ಜಗತ್ತಿನಾದ್ಯಂತ ಶಿಕ್ಷಣವು ಸಾಮಾಜಿಕ ಚಲನಶೀಲತೆಗೆ ಮಾರ್ಗವಾಗುವುದರ ಬದಲು ಸವಲತ್ತುಗಳ ಕೋಟೆಯಾಗಿ ಮಾರ್ಪಟ್ಟಿದೆ. ಸಾಮಾಜಿಕ ನ್ಯಾಯದ ಕ್ರಮಗಳು ಹೇಗೆ ಮೆರಿಟೋಕ್ರೆಸಿಯನ್ನು ನಾಶ ಪಡಿಸುತ್ತದೆ ಎಂದು ಅಥವಾ ನೀಟ್ ನಂತಹ ಪರೀಕ್ಷೆಗಳು ಮೆರಿಟೋಕ್ರೆಸಿಗೆ ಪೂರಕವಾಗುತ್ತಾ ಅತ್ಯುನ್ನತ ದರ್ಜೆಯ ವೈದ್ಯರನ್ನು ಹೇಗೆ ಸೃಷ್ಟಿಸುತ್ತದೆ ಎಂಬ ಚರ್ಚೆಗಳು ಭಾರತದಲ್ಲಿ ಸಾಮಾನ್ಯವಾಗಿವೆ. ‘ಮೆರಿಟ್’ ಎಂಬ ಪದವನ್ನು ಸರಿಯಾಗಿ ಅರ್ಥೈಸಿಕೊಳ್ಳಲಾಗದಿರುವ ಕಾರಣದಿಂದ ಇಂತಹ ಸಂಕುಚಿತ ದೃಷ್ಟಿಕೋನಗಳು ಮತ್ತು ಅಭಿಪ್ರಾಯಗಳು ಉಂಟಾಗುತ್ತವೆ.
ಮೆರಿಟ್ ನ ಪರಿಕಲ್ಪನೆ ಬಹಳ ಅಮೂರ್ತವಾದದ್ದು. ಅದನ್ನು ವಂಚನೆಯ ಪರಿಕಲ್ಪನೆ ಎಂದೂ ಕರೆಯಬಹುದೇನೋ. ಬಹಳ ಸರಳವಾಗಿ, ಸ್ಪರ್ಧಾತ್ಮಕ ಪರೀಕ್ಷೆಗಳ ಫಲಿತಾಂಶವೇ ‘ಮೆರಿಟ್’ ಅನ್ನು ನಿದರ್ಶಿಸುತ್ತದೆ ಎಂಬ ನಂಬಿಕೆಯಿದೆ. ಆದರೆ ಜಾತಿಯಾಧಾರಿತ ಸಮಾಜ, ಪೋಷಕರು ಸೃಷ್ಟಿಸಿರುವ ವಾತಾವರಣ, ಶಾಲೆ, ಬದುಕಿನ ಪರಿಸರ, ನಿಂದನೆ ಅಥವಾ ನಿರ್ಲಕ್ಷ್ಯೆಗೆ ಒಳಗಾಗಿದ್ದ ಬಾಲ್ಯ, ಹೀಗೆ ಹಲವಾರು ಆಯಾಮಗಳನ್ನು ಈ ದೃಷ್ಟಿಕೋನ ಪರಿಗಣಿಸುವುದಿಲ್ಲ.
ದೆಹಲಿಯ ಮೇಲ್ಮಧ್ಯಮ ವರ್ಗದ ಕುಟುಂಬದಲ್ಲಿ ಬೆಳೆದ ವಿದ್ಯಾರ್ಥಿಗೂ ಒಂದು ಗ್ರಾಮದ ದಲಿತ ಕುಟುಂಬದಲ್ಲಿ ಬೆಳೆದ ವಿದ್ಯಾರ್ಥಿಗೂ ದಕ್ಕಿರುವ ಸವಲತ್ತು ಮತ್ತು ಸಂಪನ್ಮೂಲಗಳ ನಡುವೆ ಅಜಗಜಾಂತರವಿರುತ್ತದೆ. ಆ ಗ್ರಾಮೀಣ ವಿದ್ಯಾರ್ಥಿ ಸರಿಯಾದ ಮೂಲಸೌಕರ್ಯಗಳಿಲ್ಲದ ಶಾಲೆಯಲ್ಲಿ ಓದುತ್ತಾ ತನ್ನ ಪೋಷಕರೊಂದಿಗೆ ಬಿಡುವಿನ ವೇಳೆಯಲ್ಲಿ ಕೆಲಸಕ್ಕೆ ಹೋಗುವ ಸನ್ನಿವೇಶ ಒಂದೆಡೆಯಾದರೆ, ದೆಹಲಿಯ ವಿದ್ಯಾರ್ಥಿಯು ನಗರದ ಅತ್ಯುನ್ನತ ಶಾಲೆಯೊಂದರಲ್ಲಿ ಓದುತ್ತಾ, ತನ್ನ ಪೋಷಕರ ನಿರ್ಧಾರಕ್ಕೆ ಬದ್ಧರಾಗಿ ಹೆಚ್ಚಿನ ಅನುಕೂಲವನ್ನು ಪಡೆದಿರುತ್ತಾರೆ. ಪ್ರತಿಭೆ ಅಥವಾ ಸಾಮರ್ಥ್ಯವನ್ನು ಇಂತಹ ಸಂದರ್ಭದಲ್ಲಿ ಹೇಗೆ ನಿರ್ಧರಿಸುತ್ತೀರಿ? ಈ ಎರಡೂ ವಿದ್ಯಾರ್ಥಿಗಳನ್ನು ಒಂದೇ ಪರೀಕ್ಷೆಯಲ್ಲಿ ಕೂರಿಸಿ ಆ ಪರೀಕ್ಷೆಯ ಫಲಿತಾಂಶದ ಆಧಾರದ ಮೇಲೆ ಅವರ ಅರ್ಜಿಯ ಕುರಿತು ನಿರ್ಧಾರ ತೆಗೆದುಕೊಳ್ಳುವುದು ಅನ್ಯಾಯವಲ್ಲವೇ? ಲಕ್ಷಾಂತರ ಮಕ್ಕಳ ಭವಿಷ್ಯವನ್ನು ಒಂದೇ ಸ್ಪರ್ಧಾತ್ಮಕ ಪರೀಕ್ಷೆಯ ಫಲಿತಾಂಶದ ಮೂಲಕ ತೀರ್ಮಾನಿಸುವುದು ವಂಚನೆಯಲ್ಲದೇ ಇನ್ನೇನು? ಈ ವ್ಯವಸ್ಥೆ ಈಗಿರುವ ಸಾಮಾಜಿಕ ಅಸಮಾನತೆಯನ್ನು ಇನ್ನಷ್ಟು ತೀವ್ರಗೊಳಿಸುತ್ತದೆ.
ಎಲ್ಲಾ ರೀತಿಯ ಆಯ್ಕೆ ವಿಧಾನಗಳಿಗೆ ಒಂದಲ್ಲಾ ಒಂದು ರೀತಿಯ ದೋಷ ಅಂಟಿಕೊಂಡಿರುತ್ತದೆ. ‘ಪ್ಯೂರ್ ಮೆರಿಟ್’ ಎಂಬ ಪರಿಕಲ್ಪನೆ ಕಲ್ಪಿತವಾದದ್ದು ಮತ್ತು ಅವಾಸ್ತವವಾದದ್ದು. ಆದರೆ ನೀತಿ ನಿರೂಪಕರು ಇಂತಹ ಸಾಮಾಜಿಕ ಅಸಮಾನತೆಗಳನ್ನು ಪರಿಗಣಿಸಿ ಸಾಧ್ಯವಾದಷ್ಟು ಸಮಾನ ವೇದಿಕೆಯನ್ನು ಸೃಷ್ಟಿಸಿಕೊಡಬಹುದು. ವೈದ್ಯಕೀಯ ಕಾಲೇಜುಗಳ ದಾಖಲಾತಿಗೆ ಪ್ರವೇಶ ಪರೀಕ್ಷೆಗಳನ್ನು ರದ್ದುಪಡಿಸಿ ತಮಿಳು ನಾಡಿನ ಎಲ್ಲಾ ವಿದ್ಯಾರ್ಥಿಗಳಿಗೂ ಸರಳೀಕೃತವಾದ ಪಠ್ಯಕ್ರಮವನ್ನು ಪರಿಚಯಿಸುವ ಮೂಲಕ ಕಲೈಗ್ನಾರ್ ಕರುಣಾನಿಧಿ ಅವರು ತಮ್ಮ ಆಡಳಿತಕಾಲದಲ್ಲಿ ಈ ಹಾದಿಯಲ್ಲಿ ನಡೆದಿದ್ದರು. ಸರಳ ಪಠ್ಯಕ್ರಮ ಸಮಾನ ವೇದಿಕೆಯನ್ನು ಸೃಷ್ಟಿಸುವುದರಲ್ಲಿ ಒಂದಿಷ್ಟು ಸಹಾಯ ಮಾಡುತ್ತದೆ ಎಂಬುದನ್ನು ಸಂಶೋಧನೆಗಳು ತಿಳಿಸಿಕೊಟ್ಟಿವೆ.
ನೀಟ್ ಕುರಿತು ಕೆಲವೇ ಕೆಲವು ಅಧ್ಯಯನಗಳಷ್ಟೇ ನಡೆದಿದ್ದರೂ ಜಗತ್ತಿನಾದ್ಯಂತ, ಅದರಲ್ಲೂ ಯುನೈಟೆಡ್ ಸ್ಟೇಟ್ಸ್ ಆಫ್ ಅಮೇರಿಕಾದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳ ಕುರಿತು ಹಲವಾರು ಸಂಶೋಧನೆಗಳು ನಡೆದಿವೆ. ಸ್ಪರ್ಧಾತ್ಮಕ ಪರೀಕ್ಷಗಳು ‘ಮೆರಿಟ್’ನ ತತ್ವಕ್ಕೆ ಹೇಗೆ ವಿರುದ್ಧವಾಗಿದೆ ಎಂಬುದನ್ನು ಹಲವು ಅಧ್ಯಯನಗಳು ನಿದರ್ಶಿಸಿವೆ. ಸ್ಯಾಟ್ ಪರೀಕ್ಷೆಗಳನ್ನು ನಡೆಸುವ ಕಾಲೇಜ್ ಬೋರ್ಡ್ ನ ಮಾಹಿತಿಯ ಆಧಾರದ ಮೇಲೆ ಬ್ರೂಕಿಂಗ್ಸ್ ಅಧ್ಯಯನವೊಂದನ್ನು ನಡೆಸಿತು. ಒಂದು ಶ್ರೀಮಂತ ಕುಟುಂಬದ ವಿದ್ಯಾರ್ಥಿ ಐವಿ ಲೀಗ್ ಶಾಲೆಗೆ ಸೇರುವ ಸಾಧ್ಯತೆ ಒಬ್ಬ ಬಡ ವಿದ್ಯಾರ್ಥಿಗಿಂತ 77 ಪಟ್ಟು ಹೆಚ್ಚಿದೆ ಎಂಬುದನ್ನು ಅಧ್ಯಯನ ತಿಳಿಸುತ್ತದೆ.
ಮೇಲಿನ ಸಂಖ್ಯಾಂಶಗಳು ಹಣವಂತ ಬಿಳಿ ಜನತೆ ಸ್ಯಾಟ್ ನಂತಹ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಒಂದು ವಿಶಿಷ್ಟವಾದ ಅನುಕೂಲವನ್ನು ಅನುಭವಿಸುತ್ತಾರೆ ಎಂಬುದನ್ನು ಸ್ಪಷ್ಟ ಪಡಿಸುತ್ತದೆ. ಹಾಗೆಯೇ ತಂದೆ ತಾಯಿಯರು ಪದವೀಧರರಾಗಿದ್ದರೆ ಸಾಮಾನ್ಯವಾಗಿ ಅವರ ಮಕ್ಕಳು ಇತರರಿಗಿಂತ 300 ಅಂಕಗಳಷ್ಟು ಅಧಿಕ ಅಂಕಗಳನ್ನು ಪಡೆಯುತ್ತಾರೆ. ಇದೇ ರೀತಿಯಲ್ಲಿ ಐತಿಹಾಸಿಕವಾಗಿ ಶೋಷಣೆಗೊಳಗಾದ ಕಪ್ಪು ಜನರೇ ಅತೀ ಕಡಿಮೆ ಅಂಕಗಳನ್ನು ಪಡೆದಿರುತ್ತಾರೆ. ಯು.ಎಸ್.ಎ. ಗೆ ಹೋಲಿಸಿದಾಗ ಭಾರತ ಇನ್ನಷ್ಟು ಶ್ರೇಣೀಕೃತ ಸಮಾಜವಾಗಿ ಕಂಡು ಇಲ್ಲಿನ ಐತಿಹಾಸಿಕ ಜಾತಿಯಾಧಾರಿತ ಶೋಷಣೆ ಅಲ್ಲಿಗಿಂತಲೂ ಹೆಚ್ಚು ಪ್ರಭಾವ ಬೀರುತ್ತದೆ.
ಚಿಕಾಗೋ ವಿಶ್ವವಿದ್ಯಾಲಯದ ಎಲೈನ್ ಎಮ್. ಅಲೆನ್ಸ್ವರ್ತ್ ಮತ್ತು ಕ್ಯಾಲೀ ಕ್ಲಾರ್ಕ್ ಅವರ ಸಂಶೋಧನೆಯ ಪ್ರಕಾರ ಆರ್ಥಿಕ ಮತ್ತು ಸಾಮಾಜಿಕ ಅಸಮಾನತೆಗಳು ಶಾಲಾ ಅಂಕಗಳ ಮೇಲೆ ಹೆಚ್ಚು ಪರಿಣಾಮವನ್ನು ಬೀರುವುದಿಲ್ಲ. ಹಾಗೆಯೇ, ಶಾಲಾ ಅಂಕಗಳು ವಿಶ್ವವಿದ್ಯಾಲಯದ ಅಂಕಗಳನ್ನು ಅಂದಾಜಿಸುವಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳಿಗಿಂತಲೂ ಉತ್ತಮ ಎಂಬುದನ್ನು ಸಂಶೋಧನೆ ಹೊರತರುತ್ತದೆ. ಸ್ಯಾಟ್ ಅಂಕಗಳಲ್ಲಿ ಸಮಾನ ಸ್ಥಾನವನ್ನು ಪಡೆದಿದ್ದರೂ, ಶಾಲೆಯಲ್ಲಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿ ವಿಶ್ವವಿದ್ಯಾಲಯದಲ್ಲಿ ಹಾಗು ಜೀವನದಲ್ಲಿ ಹೆಚ್ಚು ಯಶಸ್ವಿಯಾಗುತ್ತಾನೆ. ಈ ಸಂಗತಿಗಳು ತಮಿಳು ನಾಡು ಸರಕಾರ ರಚಿಸಿದ ಸಮಿತಿಯ ವರದಿಗೆ ಹೋಲುತ್ತದೆ. ಮಾಹಿತಿ ಹಕ್ಕು ಕಾಯ್ದೆಯ ಪ್ರಕಾರ ನೀಟ್ ಪರಿಚಯವಾದ ನಂತರ ಸರಕಾರಿ ವೈದ್ಯಕೀಯ ಕಾಲೇಜುಗಳಲ್ಲಿ ತಮಿಳು ಮಾಧ್ಯಮ ವಿದ್ಯಾರ್ಥಿಗಳ ಸಂಖ್ಯೆ 90% ಇಳಿಕೆಯಾಗಿದೆ.
ಔಟ್ಲೈಯರ್ಸ್ ನ ಲೇಖಕರಾದ ಆಸ್ವೆಲ್ ಅವರು ಮಿಚಿಗಾನ್ ವಿಶ್ವವಿದ್ಯಾಲಯದಲ್ಲಿ ದೀರ್ಘಕಾಲಿಕ ಪ್ರಯೋಗಗಳ ಮೂಲಕ ಮತ್ತೊಂದು ಸಂಶೋಧನೆಯನ್ನು ನಡೆಸಿದ್ದರು. ವಿದ್ಯಾರ್ಥಿಗಳು ಶೋಷಿತ ಕಪ್ಪು ಸಮುದಾಯಕ್ಕೆ ಸೇರಿದ್ದರೂ, ಸಾಮಾಜಿಕ ನ್ಯಾಯದ ಕ್ರಮಗಳ ಮೂಲಕ ಪ್ರವೇಶಾತಿ ಪಡೆದಿದ್ದರೂ, ತಮ್ಮ ಬಿಳಿಯ ಸಹಪಾಠಿಗಳಿಗೆ ಹೋಲಿಸಿದಾಗ ಕಡಿಮೆ ಅಂಕಗಳನ್ನು ಪಡೆದಿದ್ದರೂ, ಅವರ ವೃತ್ತಿಜೀವನದ ಸಾಧನೆಯು ತಮ್ಮ ಬಿಳಿಯ ಸಹಪಾಠಿಗಳಂತೆಯೇ ಇತ್ತು. ಇದಕ್ಕೆ ಕಾರಣ ಸರಳವಾಗಿದೆ. ಉನ್ನತ ವಿಶ್ವವಿದ್ಯಾಲಯಗಳಿಗೆ ಅಥವಾ ವೈದ್ಯಕೀಯ ಕಾಲೇಜುಗಳಿಗೆ ಪ್ರವೇಶಾತಿ ದೊರಕಿದರೆ, ತಮ್ಮ ಅನಾನುಕೂಲಕರವಾದ ಹಿನ್ನಲೆಯನ್ನೂ ಮೀರಿ ಯಶಸ್ಸಿನತ್ತ ಸಾಗುವುದಕ್ಕೆ ಹಾಗು ಕಠಿಣ ಶ್ರಮವಹಿಸುವುದಕ್ಕೆ ಅಂಚಿನ ಸಮುದಾಯದ ವಿದ್ಯಾರ್ಥಿಗಳು ಪ್ರಯತ್ನಿಸುತ್ತಾರೆ.
ನಾವೀಗ ಅನಿತಾ ಅವರ ವಿಷಯವನ್ನು ತೆಗೆದುಕೊಳ್ಳೋಣ. ತಮಿಳು ನಾಡಿನ ಗ್ರಾಮೀಣ ದಲಿತ ಬಡ ಕುಟುಂಬವೊಂದರಲ್ಲಿ ಜನಿಸಿದ ಅನಿತಾ ತಮ್ಮ ಬಾಲ್ಯದಲ್ಲೇ ತಾಯಿಯನ್ನು ಕಳೆದುಕೊಂಡರು. ಅವರ ತಂದೆ ಕೂಲಿಕೆಲಸ ಮಾಡುತ್ತಿದ್ದರು. ಇಷ್ಟೆಲ್ಲಾ ಕಷ್ಟಗಳ ನಡುವೆಯೂ 1,200 ಕ್ಕೆ 1,176 ಅಂಕಗಳನ್ನು ಗಳಿಸಿ ಮೊದಲ 0.3% ವಿದ್ಯಾರ್ಥಿಗಳಲ್ಲಿ ಒಬ್ಬರಾದರು. ನೀಟ್ ಬದಲಿಗೆ ಶಾಲೆಯ ಅಂಕಗಳನ್ನೇ ಪರಿಗಣಿಸಿದ್ದರೆ, ಅವರಿಗೆ ತಮಿಳು ನಾಡಿನ ಅತ್ಯುನ್ನತ ವೈದ್ಯಕೀಯ ಕಾಲೇಜಿಗೆ ಪ್ರವೇಶ ದೊರಕುತ್ತಿತ್ತು. ಹೀಗೆ ಅವರು ತಮ್ಮ ಸಮುದಾಯದ ಮೊದಲ ವೈದ್ಯರಾಗಿ ಹೊರಹೊಮ್ಮುತ್ತಿದ್ದರು.
ನೀಟ್ ಪರೀಕ್ಷೆಯಲ್ಲಿ ಉತ್ತೀರ್ಣರಾಗುವುದನ್ನು ತಡೆದದ್ದು ಅವರ ಅಯೋಗ್ಯತೆಯೋ ಅಥವಾ ಸವಲತ್ತು, ಸಂಪನ್ಮೂಲ ಮತ್ತು ಸಮಯದ ಕೊರತೆಯೋ? ಖಂಡಿತವಾಗಿಯೂ ಅದು ಸವಲತ್ತು, ಸಂಪನ್ಮೂಲ ಮತ್ತು ಸಮಯದ ಕೊರತೆಯೇ. ಅವರ ಕನಸಿನ ಬೆನ್ನೇರಲು ಅವರಿಗೆ ಅವಕಾಶ ದೊರತಿದ್ದರೆ ನೀಟ್ ಪರೀಕ್ಷೆಯಲ್ಲಿ ಮೊದಲ ಸ್ಥಾನ ಪಡೆದ ವಿದ್ಯಾರ್ಥಿಗಿಂತಲೂ ಉತ್ತಮವಾಗಿ ಅವರು ಬೆಳೆಯುತ್ತಿದ್ದರೇನೋ. ನೀಟ್ ಕೇವಲ ಅನಿತಾ ಅವರ ಆಸೆಯನ್ನು ಸಾಯಿಸಲಿಲ್ಲ, ಬದಲಾಗಿ ಇಡೀ ಸಮುದಾಯದ ಆಸೆಗೆ ಅಡ್ಡಗಲ್ಲಾಯಿತು. ನೀಟ್ ಸಂಬಂಧಿತ ಆತ್ಮಹತ್ಯೆಗಳು ಭಯದಿಂದ ಪ್ರೇರಿತವಾದವಲ್ಲ, ಆದರೆ ನಿರಾಶೆ ಮತ್ತು ಹತಾಶೆಯ ಕುರಿತಾದವು. ಹೀಗಾಗಿ ನೀಟ್ ಗೆ ಬಲಿಯಾಗುವ ಅತೀ ಹೆಚ್ಚು ವಿದ್ಯಾರ್ಥಿಗಳು ಗ್ರಾಮೀಣ ಮತ್ತು ಅಂಚಿನ ಸಮುದಾಯಗಳಿಗೆ ಸೇರಿದವರು.
ನೀಟ್ ನ ಅತೀ ಮುಖ್ಯ ಸಮಸ್ಯೆಯೆಂದರೆ ಅದಕ್ಕೆ ತರಬೇತಿಯನ್ನು ನೀಡಬಹುದು. ನೀಟ್ ನಿಜವಾಗಿಯೂ ಒಬ್ಬ ವಿದ್ಯಾರ್ಥಿಯ ಬುದ್ಧಿವಂತಿಕೆಯನ್ನಾಗಲೀ, ಸಾಮರ್ಥ್ಯವನ್ನಾಗಲೀ ಪರೀಕ್ಷಿಸುವುದಿಲ್ಲ. ನೀಟ್ ನಲ್ಲಿ ಯಶಸ್ಸು ಪಡೆಯುವುದು ಶಿಕ್ಷಣದ ಗುಣಮಟ್ಟ ಮತ್ತು ತರಬೇತಿಯ ಸಮಯದ ಮೇಲೆ ಅವಲಂಬಿತವಾಗಿದೆ. ಸವಲತ್ತು ಉಳ್ಳುವ ಕುಟುಂಬಗಳು ತಮ್ಮ ಮಕ್ಕಳಿಗೆ ವಾರ್ಷಿಕವಾಗಿ ಸುಮಾರು 75,000 ರುಪಾಯಿಗಳಿಗೂ ಹೆಚ್ಚು ಖರ್ಚು ಮಾಡಿ ಪ್ರತ್ಯೇಕ ತರಬೇತಿ ಕೊಡಿಸುತ್ತಾರೆ. 2005ರ ಐ.ಐ.ಟಿ.ಯ ಅಧ್ಯಯನವೊಂದರ ಪ್ರಕಾರ ಸಂಸ್ಥೆಗೆ ಪ್ರವೇಶಾತಿ ಪಡೆಯುವ 95% ವಿದ್ಯಾರ್ಥಿಗಳು ಪ್ರತ್ಯೇಕ ತರಬೇತಿಯನ್ನು ಹೊಂದಿದವರು ಮತ್ತು ಅದರಲ್ಲಿ 75% ವಿದ್ಯಾರ್ಥಿಗಳು ನಗರ ಪ್ರದೇಶದವರು. ಕಳೆದ ಒಂದು ದಶಕಕ್ಕೂ ಮುನ್ನ, ಐ.ಐ.ಟಿ. ಗೆ ದಾಖಲಾಗುವ ವಿದ್ಯಾರ್ಥಿಗಳಲ್ಲಿ ಆರನೇ ಒಂದು ಭಾಗ ವಿದ್ಯಾರ್ಥಿಗಳು ಕೋಟಾ ನಗರದ ಬನ್ಸಾಲ್ ತರಗತಿಗಳಿಂದ ಬಂದವರು. ಈ ರೀತಿಯ ಕೆಲವೊಂದು ಸಂಸ್ಥೆಗಳು ವಾರ್ಷಿಕವಾಗಿ ಒಂದರಿಂದ ಎರಡು ಲಕ್ಷ ರುಪಾಯಿಗಳಷ್ಟು ಶುಲ್ಕವನ್ನು ಪಡೆಯುತ್ತವೆ. ಬಹುತೇಕ ಭಾರತೀಯರಿಗೆ ಇದು ಸಾಧ್ಯವಾಗದ ಖರ್ಚಾಗಿರುವದರಿಂದ ಐ.ಐ.ಟಿ. ಗೆ ದಾಖಲಾಗುವ ವಿದ್ಯಾರ್ಥಿಗಳಲ್ಲಿ ಕೇವಲ 2.86% ವಿದ್ಯಾರ್ಥಿಗಳು ಬಡ ಗ್ರಾಮೀಣ ಅಶಿಕ್ಷಿತ ಕುಟುಂಬಗಳಿಂದ ಬಂದಿರುತ್ತಾರೆ. ಸ್ವತಃ ತಾವೇ ಎ.ಐ.ಇ.ಇ.ಇ. ನಲ್ಲಿ ಯಶಸ್ಸು ಪಡೆದ ಲೇಖಕರ ಪ್ರಕಾರ ಮಧ್ಯ 2000ರ ಹೊತ್ತಿಗೆ ಎನ್.ಐ.ಟಿ. ಟ್ರಿಚಿ ಗೆ ದಾಖಲಾಗುತ್ತಿದ್ದ ತಮಿಳು ನಾಡಿನ ವಿದ್ಯಾರ್ಥಿಗಳಲ್ಲಿ 70% ವಿದ್ಯಾರ್ಥಿಗಳು ಚೆನ್ನೈ ಮಹಾನಗರದ ಕೆಲವು ಪ್ರತಿಷ್ಠಿತ ಶಾಲೆಗಳಲ್ಲಿ ಶಿಕ್ಷಣ ಪಡೆದವರು.
ಯು.ಎಸ್.ಎ. ನ ಐವಿ ಲೀಗ್ ಗಳನ್ನು ಸೇರಿದಂತೆ ಹಲವಾರು ಪ್ರತಿಷ್ಠಿತ ವಿಶ್ವವಿದ್ಯಾಲಯಗಳು ಅಂಚಿನ ಸಮುದಾಯಗಳ ವಿದ್ಯಾರ್ಥಿಗಳಿಗೆ ಪ್ರವೇಶ ನೀಡಲು ಪ್ರವೇಶ ಪರೀಕ್ಷೆಗಳಿಂದ ದೂರವಾಗುತ್ತಿವೆ. ಫ್ರಾನ್ಸ್ ದೇಶದ 90% ಉನ್ನತ ಅಧಿಕಾರಿಗಳು ತೇರ್ಗಡೆ ಹೊಂದಿದ ಸೈನ್ಸಸ್ ಪೋ ಸಂಸ್ಥೆಯು ಸಕಾರಾತ್ಮಕ ತಾರತಮ್ಯದ ಹೆಸರಿನಲ್ಲಿ ಶಾಲಾ ಅಂಕಗಳನ್ನೇ ಆಧರಿಸಿ ಪ್ರವೇಶಾತಿ ನೀಡಲು ಆರಂಭಿಸಿದೆ. ಭಾರತದ ನಾಗರೀಕ ಸೇವಕರಿಗೆ ತರಬೇತಿ ನೀಡುವ ಲಾಲ್ ಬಹದ್ದೂರ್ ಶಾಸ್ತ್ರಿ ಇನ್ಸ್ಟಿಟ್ಯೂಟ್ ಆಫ್ ಪಬ್ಲಿಕ್ ಅಡ್ಮಿನಿಸ್ಟ್ರೇಷನ್ ನಷ್ಟೇ ಪ್ರಮುಖವಾದ ಸೈನ್ಸಸ್ ಪೋ ದಶಕಗಳ ಅಧ್ಯಯನಗಳನ್ನು ಆಧರಿಸಿ ಪ್ರವೇಶ ಪರೀಕ್ಷೆಗಳನ್ನು ಕಿತ್ತುಹಾಕಿದೆ. ಹೀಗಾಗಿ ನೀಟ್ ಪರೀಕ್ಷೆಯನ್ನು ಹೇರಲು ಹೊರಟಿರುವ ಮೋದಿ ಸರಕಾರದ ನಿರ್ಧಾರಕ್ಕೆ ಅಧ್ಯಯನಗಳ ಭದ್ರ ಬುನಾದಿ ಇಲ್ಲ ಮತ್ತು ಗುಣಮಟ್ಟವನ್ನು ಹೆಚ್ಚಿಸುವ ಯಾವುದೇ ಕ್ರಮ ಸರಕಾರ ತೆಗೆದುಕೊಂಡಿಲ್ಲ. ಗುಣಮಟ್ಟವನ್ನು ಹೆಚ್ಚಿಸುವುದು ಸರಕಾರದ ಆಶಯವಾಗಿದ್ದಲ್ಲಿ, ನೀಟ್ ಪರೀಕ್ಷೆಯನ್ನು ಯಾಕೆ ರದ್ದುಗೊಳಿಸಬಾರದು?
ಜೆ.ಇ.ಇ. ಪರೀಕ್ಷೆಯನ್ನು ಉಳಿಸಿಕೊಂಡು ನೀಟ್ ಪರೀಕ್ಷೆಯನ್ನು ಯಾಕೆ ರದ್ದುಮಾಡಬೇಕು
ನೀಟ್ ಪರೀಕ್ಷೆಯ ಮುಖ್ಯ ಸಮಸ್ಯೆಯೇನೆಂದರೆ, ಒಕ್ಕೂಟ ವ್ಯವಸ್ಥೆಯನ್ನು ದುರ್ಬಲಗೊಳಿಸುವುದರ ಜೊತೆಗೆ, ಇದು ಎಲ್ಲಾ ವೈದ್ಯಕೀಯ ವಿದ್ಯಾರ್ಥಿಗಳ ಮೇಲೆ ಪ್ರಭಾವ ಬೀರುತ್ತದೆ. ಆದರೆ ಐ.ಐ.ಟಿ.-ಜೆ.ಇ.ಇ. ಪರೀಕ್ಷೆಗಳು ಒಟ್ಟು ಇಂಜಿನಿಯರಿಂಗ್ ಪದವೀಧರರ 3% ವಿದ್ಯಾರ್ಥಿಗಳನ್ನಷ್ಟೇ ಪ್ರಭಾವಿಸುತ್ತದೆ. ಜೊತೆಗೆ, ಐ.ಐ.ಟಿ. ಗಳು/ ಐ.ಐ.ಎಮ್. ಗಳು/ ಎನ್.ಐ.ಟಿ. ಗಳಿಗೆ ಒಕ್ಕೂಟ ಸರಕಾರ ಹಣ ಒದಗಿಸುತ್ತದೆ, ಆದರೆ ತಮಿಳು ನಾಡಿನ ಸುಮಾರು ಎಲ್ಲಾ ವೈದ್ಯಕೀಯ ಕಾಲೇಜುಗಳಿಗೆ ನಿಧಿ ದೊರಕುವುದು ರಾಜ್ಯ ಸರಕಾರದಿಂದ.
ನೀಟ್ ಪರೀಕ್ಷೆಯನ್ನು ಮುಂದುವರೆಸುವುದರ ಮೂಲಕ ತಮಿಳು ನಾಡಿನಲ್ಲಿ ನಗರ ಪ್ರದೇಶದ ವೈದ್ಯರು ಹೆಚ್ಚಾಗಿ ಗ್ರಾಮೀಣ ಪ್ರದೇಶಗಳಿಗೆ ವೈದ್ಯರ ಕೊರತೆ ಉಂಟಾಗುತ್ತದೆ. ಜೊತೆಗೆ, ನೀಟ್ ಸಾವಿರಾರು ಗ್ರಾಮೀಣ ಮತ್ತು ಅಂಚಿನ ಸಮುದಾಯಗಳ ವಿದ್ಯಾರ್ಥಿಗಳ ಕನಸುಗಳನ್ನು ನುಚ್ಚು ನೂರಾಗಿಸುತ್ತದೆ.
ನೀಟ್ ವ್ಯವಸ್ಥೆ ಸಹಕಾರಿ ಒಕ್ಕೂಟ ವ್ಯವಸ್ಥೆಗೆ ವಿರುದ್ಧವಾದದ್ದು
ತಮಿಳುನಾಡಿನ ದ್ರಾವಿಡ ಸರಕಾರಗಳು ಆರೋಗ್ಯ ವಲಯದ ಮೇಲೆ ಹೆಚ್ಚೆಚ್ಚು ಹೂಡಿಕೆಯನ್ನು ಸತತವಾಗಿ ಮಾಡಿರುವ ಕಾರಣ ತಮಿಳು ನಾಡು ಯಾವಾಗಲೂ ಮೊದಲ ಮೂರು ಸ್ಥಾನಗಳಲ್ಲಿ ಒಂದನ್ನು ತನ್ನದಾಗಿಸಿಕೊಂಡಿರುತ್ತದೆ. ತಮಿಳು ನಾಡಿನಲ್ಲಿ ವೈದ್ಯ-ಜನತೆಯ ಅನುಪಾತ ಅತೀ ಹೆಚ್ಚಿರುವುದಲ್ಲದೇ, ಆ ಪ್ರಮಾಣ ಭೌಗೋಳಿಕವಾಗಿಯೂ ಹರಡಿದೆ. ಪ್ರವೇಶ ಪರೀಕ್ಷೆಗಳನ್ನು ರದ್ದುಗೊಳಿಸುವ ಮೂಲಕ, ಜಾತಿಯಾಧಾರಿತ ಸಮತಲ ಮೀಸಲಾತಿ ವ್ಯವಸ್ಥೆಯ ಮೂಲಕ, ಗ್ರಾಮೀಣ ಸರಕಾರಿ ಶಾಲೆಗಳ ವಿದ್ಯಾರ್ಥಿಗಳಿಗೆ ಮೀಸಲಾತಿ ನೀಡುವುದರ ಮೂಲಕ ಮತ್ತು ರಾಜ್ಯದಾದ್ಯಂತ ವೈದ್ಯಕೀಯ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸುವುದರ ಮೂಲಕ ತಮಿಳು ನಾಡು ಇದನ್ನು ಸಾಧಿಸಿದೆ. ತಮಿಳು ನಾಡಿನ ರಾಜಧಾನಿಯಾದ ಚೆನ್ನೈ ಮಹಾನಗರವು ಭಾರತದ ವೈದ್ಯಕೀಯ ಪ್ರವಾಸದ ಕೇಂದ್ರವಾಗಿದೆ. ಒಂದು ಯಶಸ್ವೀ ಆರೋಗ್ಯಸೇವಾ ವ್ಯವಸ್ಥೆಯನ್ನು ನಡೆಸಿಕೊಂಡು ಬಂದಿರುವ ರಾಜ್ಯದ ಮೇಲೆ ಒಕ್ಕೂಟ ಸರಕಾರ ಯಾಕೆ ತನ್ನ ನಿಯಮಗಳನ್ನು ಹೇರಬೇಕು? ಬದಲಾಗಿ ಸರಕಾರ ತಮಿಳು ನಾಡಿನ ವ್ಯವಸ್ಥೆಯನ್ನು ಇತರ ರಾಜ್ಯಗಳಿಗೆ ಮಾದರಿಯಂತೆ ಸೂಚಿಸಬೆಕಲ್ಲವೇ?
ಭಾರತವೂ ಯೂರೋಪ್ಯ ದೇಶಗಳ ಒಕ್ಕೂಟದಷ್ಟೇ ವೈವಿಧ್ಯತೆಯನ್ನು ಹೊಂದಿದೆ. ಜಾರ್ಖಂಡ್ ರಾಜ್ಯಕ್ಕೆ ಹೋಲಿಸಿದರೆ ತಮಿಳು ನಾಡು 32 ಪಟ್ಟು ಹೆಚ್ಚು ವೈದ್ಯರನ್ನು ಹೊಂದಿದೆ. ದೇಶದಲ್ಲಿ ಇಷ್ಟು ವ್ಯತ್ಯಾಸಗಳು ಇರುವಾಗ, ಒಕ್ಕೂಟ ಸರಕಾರ ಒಂದೇ ಪ್ರವೇಶ ಪರೀಕ್ಷೆಯನ್ನು ಹೇರುವುದು ಎಷ್ಟು ಸೂಕ್ತ?
ಆರೋಗ್ಯವು ಸಂವಿಧಾನದ ರಾಜಕೀಯ ಪಟ್ಟಿಯಲ್ಲಿ ಬರುವುದರಿಂದ ಮತ್ತು ಶಿಕ್ಷಣವು ಸಮವರ್ತಿ ಪಟ್ಟಿಯಡಿ ಇರುವುದರಿಂದ ತಮಿಳು ನಾಡಿನ ಹೊಸ ಕಾಯ್ದೆಗೆ ರಾಷ್ಟ್ರಪತಿಗಳು ಸಮ್ಮತ ಸೂಚಿಸಿದರೆ ಒಳಿತು. ತಮಿಳು ನಾಡಿನಲ್ಲಿ ನೀಟ್ ವ್ಯವಸ್ಥೆಯನ್ನು ಮುಂದುವರೆಸುವುದನ್ನು ನ್ಯಾಯದ ಅವಹೇಳಣ ಮತ್ತು ಒಕ್ಕೂಟ ವ್ಯವಸ್ಥೆಯ ಪರಿಕಲ್ಪನೆಗೆ ಅವಮಾನವೆಂದು ಪರಿಗಣಿಸಬೇಕಾಗುತ್ತದೆ.
ಮೂಲ: ಸೇಲಂ ಧರಣೀಧರನ್, ಆಕ್ಸ್ಫರ್ಡ್ ವಿಶ್ವವಿದ್ಯಾಲಯದ ಮತ್ತು ಪ್ಯಾರಿಸ್ ಇನ್ಸ್ಟಿಟ್ಯೂಟ್ ಆಫ್ ಪೊಲಿಟಿಕಲ್ ಸ್ಟಡೀಸ್ ನ ಮಾಜಿ ವಿದ್ಯಾರ್ಥಿ
ಅನುವಾದ: ಸೂರ್ಯ ಸಾಥಿ