ತನ್ನ ನಾಗರೀಕರಿಗೆ ವ್ಯಾಕ್ಸೀನ್ ನೀಡಲು ಪರದಾಡುತ್ತಿರುವ ಭಾರತ ಕೆಲವೇ ತಿಂಗಳುಗಳಲ್ಲಿ ಹೈದರಾಬಾದಿನಲ್ಲಿ ತಯಾರಾದ 60 ಕೋಟಿ ಜಾನ್ಸನ್ & ಜಾನ್ಸನ್ ಲಸಿಕಾ ಡೋಸುಗಳನ್ನು ಯೂರೋಪಿಗೆ ಅಥವಾ ಅಮೇರಿಕಾಗೆ ರಫ್ತುಗೊಳಿಸಲಿದೆ. ಈಗಾಗಲೇ ಲಸಿಕೆ ಪಡೆದಿರುವವರ ಮಟ್ಟ ಹೆಚ್ಚಿರುವ ಪಾಶ್ಚಿಮಾತ್ಯ ದೇಶಗಳಿಗೆ ಮತ್ತೆ ಲಸಿಕೆಗಳು ಹೋಗಬಹುದು ಎಂಬ ಕಳಕಳಿಯನ್ನು ನಾಗರೀಕ ಸಮಾಜ ಸಂಘಟನೆಗಳು ವ್ಯಕ್ತ ಪಡಿಸುತ್ತಿವೆ.
ಸೆಪ್ಟೆಂಬರ್ ತಿಂಗಳ ಬಹುತೇಕ ದಿನಗಳಂದು ಭಾರತದಲ್ಲಿ ಕೇವಲ 30,000 ರಿಂದ 40,000 ಹೊಸ ಕೋವಿಡ್ ಕೇಸುಗಳು ದಾಖಲಾಗುತ್ತಿದ್ದವು. ಭಾರತದ 14% ಜನತೆ ಮಾತ್ರ ಕೋವಿಡ್ ಲಸಿಕೆ ಪಡೆದು ಅದರ ವಿರುದ್ಧ ಹೋರಾಡುವುದನ್ನು ರೂಢಿಸಿಕೊಂಡಿದ್ದಾರೆ. ಅಭಿವೃದ್ಧಿ ಹೊಂದಿರುವ ರಾಷ್ಟ್ರಗಳ ಒತ್ತಾಯದ ಮೇರೆಗೆ ಭಾರತ ಹೆಚ್ಚೆಚ್ಚು ವ್ಯಾಕ್ಸಿನ್ ಡೋಸುಗಳನ್ನು ರಫ್ತು ಮಾಡುತ್ತಾ ನಡೆದರೆ, 2021 ಕಳೆಯುವಷ್ಟರಲ್ಲಿ 18 ವರ್ಷಗಳ ಮೇಲ್ಪಟ್ಟ ಭಾರತೀಯರೆಲ್ಲರನ್ನು ವ್ಯಾಕ್ಸಿನೇಟ್ ಮಾಡಲಾಗುತ್ತದೆ ಎಂಬ ಪ್ರಧಾನಿಗಳ ಮಾತು ಹುಸಿಯಾಗುತ್ತದೆ.
ಸೆಪ್ಟೆಂಬರ್ನ ಅಂತ್ಯದಲ್ಲಿ ನಡೆಯಲಿರುವ ಕ್ವಾಡ್ ಸಮ್ಮಿಟ್ ನಲ್ಲಿ ಯುನೈಟೆಡ್ ಸ್ಟೇಟ್ಸ್, ಭಾರತ, ಆಸ್ಟ್ರೇಲಿಯಾ ಮತ್ತು ಜಪಾನ್ ದೇಶಗಳ ಮುಖಂಡರು ಭಾಗವಹಿಸಲಿದ್ದಾರೆ. ಈ ಸಂದರ್ಭದಲ್ಲಿ ಲಸಿಕೆಗಳು ಎಲ್ಲಿಗೆ ರಫ್ತಾಗುತ್ತವೆ ಎಂಬುದು ಮುಖ್ಯವಾಗುತ್ತದೆ. ವಾಷಿಂಗ್ಟನ್ ನಲ್ಲಿ ನಡೆಯಲಿರುವ ಈ ಸಮ್ಮಿಟ್ ನಲ್ಲಿ ಮೋದಿ ಅವರು ಭಾಗವಹಿಸಿಲಿದ್ದಾರೆ.
ಭಾರತದಲ್ಲಿ ಎರಡನೇ ಅಲೆ ಬಂದ ನಂತರ ಲಸಿಕೆಗಳ ರಫ್ತನ್ನು ತಡೆಯಲಾಗಿತ್ತು. ಇದನ್ನು ಹಿಂಪಡೆದು ಮುಂದಿನ ತಿಂಗಳಿಂದ ರಫ್ತನ್ನು ಪುನರಾರಂಭಿಸುವುದಾಗಿ ಸೆಪ್ಟೆಂಬರ್ 20ರಂದು ಒಕ್ಕೂಟ ಆರೋಗ್ಯ ಸಚಿವರಾದ ಮನ್ಸುಖ್ ಮಂಡಾವಿಯಾ ಅವರು ಹೇಳಿಕೆ ನೀಡಿದ್ದರು. “ಲಸಿಕೆಗಳ ರಫ್ತನ್ನು ಮತ್ತೆ ಆರಂಭಿಸುವ ನಿರ್ಧಾರವನ್ನು ನಾವು ಸ್ವಾಗತಿಸುತ್ತೇವೆ, ಆದರೆ ಲಸಿಕೆಗಳು ಯಾರಿಗೆ ಅವಶ್ಯಕತೆ ಇದೆಯೋ ಅವರಿಗೆ ಸೇರಬೇಕು,” ಎಂದು ಡಾಕ್ಟರ್ಸ್ ವಿತೌಟ್ ಬಾರ್ಡರ್ಸ್‌ನ ದಕ್ಷಿಣ ಏಷಿಯಾ ಮುಖ್ಯಸ್ಥರಾದ ಲೀನಾ ಮೆಂಘನೇ ಅವರು ಹೇಳಿದರು.
“ಭಾರತ ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳೊಡನೆ ಲಸಿಕೆಗಳನ್ನು ಹಂಚಿಕೊಂಡಾಗ, ವೈರಸ್ನ ರೂಪಾಂತರಿಗಳನ್ನು ನಿಯಂತ್ರಿಸಬಹುದು. ಆದರೂ ಜೆ&ಜೆ ಕಂಪನಿ ಲಸಿಕೆ ಸರಬರಾಜು ಮಾಡುತ್ತಿರುವುದರ ಕುರಿತು ಲೆಕ್ಕಾಚಾರ ನಮಗೆ ಬೇಕಾಗುತ್ತದೆ.” ಒಕ್ಕೂಟ ಸರಕಾರ ಸರ್ವೋಚ್ಛ ನ್ಯಾಯಾಲಯಕ್ಕೆ ಏಪ್ರಿಲ್ 29ರಂದು ಸಲ್ಲಿಸಿದ್ದ ಅಫಿಡೆವಿಟ್ಟು “ಭಾರತದಲ್ಲಿ ತಯಾರಾಗುವ ಜೆ&ಜೆ ಲಸಿಕೆಗಳು ಆಗಸ್ಟಿನಿಂದ ಲಭ್ಯವಾಗುತ್ತವೆ” ಎಂದು ಹೇಳಿತ್ತು. ಆ ಆಫಿಡವಿಟ್ಟನ್ನು ಉಲ್ಲೇಖಿಸಿ “ಅದರ ಲೆಕ್ಕ ನಮಗೆ ನೀಡಬೇಕು” ಎಂದು ಮೆಂಘನೇ ಹೇಳಿದರು.
ಜೆ&ಜೆ ಕಂಪನಿಯು ದಕ್ಷಿಣ ಆಫ್ರಿಕಾದಲ್ಲಿ ತಯಾರಿಸಿದ ಲಸಿಕೆಗಳನ್ನು ಯೂರೋಪಿಗೆ ರಫ್ತು ಮಾಡಿತು ಎಂಬ ವಿಷಯವನ್ನು ಆಧರಿಸಿ ಸೆಪ್ಟೆಂಬರ್ 16ರಂದು 14 ನಾಗರೀಕ ಸಮಾಜ ಸಂಘಟನೆಗಳು ಭಾರತ ಸರಕಾರಕ್ಕೆ, ಜೆ&ಜೆ ಕಂಪನಿಗೆ ಮತ್ತು ಯುನೈಟೆಡ್ ಸ್ಟೇಟ್ಸ್ ನ ಸರಕಾರಕ್ಕೆ ಪತ್ರವೊಂದನ್ನು ಬರೆದರು. “ಯೂರೋಪಿನ ರಾಷ್ಟ್ಟಗಳು, ಯು.ಎಸ್. ಮತ್ತು ಇತರ ಶ್ರೀಮಂತ ದೇಶಗಳು ತಮ್ಮ ಅಗತ್ಯಕ್ಕೂ ಮೀರಿ ಲಸಿಕೆಗಳನ್ನು ಕೊಂಡುಕೊಂಡು ತಮ್ಮ ಆಂತರಿಕ ಉಪಯೋಗಕ್ಕಾಗಿ ಕೂಡಿಟ್ಟುಕೊಳ್ಳುತ್ತಿವೆ.
ಸದ್ಯದ ಪರಿಸ್ಥಿತಿಯಲ್ಲಿ ಜೆ&ಜೆ ಕಂಪನಿಯ ಬಳಿ ಪೂರೈಸದೇ ಇರುವ ಬೆಡಿಕೆಗಳು ಇವೆ. ಈ ಬೇಡಿಕೆಗಳನ್ನು ಪೂರೈಸಿ ಕಂಪನಿ ಬಹಳಷ್ಟು ಲಾಭ ಗಳಿಸಲಿದೆ. ಆದರೆ ಲಸಿಕೆಗಳು ಅಗತ್ಯವಿರುವುದು ಈ ದೇಶಗಳಿಗಲ್ಲ,” ಎಂದು ಆ ಪತ್ರ ಹೇಳಿದೆ. “ಆಫ್ರಿಕಾದಲ್ಲಿ ಲಸಿಕೆಯಾಗಿರುವವರ ಮಟ್ಟ 3%, ಭಾರತದಲ್ಲಿ 13%, ಆದರೂ ಈ ಲಸಿಕೆಗಳು 50% ಜನತೆ ವ್ಯಾಕ್ಸಿನೇಟ್ ಆಗಿರುವಂತಹ ಯೂರೋಪ್ಯ ದೇಶಗಳಿಗೆ ಮತ್ತು ಯು.ಎಸ್. ಗೆ ರಫ್ತಾಗಲಿವೆ.”
ಜೆ&ಜೆ ಆಗಲೀ ಅಥವಾ ಒಕ್ಕೂಟ ಸರಕಾರವಾಗಲೀ, ಭಾರತದಲ್ಲಿ ತಯಾರಾಗಿರುವ ಲಸಿಕೆಗಳು ಎಲ್ಲಿಗೆ ರಫ್ತಾಗಲಿವೆ ಎಂಬುದನ್ನು ಇಲ್ಲಿಯ ವರೆಗೂ ತಿಳಿಸಿಲ್ಲ. ಕೋವಿಡ್-19 ವ್ಯಾಕ್ಸೀನ್ಸ್ ಗ್ಲೋಬಲ್ ಆಕ್ಸೆಸ್ ಅಥವಾ ಜಾಗತಿಕ ಲಸಿಕಾ ಅಲೈನ್ಸ್, ಗವಿ ಯ ಕೋವ್ಯಾಕ್ಸ್ ನಂತಹ ಸಂಸ್ಥೆಗಳೂ ಸಹ ಭಾರತ ಸರಬರಾಜು ಮಾಡಲಿರುವ ಲಸಿಕೆಗಳ ಕುರಿತು ಮಾಹಿತಿಯನ್ನು ನೀಡಿಲ್ಲ. ಜಗತ್ತಿನಾದ್ಯಂತ ಲಸಿಕೆಗಳನ್ನು ಸಮಾನವಾಗಿ ಹಂಚಲು ಕೋವ್ಯಾಕ್ಸ್ ಎಂಬ ಸಂಸ್ಥೆಯನ್ನು ಆರಂಭಿಸಲಾಗಿತ್ತು. 17 ಸೆಪ್ಟೆಂಬರ್ ನಂದು ಕಳಿಸಿದಂತ ಪ್ರಶ್ನೆಗಳಿಗೆ, ಗವಿಯ ವಕ್ತಾರರೊಬ್ಬರು ಹೀಗೆ ಪ್ರತಿಕ್ರಯಿಸಿದ್ದಾರೆ, “ಭಾರತದ ರಫ್ತು ನಿಯಂತ್ರಣಗಳನ್ನು ಗಣನೆಗೆ ತೆಗೆದುಕೊಂಡು, ಸದ್ಯದ ಪರಿಸ್ಥಿತಿಯಲ್ಲಿ ಭಾರತ ಯಾವುದೇ ಡೋಸುಗಳನ್ನು ರಫ್ತು ಮಾಡುತ್ತಿಲ್ಲ. ಕೋವಿಡ್ ಹರಡುವಿಕೆ ಕಡಿಮೆಯಾಗುತ್ತಾ ಲಸಿಕೆಗಳ ಉತ್ಪನ್ನ ಹೆಚ್ಚಾಗುತ್ತಿರುವಂತೆ, ಜಗತ್ತಿನ ಲಸಿಕಾ ಉತ್ಪನ್ನ ಶಕ್ತಿಗೃಹವಾದ ಭಾರತ ಕೋವಿಡ್ ವಿರುದ್ಧದ ಜಾಗತಿಕ ಹೋರಾಟದಲ್ಲಿ ಆದಷ್ಟು ಬೇಗ ಭಾಗವಹಿಸಲಿ ಎಂಬುದೇ ನಮ್ಮ ಆಸೆ.”
ಈ ತಿಂಗಳ ಆರಂಭದಲ್ಲಿ ವಾಷಿಂಗ್ಟನ್ ಪೋಸ್ಟ್ ವರದಿಯೊಂದನ್ನು ಮಾಡಿತ್ತು. “ಯು.ಎಸ್. ನಂತಹ ಶ್ರೀಮಂತ ರಾಷ್ಟ್ರಗಳು ಲಸಿಕೆಯಾಗಿರುವ ಜನರಿಗೆ ಬೂಸ್ಟರ್ ಶಾಟ್ ಗಳನ್ನು ನೀಡುವುದಾಗಿ ಪ್ರಸ್ತಾಪಿಸಿರುವುದು” ಭಾರತದ ಲಸಿಕಾ ರಫ್ತಿನ ನಿರ್ಧಾರದ ಮೇಲೆ ಒತ್ತಾಯಕಾರಿ ಪ್ರಭಾವ ಬೀರಿದೆ ಎಂದು ವರದಿ ಸೂಚಿಸಿತ್ತು.
ಸೆಪ್ಟೆಂಬರ್ 15ರ ರೋಯ್ಟರ್ಸ್ನ ವರದಿಯ ಪ್ರಕಾರ ಭಾರತ ಲಸಿಕಾ ರಫ್ತಿನ ನಿರ್ಧಾರದಿಂದ ಆಫ್ರಿಕಾದ ದೇಶಗಳಿಗೆ ಸಹಾಯವಾಗಲಿದೆ ಎಂಬುದು ಅನಾಮಿಕ ಭಾರತೀಯ ಅಧಿಕಾರಿಯೊಬ್ಬರ ಹೇಳಿಕೆ. ರಫ್ತಿನ ನಿರ್ಧಾರ ಗಟ್ಟಿಯಾದದ್ದು ಆಗಿದ್ದರೂ ಎಷ್ಟು ಡೋಸುಗಳನ್ನು ರಫ್ತು ಮಾಡಲಾಗುತ್ತದೆ ಎಂಬುದರ ಬಗ್ಗೆ ಹೆಚ್ಚಿನ ಸ್ಪಷ್ಟತೆ ಇಲ್ಲ. ಮೇ 29ನೇ ತಾರೀಖಿನ ವರೆಗೂ ಮೋದಿ ಸರಕಾರ 6.64 ಕೋಟಿ ಡೋಸುಗಳಷ್ಟು ಲಸಿಕೆಯನ್ನು ಇತರ ದೇಶಗಳಿಗೆ ಮಾರಾಟ ನಡೆಸಿತ್ತು ಅಥವಾ ದಾನ ಮಾಡಿತ್ತು.
ಭಾರತದ ಔಷಧ ನಿಯಂತ್ರಣಾಲಯವು ಜೆ&ಜೆ ಕಂಪನಿಯ ಲಸಿಕೆಗಳಿಗೆ ತುರ್ತು ಬಳಕೆಯ ಅನುಮತಿಯನ್ನು ಈ ವರ್ಷದ ಆಗಸ್ಟ್ ಮಾಸದಲ್ಲಿ ನೀಡಿತ್ತು. ಜೆ&ಜೆ ಕಂಪನಿಯ ಒಂದೇ ಡೋಸಿನ ಲಸಿಕಗಳನ್ನು ಹೈದರಾಬಾದಿನ ಬಯೋಲಾಜಿಕಲ್ ಇ ಎಂಬ ಕಂಪನಿ ತಯಾರಿಸುತ್ತಿದೆ. ನೇಚರ್ ಎಂಬ ಅಂತರಾಷ್ಟ್ರೀಯ ಪತ್ರಿಕೆಗೆ ಕಂಪನಿಯ ಮುಖ್ಯಸ್ಥೆ ಮಹಿಮಾ ದಾಟ್ಲ ಪ್ರತಿ ತಿಂಗಳು 4 ಲಕ್ಷ ಡೋಸುಗಳನ್ನು ತಯಾರಿಸುವುದು ತಮ್ಮ ಗುರಿ ಎಂದು ಹೇಳಿದ್ದರು. ಆದರೆ ಅದು ಎಲ್ಲಿಗೆ ರಫ್ತಾಗುತ್ತದೆ ಎಂಬುದರ ಕುರಿತು ಅವರ ಬಳಿಯೂ ಮಾಹಿತಿ ಇಲ್ಲ. “ಲಸಿಕೆಗಳು ಎಲ್ಲಿಗೆ ಹೋಗುತ್ತವೆ ಮತ್ತು ಯಾವ ದರದಲ್ಲಿ ಮಾರಾಟವಾಗುತ್ತವೆ ಎಂಬುದು ಜೆ&ಜೆ ಕಂಪನಿಯವರ ನಿರ್ಧಾರ,” ಎಂದು ಹೇಳಿದ್ದರು.
“ಜೆ&ಜೆ ಕಂಪನಿಯು ಪರರ ಒತ್ತಾಯವಿಲ್ಲದೇ ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳ ಬಗ್ಗೆ ಯೋಚಿಸುವುದಿಲ್ಲ,” ಎಂಬುದು ನಾಗರೀಕ ಸಮಾಜ ಸಂಘಟನೆಗಳ ವಾದ. ಈ ಹಿಂದೆ ಕಂಪನಿಯು ಆಫ್ರಿಕಾದಿಂದ ಲಸಿಕೆಗಳನ್ನು ಯೂರೋಪಿಗೆ ಕಳುಹಿಸಿತ್ತು. ಹೋರಾಟಗಾರರು ತಿರುಗಿಬಿದ್ದ ಬಳಿಕೆ ಯೂರೋಪ್ಯ ಒಕ್ಕೂಟ ಲಕ್ಷಗಟ್ಟಲೆ ಲಸಿಕೆಗಳು ವಾಪಸ್ ಕಳಿಸಲು ಒಪ್ಪಿಕೊಂಡಿತು ಎಂದು ಸೆಪ್ಟೆಂಬರ್ ನ ಆರಂಭದಲ್ಲಿ ಆಫ್ರಿಕಾ ಒಕ್ಕೂಟದ ರಾಯಭಾರಿಯೊಬ್ಬರು ಹೇಳಿದ್ದರು. ಆಫ್ರಿಕಾ ಖಂಡ ಜಗತ್ತಿನಲ್ಲಿ ಅತೀ ಕಡಿಮೆ ಲಸಿಕೆಗಳನ್ನು ಪಡೆದಿದೆ.
ಲಸಿಕೆ ಆಧಾರಿತ ವಿಷಯಗಳಲ್ಲಿ ಆಫ್ರಿಕಾದ ದೇಶಗಳು ಬಹಳಷ್ಟು ತಾರತಮ್ಯವನ್ನು ಅನುಭವಿಸುತ್ತಿವೆ. ಇದನ್ನು “ವ್ಯಾಕ್ಸೀನ್ ಅಪಾರ್ಥೈಡ್” ಎಂದು ಕರೆಯಲಾಗಿದೆ. ಆಫ್ರಿಕಾ ಒಕ್ಕೂಟದ ಅಧಿಕಾರಿಯಾದ ಸ್ಟ್ರೈವ್ ಮಸಿಯಿವಾ ಅವರು ಈ ವರ್ಷದ ಜುಲೈ ಮಾಸದಲ್ಲಿ ಮಾಧ್ಯಮ ಹೇಳಿಕೆಯೊಂದನ್ನು ನೀಡಿದ್ದರು, “ನಾವು ಲಸಿಕೆ ಉತ್ಪಾದಕರನ್ನು ಭೇಟಿಯಾದಾಗಲೆಲ್ಲಾ ಅವರು ಯೂರೊಪ್ಯ ಒಕ್ಕೂಟದ ಬೇಡಿಕೆಗಳನ್ನು ಪೂರೈಸುವುದರಲ್ಲಿ ನಿರತರಾಗಿದ್ದಾರೆ ಎಂದು ಹೇಳಿ ನಮ್ಮನ್ನು ಭಾರತಕ್ಕೆ ನಿರ್ದೇಶಿಸುತ್ತಾರೆ.” ಹೀಗೆ ನಿರ್ದೇಶಿಸುವುದರ ಜೊತೆಗೆ ಭಾರತದ ಲಸಿಕೆಯಾದ ಕೋವಿಶೀಲ್ಡ್ ಲಸಿಕೆಯನ್ನು ಪಡೆದಿರುವವರ ಮೇಲೆ ಸಾರ್ವಜನಿಕ ಆರೋಗ್ಯ ನಿಯಂತ್ರಣಗಳನ್ನು ಯೂರೋಪ್ಯ ಒಕ್ಕೂಟ ಹೇರುತ್ತದೆ. ಕೋವಿಶೀಲ್ಡ್ ಲಸಿಕೆಯು ಯೂರೋಪ್ಯ ಒಕ್ಕೂಟದ ಸಮ್ಮತಿಯುಳ್ಳ ಆಸ್ಟ್ರಾಜೆನೆಕಾ ಲಸಿಕೆ ಭಾರತದ ರೂಪಾಂತರವಾಗಿದೆ. “ಕೊವ್ಯಾಕ್ಸ್ ಸಂಸ್ಥೆಗೆ ಹಣ ನೀಡಿ ಲಸಿಕೆಗಳನ್ನು ಕೊಂಡುಕೊಳ್ಳುವುದಕ್ಕೆ ಭಾರತಕ್ಕೆ ಕಳಿಸಿ, ಆ ಲಸಿಕೆಗಳು ಒಪ್ಪಿತವಾದವಲ್ಲ ಎಂದು ಹೇಳಿದರೆ ನಾವೇನು ಮಾಡುವುದು?” ಎಂದು ಮಾಸಿಯಿವಾ ಕೇಳುತ್ತಾರೆ.
ವ್ಯವಹಾರ ಸಂಬಂಧಿತ ಬೌದ್ಧಿಕ ಹಕ್ಕುಗಳ ಕುರಿತಾದ ಟ್ರಿಪ್ಸ್ ಒಪ್ಪಂದವನ್ನು ಕೋವಿಡ್ 19 ರ ಸಂಬಂಧಿತವಾದ ತಂತ್ರಜ್ಞಾನಕ್ಕೆ ತೆಗೆದುಹಾಕಬೇಕು ಎಂದು ಭಾರತ ಮತ್ತು ದಕ್ಷಿಣ ಆಫ್ರಿಕಾ ಸೇರಿದಂತೆ ಹಲವಾರು ದೇಶಗಳು ಕಳೆದ ಅಕ್ಟೋಬರ್ ತಿಂಗಳಲ್ಲಿ ಪ್ರಸ್ತಾಪಿಸಿವೆ. ಆದರೆ, ಗುಣಮಟ್ಟ ವ್ಯತ್ಯಾಸವಾಗಬಹುದು ಎಂದು ಈ ಪ್ರಸ್ತಾಪವನ್ನು ಪರಿಗಣಿಸಲಾಗುತಿಲ್ಲ. ಇದೇ ಸಂದರ್ಭದಲ್ಲಿ ಭಾರತ ಮತ್ತು ದಕ್ಷಿಣ ಆಫ್ರಿಕಾ ದೇಶಗಳಿಗೆ ಉತ್ಪಾದನೆಯ ಹೊರಗುತ್ತಿಗೆ ನೀಡಲಾಗಿದೆ.
“ಟ್ರಿಪ್ಸ್ ಅನ್ನು ತೆಗೆದುಹಾಕುವುದನ್ನು ತಡೆಯುತ್ತಿರುವ ದೇಶಗಳಿಗೆ ಎರಡೂ ಬೇಕಿದೆ,” ಎಂದು ಬೌದ್ಧಿಕ ಸ್ವತ್ತು ಹಕ್ಕುಗಳ ತಜ್ಞ ತಾಹಿರ್ ಅಮೀನ್ ಅವರು ಹೇಳುತ್ತಾರೆ. “ಈ ದೇಶಗಳು ತಡೆಯನ್ನು ಪ್ರಸ್ತಾಪಿಸಿರುವ ದೇಶಗಳಿಗೆ ಉತ್ಪಾದನಾ ಹಕ್ಕುಗಳನ್ನು ನೀಡಿ ಅದೇ ಸಮಯಕ್ಕೆ ತಮ್ಮ ಅಗತ್ಯಕ್ಕೆ ಅವರನ್ನು ಶೋಷಿಸುತ್ತಿದ್ದಾರೆ.” ಆದರೆ ಆ ದೇಶಗಳು ತಮ್ಮದೇ ಸಾಮರ್ಥ್ಯದಲ್ಲಿ ಉತ್ಪಾದನೆಯನ್ನು ಹೆಚ್ಚಿಸಿ ಮಿಕ್ಕವರಿಗೂ ಸಹಾಯ ಮಾಡದಂತೆ ನೋಡಿಕೊಳ್ಳಲಾಗುತ್ತಿದೆ. ಇದು ಗಂಭೀರ ಸನ್ನಿವೇಶ ಆಗದೇ ಇದ್ದಿದ್ದರೆ ಎರಡೂ ರೀತಿಯಲ್ಲಿ ಮಾತನಾಡುವ ಯುರೋಪ್ಯ ಒಕ್ಕೂಟ, ಯು.ಎಸ್. ಮತ್ತು ಜರ್ಮನಿಯ ಹಿಪೋಕ್ರೆಸಿ ಹಾಸ್ಯಾಸ್ಪದವಾಗಿದೆ.”
ಆಕ್ಸೆಸ್ ಐ.ಬಿ.ಎಸ್.ಎ. ಯೋಜನೆಯ ಸಂಚಾಲಕರಾದ ಅಚಲ್ ಪ್ರಭಾಲ ಹೀಗೆ ಹೇಳಿದ್ದಾರೆ, “ಒಂದು ಸಾಂಕ್ರಾಮಿಕದ ನಡುವೆ ಜೆ&ಜೆ ಕಂಪನಿ ಅಗತ್ಯಕ್ಕೆ ಅನುಸರಿಸದೇ ತನಗೆ ಬೇಕಾದವರಿಗೆ ಲಸಿಕೆ ಕಳುಸಹಿಸುವ ನಿರ್ಧಾರವನ್ನು ತೆಗೆದುಕೊಳ್ಳುವುದರ ಬಗ್ಗೆ ನನಗೆ ಅಸಮಾಧಾನವಿದೆ.” ಜೆ&ಜೆ ಅವರ ಲೆಕ್ಕಾಚಾರ ಹಣಕಾಸಿನ ಕುರಿತಾಗಿ ಇರುತ್ತದೆ ಎಂಬುದು ಅವರ ಅಭಿಪ್ರಾಯ. “ಈ ಪತ್ರದಲ್ಲಿ ಹೇಳಿರುವಂತೆ ನಮ್ಮ ಲೆಕ್ಕ ಬಹಳ ಸರಳವಾದದ್ದು. ಯಾರಿಗೆ ಅತ್ಯಂತ ಅವಶ್ಯಕತೆ ಇದೆಯೋ ಅವರಿಗೆ ಲಸಿಕೆ ಸಲ್ಲಬೇಕು.”
ಇಂಡಿಯನ್ ಸಿವಿಲ್ ಸೊಸೈಟಿಯ ಸದಸ್ಯರು ತಮ್ಮ ಪತ್ರದಲ್ಲಿ ಹೀಗೆ ಬರೆಯುತ್ತಾರೆ, “ಲಸಿಕೆಗಳು ಅಗತ್ಯವಿರುವುದು ಭಾರತ, ಆಫ್ರಿಕಾ ಮತ್ತು ಬಡದೇಶಗಳಿಗೆ ಲಸಿಕೆ ಹಂಚಲು ಮುಂದಾಗಿರುವ ಕೋವ್ಯಾಕ್ಸ್ ಸಂಸ್ಥೆಗೆ. ಲಸಿಕೆ ಪಡೆಯದ ಬಹುಸಂಖ್ಯಾತ ಜನ ವಾಸವಿರುವ ಅಭಿವೃದ್ಧಿ ಹೊಂದುತ್ತಿರುವ ದೇಶಗಳಲ್ಲಿ ವೈರಸ್ ಅತೀ ಹೆಚ್ಚು ಹರಡುತ್ತಾ ಜನ ಮರಣ ಹೊಂದುತ್ತಿದ್ದಾರೆ. ಜೆ&ಜೆ ಅಂತವರಿಗೆ ಮೊದಲು ಲಸಿಕೆ ಹಂಚಬೇಕು.”
“ಈ ಎಲ್ಲಾ ಡೋಸುಗಳು ಭಾರತದ ಮಣ್ಣಿನಲ್ಲಿ ಭಾರತೀಯರ ಶ್ರಮದೊಂದಿಗೆ ತಯಾರಾಗಿರುವುದರಿಂದ ಅದರ ಮೇಲೆ ನಮಗೂ ಹಕ್ಕಿದೆ,” ಎಂದು ಪ್ರಭಲಾ ಹೇಳುತ್ತಾರೆ. “ನಾವು ಉತ್ಪಾದಿಸುವ ಲಸಿಕೆಗಳು ಭಾರತಕ್ಕೆ, ಆಫ್ರಿಕಾದ ದೇಶಗಳಿಗೆ ಮತ್ತು ಕೋವ್ಯಾಕ್ಸ್ ಸಂಸ್ಥೆಗೆ ಹೋಗಬೇಕು, ಇನ್ನೆಲ್ಲಿಗೂ ಅಲ್ಲ. ಜೆ&ಜೆ ಕಂಪನಿಯು ನಮ್ಮೆಲ್ಲರ ಒತ್ತಾಯವಿಲ್ಲದೆ ಮಾನವೀಯ, ವೈಚಾರಿಕ ಮಾರ್ಗಗಳನ್ನು ಹಿಡಿಯುವುದಿಲ್ಲ ಎಂಬುದನ್ನು ಇತ್ತೀಚಿನ ಇತಿಹಾಸ ನಮಗೆ ತೋರಿಸಿದೆ.”
ಸೆಪ್ಟೆಂಬರ್ 2021ರ ಕೋವ್ಯಾಕ್ಸ್ ವರದಿ ಹೀಗೆ ಹೇಳುತ್ತದೆ, “ಜೆ&ಜೆ ಕಂಪನಿಯ ಹೊಸ ಉತ್ಪಾದನಾ ಕೇಂದ್ರ (ಕೋವ್ಯಾಕ್ಸ್ ಗೆ ಸರಬರಾಜು ಮಾಡಬೇಕಾದ ಕೇಂದ್ರ) ಸಮಸ್ಯೆಗಳನ್ನು ಎದುರಿಸುತ್ತಿರುವುದರಿಂದ ಸರಬರಾಜು ವಿಳಂಬವಾಗಿದೆ. ಉತ್ಪಾದನೆ ಈಗ ಪುನರಾರಂಭವಾಗಿದ್ದು ವೇಳಾಪಟ್ಟಿ ವಿಳಂಬವಾಗಿದೆ. 2021ರಲ್ಲಿ ಕೋವ್ಯಾಕ್ಸ್ ಗೆ ಸಿಗಲಿರುವ ಲಸಿಕೆ ಡೋಸುಗಳ ಸಂಖ್ಯೆ ಕಡಿಮೆಯಾಗಿರುತ್ತದೆ.”
ಭಾರತದ ನಾಗರೀಕ ಸಮಾಜ ಸಂಘಟನೆಗಳು ಯು.ಎಸ್. ಅಧ್ಯಕ್ಷರಾದ ಜೋ ಬೈಡನ್ ಅವರಿಗೆ ಜೆ&ಜೆ ಸಂಸ್ಥೆಯ ಮೇಲೆ ಸಮಾನ ಲಸಿಕೆ ಹಂಚಿಕೆಯ ಕುರಿತು ಒತ್ತಾಯ ಮಾಡುವಂತೆ ಕೋರಿ ಪತ್ರ ಬರೆದಿದ್ದಾರೆ. “ಜೋ ಬೈಡನ್ ಅವರಿಗೆ ಇಡೀ ಜಗತ್ತನ್ನು ಲಸಿಕೆಗೊಳಪಡಿಸುವುದು ಗಂಭೀರವಾದ ಕಳಕಳಿಯಾದರೆ, ಅವರ ಆಡಳಿತಕ್ಕೆ ನೈತಿಕ, ಕಾನೂನಾತ್ಮಕ ಮತ್ತು ಅವಶ್ಯಕವಿದ್ದಲ್ಲಿ ಹಣಕಾಸಿನ ಅಧಿಕಾರವೂ ಇದೆ. ಟ್ರಿಪ್ಸ್ ಒಪ್ಪಂದವನ್ನು ತಡೆಹಿಡಿದು, ಜೆ&ಜೆ ಕಂಪನಿಯ ಮೇಲೆ ಒತ್ತಡ ಹೇರಿ, ಲಸಿಕೆಗಳನ್ನು ಉತ್ಪಾದಿಸುತ್ತಿರುವ ಎಲ್ಲರಿಗೂ ತಂತ್ರಜ್ಞಾನ ಸಹಾಯ ಮಾಡುವ ಅಧಿಕಾರ ಬೈಡನ್ ಅವರ ಬಳಿ ಇದೆ.”
ಅಭಿವೃದ್ಧಿ ಹೊಂದುತ್ತಿರುವ ದೇಶಗಳ ಔಷಧಾಲಯವೆಂದೇ ಪ್ರಖ್ಯಾತಿ ಹೊಂದಿರುವ ಭಾರತದ ನೀತಿಗಳು ಕಡಿಮೆ ಆದಾಯದ ದೇಶಗಳು ಸಾಂಕ್ರಾಮಿಕವನ್ನು ಹೇಗೆ ಎದುರಿಸುತ್ತವೆ ಎಂಬುದರ ಮೇಲೆ ಪ್ರಭಾವ ಬೀರುತ್ತದೆ. ಆರೋಗ್ಯ ಕಾರ್ಯದರ್ಶಿಗಳಾದ ರಾಜೇಶ್ ಭೂಷಣ್ ಅವರಾಗಲೀ, ಜೆ&ಜೆಯ ಕಾರ್ಯಕಾರಿ ಸಮಿತಿಯ ಉಪಾಧ್ಯಕ್ಷರಾದ ಪಾಲ್ ಸ್ಟೊಫೆಲ್ಸ್ ಅವರಾಗಲೀ, ಜೆ&ಜೆ ಕಂಪನಿಯು ಭಾರತಕ್ಕೆ ಎಷ್ಟು ಡೋಸುಗಳ ಲಸಿಕೆಯನ್ನು ಮೀಸಲಿಡುತ್ತದೆ ಎಂಬುದರ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ReplyForward |