ಇತ್ತೀಚೆಗಷ್ಟೇ ನೇಮಕಗೊಂಡ ನೂತನ ಒಂಬತ್ತು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳು ಇಂದು ಮಂಗಳವಾರ ಪ್ರಮಾಣವಚನ ಸ್ವೀಕರಿಸಿದ್ದಾರೆ. ಈಗ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳ ಸಂಖ್ಯಾಬಲ 33ಕ್ಕೆ ಏರಿಕೆಯಾಗಿದೆ. ಸುಪ್ರೀಂಕೋರ್ಟ್ ಒಟ್ಟು 34 ನ್ಯಾಯಮೂರ್ತಿಗಳ ಸ್ಥಾನವನ್ನು ಹೊಂದಿದ್ದು, ಈ ಪೈಕಿ 33 ಸ್ಥಾನಗಳು ಭರ್ತಿಯಾದಂತಾಗಿದೆ. ಉನ್ನತ ನ್ಯಾಯಾಲಯದಲ್ಲಿ ಖಾಲಿ ಹುದ್ದೆಗಳ ಸಂಖ್ಯೆ 10 ರಿಂದ 1ಕ್ಕೆ ಇಳಿಕೆಯಾಗಿದೆ.
ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಎನ್ ವಿ ರಮಣ ಅವರು ನ್ಯಾಯಮೂರ್ತಿಗಳಾದ ಅಭಯ್ ಶ್ರೀನಿವಾಸ್ ಓಕಾ, ವಿಕ್ರಮ್ ನಾಥ್, ಜಿತೇಂದ್ರ ಕುಮಾರ್ ಮಹೇಶ್ವರಿ, ಹಿಮ ಕೊಹ್ಲಿ, ಬಿ ವಿ ನಾಗರತ್ನ, ಸಿ ಟಿ ರವಿಕುಮಾರ್, ಎಂ ಎಂ ಸುಂದ್ರೇಶ್, ಬೇಲಾ ತ್ರಿವೇದಿ ಮತ್ತು ಪಿ ಎಸ್ ನರಸಿಂಹ ಅವರಿಗೆ ಪ್ರಮಾಣವಚನ ಬೋಧಿಸಿದ್ದಾರೆ.
ಕಳೆದ ಎಪ್ಪತ್ತು ವರ್ಷಗಳ ಇತಿಹಾಸದಲ್ಲಿ ಒಂಬತ್ತು ನ್ಯಾಯಾಧೀಶರು ಒಂದೇ ಬಾರಿಗೆ ಪ್ರಮಾಣವಚನ ಸ್ವೀಕರಿಸುವುದು ಇದೇ ಮೊದಲು. ಒಂಬತ್ತು ನ್ಯಾಯಮೂರ್ತಿಗಳ ಹೆಸರನ್ನು ಪದೋನ್ನತಿಗಾಗಿ ಕೊಲಿಜಿಯಂ ಆಗಸ್ಟ್ 17 ರಂದು ಶಿಫಾರಸು ಮಾಡಿತ್ತು. ಆಗಸ್ಟ್ 26 ರಂದು ಕೇಂದ್ರ ಸರ್ಕಾರ ಇದಕ್ಕೆ ಅನುಮೋದನೆ ನೀಡಿತ್ತು.
ಮೂವರು ಮಹಿಳೆಯರು ಸೇರಿದಂತೆ ಸುಪ್ರೀಂಕೋರ್ಟ್ ಪದೋನ್ನತಿಗೊಂಡಿರುವ ಒಂಬತ್ತು ನೂತನ ನ್ಯಾಯಮೂರ್ತಿಗಳಿಗೆ ಸರ್ವೋಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿ ಎನ್ ವಿ ರಮಣ ಇಂದು ಪ್ರಮಾಣವಚನ ಬೋಧಿಸಲಿದ್ದಾರೆ.