ದೇಶದಾದಂತ್ಯ ಮೈಸೂರು ಅತ್ಯಾಚಾರ ಪ್ರಕರಣ ಸುದ್ಧಿ ಮಾಡುತ್ತಿದ್ದು ಸಾರ್ವಾಜನಿಕರು ಮತ್ತು ವಿಪಕ್ಷದ ಸದಸ್ಯರು ಪೊಲೀಸ್ ಇಲಾಖೆಯ ವೈಫಲ್ಯವನ್ನು ಟೀಕಿಸುತ್ತಿದ್ದಾರೆ. ಆದರೆ, ಗೃಹ ಸಚಿವ ಆರಗ ಜ್ಞಾನೇಂದ್ರ ಮಾತ್ರ ಬೇಜವಾಬ್ದಾರಿ ಹೇಳಿಕೆ ನೀಡುವ ಮೂಲಕ ವಿವಾದವನ್ನು ಹುಟ್ಟುಹಾಕಿದ್ದಾರೆ.
ಸಂತ್ರಸ್ತ ಯುವತಿ ಮತ್ತು ಯುವಕ ಸಂಜೆ 7:30ರ ಸಮಯದಲ್ಲಿ ಅಲ್ಲಿಗೆ ಹೋಗಬಾರದಿತ್ತು ಆ ಸಮಯದಲ್ಲಿ ಅವರು ಅಲ್ಲಿಗೆ ಹೋಗಿದೆ ತಪ್ಪು ಎಂದು ಬೇಜವಾಬ್ದಾರಿ ಹೇಳಿಕೆ ನೀಡಿದ್ದಾರೆ.
ಮಧ್ಯರಾತ್ರಿಯಲ್ಲಿ ಒಂಟಿಯಾಗಿ ಮಹಿಳೆ ಒಡಾಡುವಂತಾದಾಗ ದೇಶಕ್ಕೆ ನಿಜವಾದ ಸ್ವಾತಂತ್ರ್ಯ ಸಿಕ್ಕಂತಾಗುತ್ತದೆ ಎಂದು ರಾಷ್ಟ್ರಪಿತ ಮಹಾತ್ಮ ಗಾಂಧೀಜಿರವರು ಹೇಳಿದ್ದಾರೆ . ಆದರೆ, ನಮ್ಮ ರಾಜ್ಯದ ಗೃಹ ಸಚಿವರು ಹೆಣ್ಣು ಮಕ್ಕಳು ಸಂಜೆ ಮೇಲೆ ಮನೆಯಿಂದ ಹೊರ ಬರುವುದೆ ತಪ್ಪು ಎಂದು ಹೇಳುವ ಮೂಲಕ ವಿವಾದ ಸೃಷ್ಟಿಸಿದ್ದಾರೆ ಗೃಹ ಸಚಿವರ ಹೇಳಿಕೆ ಸಾಮಾಜಿಕ ಜಾಲತಾಣ ಮತ್ತು ಸಾರ್ವಜನಿಕ ವಲಯದಲ್ಲಿ ಆಕ್ರೋಶಕ್ಕೆ ಗುರಿಯಾಗಿದೆ.
ಮೈಸೂರಿನಲ್ಲಿ ವಿದ್ಯಾರ್ಥಿನಿ ಮೇಲೆ ನಡೆದ ಸಮೂಹಿಕ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ನವರು ರಾಜಕೀಯ ಲಾಭ ಪಡೆಯಲು ಯತ್ನಿಸುತ್ತಿದ್ದಾರೆ. ಅತ್ಯಾಚಾರ ನಡೆದದ್ದು ಅಲ್ಲಿ ಆದರೆ, ಕಾಂಗ್ರೆಸ್ ನವರು ನನ್ನನ್ನು ರೇಪ್ ಮಾಡ್ತಿದ್ದಾರೆ ಎಂದು ಸಚಿವರು ನೀಡಿರುವ ಹೇಳಿಕೆಯ ವೀಡಿಯೊ ವೈರಲ್ ಆಗಿದೆ.
ನನ್ನನ್ನು ಕಾಂಗ್ರೆಸ್ನವರು ರೇಪ್ ಮಾಡ್ತಿದ್ದಾರೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ನೀಡಿದ್ದ ವಿವಾದಾತ್ಮಕ ಹೇಳಿಕೆಗೆ ಕಾಂಗ್ರೆಸ್ ಕಿಡಿಕಾರಿದೆ.
ಈ ಕುರಿತಾಗಿ ಕೆಪಿಸಿಸಿ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಡಿಕೆ ಶಿವಕುಮಾರ್ , ಗೃಹ ಸಚಿವ ಆರಗ ಜ್ಞಾನೇಂದ್ರ ಹೊಸಬರು. ಕಾಂಗ್ರೆಸ್ನವರು ನನ್ನನ್ನು ರೇಪ್ ಮಾಡ್ತಾ ಇದ್ದಾರೆ ಎಂದು ಹೇಳಿದ್ದಾರೆ. ರೇಪ್ ಎಂಬ ಪದ ಅವರಿಗೆ ಸರಳ ಹಾಗೂ ಪ್ರಿಯವಾದ ಪದ, ಅದಕ್ಕೆ ಗೌರವದಿಂದ ಬಿಂಬಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಗೃಹ ಸಚಿವರ ಹೇಳಿಕೆಗೆ ಅವರ ಪಕ್ಷದ ನಾಯಕರು ಉತ್ತರಿಸಬೇಕು. ರಾಜ್ಯದಲ್ಲಿ ಆಡಳಿತ ಹೇಗಿದೆ ಎಂಬುವುದಕ್ಕೆ ಇದೊಂದು ಉದಾಹರಣೆ. ಕಾಂಗ್ರೆಸ್ನವರು ರೇಪ್ ಮಾಡಿದ್ದಾರೆ ಎಂದಾದರೆ ಅವರ ವಿರುದ್ಧ 376 ಸೆಕ್ಷನ್ ಅಡಿಯಲ್ಲಿ ಕಾಂಗ್ರೆಸ್ ಮುಖಂಡರನ್ನು ಬಂಧನ ಮಾಡಿ ಎಂದು ಸವಾಲು ಹಾಕಿದ್ದಾರೆ.

ಪೊಲೀಸರು ತಮ್ಮ ಗೌರವ ಕಳೆದುಕೊಳ್ಳಬೇಡಿ ಎಂದು ಈ ಹಿಂದೆ ಅಸೆಂಬ್ಲಿಯಲ್ಲಿ ಹೇಳಿದ್ದೆ ಎಂದ ಡಿಕೆಶಿ, ಮೈಸೂರು ಅತ್ಯಾಚಾರ ಘಟನೆ ನಡೆದು 48 ಗಂಟೆ ಆಗಿದೆ. ನಮಗೆ ಸಹಕಾರ ಕೊಡಿ ಎಂದು ಕೇಳುತ್ತಾರೆ. ಅವರಿಗೆ ಏನು ಸಹಕಾರ ಕೊಡುವುದು, ಇದು ಪೊಲೀಸ್ ಇಲಾಖೆಗೆ ಶೇಮ್ ಎಂದು ಅಕ್ರೋಶ ವ್ಯಕ್ತಪಡಿಸಿದ್ದಾರೆ. ಇನ್ನು ಇಂತಹ ಘಟನೆ ನಡೆದಿರುವುದರಿಂದ ರಾಜ್ಯದ ಇಮೇಜ್ ಏನಾಗುತ್ತದೆ ಎಂಬುವುದು ನಮ್ಮ ಆತಂಕ. ಇವರು ಇರ್ತಾರೆ ಹೋಗುತ್ತಾರೆ. ಈ ನಿಟ್ಟಿನಲ್ಲಿ ಮಾಜಿ ಸಂಸದ ಉಗ್ರಪ್ಪ ಅವರ ನೇತೃತ್ವದಲ್ಲಿ ತನಿಖಾ ತಂಡವನ್ನು ಪಕ್ಷದ ವತಿಯಿಂದ ನೇಮಕ ಮಾಡಲಾಗಿದೆ. ಕೂಡಲೇ ಮೈಸೂರಿಗೆ ತೆರಳಿ ತನಿಖಾ ವರದಿ ನೀಡಲು ಸೂಚಿಸಲಾಗಿದೆ ಎಂದು ಅವರು ಹೇಳಿದ್ದಾರೆ.
ಜೊತೆಗೆ ಗೃಹ ಸಚಿವರು ಸಂತ್ರಸ್ತೆಯ ಕುರಿತಾಗಿ ಗೌಪ್ಯತೆ ಕಾಪಾಡಿಲ್ಲ. ನೀಚ ಸಂಸ್ಕೃತಿಗೆ ರಾಜ್ಯವನ್ನು ಸರ್ಕಾರ ಕೊಂಡೊಯ್ಯುತ್ತಿದೆ. ಸರ್ಕಾರದ ಬಗ್ಗೆ ನಮಗೆ ನಂಬಿಕೆ ಇಲ್ಲ. 24 ಗಂಟೆಯಾದರೂ ಒಬ್ಬರನ್ನು ಬಂಧನ ಮಾಡಿಲ್ಲ ಎಂದು ಡಿಕೆಶಿ ಕಿಡಿಕಾರಿದ್ದಾರೆ.






