ವಿವಾದಿತ ಅರ್ಕಾವತಿ ಬಡಾವಣೆ ಡಿನೋಟಿಫಿಕೇಷನ್ ಹಗರಣದ ಕುರಿತು ತನಿಖೆ ನಡೆಸಿರುವ ನಿವೃತ್ತ ನ್ಯಾ. ಎಚ್ ಎಸ್ ಕೆಂಪಣ್ಣ ಆಯೋಗ ಸಲ್ಲಿರುವ ತನಿಖಾ ವರದಿಯನ್ನು ವಿಧಾನಮಂಡಲದಲ್ಲಿ ಮಂಡಿಸಲು ಸರ್ಕಾರಕ್ಕೆ ಸೂಚನೆ ನೀಡುವಂತೆ ಕೋರಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ಹಿನ್ನೆಲೆಯಲ್ಲಿ ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ನೋಟೀಸ್ ನೀಡಿದೆ.
ಹಾಲಿ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ನಡೆದಿದೆ ಎನ್ನಲಾದ ಈ ಡಿನೋಟಿಫಿಕೇಷನ್ ಕುರಿತ ಹೈಕೋರ್ಟ್ ನೋಟೀಸ್ ಹಿನ್ನೆಲೆಯಲ್ಲಿ, ಭಾರೀ ವಿವಾದಕ್ಕೀಡಾಗಿದ್ದ ಭೂ ಹಗರಣ ಮತ್ತೊಮ್ಮೆ ಮುನ್ನೆಲೆಗೆ ಬಂದಿದೆ.
ಬೆಂಗಳೂರಿನ ‘ಕಮಿಟಿ ಫಾರ್ ಪಬ್ಲಿಕ್ ಅಕೌಂಟಬಿಲಿಟಿ’ (committee for public accountability) ಎಂಬ ಟ್ರಸ್ಟ್ ಸಲ್ಲಿಸಿದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ಕೈಗೆತ್ತಿಕೊಂಡಿರುವ ಹೈಕೋರ್ಟ್ ಹಂಗಾಮಿ ಮುಖ್ಯನ್ಯಾಯಮೂರ್ತಿ ಸತೀಶ್ಚಂದ್ರ ಶರ್ಮಾ ಮತ್ತು ನ್ಯಾ.ಸಚಿನ್ ಶಂಕರ್ ಮುಗ್ದಮ್ ಅವರನ್ನೊಳಗೊಂಡ ವಿಭಾಗೀಯ ಪೀಠವು, ವಿಧಾನಮಂಡಲದಲ್ಲಿ ನ್ಯಾ. ಕೆಂಪಣ್ಣ ಆಯೋಗದ ವರದಿ ಮಂಡನೆಗೆ ಕೋರಿ ಸಲ್ಲಿಸಿರುವ ಅರ್ಜಿಯ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರಕ್ಕೆ ನೋಟೀಸ್ ಜಾರಿ ಮಾಡಿದೆ.
ಅರ್ಕಾವತಿ ಬಡಾವಣೆಯ ಡಿನೋಟಿಫಿಕೇಷನ್ ಹಗರಣದ ಕುರಿತು ತನಿಖೆ ನಡೆಸಲು ನೇಮಕವಾಗಿದ್ದ ನಿವೃತ್ತ ನ್ಯಾಯಾಧೀಶ ಕೆಂಪಣ್ಣ ನೇತೃತ್ವದ ಏಕಸದಸ್ಯ ಪೀಠವು, ತನಿಖೆ ನಡೆಸಿ, ತನ್ನ ವರದಿಯನ್ನು 2017ರ ಆಗಸ್ಟ್ 23ರಂದೇ ರಾಜ್ಯ ಸರ್ಕಾರಕ್ಕೆ ಸಲ್ಲಿಸಿದೆ. ತನಿಖಾ ಆಯೋಗದ ಕಾಯ್ದೆ 1952ರ ಸೆಕ್ಷನ್ 3(4)ರ ಪ್ರಕಾರ, ಯಾವುದೇ ಆಯೋಗ ತನ್ನ ಅಂತಿಮ ವರದಿ ಸಲ್ಲಿಸಿ ಆರು ತಿಂಗಳ ಒಳಗೇ ಆ ವರದಿಯನ್ನು ಮತ್ತು ಆ ವರದಿ ಕುರಿತ ತನ್ನ ಕ್ರಮವನ್ನು ವಿಧಾನಮಂಡಲದಲ್ಲಿ ಮಂಡಿಸಬೇಕು. ಆದರೆ, ಈ ಪ್ರಕರಣದಲ್ಲಿ ಆಯೋಗ ವರದಿ ಸಲ್ಲಿಸಿ ಬರೋಬ್ಬರಿ ನಾಲ್ಕು ವರ್ಷ ಕಳೆದರೂ ರಾಜ್ಯ ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಅರ್ಜಿದಾರರು ತಮ್ಮ ಮನವಿಯಲ್ಲಿ ಉಲ್ಲೇಖಿಸಿದ್ದರು.
ಹಾಗೇ, ಒಂದು ವೇಳೆ, ವರದಿಯನ್ನು ವಿಧಾನಮಂಡಲದಲ್ಲಿ ಮಂಡಿಸುವಂತೆ ಸರ್ಕಾರಕ್ಕೆ ತಾನು ನೇರವಾಗಿ ನಿರ್ದೇಶನ ನೀಡಲಾಗದು ಎಂಬ ತೀರ್ಮಾನಕ್ಕೆ ಬಂದರೆ, ನ್ಯಾಯಾಲಯವು, ಆ ಪ್ರಕರಣದ ಕುರಿತು ಸಿಬಿಐನಂತಹ ಕೇಂದ್ರೀಯ ತನಿಖಾ ಸಂಸ್ಥೆಯಿಂದ ತನಿಖೆಗೆ ಸೂಚಿಸಬೇಕು ಎಂದೂ ಅರ್ಜಿದಾರರು ಕೋರಿದ್ದರು.
ವಿಭಾಗೀಯ ಪೀಠವು, ಈ ಸಂಬಂಧ ಆಕ್ಷೇಪಣೆ ಸಲ್ಲಿಸುವಂತೆ ಸೂಚಿಸಿ ರಾಜ್ಯ ಸರ್ಕಾರಕ್ಕೆ ನೋಟೀಸ್ ನೀಡಿದ್ದು, ಮುಂದಿನ ವಿಚಾರಣೆಯನ್ನು ನವೆಂಬರ 15ಕ್ಕೆ ಮುಂದೂಡಿದೆ.
ಅರ್ಕಾವತಿ ಬಡಾವಣೆಯ ಪ್ರಕರಣದ ಕುರಿತು ರಾಜ್ಯ ಹೈಕೋರ್ಟ್ ಮತ್ತು ಸುಪ್ರೀಂಕೋರ್ಟ್ ನೀಡಿದ್ದ ಆದೇಶಗಳನ್ನು ಉಲ್ಲಂಘಿಸಿ, ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ, ಬಡಾವಣೆಯ 541 ಎಕರೆ ಜಮೀನನ್ನು ಡಿನೋಟಿಫೈ ಮಾಡಿದ್ದಾರೆ. ಇದು ಅಕ್ರಮ ಎಂಬ ಗಂಭೀರ ಆರೋಪಗಳು ಕೇಳಿಬಂದಿದ್ದವು. ಅಂದಿನ ವಿರೋಧ ಪಕ್ಷದ ನಾಯಕ ಬಿಜೆಪಿಯ ಜಗದೀಶ್ ಶೆಟ್ಟರ್ ವಿಧಾನಸಭೆಯಲ್ಲಿ ಈ ಹಗರಣವನ್ನು ಪ್ರಸ್ತಾಪಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಅಕ್ರಮದ ನೇರ ಆರೋಪ ಮಾಡಿದ್ದರು. ಆ ಹಿನ್ನೆಲೆಯಲ್ಲಿ 2014ರ ಆಗಸ್ಟ್ ನಲ್ಲಿ ರಾಜ್ಯ ಸರ್ಕಾರ ನಿವೃತ್ತ ನ್ಯಾಯಾಧೀಶರಾದ ಕೆಂಪಣ್ಣ ನೇತೃತ್ವದ ಏಕಸದಸ್ಯ ಆಯೋಗ ರಚಿಸಿ, 2004ರಿಂದ ಆಗಿರುವ ಒಟ್ಟು 983.33 ಎಕರೆ ಜಾಗದ ಡಿನೋಟಿಫೈ ಪ್ರಕ್ರಿಯೆ ರಾಜ್ಯ ಹೈಕೋರ್ಟ್ ಮತ್ತು ಸುಪ್ರೀಂಕೋರ್ಟ್ ಆದೇಶದ ಉಲ್ಲಂಘನೆಯೇ? ಎಂಬುದೂ ಸೇರಿದಂತೆ ಇಡೀ ಪ್ರಕರಣದ ಕುರಿತು ತನಿಖೆಗೆ ಸೂಚಿಸಿತ್ತು.
ಹಾಗೇ ಅಂತಿಮ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ(ಬಿಡಿಎ) 2006, 2007, 2011 ಹಾಗೂ 2013ರಲ್ಲಿ ಈ ಸಂಬಂಧ ಅಂಗೀಕರಿಸಿರುವ ನಿರ್ಣಯಗಳು ಕಾನೂನುಬದ್ಧವಾಗಿವೆಯೇ? 2014ರ ಜೂನ್ 18ರಂದು ಗೆಜೆಟ್ ನೋಟಿಫಿಕೇಷನ್ ಮಾಡಲಾಗಿರುವ ಬಡಾವಣೆಯ ಪುನರ್ ರಚಿತ ಯೋಜನೆಯು ನ್ಯಾಯಾಲಯದ ಆದೇಶವನ್ನು ಉಲ್ಲಂಘಿಸಿದೆಯೇ ? ಎಂಬುದನ್ನು ಕೂಡ ತನಿಖೆಯ ವ್ಯಾಪ್ತಿಗೆ ಸೇರಿಸಲಾಗಿತ್ತು.

ಅಕ್ರಮಗಳ ಸುಳಿ:
2003ರ ಸೆಪ್ಟೆಂಬರ್ ನಲ್ಲಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಅರ್ಕಾವತಿ ಬಡಾವಣೆ ನಿರ್ಮಾಣ ಕಾರ್ಯವನ್ನು ಕೈಗೆತ್ತಿಕೊಂಡಂದಿನಿಂದಲೂ ಈ ಯೋಜನೆ ಅಕ್ರಮದ ಸುಳಿಗೆ ಸಿಲುಕಿದೆ.
ಬಡಾವಣೆ ನಿರ್ಮಾಣಕ್ಕೆ ಜಕ್ಕೂರು, ಸಂಪಿಗೆಹಳ್ಳಿ, ಥಣಿಸಂದ್ರ, ನಾಗವಾರ, ರಾಚೇನಹಳ್ಳಿ ಸೇರಿದಂತೆ 16 ಗ್ರಾಮಗಳ ಒಟ್ಟು 3,893 ಎಕರೆ ರೈತರ ಜಮೀನನ್ನು ಸ್ವಾಧೀನಪಡಿಸಿಕೊಳ್ಳಲಾಗಿತ್ತು.ಆದರೆ, ಬಿಡಿಎ ಮಾಡಿರುವ 3,893 ಎಕರೆ ಭೂಸ್ವಾಧೀನ ಪ್ರಕ್ರಿಯೆಯಲ್ಲಿ ಅಕ್ರಮ ನಡೆದಿದೆ. ಭೂ ಮಾಲೀಕರಿಗೆ ನಷ್ಟ ಉಂಟಾಗಿದೆ ಎಂದು ಆರೋಪಿಸಿ ಆಭಾಗದ ರೈತರು ಹೈಕೋರ್ಟ್ ಮೆಟ್ಟಿಲೇರಿದ್ದರು. ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯ ಸ್ವಾಧೀನ ಪಡಿಸಿಕೊಂಡ ಭೂಮಿಯಲ್ಲಿ 1,089 ಎಕರೆಯನ್ನು ಕೈಬಿಡುವಂತೆ ಆದೇಶಿಸಿತ್ತು.
ಆ ವೇಳೆ ಕೋರ್ಟ್, ಆರು ಅಂಶಗಳ ಮಾರ್ಗಸೂಚಿ ನಿಗದಿ, ಆ ಅಂಶಗಳ ವ್ಯಾಪ್ತಿಗೆ ಸೇರುವ ಜಮೀನನ್ನು ಭೂಸ್ವಾಧೀನದಿಂದ ಕೈಬಿಡಬಹುದು ಎಂದು ಹೇಳಿತ್ತು. ಅದರಂತೆ ಭೂಮಿ ಹಸಿರುಪಟ್ಟಿ ವಲಯಕ್ಕೆ ಸೇರಿದ್ದರೆ, ಮನೆ ಇನ್ನಿತರ ಕಟ್ಟಡಗಳಿದ್ದರೆ, ಶಿಕ್ಷಣ ಸಂಸ್ಥೆ, ಚಾರಿಟಬಲ್ ಟ್ರಸ್ಟ್, ಧಾರ್ಮಿಕ ಸಂಸ್ಥೆಗಳು ಇದ್ದರೆ, ನರ್ಸರಿಗಳು ನಡೆಯುತ್ತಿದ್ದರೆ, ಕಾರ್ಖಾನೆಗಳು ಇದ್ದರೆ, ಡಿನೋಟಿಫೈ ಮಾಡಿರುವ ಭೂಮಿ ಪಕ್ಕದಲ್ಲೇ ಕೃಷಿ ಜಮೀನು ಇದ್ದರೆ ಯೋಜನೆಯಿಂದ ಕೈಬಿಡಬಹುದು ಎಂದು ಹೇಳಿತ್ತು.
ಆ ಸೂಚನೆಯನ್ನೇ ಅಸ್ತ್ರವಾಗಿಸಿಕೊಂಡು ಬಿಡಿಎ, ನಡೆಸಿದ್ದ ಡಿನೋಟಿಫಿಕೇಷನ್ ನಲ್ಲಿ ರಿಯಲ್ ಎಸ್ಟೇಟ್ ಮಾಫಿಯಾ ಮತ್ತು ಅಧಿಕಾರಶಾಹಿಯ ಲಾಭಕ್ಕಾಗಿ ಅಕ್ರಮ ಎಸಗಲಾಗಿದೆ. ಜೊತೆಗೆ ನ್ಯಾಯಾಲಯದ ಮಾರ್ಗಸೂಚಿಯಂತೆ ಡಿನೋಟಿಫಿಕೇಷನ್ ನಡೆದಿಲ್ಲ. ಬಿಡಿಎ ಕೈಗೊಂಡ ನಿರ್ಣಯ ಪ್ರಕಾರ 422.25 ಎಕರೆ ಅಧಿಸೂಚನೆಯಿಂದ ಕೈಬಿಡಬೇಕಿತ್ತು. ಆದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹೆಚ್ಚುವರಿಯಾಗಿ 119 ಎಕರೆ ಸೇರಿಸಿ ಒಟ್ಟು 541.25 ಎಕರೆ ಜಮೀನು ಡಿನೋಟಿಫೈ ಮಾಡಿದ್ದಾರೆ ಎಂದು ಜಗದೀಶ್ ಶೆಟ್ಟರ್ ಆರೋಪಿಸಿದ್ದರು.
ಆದರೆ, ಅಂದಿನ ಸಿದ್ದರಾಮಯ್ಯ, ಆ ಆರೋಪವನ್ನು ತಳ್ಳಿಹಾಕಿದ್ದರು. ನಮ್ಮ ಸರ್ಕಾರ ಒಂದು ಗುಂಟೆ ಜಮೀನು ಕೂಡ ಡಿನೋಟಿಫೈ ಮಾಡಿಲ್ಲ. ಜಗದೀಶ್ ಶೆಟ್ಟರ್ ಸಿಎಂ ಅವಧಿಯಲ್ಲಿ ಬಿಡಿಎ ನಿರ್ಣಯ ಕೈಗೊಂಡಂತೆ ಅಧಿಸೂಚನೆಯಿಂದ ಜಮೀನು ಕೈಬಿಡಲಾಗಿದೆ. ಇದರ ಜತೆಗೆ ಹಿಂದಿನ ಸರ್ಕಾರಗಳ ಅವಧಿಯಲ್ಲಿ ನಡೆದ ಡಿನೋಟಿಫಿಕೇಷನ್ ಸೇರಿಸಿ ಮರು ಪರಿಷ್ಕೃತ ಯೋಜನೆ ಸಿದ್ಧಪಡಿಸಿ ಒಟ್ಟು 983.33 ಎಕರೆ ಜಮೀನನ್ನು ಅಧಿಸೂಚನೆಯಿಂದ ಕೈಬಿಡಲಾಗಿದೆ. ಇದೆಲ್ಲವೂ ನ್ಯಾಯಾಲಯದ ಮಾರ್ಗಸೂಚಿಯಂತೆ ನಡೆದಿದೆ ಎಂದು ಸಿದ್ದರಾಮಯ್ಯ ಸಮರ್ಥಿಸಿಕೊಂಡಿದ್ದರು.
ಆದರೆ, ಪ್ರತಿಪಕ್ಷಗಳು ತನಿಖೆಗೆ ಪಟ್ಟು ಹಿಡಿದಿದ್ದವು. ಆ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ ಸರ್ಕಾರ, 2014ರಲ್ಲಿ ನ್ಯಾ. ಕೆಂಪಣ್ಣ ಆಯೋಗ ರಚಿಸಿತ್ತು. ಆಯೋಗ ತನ್ನ ತನಿಖಾ ವರದಿಯನ್ನು ಸಲ್ಲಿಸಿ ನಾಲ್ಕು ವರ್ಷ ಕಳೆದರೂ, ಸರ್ಕಾರ ಆ ವರದಿಯನ್ನು ವಿಧಾನಮಂಡಲದಲ್ಲಿ ಮಂಡಿಸಿಲ್ಲ ಮತ್ತು ಆ ಕುರಿತು ತಾನು ತೆಗೆದುಕೊಂಡಿರುವ ಕ್ರಮವನ್ನು ಬಹಿರಂಗಪಡಿಸಿಲ್ಲ ಎಂಬ ಹಿನ್ನೆಲೆಯಲ್ಲಿ ಇದೀಗ ‘ಕಮಿಟಿ ಫಾರ್ ಪಬ್ಲಿಕ್ ಅಕೌಂಟಬಿಲಿಟಿ’ ಸಲ್ಲಿಸಿರುವ ಪಿಐಎಲ್, ರಾಜ್ಯ ಸರ್ಕಾರದ ಪಾಲಿಗೆ ನುಂಗಲಾರದ ತುತ್ತಾಗಿದ್ದು, ಬಿಜೆಪಿ ಹಿರಿಯ ನಾಯಕ ಜಗದೀಶ್ ಶೆಟ್ಟರ್ ಹೆಸರು ಕೂಡ ಪ್ರಕರಣದಲ್ಲಿ ಕೇಳಿಬಂದಿರುವುದರಿಂದ, ಬಿಜೆಪಿ ಸರ್ಕಾರದ ಮುಂದಿನ ನಡೆ ಕುತೂಹಲ ಹುಟ್ಟಿಸಿದೆ.
ಜೊತೆಗೆ, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರನ್ನು ಹಣಿಯಲು ಬಿಜೆಪಿ, ಈ ಅವಕಾಶವನ್ನೇ ಬಳಸಿಕೊಂಡು, ವರದಿಯನ್ನು ವಿಧಾನಮಂಡಲದಲ್ಲಿ ಮಂಡಿಸಲು ಮುಂದಾಗುವುದೇ ಎಂಬುದನ್ನು ಕೂಡ ಕಾದುನೋಡಬೇಕಿದೆ. ಒಂದು ವೇಳೆ ಸರ್ಕಾರ ವರದಿ ಮಂಡನೆಗೆ ಮುಂದಾಗದೇ ಹೋದಲ್ಲಿ, ಆ ಪಕ್ಷದ ನಾಯಕರೂ ಈ ಅಕ್ರಮದ ಫಲಾನುಭವಿಗಳು ಎಂಬ ಸಂದೇಶ ಹೋಗುವುದಂತೂ ಖಾತ್ರಿ.











