ಕಳೆದ ಒಂದು ವಾರದಿಂದ ದೇಶದ ಜನಪರ ದನಿಯ ಮಾಧ್ಯಮ ಸಂಸ್ಥೆಗಳು, ಜನಪರ ಕಾಳಜಿಯ ನಟರು, ಬಡವರು, ನಿರ್ಗತಿಕ ಮಕ್ಕಳ ಪರ ಜೀವಮಾನವಿಡೀ ಸೆಣೆಸಿದ ಸಾಮಾಜಿಕ ಕಾರ್ಯಕರ್ತರ ಮೇಲೆ ಆದಾಯ ತೆರಿಗೆ ಮತ್ತು ಜಾರಿ ನಿರ್ದೇಶನಾಲಯಗಳ ದಾಳಿ ನಡೆದಿವೆ.
ಬಹುಶಃ ನರೇಂದ್ರ ಮೋದಿಯವರು ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ ಈ ಏಳು ವರ್ಷಗಳಲ್ಲಿ ಯಾವುದಾದರೂ ಇಲಾಖೆ ಬಹಳ ಸಕ್ರಿಯವಾಗಿ, ಚುರುಕಿನಿಂದ ಕೆಲಸ ಮಾಡುತ್ತಿದ್ದರೆ ಅದು ಈ ಎರಡು ಇಲಾಖೆಗಳು ಮಾತ್ರ! ಹಾಗಂತ, ಆದಾಯ ತೆರಿಗೆ ಮತ್ತು ಜಾರಿ ನಿರ್ದೇಶನಾಲಯಗಳ ಈ ಚುರುಕುತನದಿಂದಾಗಿ ದೇಶದಲ್ಲಿ ಅಕ್ರಮ ಹಣಕಾಸು ವಹಿವಾಟು, ತೆರಿಗೆಗಳ್ಳತನ, ಕಾಳಸಂತೆ, ಕಾಳಧನ ಮುಂತಾದ ಎಲ್ಲ ಹಣಕಾಸು ಅಕ್ರಮಗಳನ್ನೂ ಮೋದಿ ಹೆಡಮುರಿಕಟ್ಟಿದ್ದಾರೆಯೇ? ಎಂದರೆ, ಅದಕ್ಕೆ ನಿದರ್ಶನವಾಗಿ ಕಳೆದ ವರ್ಷ 2020ರಲ್ಲಿ ಸ್ವಿಸ್ ಬ್ಯಾಂಕಿನಲ್ಲಿ ಭಾರತೀಯರು ಇಟ್ಟ ಕಪ್ಪುಹಣದ ಪ್ರಮಾಣ ಬರೋಬ್ಬರಿ 20 ಸಾವಿರ ಕೋಟಿ ರೂ. ಮೀರಿದೆ. ಅದು ಕಳೆದ 13 ವರ್ಷಗಳಲ್ಲೇ ದಾಖಲೆಯ ಪ್ರಮಾಣದಲ್ಲಿ ಸ್ವಿಸ್ ಬ್ಯಾಂಕಿನಲ್ಲಿ ಜಮಾ ಆದ ಭಾರತೀಯರ ಹಣ!
ಕೋವಿಡ್ ಸಂಕಷ್ಟ, ಅದಕ್ಕೂ ಹಿಂದಿನ ವರ್ಷದ ಜಿಎಸ್ ಟಿ ನಷ್ಟ, ಆ ಹಿಂದಿನ ನೋಟು ರದ್ದತಿಯ ಪ್ರಹಾರಗಳ ಹೊರತಾಗಿಯೂ ಭಾರತೀಯರ ಸ್ವಿಸ್ ಬ್ಯಾಂಕ್ ಖಾತೆಗಳು ಹೀಗೆ ತುಂಬಿ ತುಳುಕುತ್ತಿವೆ ಎಂದರೆ, ಪ್ರಧಾನಿ ಮೋದಿಯವರು ಆ ನೋಟು ರದ್ದತಿ, ಜಿಎಸ್ ಟಿ ಜಾರಿಗೆ ತರುವಾಗ ಹೇಳಿದ ಕಪ್ಪುಹಣದ ಮೇಲೆ ಸರ್ಜಿಕಲ್ ದಾಳಿ ನಡೆಸುವ ಮಾತುಗಳು ಎಷ್ಟೊ ಹಾಸ್ಯಾಸ್ಪದ ಎಂಬುದು ಅರಿವಾಗದೇ ಇರದು.
ಹಾಗಂತ ದೇಶದ ಕಪ್ಪುಹಣ, ತೆರಿಗೆ ವಂಚನೆ, ಅಕ್ರಮ ಹಣಕಾಸು ವಹಿವಾಟುಗಳನ್ನು ಸರ್ವನಾಶ ಮಾಡುವ ಮಹತ್ತರ ಹೊಣೆಗಾರಿಕೆಯ ಆದಾಯ ತೆರಿಗೆ(ಐಟಿ) ಮತ್ತು ಜಾರಿ ನಿರ್ದೇಶನಾಯಲಯ(ಇಡಿ)ಗಳು ಗಡದ್ದಾಗಿ ನಿದ್ದೆ ಹೊಡೆಯುತ್ತಿವೆ ಎಂದು ಭಾವಿಸಬೇಕಿಲ್ಲ. ಆ ಎರಡೂ ಇಲಾಖೆಗಳು ಬಹುಶಃ ಸ್ವತಂತ್ರ ಭಾರತದ ಇತಿಹಾಸದಲ್ಲೇ ಹಿಂದೆಂದೂ ಇರದಷ್ಟು ಚುರುಕಾಗಿವೆ. ಮೋದಿಯವರು ಕಿರುಬೆರಳಲ್ಲಿ ತೋರಿದರೆ ಹಸ್ತವನ್ನೇ ನುಂಗುವಷ್ಟು ಆ ಇಲಾಖೆಗಳು ಕಣ್ಣಿಗೆ ಎಣ್ಣೆ ಬಿಟ್ಟುಕೊಂಡು ಕೆಲಸ ಮಾಡುತ್ತಿವೆ.
ಹಾಗಿದ್ದರೂ ಯಾಕೆ ಕಪ್ಪು ಹಣದ ಪ್ರಮಾಣ ಹಿಂದೆಂದಿಗಿಂತಲೂ ಹೆಚ್ಚಾಗಿದೆ? ಅಕ್ರಮ ವಹಿವಾಟು, ಕಾಳಸಂತೆ, ಕಳ್ಳನೋಟಿನ ದಂಧೆಗಳು ರಾಜಾರೋಷವಾಗಿ ನಡೆಯುತ್ತಿವೆ? ಅನ್ನೋ ಪ್ರಶ್ನೆ ಬರುವುದು ಸಹಜ. ಆದರೆ, ಇಡಿ ಮತ್ತು ಐಟಿ ಇಲಾಖೆಗಳು ಕಳೆದ ಏಳು ವರ್ಷಗಳಲ್ಲಿ ನಿಜವಾದ ತೆರಿಗೆಗಳ್ಳರು, ಕಾಳದಂಧೆಕೋರರ ಮೇಲೆ ದಾಳಿ ನಡೆಸಿ, ತನಿಖೆ ನಡೆಸಿದ್ದಕ್ಕಿಂತ ಆಡಳಿತಾರೂಢ ಭಾರತೀಯ ಜನತಾ ಪಕ್ಷದ ಆಣತಿಯಂತೆ ಅದರ ರಾಜಕೀಯ ವಿರೋಧಿಗಳು, ಪ್ರಧಾನಿ ಮೋದಿಯವರ ಆಡಳಿತ ಮತ್ತು ನೀತಿಗಳ ವಿರುದ್ಧ ಟೀಕಾಕಾರರ ಮೇಲೆ ದಾಳಿ ನಡೆಸಿದ್ದೇ ಹೆಚ್ಚು.
ಅದು ನೋಟ್ ರದ್ದತಿ ಇರಬಹುದು, ಜಿಎಸ್ ಟಿ ಜಾರಿ ರೀತಿ ಇರಬಹುದು, ಸಿಎಎ-ಎನ್ ಆರ್ ಸಿ ಕಾಯ್ದೆಗಳಿರಬಹುದು, ಕೃಷಿ ಕಾಯ್ದೆ ಇರಬಹುದು, ಅಲ್ಪಸಂಖ್ಯಾತರು, ದಲಿತರ ವಿರುದ್ಧದ ಪ್ರಚೋದನಕಾರಿ ಹೇಳಿಕೆ ಮತ್ತು ಆಡಳಿತ ವರಸೆಗಳಿರಬಹುದು, ಆಡಳಿತ ವೈಫಲ್ಯ, ದೇಶದ ಆರ್ಥಿಕ ಕುಸಿತ, ಉದ್ಯೋಗ ನಷ್ಟ, ಅಸಹಿಷ್ಣುತೆ, ಕೋಮುವಾದ,.. ಹೀಗೆ ಯಾವುದೇ ವೈಫಲ್ಯ ಮತ್ತು ಜನವಿರೋಧಿ ನೀತಿಗಳ ವಿರುದ್ಧ ದನಿ ಎತ್ತಿದವರನ್ನು ಗುರಿಯಾಗಿಸಿಕೊಂಡು ಅವರನ್ನು ಬೆದರಿಸುವ, ಬಾಯಿ ಮುಚ್ಚಿಸುವ ಅಸ್ತ್ರವಾಗಿ ಐಟಿ ಮತ್ತು ಇಡಿಗಳು ಬಳಕೆಯಾಗುತ್ತಿವೆ ಎಂಬುದು ಮೋದಿಯವರು ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡು ಆರು ತಿಂಗಳಿಂದಲೇ ಕೇಳಿಬರುತ್ತಿರುವ ಸರ್ವೇಸಾಮಾನ್ಯ ಮಾತು. ಕೇವಲ ವಿರೋಧ ಪಕ್ಷಗಳು, ಮೋದಿ ಆಡಳಿತ ವಿರೋಧಿಗಳು ಮಾತ್ರವಲ್ಲದೆ, ಸ್ವತಃ ಬಿಜೆಪಿಯ ಆಂತರಿಕ ವಲಯದಲ್ಲೇ ಇಂತಹ ಮಾತುಗಳು ಕೇಳಿಬರುತ್ತಿವೆ ಎಂಬುದು ಈ ಎರಡು ಇಲಾಖೆಗಳನ್ನು ಮೋದಿ ಸರ್ಕಾರ ಯಾವ ಮಟ್ಟಿಗೆ ದುರುಪಯೋಗಪಡಿಸಿಕೊಳ್ಳುತ್ತಿದೆ ಎಂಬುದಕ್ಕೆ ನಿದರ್ಶನ.
ಕೇವಲ ಮೋದಿ ಮತ್ತು ಅವರ ಸರ್ಕಾರದ ನೀತಿ-ನಿಲುವುಗಳ ಕುರಿತ ಟೀಕೆ, ವಿರೋಧ ಮಾತ್ರವಲ್ಲದೆ, ಅವರನ್ನು ಹೊಗಳದ, ಅವರ ಆಡಳಿತ ವೈಖರಿಯನ್ನು ಕೊಂಡಾಡದ, ಅವರೊಂದಿಗೆ ಸೆಲ್ಫಿ ತೆಗೆಸಿಕೊಳ್ಳಲು ಮುಂದಾಗದ, ಅವರ ಘೋಷಣೆ, ಕಾರ್ಯಕ್ರಮಗಳಿಗೆ ದನಿಗೂಡಿಸದ, ಅವುಗಳ ಪರ ವಕಾಲತು ವಹಿಸದ ನಟರು, ಸಾಮಾಜಿಕ ಕಾರ್ಯಕರ್ತರನ್ನು ಕೂಡ ಐಟಿ ಮತ್ತು ಇಡಿಗಳ ಮೂಲಕ ಟಾರ್ಗೆಟ್ ಮಾಡಲಾಗುತ್ತಿದೆ ಎಂಬುದಕ್ಕೆ ಬಾಲಿವುಡ್ ಮತ್ತು ತಮಿಳು ಸಿನಿಮಾ ರಂಗವೂ ಸೇರಿದಂತೆ ಹಲವು ಸಿನಿಮಾ ನಟರು, ಪತ್ರಕರ್ತರು, ಮಾಧ್ಯಮ ಸಂಸ್ಥೆಗಳ ಮೇಲಿನ ಸರಣಿ ದಾಳಿಗಳೇ ಉದಾಹರಣೆ.
ಗಮನಿಸಬೇಕಾದ ಸಂಗತಿ ಎಂದರೆ; ಕಳೆದ ಏಳು ವರ್ಷಗಳಲ್ಲಿ ದೇಶದ ಸಾರ್ವಜನಿಕ ಬ್ಯಾಂಕುಗಳಿಗೆ ಸಾವಿರಾರು ಕೋಟಿ ಪಂಗನಾಮ ಹಾಕಿ ವಂಚನೆ ಎಸಗಿ ದೇಶಬಿಟ್ಟು ಪರಾರಿಯಾಗಿರುವ ವಿಜಯ್ ಮಲ್ಯ, ನೀರವ್ ಮೋದಿ, ಲಲಿತ್ ಮೋದಿ, ಮೆಹುಲ್ ಚೋಕ್ಸಿ ಸೇರಿದಂತೆ ಯಾರೊಬ್ಬರನ್ನೂ ಈವರೆಗೆ ಬಂಧಿಸಲಾಗದ ಇಡಿ ಮತ್ತು ಐಟಿ, ತನ್ನ ಶ್ರಮದ ದುಡಿಮೆಯಲ್ಲಿ ಕರೋನಾ ಲಾಕ್ ಡೌನ್ ಸಂಕಷ್ಟದ ಹೊತ್ತಲ್ಲಿ ಕಡುಬಡವರು, ಕೂಲಿಕಾರರ ನೆರವಿಗೆ ನೂರಾರು ಕೋಟಿ ವೆಚ್ಚ ಮಾಡಿದ ನಟ ಸೋನು ಸೂದ್ ರಂಥವರ ಮೇಲೆ ಮುರಿದುಕೊಂಡುಬಿದ್ದಿವೆ.
ದೇಶದ ಸಾರ್ವಜನಿಕ ವಲಯದ ಬ್ಯಾಂಕುಗಳು ಬರೋಬ್ಬರಿ ಹತ್ತು ಲಕ್ಷ ಕೋಟಿಯಷ್ಟು ವಸೂಲಾಗದ ಸಾಲದ ಭಾರದಲ್ಲಿ ಕುಸಿಯುತ್ತಿದ್ದರೆ, ದಿನದಿಂದ ದಿನಕ್ಕೇ ಒಂದೊಂದೇ ಬ್ಯಾಂಕುಗಳು ಮುಚ್ಚುತ್ತಿದ್ದರೆ, ಅಂತಹ ಸಾಲ ತೀರಿಸದೆ ತಲೆಮರೆಸಿಕೊಂಡಿರುವ, ಸಾರ್ವಜನಿಕರ ತೆರಿಗೆ ಹಣವನ್ನು ನುಂಗಿ ನೊಣೆಯುತ್ತಿರುವವ ಮೇಲೆ ದಾಳಿ ನಡೆಸಬೇಕಾಗಿದ್ದ ಇಡಿ ಮತ್ತು ಐಟಿ, ಅನಾಥ ಮಕ್ಕಳ ಸಾಕಿಸಲಹುವ ಉದ್ದೇಶಕ್ಕಾಗಿ, ಬಡಬಗ್ಗರ ನೆರವಿಗಾಗಿ, ಸಾಮಾಜಿಕ ಸಾಮರಸ್ಯ ಕಾಪಾಡುವ ಉದ್ದೇಶಕ್ಕಾಗಿ ಐಎಎಸ್ ಹುದ್ದೆಯನ್ನೇ ತ್ಯಜಿಸಿ ಜನಸೇವೆಯಲ್ಲಿ ತೊಡಗಿಸಿಕೊಂಡಿರುವ ಹರ್ಷ ಮಂದರ್ ಅವರ ಮೇಲೆ ದಾಳಿ ನಡೆಸಿವೆ.
ದೇಶ ಕೋವಿಡ್ ಸಂಕಷ್ಟದಲ್ಲಿ ನಲುಗುತ್ತಿರುವಾಗ ರೋಗಿಗಳ ಜೀವ ರಕ್ಷಕ ಆಮ್ಲಜನಕ, ಆ್ಯಂಬುಲೆನ್ಸ್, ವೈದ್ಯಕೀಯ ಸಿಬ್ಬಂದಿಗೆ ಸೂಕ್ತ ಮಾಸ್ಕ್, ಪಿಪಿಇ ಕಿಟ್ ನೀಡಲೂ ಸರ್ಕಾರ ಹಣಕಾಸಿನ ಕೊರತೆಯ ನೆಪ ಹೇಳುತ್ತಿರುವಾಗ ಬರೋಬ್ಬರಿ 6 ಲಕ್ಷ ಕೋಟಿ ರೂ. ತೆರಿಗೆ ವಿನಾಯ್ತಿ ಪಡೆದ(2019-20) ದೇಶದ ಬೃಹತ್ ಕಾರ್ಪೊರೇಟ್ ಕಂಪನಿಗಳ ವಂಚನೆಯ ಬಗ್ಗೆ ತಪಾಸಣೆ ಮಾಡಬೇಕಿದ್ದ ಐಟಿ ಮತ್ತು ಇಡಿ, ದೇಶದ ಜನಸಾಮಾನ್ಯರು, ಕಾರ್ಮಿಕರು, ವಲಸಿಗರು, ರೈತರು, ದಲಿತರು, ಅಲ್ಪಸಂಖ್ಯಾತರು, ಅಶಕ್ತ ವರ್ಗಗಳ ದನಿಯಾಗಿ ಕೆಲಸ ಮಾಡಿದ ಡಿಜಿಟಲ್ ಮಾಧ್ಯಮ ಸಂಸ್ಥೆಗಳ ಮೇಲೆ ದಾಳಿ ಮಾಡಿ ತಪಾಸಣೆ ಮಾಡುತ್ತಿವೆ.
‘ಸ್ವಿಸ್ ಲೀಕ್ಸ್’ ಪ್ರಕರಣದಲ್ಲಿ ಸಾವಿರಾರು ಕೋಟಿ ತೆರಿಗೆ ವಂಚಿಸಿದ ಆರೋಪ ಹೊತ್ತಿರುವ ನರೇಂದ್ರ ಮೋದಿಯವರ ಆಪ್ತ ಉದ್ಯಮಿ ಅಂಬಾನಿ ವಿರುದ್ಧವಾಗಲೀ, ಲಕ್ಷಾಂತರ ಎಕರೆ ಅಭಯಾರಣ್ಯವನ್ನು ನಾಶ ಮಾಡಿ, ಕಲ್ಲಿದ್ದಲು ಗಣಿಗಾರಿಕೆ ನಡೆಸುತ್ತಿರುವ ಆರೋಪ ಹೊತ್ತಿರುವ ಅದಾನಿ ಸಮೂಹದ ಬಗ್ಗೆಯಾಗಲೀ, ಸಾಲು ಸಾಲು ಬಹುಕೋಟಿ ವಂಚನೆ ಮತ್ತು ಭ್ರಷ್ಟಾಚಾರ ಹಗರಣಗಳಲ್ಲಿ ತನಿಖೆ ಎದುರಿಸುತ್ತಿರುವ ಕರ್ನಾಟಕದ ಮಾಜಿ ಮುಖ್ಯಮಂತ್ರಿ ಸೇರಿದಂತೆ ಬಿಜೆಪಿಯ ನೂರಾರು ಮಂದಿ ನಾಯಕರ ವಿರುದ್ದವಾಗಲೀ, ಮೋದಿ ಮತ್ತು ಬಿಜೆಪಿಯ ಪರ ಸಾಮಾಜಿಕ ಜಾಲತಾಣಗಳಲ್ಲಿ ಬ್ಯಾಟಿಂಗ್ ಮಾಡುವ ಬಾಲಿವುಡ್ ನಿಂದ ಸ್ಯಾಂಡಲ್ ವುಡ್ ವರೆಗಿನ ನಟ-ನಟಿಯರ ಮೇಲಾಗಲೀ ಐಟಿ, ಇಡಿ ದಾಳಿ ನಡೆದ ನಿದರ್ಶನಗಳೇ ಇಲ್ಲ!
ಅಂದರೆ; ಹರ್ಷ ಮಂದರ್, ಸೋನು ಸೂದ್, ಆಕಾರ್ ಪಟೇಲ್ ಅವರಂಥ ಸಾಮಾಜಿಕ ಹೋರಾಟಗಾರರು, ಬಡವರ ಪರ ಬದುಕು ಸವೆಸುತ್ತಿರುವವರು, ತಮಿಳು ನಟ ವಿಜಯ್, ನಟಿ ತಾಪ್ಸಿ ಪನ್ನು, ನಿರ್ದೇಶಕ ಅನುರಾಗ್ ಕಶ್ಯಪ್ ಮುಂತಾದ ಜನಪರ ದನಿ ಎತ್ತಿದವರ ಮೇಲೆ ನಡೆಯುತ್ತಿರುವ ದಾಳಿ, ನಿಜವಾಗಿಯೂ ಅವರ ಆರ್ಥಿಕ ವ್ಯವಹಾರಗಳಿಗಿಂತ ಹೆಚ್ಚಾಗಿ, ಅವರು ಆಳುವ ಪಕ್ಷ ಮತ್ತು ನಾಯಕರ ಪರ ಇಲ್ಲ; ಅವರ ವಿರುದ್ಧ ದನಿ ಎತ್ತಿದ್ದಾರೆ, ಇಲ್ಲವೇ ತಮ್ಮ ತಮ್ಮ ಮಾಧ್ಯಮಗಳಲ್ಲಿ ದೇಶದ ವಾಸ್ತವತೆಯನ್ನು, ಜನರ ಸಂಕಷ್ಟವನ್ನು, ಆಳುವ ಮಂದಿಯ ಜನವಿರೋಧಿ ನಡೆಗಳನ್ನು ಅಭಿವ್ಯಕ್ತಿಗೊಳಿಸಿದ್ದಾರೆ ಎಂಬ ಕಾರಣಕ್ಕೆ ನಡೆದಿದೆ ಎಂಬುದು ನಿರ್ವಿವಾದ. ಹರ್ಷ ಮಂದರ್ ಅವರ ಮೇಲಿನ ಇಡಿ ಮತ್ತು ಐಟಿ ದಾಳಿಯನ್ನು ಖಂಡಿಸಿ ಹೇಳಿಕೆ ನೀಡಿರುವ ದೇಶದ ವಿವಿಧ ರಂಗಗಳ ಸುಮಾರು 600 ಕ್ಕೂ ಹೆಚ್ಚು ಲೇಖಕರು, ನಟನಟಿಯರು, ಸಾಮಾಜಿಕ ಹೋರಾಟಗಾರರು, ವಕೀಲರು ಇದೇ ಮಾತನ್ನು ಆಡಿದ್ದಾರೆ.
ಮಾಧ್ಯಮ ಸಂಸ್ಥೆಗಳ ಮೇಲಿನ ದಾಳಿಯಂತೂ ಇಂತಹ ಮಾತುಗಳಿಗೆ ನೇರ ನಿದರ್ಶನದಂತೆ ಕಾಣುತ್ತಿದೆ. ದೇಶದಲ್ಲಿ ವಾರ್ಷಿಕ ಸಾವಿರಾರು ಕೋಟಿ ವಹಿವಾಟು ನಡೆಸುವ ಬೃಹತ್ ಮಾಧ್ಯಮ ಸಂಸ್ಥೆಗಳು ಇವೆ. ಆ ಪೈಕಿ ಹಲವು ಸಂಸ್ಥೆಗಳ ಹೂಡಿಕೆದಾರರು ಮತ್ತು ಅವರ ಆದಾಯ ಮೂಲಗಳು ಇಂದಿಗೂ ನಿಗೂಢವಾಗಿಯೇ ಇವೆ. ಆದರೆ, ಆಳುವ ಪಕ್ಷ ಮತ್ತು ನಾಯಕರ ಗುಣಗಾನದಲ್ಲಿ ತೊಡಗಿರುವ, ಬಹುತೇಕ ಮುಖ್ಯವಾಹಿನಿಯ ಆ ಮಾಧ್ಯಮಗಳ ಮೇಲೆ ಕಳೆದ ಏಳು ವರ್ಷಗಳಲ್ಲಿ ಒಮ್ಮೆ ಕೂಡ ದಾಳಿಯಾಗಲೀ, ಸರ್ವೆಯಾಗಲೀ ನಡೆದ ಒಂದೇ ಒಂದು ನಿದರ್ಶನವೂ ಇಲ್ಲ. ಆದರೆ, ಕೇವಲ ಸಾರ್ವಜನಿಕ ದೇಣಿಗೆ, ಓದುಗರ ಚಂದಾ ಮತ್ತು ಸ್ವಯಂ ಪತ್ರಕರ್ತರ ಸ್ವಯಂ ಹೂಡಿಕೆಯೊಂದಿಗೆ ನಡೆಯುತ್ತಿರುವ, ವಾರ್ಷಿಕ ವಹಿವಾಟು ಕೆಲವು ಲಕ್ಷಗಳನ್ನು ಕೂಡ ದಾಟದ ವ್ಯವಹಾರದ ದೃಷ್ಟಿಯಿಂದ ಚಿಕ್ಕಪುಟ್ಟ ಸಂಸ್ಥೆಗಳಾಗಿರುವ ಮಾಧ್ಯಮಗಳ ಮೇಲೆ ವರ್ಷದಲ್ಲಿ ಮೂರ್ನಾಲ್ಕು ಬಾರಿ ಇಡಿ, ತಪ್ಪಿದರೆ ಐಟಿ ದಾಳಿಗಳು ನಡೆಯುತ್ತಿವೆ!
ಗಮನಿಸಬೇಕಾದ ಸಂಗತಿಯೆಂದರೆ, ಅದು ನ್ಯೂಸ್ ಕ್ಲಿಕ್ ಇರಬಹುದು, ನ್ಯೂಸ್ ಮಿನಿಟ್ ಇರಬಹುದು, ದ ವೈರ್ ಇರಬಹುದು,.. ಬಹುತೇಕ ಆ ಎಲ್ಲಾ ಡಿಜಿಟಲ್ ಮಾಧ್ಯಮ ಸಂಸ್ಥೆಗಳೂ , ದೇಶದ ಆಡಳಿತ ವ್ಯವಸ್ಥೆ ಮತ್ತು ಪ್ರಜಾಸತ್ತೆಯ ಕುರಿತ ಮುಖ್ಯವಾಹಿನಿ ಮಾಧ್ಯಮಗಳು ಮರೆಮಾಚುವ ಸತ್ಯಗಳನ್ನು ಜನರ ಕಣ್ಣು ಮುಂದಿಡುತ್ತಿವೆ. ಆ ಕಾರಣಕ್ಕೆ ಅವು ಸ್ವತಃ ಪ್ರಧಾನಿ ಮೋದಿಯವರಿಗೂ ಮತ್ತು ಅವರ ಸರ್ಕಾರಕ್ಕೂ ಅವು ಇರಿಸುಮುರಿಸು ತಂದಿವೆ. ದೇಶದಲ್ಲಿ ಇಂದು ಬಹುತೇಕ ಮುಖ್ಯವಾಹಿನ ಮಾಧ್ಯಮಗಳನ್ನು(ಪ್ರಿಂಟ್ ಮತ್ತು ಟಿವಿ) ಒಂದೋ ಅವುಗಳಿಗೆ ಬೇಕಾದ್ದನ್ನು ನೀಡಿ ಬಾಯಿ ಮುಚ್ಚಿಸಲಾಗಿದೆ, ಇಲ್ಲವೇ ಬೆದರಿಕೆಯೊಡ್ಡಿ ಮೆತ್ತಗೆ ಮಾಡಲಾಗಿದೆ. ಆದರೆ, ಜಾಲತಾಣದ ಮೂಲಕ ಪ್ರಸಾರವಾಗುವ ಡಿಜಿಟಲ್ ಮಾಧ್ಯಮಗಳನ್ನು ಅವುಗಳ ಕಡಿಮೆ ಬಂಡವಾಳ ಮತ್ತು ಸಾಮಾಜಿಕ ಜಾಲತಾಣ ಪ್ರಸಾರದ ಸ್ವರೂಪದ ಕಾರಣಕ್ಕೇ ಅಧಿಕಾರಸ್ಥರಿಗೆ ಹಾಗೆ ಆಮಿಷವೊಡ್ಡಿ ಅಥವಾ ಬೆದರಿಕೆಯೊಡ್ಡಿ ಬಗ್ಗುಬಡಿಯುವುದು ಸಾಧ್ಯವಾಗುತ್ತಿಲ್ಲ. ಆ ಹಿನ್ನೆಲೆಯಲ್ಲಿ ಇದೀಗ ಕಳೆದ ಒಂದೂವರೆ ಎರಡು ವರ್ಷದಿಂದ ಡಿಜಿಟಲ್ ಮಾಧ್ಯಮಗಳ ಮೇಲೆ ಐಟಿ ಮತ್ತು ಇಡಿಗಳನ್ನು ಛೂ ಬಿಡಲಾಗುತ್ತಿದೆ ಎಂಬುದು ಕೂಡ ಕಣ್ಣಿಗೆ ರಾಚುವ ಸತ್ಯ.
ಹಾಗಾಗಿ ಐಟಿ ಮತ್ತು ಇಡಿಗಳು ದೇಶದ ಆರ್ಥಿಕ ಮತ್ತು ಹಣಕಾಸು ವಂಚನೆಗಳನ್ನು ಪತ್ತೆ ಮಾಡುವ ತಮ್ಮ ಮೂಲಭೂತ ಕರ್ತವ್ಯವನ್ನೇ ಮರೆತು, ದೇಶದ ಅಧಿಕಾರರೂಢ ಬಿಜೆಪಿ ಮತ್ತು ಪ್ರಧಾನಿ ಮೋದಿಯವರ ಟೀಕಾಕಾರರನ್ನು, ರಾಜಕೀಯ ವಿರೋಧಿಗಳನ್ನು, ಪ್ರಜಾಪ್ರಭುತ್ವದ ಪರ ದನಿ ಎತ್ತುವವರನ್ನು ಬಗ್ಗುಬಡಿಯುವ ರಾಜಕೀಯ ಅಸ್ತ್ರಗಳಾಗಿ ಬಳಕೆಯಾಗುತ್ತಿವೆ. ಆಡಳಿತ ಪಕ್ಷ ಮೋರ್ಚಾಗಳಂತೆ ಕೆಲಸ ಮಾಡುತ್ತಿವೆ ಎಂಬ ಗಂಭೀರ ಆರೋಪಗಳು ಕೇಳಿಬರುತ್ತಿವೆ.