ಉತ್ತರ ಪ್ರದೇಶದ ಫಿರೋಜಾಬಾದ್ನಲ್ಲಿ ಕಳೆದ 24ಘಂಟೆಗಳ ಅವಧಿಯಲ್ಲಿ ಡೆಂಗ್ಯೂ ಸೋಂಕಿನಿಂದ 6ಜನ ಸಾವನಪ್ಪಿರುವ ಕಾರಣ ಮೂವರು ವೈದ್ಯರನ್ನು ಅಮಾನತುಗೊಳಿಸಲಾಗಿದೆ. ಒಟ್ಟು ಸಾವಿನ ಸಂಖ್ಯೆ 47ಕ್ಕೆ ಏರಿಕೆಯಾಗಿದೆ.
ಬುಧವಾರ ಸಾವಿನ ಸಂಖ್ಯೆ 41ಇತ್ತು, ತಡರಾತ್ರಿ ನಾಲ್ಕು ಜನರ ಸಾವಿನೊಂದಿಗೆ 45ಕ್ಕೆ ಏರಿತ್ತು, ಗುರುವಾರ ಇಬ್ಬರು ಮಕ್ಕಳು ಡೆಂಗ್ಯೂ ಸೋಂಕಿನಿಂದ ಮೃತಪಟ್ಟ ಕಾರಣ ಒಟ್ಟಾರೆ ಸಾವಿನ ಸಂಖ್ಯೆ 47ಕ್ಕೆ ಏರಿಕೆಯಾಗಿದೆ ಎಂದು ಆಗ್ರಾ ವಿಭಾಗದ ಹೆಚ್ಚುವರಿ ನಿರ್ದೇಶಕರು (ಆರೋಗ್ಯ)ಡಾ. ಎ.ಕೆ.ಸಿಂಗ್ ತಿಳಿಸಿದ್ದಾರೆ.
ಹೆಚ್ಚುತ್ತಿರುವ ಸಾವಿನ ಸಂಖ್ಯೆ ನಡುವೆ, ಜಿಲ್ಲಾ ಮ್ಯಾಜಿಸ್ಟ್ರೇಟ್ ಚಂದ್ರ ವಿಜಯ್ ಸಿಂಗ್ ಅವರು ನಿರ್ಲಕ್ಷ್ಯದ ಆರೋಪದ ಮೇಲೆ ಮೂವರು ವೈದ್ಯರನ್ನು ಅಮಾನತುಗೊಳಿಸಿದ್ದಾರೆ ಮತ್ತು ಅನಾರೋಗ್ಯದಿಂದ ಬಳಲುತ್ತಿರುವ ಜನರಿಗೆ ನೀಡುವ ಚಿಕಿತ್ಸೆಯಲ್ಲಿ ನಿರ್ಲಕ್ಷ್ಯ ತೋರಿದರೆ ಕಠಿಣ ಕ್ರಮ ಕೈಗೊಳ್ಳುವುದಾಗಿ ಸರ್ಕಾರಿ ವೈದ್ಯರಿಗೆ ಎಚ್ಚರಿಕೆ ನೀಡಿದ್ದಾರೆ.
ಫಿರೋಜಾಬಾದ್ನ ಸಲಾಯಿ ಪ್ರಾಥಮಿಕ ಆರೋಗ್ಯ ಕೇಂದ್ರದ ಡಾ.ಗಿರೀಶ್ ಶ್ರೀವಾಸ್ತವ, ಸಾರ್ವಜನಿಕ ಆರೋಗ್ಯ ತಜ್ಞ ಡಾ.ರುಚಿ ಶ್ರೀವಾಸ್ತವ ಮತ್ತು ಡಾ.ಸೌರವ್ ಅಮಾನತುಗೊಂಡಿರುವ ವೈದ್ಯರು.
ಆಗಸ್ಟ್ 18ರಿಂದ ಹೆಚ್ಚಾಗಿ ಮಕ್ಕಳಲ್ಲಿ ಡೆಂಗ್ಯೂ ಸೋಂಕು ಮತ್ತು ಶಂಕಿತರ ಸಾವಿನ ಪ್ರಕರಣಗಳು ಹೆಚ್ಚಾದ ಕಾರಣ ಬುಧವಾರ ಮುಂಜಾನೆ, ಫಿರೋಜಾಬಾದ್ನ ಮುಖ್ಯ ವೈದ್ಯಕೀಯ ಅಧಿಕಾರಿ ನೀತಾ ಕುಲಶ್ರೇಷ್ಟ್ ಅವರನ್ನು ಕೆಲಸದಿಂದ ಅಮಾನತುಗೊಳಿಸಲಾಗಿತ್ತು.
ಐಸಿಎಂಆರ್ ವಿಜ್ಞಾನಿಗಳ ತಂಡವು ಏತನ್ಮಧ್ಯೆ, ಫಿರೋಜಾಬಾದ್ಗೆ ಧಾವಿಸಿ , ಜಿಲ್ಲೆಯಲ್ಲಿ ಆರೋಗ್ಯ ಸಮಸ್ಯೆಯನ್ನು ಉಂಟುಮಾಡಿರುವ ರೂಪಾಂತರಿಯನ್ನು ಕಂಡುಹಿಡಿಯಲು ರೋಗ ಪೀಡಿತ ಪ್ರದೇಶಗಳಲ್ಲಿ ಲಾರ್ವಾಗಳನ್ನು ಸಂಗ್ರಹಿಸಿದ್ದರು.
11 ಸದಸ್ಯರ ಐಸಿಎಂಆರ್ ತಂಡ ಮತ್ತು ಯುಪಿ ಸರ್ಕಾರದ ಆರೋಗ್ಯ ಇಲಾಖೆಯ 18 ಸದಸ್ಯರ ವೈದ್ಯಕೀಯ ತಂಡವು ಕೆಲಸವನ್ನು ಆರಂಭಿಸಿದೆ. ಜ್ವರದ ಕಾರಣಗಳನ್ನು ಕಂಡುಹಿಡಿಯಲು ರೋಗ ಪೀಡಿತ ಪ್ರದೇಶಗಳಲ್ಲಿ ವೈದ್ಯಕೀಯ ಸೌಲಭ್ಯಗಳಲ್ಲಿನ ಕೊರತೆಗಳನ್ನು ಕಂಡುಹಿಡಿಯಲು ಈ ತಂಡವು ಕಾರ್ಯನಿರ್ವಹಿಸುತ್ತಿದೆ ಎಂದು ಹೆಚ್ಚುವರಿ ನಿರ್ದೇಶಕರು (ಆರೋಗ್ಯ)ಡಾ. ಎ.ಕೆ.ಸಿಂಗ್ ತಿಳಿಸಿದ್ದಾರೆ.
ತಂಡದ ಸದಸ್ಯರು ವಿವಿಧ ರೋಗ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿದ್ದಾರೆ ಮತ್ತು ಜ್ವರದಿಂದ ಬಳಲುತ್ತಿರುವ ಜನರೊಂದಿಗೆ ಮಾತನಾಡಿದ್ದಾರೆ ಮತ್ತು ಅವರ ರೋಗಲಕ್ಷಣಗಳ ಆಧಾರದ ಮೇಲೆ, ಜ್ವರದ ಕಾರಣವನ್ನು ಕಂಡುಹಿಡಿಯಲು ಅವರ ಮಾದರಿಗಳನ್ನು ಸಂಗ್ರಹಿಸಿದ್ದಾರೆ, ಈ ತಂಡವು ಸೊಳ್ಳೆಗಳ ಹರಡುವಿಕೆಯನ್ನು ನಿಯಂತ್ರಿಸುವ ಮತ್ತು ಸೊಳ್ಳೆಗಳ ಪ್ರಕಾರಗಳನ್ನು ಪರೀಕ್ಷಿಸುವ ಕೆಲಸವನ್ನೂ ಮಾಡುತ್ತಿದೆ ಎಂದು ಡಾ ಸಿಂಗ್ ಹೇಳಿದ್ದಾರೆ.
ಫಿರೋಜಾಬಾದ್ನಲ್ಲಿರುವ ಪ್ರಕರಣಗಳಂತೆ ಹತ್ತಿರದ ಜಿಲ್ಲೆಗಳಾದ ಮಥುರಾ, ಇಟಾ ಮತ್ತು ಮೈನ್ಪುರಿಯಿಯಲ್ಲು ವರದಿಯಾಗಿವೆ ಎಂದು ಆರೋಗ್ಯ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಈ ಮಧ್ಯೆ, ಬಿಜೆಪಿ ಶಾಸಕ ಮನೀಶ್ ಅಸಿಜಾ, ತಮ್ಮ ಬಳಿ ಲಭ್ಯವಿರುವ ಮಾಹಿತಿಯ ಆಧಾರದ ಮೇಲೆ, ಸಾವಿನ ಸಂಖ್ಯೆ 61 ಕ್ಕೆ ಏರಿದೆ ಎಂದು ಹೇಳಿದ್ದಾರೆ. ಅಸಿಜಾ ಅವರು ಸಂತ್ರಸ್ತರ ಕುಟುಂಬಗಳನ್ನು ಭೇಟಿ ಮಾಡಿ ಮತ್ತು ಸಾವುಗಳ ಬಗ್ಗೆ ಮಾಹಿತಿ ಸಂಗ್ರಹಿಸಲು ಈ ಪ್ರದೇಶದಲ್ಲಿ ನಿರಂತರವಾಗಿ ಸಂಚರಿಸುತ್ತಿರುವುದಾಗಿ ಹೇಳಿದ್ದಾರೆ.
ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ಸೋಮವಾರ ಜಿಲ್ಲೆಗೆ ಭೇಟಿ ನೀಡಿ , ಈ ಬಗ್ಗೆ ಪರಿಶಿಲಿಸುವಂತೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆಯನ್ನು ನೀಡಿದ್ದಾರೆ.