ಕಾಂಗ್ರೆಸ್ ಈಗ ಲಿಂಗಾಯತರನ್ನು ಮತ್ತೆ ಒಲಿಸಿಕೊಳ್ಳುವ ಕ್ರಿಯೆಗೆ ಸದ್ದಿಲ್ಲದೇ ಮುಂದಾಗಿದೆ. ಈ ಕುರಿತು ನಿಮ್ಮ ‘ಪ್ರತಿಧ್ವನಿ’ ವಿಶೇಷ ಬರಹ ನೀಡುತ್ತಿದೆ. ಕಳೆದ ಎರಡು ತಿಂಗಳಿನಿಂದ ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಎಸ್ ಆರ್ ಪಾಟೀಲರು ಲಿಂಗಾಯತ ಮಠಗಳಿಗೆ ಭೇಟಿ ನೀಡುತ್ತಿದ್ದಾರೆ. ಅವರೆ ಪಂಚಪೀಠದ ಮಠಗಳಿಗೂ ಭೇಟಿ ನೀಡುತ್ತಿರುವುದರಲ್ಲಿ ವಿಶೇಷ ಮತ್ತು ಆಶ್ಚರ್ಯ ಎರಡೂ ಇವೆ.
ಸಜ್ಜನ, ಸಂಭಾವಿತ ರಾಜಕಾರಣಿ ಎನಿಸಿರುವ ಎಸ್ ಆರ್ ಪಾಟೀಲರು ತಮ್ಮ ವೈಯಕ್ತಿಕ ನೆಲೆಯಲ್ಲಿ ಈ ಯಾತ್ರೆ ಮಾಡುತ್ತಿರಬಹುದೇ ಎಂಬ ಅನುಮಾನಗಳಿದ್ದವು. ಆದರೆ ಹೈಕಮಾಂಡ್ ಸೂಚನೆ ಮೇರೆಗೆ ಅವರು ಈ ಯಾತ್ರೆ ಮಾಡುತ್ತಿದ್ದು, ಲಿಂಗಾಯತ ಮಠಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಕೆಲಸದಲ್ಲಿ ಮಗ್ನರಾಗಿದ್ದಾರೆ.
ಈಗಾಗಲೇ ಪಾಟೀಲರು ಉತ್ತರ ಮತ್ತು ಮಧ್ಯ ಕರ್ನಾಟಕದ 200 ಕ್ಕೂ ಹೆಚ್ಚು ಮಠಗಳನ್ನು ಸಂದರ್ಶಿಸಿದ್ದಾರೆ. ಬೇಕೆಂತಲೇ ಅವರು ಪ್ರಚಾರದಿಂದ ದೂರ ಉಳಿದಿದ್ದಾರೆ. ಇದು ಹೈಕಮಾಂಡ್ ನಿರ್ದೇಶನ ಕೂಡ.
ಕಳೆದ ಸಲ ಪ್ರತ್ಯೇಕ ಲಿಂಗಾಯತ ಧರ್ಮ ಹೋರಾಟದ ಕಾರಣಕ್ಕೆ ವೀರಶೈವ ಲಿಂಗಾಯತರ ಬೆಂಬಲವನ್ನು ಕಾಂಗ್ರೆಸ್ ಕಳೆದುಕೊಂಡಿತ್ತು ಎಂಬ ಅಭಿಪ್ರಾಯವಿದೆ. ಜನಪರ ಆಡಳಿತ ಕೊಟ್ಟ ಸಿದ್ದರಾಮಯ್ಯ ಆಡಳಿತವನ್ನು ನಗಣ್ಯ ಮಾಡಿದ್ದರಲ್ಲಿ ಇದೂ ಕೂಡ ಒಂದು ಅಂಶವಾಗಿತ್ತು. ಈಗ ಸಿದ್ದರಾಮಯ್ಯರಿಗೆ ಆಪ್ತರಾಗಿರುವ ಎಸ್ ಆರ್ ಪಾಟೀಲರನ್ನು ಮುನ್ನೆಲೆಗೆ ತಂದ ಹೈ ಕಮಾಂಡ್ ಲಿಂಗಾಯತ ನಾಯಕತ್ವದ ಮೊರೆ ಹೋಗುವ ಎಲ್ಲ ಲಕ್ಷಣಗಳಿವೆ.
ಪ್ರತ್ಯೇಕ ಲಿಂಗಾಯತ ಧರ್ಮ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದ ವಿನಯ ಕುಲಕರ್ಣಿ ಈಗಷ್ಟೇ ಜಾನೀನಿನ ಮೇಲೆ ಹೊರ ಬಂದಿದ್ದಾರೆ, ವಿಜಯಪುರದ ಎಂ.ಬಿ ಪಾಟೀಲ್ ಅವಕಾಶಕ್ಕಾಗಿ ಕಾಯ್ದು ಹೈರಾಣಾಗಿದ್ದಾರೆ. ಎಸ್ ಆರ್ ಪಾಟೀಲರ ಈ ಮಠ ಯಾತ್ರೆಯ ಬಗ್ಗೆ ಯಾವುದೇ ಕಾಂಗ್ರೆಸ್ ನಾಯಕರೂ ಅಪಸ್ವರ ಎತ್ತಿಲ್ಲ. ಇದು ಹೈಕಮಾಂಡ್ ಸೂಚನೆಯಂತೆ ನಡೆಯುತ್ತಿರುವುದೇ ಅದಕ್ಕೆ ಕಾರಣ.
ಈ ನಡೆಯ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ ಶಾಸಕ, ಮಾಜಿ ಸಚಿವ ಎಂ.ಬಿ ಪಾಟೀಲರು ಕರ್ನಾಟಕ ಉಸ್ತುವಾರಿ ರಣದೀಪ್ ಸುರ್ಜೆವಾಲಯವರಿಗೆ ಫೋನ್ ಮಾಡಿದ್ದು, ಅದಕ್ಕೆ ಸೊಪ್ಪು ಹಾಕದ ಸುರ್ಜೆವಾಲ, ಎಲ್ಲ ಲಿಂಗಾಯತರನ್ನೂ ಒಳಗೊಳ್ಳುವ ಅಗತ್ಯತೆ ಇರುವ ಕಾರಣ ನಾವೇ ಎಸ್ ಆರ್ ಪಾಟೀಲರಿಗೆ ಆ ಜವಾಬ್ದಾರಿ ನೀಡಿದ್ದೇವೆ ಎಂದಿದ್ದಾರೆ. ಖಚಿತ ಮೂಲಗಳು ಇದನ್ನು ‘ಪ್ರತಿಧ್ವನಿ’ಗೆ ತಿಳಿಸಿವೆ.
ನಂತರ ಪ್ರೆಸ್‍ಮೀಟ್ ಮಾಡಿದ ಎಂ.ಬಿ ಪಾಟೀಲರು, ನಾವು ಜಂಗಮ/ವೀರಶೈವ ಮಠಾಧಿಪತಿಗಳನ್ನು ಒಳಗೊಂಡು ಎಲ್ಲ ಲಿಂಗಾಯತರ ವಿಶ್ವಾಸಗಳಿಸಬೇಕಿದೆ’ ಎಂದು ಹೇಳಿದ್ದಾರೆ.
ಎಸ್ ಆರ್ ಪಾಟೀಲ್ ‘ಪ್ರತಿಧ್ವನಿ’ಗೆ ಹೇಳಿದ್ದೇನು?
ಈ ಒಂದು ವಿಚಿತ್ರ ನಡೆ ಕುರಿತು ತಿಳಿಯಲು ‘ಪ್ರತಿಧ್ವನಿ ಎಸ್ ಆರ್ ಪಾಟೀಲರನ್ನೇ ಸಂಪರ್ಕಿಸಿತು. ಅವರು ಯಾವುದೇ ಮುಲಾಜಿಲ್ಲದೇ, ಹೈಕಮಾಂಡ್ ಸೂಚನೆಯ ಮೇರೆಗೆ ಈ ಕೆಲಸ ಮಾಡುತ್ತಿರುವೆ ಎಂದು ಹೇಳಿದ್ದಾರೆ.
‘ಕಾಂಗ್ರೆಸ್ ಪುನರುಜ್ಜೀವನಕ್ಕೆ ಈ ಕೆಲಸವಾ ಎಂಬ ನಮ್ಮ ಪ್ರಶ್ನೆಗೆ ಉತ್ತರಿಸಿದ ಪಾಟೀಲರು, ‘ಲಿಂಗಾಯತ ಪ್ರತ್ಯೇಕ ಧರ್ಮ ಕಾಂಗ್ರೆಸ್ ವಿಷಯವಾಗಿರಲಿಲ್ಲ. ಕೆಲವರಿಂದ ಬಂದ ಸಲಹೆಯನ್ನು ಕಾಂಗ್ರೆಸ್ ಕ್ಯಾಬಿನೆಟ್ ಕೇಂದ್ರಕ್ಕೆ ಶಿಪಾರಸು ಮಾಡಿತ್ತು ಅಷ್ಟೇ. ಆದರೆ ಕಾಂಗ್ರೆಸ್ ಲಿಂಗಾಯತ ಧರ್ಮ ಒಡೆಯುತ್ತಿದೆ ಎಂದು ಅಪಪ್ರಚಾರ ಮಾಡಲಾಗಿತಾದರು. ವಾಸ್ತವ ಅದಲ್ಲ. ಈ ಸತ್ಯವನ್ನು ಎಲ್ಲ ಲಿಂಗಾಯತ ಮಠಾಧೀಶರಿಗೆ ತಲುಪಿಸುವ ಕಾರ್ಯವನ್ನು ಹೈಕಮಾಂಡ್ ನನಗೆ ಒಪ್ಪಿಸಿದೆ. ಈವರೆಗೂ 200 ಕ್ಕೂ ಹೆಚ್ಚು ಮಠಗಳನ್ನು ಭೇಟಿಯಾಗಿದ್ದೇನೆ. ಎಲ್ಲ ಕಡೆಯೂ ಸಕಾರಾತ್ಮಕ ಸ್ಪಂದನೆ ಸಿಕ್ಕಿದೆ. ಈಗ ಮಧ್ಯ ಮತ್ತು ದಕ್ಷಿಣ ಕರ್ನಾಟಕದ ಮಠಗಳಿಗೆ ಭೇಟಿ ನೀಡಲಿದ್ದೇನೆ’ ಎಂದರು.
ಬೇರೆ ಕಾಂಗ್ರೆಸ್ ಲಿಂಗಾಯತ ನಾಯಕರನ್ನೂ ಈ ಯಾತ್ರೆ ಒಳಗೊಳ್ಳಬೇಕಿತ್ತು ಅಲ್ಲವೇ ಎಂಬ ನಮ್ಮ ಪ್ರಶ್ನೆಗೆ ಉತ್ತರಿಸಿದ ಎಸ್.ಆರ್ ಪಾಟೀಲರು, ಆಯಾ ಸ್ಥಳೀಯ ಕಾಂಗ್ರೆಸ್ ನಾಯಕರು ಪಾಲ್ಗೊಂಡಿದ್ದಾರೆ. ಉದಾಹರಣೆಗೆ ಗದಗ ಜಿಲ್ಲೆಗೆ ಭೇಟಿ ನೀಡಿದಾಗ ಅಲ್ಲಿ ಎಚ್ ಕೆ ಪಾಟೀಲರು ಸೊಲ್ಲಾಪುರದಲ್ಲಿದ್ದರು. ಅವರು ಮಹಾರಾಷ್ಟ್ರ ಕಾಂಗ್ರೆಸ್ ಉಸ್ತುವಾರಿ. ಅವರ ಕಸಿನ್ ಮತ್ತು ಮಾಜಿ ಶಾಸಕ ಡಿ. ಆರ್ ಪಾಟೀಲರು ನಮ್ಮಜೊತೆಗಿದ್ದರು’ಎಂದು ಸಮಜಾಯಿಷಿ ನೀಡಿದರು.
ಮುಂದಿನ ಚುನಾವಣೆ ಹೊತ್ತಿಗೆ ಕಾಂಗ್ರೆಸ್ ಲಿಂಗಾಯತ ಲೀಡರ್ ಅನ್ನು ಮುನ್ನೆಲೆಗೆ ತರಬಹುದಾ? ಜೆಡಿಎಸ್ ಒಕ್ಕಲಿಗರ ಪಕ್ಷವೆಂದೇ ಬಿಂಬಿತವಾದ ಕಾರಣ ಒಂದಾದರೆ, ಈಗ ಬಿಜೆಪಿಯ ಲಿಂಗಾಯತ ನಾಯಕ ಎಂದು ಗುರುತಿಸಲ್ಪಟ್ಟ ಯಡಿಯೂರಪ್ಪ ಅವರನ್ನು ಹಿನ್ನೆಲೆಗೆ ಸರಿಸಿದ್ದು ಇನ್ನೊಂದು ಕಾರಣ ಇರಬಹುದು.
ಈ ಸಲ ಕಾಂಗ್ರೆಸ್ ಹೈಕಮಾಂಡ್ ಸೈಲೆಂಟಾಗಿ ಮತ್ತು ಸೂಕ್ಷ್ಮವಾಗಿ ಆಡುತ್ತಿರುವ ಈ ಜಾತಿ ಆಟದಿಂದ ಪ್ರತಿಫಲ ಸಿಗಬಹುದೇ? ಚುನಾವಣೆಗೆ ಇನ್ನೂ ಒಂದೂ ಕಾಲು ವರ್ಷವಿದೆ. ಕಾಯೋಣ….