದ್ದಾರೆ.
ಹೆಚ್ಚೂ ಕಡಿಮೆ ರಾಜ್ಯ ಸಚಿವ ಸಂಪುಟದ ಅರ್ಧಕ್ಕೂ ಹೆಚ್ಚು ಸಚಿವರು ಪಾಲ್ಗೊಳ್ಳುತ್ತಿದ್ದಾರೆ. ಪ್ರಮುಖ ಐಎಎಸ್‍ಗಳೂ ಪಾಲ್ಗೊಳ್ಳುತ್ತಾರೆ. ಅಂದರೆ ಸರ್ಕಾರವೇ ಹೊಸಪೇಟೆಯಲ್ಲಿ ಇರಲಿದೆ.
ಜನ ಜಿಲ್ಲೆ ಬಯಸಿದ್ದರೆ?
ಬಳ್ಳಾರಿಯಿಂದ ಪ್ರತ್ಯೇಕವಾಗಿ ಹೊಸ ವಿಜಯನಗರ ಜಿಲ್ಲೆ ಮಾಡಬೇಕು ಎಂದು ಇಲ್ಲಿ ಯಾವ ಗಂಭೀರ ಹೋರಾಟಗಳೂ ನಡದೇ ಇಲ್ಲ. ಮೊದಲು ಬಿಜೆಪಿ, ನಂತರ ಕಾಂಗ್ರೆಸ್‍ನಿಂದ ಶಾಸಕರಾದ ಆನಂದಸಿಂಗ್ ಹೊಸ ಜಿಲ್ಲೆಯ ಬೇಡಿಕೆಯ ನೆಪದಲ್ಲಿ ಮತ್ತೆ ಬಿಜೆಪಿ ಸೇರಿ ಸರ್ಕಾರ ರಚನೆಗೆ ನೆರವಾದರು.
ಹೊಸ ಜಿಲ್ಲೆಗಾಗಿ ಹರಸಾಹಸ ಮಾಡಿದರು. ಈಗ ಹೊಸ ವಿಜಯನಗರ ಜಿಲ್ಲೆಯಲ್ಲಿ ಹೊಸಪೇಟೆ, ಹಗರಿಬೊಮ್ಮನಹಳ್ಳಿ, ಹೂವಿನ ಹಡಗಲಿ, ಕೂಡ್ಲಿಗಿ, ಹರಪನಹಳ್ಳಿ ಮತ್ತು ಕೊಟ್ಟೂರು ತಾಲೂಕುಗಳು ಸೇರಿವೆ.
ವೈಜ್ಞಾನಿಕವಾಗಿ ಯೋಚಿಸಿದರೆ, ಜನರಿಗೆ ಜಿಲ್ಲಾ ಕೇಂದ್ರದಿಂದ ಭೌತಿಕ ದೂರ ಕಡಿಮೆ ಮಾಡಬೇಕು ಎಂಬ ಇಚ್ಛೆ ಇದ್ದರೆ ಹರಪನಹಳ್ಳಿಯನ್ನು ಜಿಲ್ಲಾ ಕೇಂದ್ರ ಮಾಡಬೇಕಿತ್ತು. ಆಗ ಎಲ್ಲ ತಾಲೂಕುಗಳು 30-40 ಕಿಮೀ ಅಂತರದಲ್ಲಿ ಇರುತ್ತಿದ್ದವು.
ಆದರೆ ಆನಂದಸಿಂಗ್ ಅವರ ವೈಯಕ್ತಿಕ ಹಿತಾಸಕ್ತಿ ಬಿಜೆಪಿ ಸರ್ಕಾರದ ಮೇಲೆ ಒತ್ತಡ ಹೇರಿದ ಪರಿಣಾಮ ಹೊಸ ಜಿಲ್ಲೆ ಸೃಷ್ಟಿಯಾಗಿದೆ.
ನಾಳೆ ಅಕ್ಟೋಬರ್ 2ರಂದು ಯಡಿಯೂರಪ್ಪನವರ ಉಪಸ್ಥಿತಿಯಲ್ಲಿ ಸಿಎಂ ಬೊಮ್ಮಾಯಿ ಉದ್ಘಾಟಿಸಲಿರುವ ಈ ಉತ್ಸವ ಮತ್ತು ಅದರ ಹಿಂದಿನ ಹಿತಾಸಕ್ತಿಗಳು ಗಾಂಧಿ ಆಲೋಚನೆಗಳಿಗೆ ತದ್ವಿರುದ್ಧವಾಗಿವೆ.
ಸಜ್ಜನ್ ಜಿಂದಾಲ್ ಬದಲಿಗೆ ಬಳ್ಳಾರಿ ಜಿಲ್ಲೆಯ ಜಿಂದಾಲ್ ಮುಖ್ಯಸ್ಥ ಮುರುಗನ್ ವೇದಿಕೆ ಮೇಲೆ ಇರಲಿದ್ದಾರೆ!
ಇದು ರಿಯಲ್ ಎಸ್ಟೇಟ್ ನೆರಳಿನಲ್ಲಿ ನಡೆಯುತ್ತಿರುವ, ತೆರಿಗೆದಾರರ 5-6 ಕೋಟಿ ರೂ. ಹಣವನ್ನು ಪೋಲು ಮಾಡುತ್ತಿರುವ ಉತ್ಸವ ಅಷ್ಟೇ.