ಅಮೆರಿಕಾ ಪ್ರವಾಸದಲ್ಲಿರುವ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರ ಎದುರೇ ಅಮೆರಿಕಾ ಅಧ್ಯಕ್ಷ ಜೋ ಬೈಡೆನ್ ಭಾರತೀಯ ಪತ್ರಿಕೋದ್ಯಮವನ್ನು ವ್ಯಂಗ್ಯವಾಡಿದ್ದಾರೆ. ಆ ಮೂಲಕ ಪ್ರಧಾನಿ ಮೋದಿಯನ್ನೇ ಪರೋಕ್ಷವಾಗಿ ಬೈಡೆನ್ ವ್ಯಂಗ್ಯವಾಡಿದ್ದಾರೆ.
ಮೂರು ದಿನಗಳ ಪ್ರವಾಸಕ್ಕೆ ಅಮೆರಿಕಾ ತಲುಪಿದ್ದ ಪ್ರಧಾನಿ ಮೋದಿಯೊಂದಿಗೆ ದ್ವಿಪಕ್ಷೀಯ ಮಾತುಕತೆಗೆ ಕುಳಿತುಕೊಳ್ಳುತ್ತಿರುವಾಗಲೇ ಬೈಡೆನ್ ಈ ಮಾತು ಹೇಳಿದ್ದಾರೆ.
ಮಾತುಕತೆಗೆ ಶುರು ಮಾಡುವುದಕ್ಕಿಂತ ಮುಂಚೆಯೆ ಶುಭಾಶಯ ವಿನಿಮಯ ಮಾಡಿಕೊಂಡ ಬೈಡೆನ್, “ಭಾರತೀಯ ಸುದ್ದಿ ಮಾಧ್ಯಮಗಳು ಅಮೆರಿಕನ್ ಸುದ್ದಿ ಮಾಧ್ಯಮಗಳಿಗಿಂತ ಉತ್ತಮವಾಗಿ ನಡೆದುಕೊಳ್ಳುತ್ತವೆ. ನಿಮ್ಮ ಅನುಮತಿಯೊಂದಿಗೆ ಹೇಳುವುದಾದರೆ… ನೀವು ಮಾಧ್ಯಮದವರಿಗೆ ಉತ್ತರಿಸುವ ಪ್ರಮೇಯವೇ ಬರುವುದಿಲ್ಲ, ಯಾಕೆಂದರೆ ಅವರು ನಿಮಗೆ ಪ್ರಶ್ನೆಯನ್ನೇ ಕೇಳುವುದಿಲ್ಲ” ಎಂದು ಬೈಡೆನ್ ಹೇಳಿದ್ದಾರೆ.
ಇದಕ್ಕೆ ಪ್ರಧಾನಿ ಮೋದಿಯವರು ಮೌನವಾಗಿ ಸಮ್ಮತಿ ಸೂಚಿಸಿದ್ದಾರೆಂದು ಪಿಟಿಐ ವರದಿ ಮಾಡಿದೆ.
ಪ್ರಧಾನಿ ಮೋದಿ ಹಾಗೂ ಆಡಳಿತ ಪಕ್ಷ ಬಿಜೆಪಿಗೆ ಪರವಾಗಿ ಭಾರತದ ಅನೇಕ ಸುದ್ದಿ ಮಾಧ್ಯಮಗಳು ಕೆಲಸ ಮಾಡುತ್ತವೆ ಎಂಬ ಆರೋಪ ಇರುವಂತೆಯೇ ಬೈಡೆನ್ ಈ ವ್ಯಂಗ್ಯ ಸಾಕಷ್ಟು ಸದ್ದು ಮಾಡಿದೆ.