ಪಂಜಾಬಿನಲ್ಲಿ ವರ್ಷಗಳ ಕಾಲ ನಡೆಯುತ್ತಿದ್ದ ಶೀತಲ ಸಮರಕ್ಕೆ ಮುಖ್ಯಮಂತ್ರಿ ಬದಲಾವಣೆ ಮೂಲಕ ಪರಿಹಾರ ಕಂಡುಕೊಂಡ ಕಾಂಗ್ರೆಸ್ ಈಗ ರಾಜಸ್ಥಾನದ ಸಮಸ್ಯೆಗೂ ಮದ್ದು ಹುಡುಕಬೇಕಿದೆ. ಹಾಗೆ ನೋಡಿದರೆ ಛತ್ತೀಸ್ಗಢದಲ್ಲೂ ಬಂಡಾಯದ ಕಹಾಳೆ ಆಗಿಂದಾಗ್ಗೆ ಮೊಳಗುತ್ತಲೇ ಇದೆ. ಆದರೆ ಹೆಚ್ಚು ಸಮಸ್ಯೆ ಇರುವುದು ರಾಜಸ್ಥಾನದಲ್ಲಿ. ಆ ಕಾರಣದಿಂದ ರಾಜಸ್ಥಾನವೇ ಕಾಂಗ್ರೆಸ್ ಹೈಕಮಾಂಡಿಗೆ ಮೊದಲ ಆದ್ಯತೆಯಾಗಬೇಕಿದೆ.
ಪಂಜಾಬಿನಲ್ಲಿ ಮಾಜಿ ಮುಖ್ಯಮಂತ್ರಿ ಕ್ಯಾಪ್ಟನ್ ಅಮರೀಂದರ್ ಸಿಂಗ್ ಮತ್ತು ಪಂಜಾಬ್ ಕಾಂಗ್ರೆಸ್ ಅಧ್ಯಕ್ಷ ನವಜೋತ್ ಸಿಂಗ್ ಸಿಧು ನಡುವೆ ಇದ್ದಂತೆ ರಾಜಸ್ಥಾನದಲ್ಲಿ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಮತ್ತು ಉಪ ಮುಖ್ಯಮಂತ್ರಿ ಸಚಿನ್ ಪೈಲಟ್ ನಡುವೆ ನೇರವಾದ ಹಣಾಹಣಿ ಇದೆ. ಛತ್ತೀಸ್ಗಢದಲ್ಲಿ ಇಂಥ ನೇರಾವಾದ ಸ್ಪರ್ಧೆ ಇಲ್ಲ. ರಾಜಸ್ಥಾನದ ಸಮಸ್ಯೆ ಬಗ್ಗೆ ಸದ್ಯಕ್ಕೆ ಉಪೇಕ್ಷೆ ಮಾಡಲು ಸಾಧ್ಯವಿಲ್ಲ. ಈ ನಡುವೆ ಕಾಂಗ್ರೆಸ್ ಹೈಕಮಾಂಡ್ ಪಂಜಾಬಿನಲ್ಲಿ ಉರುಳಿಸಿದ ‘ಮುಖ್ಯಮಂತ್ರಿ ಬದಲಾವಣೆಯ ದಾಳ’ ರಾಜಸ್ಥಾನ ಮತ್ತು ಛತ್ತೀಸ್ಗಢದ ‘ಬಂಡುಕೋರರಿಗೆ’ ಭರವಸೆ ಮೂಡಿಸಿದೆ. ಜೊತೆಜೊತೆಗೆ ಮುಖ್ಯಮಂತ್ರಿಗಳಿಗೆ ಪರೋಕ್ಷ ಸಂದೇಶ ರವಾನಿಸಿದೆ ಎಂದು ಹೇಳಲಾಗುತ್ತಿದೆ.
ಅಲರ್ಟ್ ಆದ ಪೈಲಟ್!
ರಾಜಸ್ಥಾನದಲ್ಲಿ ಬಿಜೆಪಿ ಮತ್ತು ಮಾಜಿ ಮುಖ್ಯಮಂತ್ರಿ ವಸುಂಧರಾರಾಜೇ ವಿರುದ್ಧ ಹೋರಾಟ ಮಾಡಿ ಕಾಂಗ್ರೆಸ್ ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರುವುದರಲ್ಲಿ ಸಚಿನ್ ಪೈಲಟ್ ಪಾತ್ರ ಪ್ರಧಾನವಾಗಿತ್ತು. ಆದರೂ ಹಿರಿತನ ಆಧರಿಸಿ ಅಶೋಕ್ ಗೆಹ್ಲೋಟ್ ಅವರಿಗೆ ಮುಖ್ಯಮಂತ್ರಿ ಸ್ಥಾನ ನೀಡಲಾಯಿತು. ಆಗ ಅಶೋಕ್ ಗೆಹ್ಲೋಟ್ ಮತ್ತು ಸಚಿನ್ ಪೈಲಟ್ ನಡುವೆ ಶುರುವಾದ ಶೀತಲ ಸಮರ ಇವತ್ತಿನವರೆಗೂ ವಿರಮಿಸಿಲ್ಲ. ಮಧ್ಯೆ ಸಚಿನ್ ಪೈಲಟ್ ಪಕ್ಷ ತ್ಯಜಿಸುವ ಮಟ್ಟಕ್ಕೂ ಹೋಗಿ ಮತ್ತೆ ಮಾತೃಪಕ್ಷಕ್ಕೆ ನಿಷ್ಠರಾಗಿ ಉಳಿದರು. ಅವರಿಗೀಗ ಪಕ್ಷವನ್ನು ಅಧಿಕಾರಕ್ಕೆ ತರಲು ಮಾಡಿದ ಕೆಲಸದ ಜೊತೆಗೆ ಪಕ್ಷ ತ್ಯಜಿಸದ ಹೆಚ್ಚುಗಾರಿಕೆ ಕೂಡ ಇದೆ. ಮಧ್ಯಪ್ರದೇಶದ ಜ್ಯೋತಿರಾಧಿತ್ಯ ಸಿಂಧ್ಯಾ ಅವರಂತೆ ಪಕ್ಷ ತ್ಯಜಿಸದೆ ಆಗಲೇ ಎಚ್ಚರಿಕೆಯ ನಿರ್ಣಯ ಮಾಡಿದ ಸಚಿನ್ ಪೈಲಟ್ ಈಗಲೂ ಅಂತಹುದೇ ಎಚ್ಚರಿಕೆಯ ಹೆಜ್ಜೆಗಳನ್ನಿಡುತ್ತಿದ್ದಾರೆ.
ಪಂಜಾಬಿನಲ್ಲಿ ಮುಖ್ಯಮಂತ್ರಿ ಬದಲಾವಣೆ ಕಸರತ್ತು ಶುರುವಾಗುತ್ತಿದ್ದಂತೆ ಸಚಿನ್ ಪೈಲಟ್ ದೆಹಲಿಯತ್ತ ದೌಡಾಯಿಸಿದರು. ಕಳೆದ ಬಾರಿ ರಾಹುಲ್ ಗಾಂಧಿ ಅವರನ್ನು ಭೇಟಿ ಮಾಡದೆ ತಾವೇ ಎಲ್ಲವನ್ನೂ ನಿರ್ಧರಿಸಲು ಮುಂದಾಗಿ ಮುಗ್ಗರಿಸಿದ್ದರು. ಈ ಬಾರಿ ಪಂಜಾಬ್ ಬಿಕ್ಕಟ್ಟು ಬಗೆಹರಿಸುವುದರಲ್ಲಿ ಬ್ಯುಸಿಯಾಗಿದ್ದರೂ ಅದರ ನಡುವೆಯೇ ರಾಹುಲ್ ಗಾಂಧಿ ಅವರನ್ನು ಭೇಟಿ ಮಾಡಿದ್ದಾರೆ. ಇದಲ್ಲದೆ ರಾಜಸ್ಥಾನದ ಉಸ್ತುವಾರಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ಅಜಯ್ ಮಾಕೆನ್ ಅವರ ಜೊತೆ ಚರ್ಚಿಸಿ ಪೀಠಿಕೆ ಹಾಕುವ ಸಂಪ್ರದಾಯವನ್ನು ಯಶಸ್ವಿಯಾಗಿ ಮುಗಿಸಿದ್ದಾರೆ.
ಹೈಕಮಾಂಡ್ ಕೂಡ ಅಲರ್ಟ್!
ಪಂಜಾಬ್ ಬಳಿಕ ರಾಜಸ್ಥಾನದಲ್ಲೂ ಸಮಸ್ಯೆ ಸ್ಫೋಟಿಸಬಹುದು ಎಂಬ ಅಂದಾಜು ಕಾಂಗ್ರೆಸ್ ಹೈಕಮಾಂಡಿಗೂ ಸಿಕ್ಕಿದಂತಿದೆ. ಇದಕ್ಕೆ ಪೂರಕವಾಗಿ ವಾಯುವ್ಯ ರಾಜ್ಯದಲ್ಲಿಯೂ ನಾಯಕತ್ವದ ಬದಲಾವಣೆಗೆ ಒತ್ತಾಯಿಸಿ ಸಚಿನ್ ಪೈಲಟ್ ಬೆಂಬಲಿಗರು ಮತ್ತು ನಿಷ್ಠಾವಂತರು ಧ್ವನಿ ಎತ್ತಿದ್ದಾರೆ. ರಾಜಸ್ಥಾನ ಕಾಂಗ್ರೆಸ್ ಘಟಕದ ಮಾಜಿ ಪ್ರಧಾನ ಕಾರ್ಯದರ್ಶಿ ಮಹೇಶ್ ಶರ್ಮಾ ಬಹಿರಂಗವಾಗಿಯೇ ‘ಸಚಿನ್ ಪೈಲಟ್ ಅವರ ಕಠಿಣ ಪರಿಶ್ರಮದಿಂದಾಗಿ ರಾಜಸ್ಥಾನದಲ್ಲಿ ಕಾಂಗ್ರೆಸ್ ಸರ್ಕಾರವನ್ನು ರಚಿಸಲು ಸಾಧ್ಯವಾಯಿತು. ಆದುದರಿಂದ ಅವರಿಗೆ ಮುಖ್ಯಮಂತ್ರಿ ಸ್ಥಾನ ನೀಡಬೇಕು. ರಾಜಸ್ಥಾನದಲ್ಲಿಯೂ ನಾಯಕತ್ವದ ಬದಲಾವಣೆ ಆಗಬೇಕು. ಸಚಿನ್ ಪೈಲಟ್ ಅವರನ್ನು ಮುಖ್ಯಮಂತ್ರಿ ಮಾಡಿದರೆ ಮುಂಬರುವ ಚುನಾವಣೆಗಳಲ್ಲೂ ಕಾಂಗ್ರೆಸ್ ಪಕ್ಷಕ್ಕೆ ಲಾಭವಾಗುತ್ತದೆ’ ಎಂದು ಹೇಳಿದ್ದಾರೆ. ರಾಜಸ್ಥಾನದಲ್ಲಿ ಇಂಥದೊಂದು ಕಿಡಿ ಕಾಣಿಸಿಕೊಳುತ್ತಿದ್ದಂತೆ ಜೈಪುರಕ್ಕೆ ತೆರಳಿದ ರಾಜಸ್ಥಾನ ಕಾಂಗ್ರೆಸ್ ಉಸ್ತುವಾರಿ ಅಜಯ್ ಮಾಕೆನ್ ಈಗಾಗಲೇ ಒಂದು ಸುತ್ತು ಶಾಸಕರ ಅಭಿಪ್ರಾಯ ಸಂಗ್ರಹ ಮಾಡಿದ್ದಾರೆ.
ರಾಜಸ್ಥಾನ ಪ್ರವಾಸ ಮುಗಿಸಿ ಶಾಸಕರ ಅಭಿಪ್ರಾಯ ಸಂಗ್ರಹ ಮಾಡಿಕೊಂಡುಬಂದಿರುವ ಅಜಯ್ ಮಾಕೆನ್ ದೆಹಲಿಯಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡುತ್ತಾ ‘ರಾಜಸ್ಥಾನದಲ್ಲಿ ಸಂಪುಟ ವಿಸ್ತರಣೆ ಮತ್ತು ಸಾಂಸ್ಥಿಕ ಪುನರ್ನಿರ್ಮಾಣಕ್ಕೆ ಮಾರ್ಗಸೂಚಿ ಸಿದ್ಧವಾಗಿದೆ. ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅನಾರೋಗ್ಯಕ್ಕೆ ಒಳಗಾಗದಿದ್ದರೆ ಇಷ್ಟೊತ್ತಿಗಾಗಲೇ ಸಂಪುಟ ವಿಸ್ತರಣೆಯನ್ನು ಮಾಡಿರುತ್ತಿದ್ದೆವು. ನಿಗಮ ಮತ್ತು ಮಂಡಳಿಗಳ ಹಾಗೂ ಜಿಲ್ಲಾ ಅಧ್ಯಕ್ಷರ ನೇಮಕಾತಿಗೆ ಕೂಡ ಮಾರ್ಗಸೂಚಿ ಸಿದ್ಧವಾಗಿದೆ’ ಎಂದು ಹೇಳಿದ್ದಾರೆ. ಆ ಮೂಲಕ ರಾಜಸ್ಥಾನದಲ್ಲಿ ದೊಡ್ಡ ಮಟ್ಟದ ಬದಲಾವಣೆಯ ಸುಳಿವು ನೀಡಿದ್ದಾರೆ.
ಅಜಯ್ ಮಾಕನ್ ಮಾತುಗಳನ್ನು ‘ಮುಖ್ಯಮಂತ್ರಿ ಬದಲಾವಣೆಯೂ ಒಳಗೊಂಡಿರಬಹುದು?’ ಎಂದು ವ್ಯಾಖ್ಯಾನಿಸಲಾಗುತ್ತಿದೆ. ಈ ಅನುಮಾನದ ಬಗ್ಗೆ ಉತ್ತರಿಸುತ್ತಾ, “ರಾಜ್ಯ ಮಟ್ಟದಲ್ಲಿ, ನಾವು ಎಲ್ಲಾ ಸಮಸ್ಯೆಗಳನ್ನು ಚರ್ಚಿಸುತ್ತಿದ್ದೇವೆ ಮತ್ತು ಬಗೆಹರಿಸುತ್ತೇವೆ. ಇದಕ್ಕೆ ಹೊರತಾಗಿ ಎಐಸಿಸಿ ಮಟ್ಟದಲ್ಲಿ ಏನಾದರೂ ನಡೆದರೆ ಅದು ನನ್ನ ವ್ಯಾಪ್ತಿಗೆ ಮೀರಿದ್ದು’ ಎಂದಿದ್ದಾರೆ. ಆ ಮೂಲಕ ಮತ್ತೆ ಪಂಜಾಬ್ ರೀತಿಯಲ್ಲಿ ಕಾಂಗ್ರೆಸ್ ಹೈಕಮಾಂಡ್ ನಾಯಕರೇ ‘ಎಲ್ಲವನ್ನೂ ನಿರ್ಧರಿಸುತ್ತಾರೆ’ ಎಂಬ ಸುಳಿವನ್ನು ನೀಡಿದ್ದಾರೆ. ರಾಜಸ್ಥಾನದಲ್ಲಿ ಮತ್ತೊಮ್ಮೆ ಈಗ ಸಚಿನ್ ಪೈಲಟ್ ಅವರಿಗೆ ಮುಖ್ಯಮಂತ್ರಿ ಸ್ಥಾನ ನೀಡಬೇಕೆಂಬ ಕೂಗೆದ್ದಿದೆ. ಕಾಂಗ್ರೆಸ್ ಹೈಕಮಾಂಡ್ ನಡೆ ಕುತೂಹಲಕಾರಿಯಾಗಿದೆ.