ಜಗತ್ತಿನ ಎಲ್ಲ ರಾಷ್ಟ್ರಗಳ ಚಿತ್ತ ಸದ್ಯ ಮಧ್ಯಪ್ರಾಚ್ಯ ಅಫ್ಘಾನಿಸ್ತಾನದ ಕಡೆಗೆ ನೆಟ್ಟಿದೆ. ಅಮೇರಿಕಾ ಬೆಂಬಲಿತ ಅಫ್ಘನ್ ಸರ್ಕಾರದಿಂದ ತಾಲಿಬಾನಿಗಳು ಅಧಿಕಾರದ ಚುಕ್ಕಾಣಿಯನ್ನು ತಮ್ಮ ವಶಕ್ಕೆ ಪಡೆದುಕೊಂಡಿದ್ದಾರೆ.
ತಾಲಿಬಾನಿ ಆಡಳಿತದ ಕ್ರೂರ ಇತಿಹಾಸ ಕಂಡ ಜನರು ಅಫ್ಘಾನಿಸ್ತಾನದ ಭವಿಷ್ಯವನ್ನು ನೆನೆದು ಚಿಂತಿತರಾಗಿದ್ದಾರೆ. ಈ ನಡುವೆ ಬಿಜೆಪಿ ರಾಷ್ಟ್ರ ಘಟಕದ ಮಾಜಿ ಪ್ರಧಾನಕಾರ್ಯದರ್ಶಿ, ಆರ್‌ಎಸ್‌ಎಸ್ ನಾಯಕ ರಾಮ್ ಮಾಧವ್ ಬ್ರಿಟೀಷರ ವಿರುದ್ಧ ಕೇರಳ ಮುಸ್ಲಿಮರು ಮಾಡಿದ್ದ ಹೋರಾಟವನ್ನು ತಾಲಿಬಾನ್ ಮನಸ್ಥಿತಿ ಎಂದು ಕರೆದು ಸ್ವಾತಂತ್ರ್ಯ ಹೋರಾಟವನ್ನು ಅಪಮಾನಿಸಿದ್ದಾರೆ.

ಕೇರಳದ ಮಲಬಾರ್ ಪ್ರಾಂತ್ಯದಲ್ಲಿ ನಡೆದಿದ್ದ ಸ್ವಾತಂತ್ರ್ಯ ಸಂಗ್ರಾಮವನ್ನು ಭಾರತದಲ್ಲಿನ ತಾಲಿಬಾನಿ ಮನಸ್ಥಿತಿಯ ಮೊದಲ ಅಭಿವ್ಯಕ್ತಿಯಾಗಿದೆ ಎಂದು ಮಾಧವ್ ಹೇಳಿದ್ದಾರೆ.
ಕೇರಳದಲ್ಲಿ 1921ರಲ್ಲಿ ನಡೆದಿದ್ದ ಸಂಗ್ರಾಮದ ಗಲಭೆಯಲ್ಲಿ ಬಲಿಯಾದವರ ಸ್ಮರಣಾರ್ಥ ಕೋಯಿಕ್ಕೋಡ್‌ನಲ್ಲಿ ಗುರುವಾರ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ರಾಮ್ ಮಾಧವ್, ʼಕಳೆದ ಶತಮಾನದಲ್ಲಿ, ತಾಲಿಬಾನ್ ರೀತಿಯ ಮನಸ್ಥಿತಿಗೆ ಒಳಗಾದ ಮೊದಲ ಸಮಾಜ ಕೇರಳವಲ್ಲದೆ ಮತ್ಯಾವುದೂ ಅಲ್ಲ. ಮಾಪಿಳ ದಂಗೆಯು ಭಾರತದಲ್ಲಿನ ತಾಲಿಬಾನಿ ಮನಸ್ಥಿತಿಯ ಮೊದಲ ಅಭಿವ್ಯಕ್ತಿಯಾಗಿದೆ,‘

‘ತಾಲಿಬಾನ್ ಕೇವಲ ಭಯೋತ್ಪಾದಕ ಸಂಘಟನೆಯಲ್ಲ. ಅದು ಒಂದು ಮನಸ್ಥಿತಿ. ಕಳೆದ ಶತಮಾನದಲ್ಲಿ, ತಾಲಿಬಾನ್ ರೀತಿಯ ಮನಸ್ಥಿತಿಗೆ ಒಳಗಾದ ಮೊದಲ ಸಮಾಜ ಕೇರಳ. ಮಾಪಿಳ ದಂಗೆಯು ಭಾರತದಲ್ಲಿನ ತಾಲಿಬಾನಿ ಮನಸ್ಥಿತಿಯ ಮೊದಲ ಅಭಿವ್ಯಕ್ತಿ.ಈ ದುಷ್ಕೃತ್ಯದ ಬಗ್ಗೆ ಪ್ರಪಂಚ ತಿಳಿಯದಿರಲು ಹಿಂಸಾಚಾರವನ್ನು ಮರೆಮಾಚಲು ಪ್ರಯತ್ನಿಸಲಾಯಿತು. ಇದು ಬ್ರಿಟಿಷರ ವಿರುದ್ಧದ ಚಳುವಳಿ ಅಥವಾ ‘ಜಮೀನ್ದಾರರ’ ವಿರುದ್ಧದ ಕಮ್ಯುನಿಸ್ಟ್ ಕ್ರಾಂತಿ ಎಂದು ಬಿಂಬಿಸಲಾಗಿದೆ ಎಂದು ಅವರು ಹೇಳಿದ್ದಾರೆ.
ಖಿಲಾಫತ್ ಮೂವ್‌ಮೆಂಟ್ ಅಥವಾ ಮಾಪ್ಪಿಳ ದಂಗೆ
ಬ್ರಿಟೀಷರ ವಿರುದ್ಧ ಮಲಬಾರ್ ಪ್ರಾಂತ್ಯದಲ್ಲಿ 1921ರ ಆಗಸ್ಟ್ 20ರಿಂದ 1922ರ ವರೆಗೆ ಸಂಗ್ರಾಮವನ್ನೇ ಖಿಲಾಫತ್ ಮೂವ್‌ಮೆಂಟ್ ಅಥವಾ ಮಾಪ್ಪಿಳ ದಂಗೆ ಎಂದು ಕರೆಯಲಾಗುತ್ತಿದೆ.

ಆಲಿ ಮುಸ್ಲಿಯಾರ್ ಮತ್ತು ವಾರಿಯಂಕುನ್ನತ್ ಕುಞಹ್ಮದ್ ಹಾಜಿ ಅವರ ನೇತೃತ್ವದಲ್ಲಿ ಮಲಬಾರ್ ಪ್ರಾಂತ್ಯದಲ್ಲಿ ನಡೆದ ಈ ಸಂಗ್ರಾಮವು ಬ್ರಿಟೀಷರನ್ನು ಬೆಚ್ಚಿ ಬೀಳಿಸಿತ್ತು. ಬ್ರಿಟೀಷರ ಪರವಾಗಿ ನಿಂತು ಸ್ವಾತಂತ್ರ್ಯ ಹೋರಾಟಗಾರರ ಕುರಿತು ಬ್ರಿಟೀಷರಿಗೆ ಮಾಹಿತಿ ನೀಡುತ್ತಿದ್ದ ಜಮೀನ್ದಾರಿಗಳ ವಿರುದ್ಧವೂ ಹೋರಾಟಗಾರರು ಸಿಡಿದೆದ್ದಿದ್ದರು. ಬ್ರಿಟೀಷರ ಪರವಾಗಿದ್ದ ಸುಮಾರು 10 ಸಾವಿರಕ್ಕೂ ಅಧಿಕ ಜಮೀನ್ದಾರಿಗಳನ್ನು, ಅವರ ಬೆಂಬಲಿಗರನ್ನು ಮಾಪ್ಲಾ ಹೋರಾಟಗಾರರು ಹತ್ಯೆಗೈದಿದ್ದರು.
ಈ ವೇಳೆ ನಡೆದ ಗಲಭೆಯಲ್ಲಿ ಸುಮಾರು 2000 ಕ್ಕೂ ಹೆಚ್ಚು ಮಾಪ್ಪಿಳ ಹೋರಾಟಗಾರರು ಕೂಡಾ ಹತರಾಗಿದ್ದರು.

ಆದರೆ, ಈ ಸಂಗ್ರಾಮವನ್ನು ಬ್ರಿಟೀಷರು ಹಿಂದೂ-ಮುಸ್ಲಿಂ ಗಲಭೆಯಂತೆ ಬಿಂಬಿಸಿದ್ದರು. ಹಿಂದೂ ಮೇಲ್ಜಾತಿಯಾದ ನಂಬೂದರಿ ಸಮುದಾಯದ ಜಮೀನ್ದಾರಿಗಳು ಆ ವೇಳೆ ಬ್ರಿಟೀಷರ ಪರವಾಗಿ ನಿಂತಿದ್ದರು. ಅವರನ್ನು ಸ್ವಾತಂತ್ರ್ಯ ಹೋರಾಟಗಾರರು ಹತ್ಯೆ ಮಾಡಿದ್ದರಿಂದ ಈ ಸಂಗ್ರಾಮವನ್ನು ಹಿಂದೂ-ಮುಸ್ಲಿಂ ಗಲಭೆ ಎಂದು ಮುದ್ರೆಯೊತ್ತಲಾಗಿತ್ತು.
ಸ್ವಾತಂತ್ರ್ಯ ಪೂರ್ವ ಭಾರತ ಕಂಡ ಭೀಕರ ಗಲಭೆಯಾಗಿ ಈ ಸಂಗ್ರಾಮವನ್ನು ಗುರುತಿಸಲಾಗುತ್ತದೆ. ಭೀಕರ ಹಿಂಸಾತ್ಮಕವಾಗಿದ್ದ ಈ ದಂಗೆ ಕೊನೆಯಾಗಬೇಕೆಂದು ಮಹಾತ್ಮಾ ಗಾಂಧಿಯವರ ತಮ್ಮ ಅಸಹಕಾರ ಚಳುವಳಿಯಿಂದ ಹಿಂದೆ ಸರಿದಿದ್ದರು.
ಕಳೆದ ಕೆಲವು ವರ್ಷಗಳಿಂದ ಈ ಸಂಗ್ರಾಮವನ್ನು ‘riot ಅಥವಾ ದಂಗೆʼ ಎಂದು ಕರೆಯಕೂಡದು, ಇದನ್ನು ಹೋರಾಟ ಅಥವಾ ಸಂಗ್ರಾಮವೆಂದೇ ಕರೆಯಬೇಕೆಂಬ ಅಭಿಪ್ರಾಯಗಳೂ ಕೇಳಿ ಬರುತ್ತಿದೆ,.