ಕರೋನಾ ಮೂರನೇ ಅಲೆ ಭೀತಿ ತಲೆದೂರಿರುವಾಗಲೇ ನಗರದ ಮಕ್ಕಳಲ್ಲಿ ಸೋಂಕು ಹೆಚ್ಚಾಗ್ತಿದೆ. ಮೂರನೇ ಅಲೆಯಲ್ಲಿ ಮಕ್ಕಳೇ ಟಾರ್ಗೆಟ್ ಎನ್ನುವ ತಜ್ಞರ ಅಭಿಪ್ರಾಯ ನಿಜವಾಗ್ತಿದ್ಯಾ ಅನ್ನೋ ಅನುಮಾನ ಮೂಡಲರಾಂಭಿಸಿದೆ. ಕಳೆದ ಕೆಲ ದಿನಗಳ ಕರೋನಾ ವರದಿ ನೋಡಿದರೆ ಮಕ್ಕಳಲ್ಲಿ ಶರವೇಗದಲ್ಲಿ ಸೋಂಕು ಹರಡುತ್ತಿರುವುದು ದೃಢವಾಗಿದೆ.
ಆತಂಕ ಮೂಡಿಸಿದ ಕಳೆದ ಐದು ದಿನದಲ್ಲಿ ಸೋಂಕು ತಗುಲಿದ ಮಕ್ಕಳ ಸಂಖ್ಯೆ.!!
ಸಿಲಿಕಾನ್ ಸಿಟಿಯಲ್ಲಿ ಮತ್ತೆ ಕರೋನಾ ಆತಂಕ ಮನೆಮಾಡಿದೆ. ಅತ್ತ ಕಂಟೈನ್ಮೆಟ್ ಪ್ರದೇಶಗಳ ಸಂಖ್ಯೆ ಹೆಚ್ಚಳವಾಗ್ತಿದ್ತೆ ಇತ್ತ ಮಕ್ಕಳಿಗೆ ಹೆಚ್ಚೆಚ್ಚು ಸೋಂಕು ತಗುಲುತ್ತಿದೆ. ಕಳೆದ ಐದು ದಿನದ ಕರೋನಾ ವರದಿಯಲ್ಲಿ 200ಕ್ಕೂ ಅಧಿಕ ಮಕ್ಕಳಲ್ಲಿ ಕರೋನಾ ಸೋಂಕು ಕಾಣಿಸಿಕೊಂಡಿರುವುದು, ಮೂರನೇ ಅಲೆಯಲ್ಲಿ ಮಕ್ಕಳೇ ಟಾರ್ಗೆಟ್ ಎನ್ನುವ ತಜ್ಞರ ಅಭಿಪ್ರಾಯ ನಿಜವಾಗ್ತಿದ್ಯೇನೋ ಎನ್ನುವ ಅನುಮಾನ ಮೂಡಿಸಿದೆ. ಅಂದಹಾಗೆ, ಆಗಸ್ಟ್ 6 ರಿಂದ 10ರ ಐದು ದಿನಗಳ ಅವಧಿಯಲ್ಲಿ 242 ಮಕ್ಕಳಲ್ಲಿ ಸೋಂಕು ಕಾಣಿಸಿಕೊಂಡಿದ್ದು, ಬಿಬಿಎಂಪಿಯನ್ನು ಚಿಂತೆಗೀಡು ಮಾಡಿದೆ. ಕಳೆದ ಐದು ದಿನಗಳಲ್ಲಿ ನಗರದಲ್ಲಿ 242 ಮಕ್ಕಳು ಕರೋನಾ ದಿಂದ ಬಾಧಿತರಾಗಿದ್ದಾರೆ. ಈ ಪೈಕಿ 123 ಹೆಣ್ಣು ಮಕ್ಕಳು ಹಾಗೂ 119 ಗಂಡು ಮಕ್ಕಳಲ್ಲಿ ಸೋಂಕು ಪತ್ತೆಯಾಗಿದೆ. ಅದ್ರಲ್ಲೂ ಮುಖ್ಯವಾಗಿ ನವಜಾತ ಶಿಶುಗಳಿಂದ 9 ವರ್ಷ ವರೆಗಿನ 106 ಮಕ್ಕಳಿಗೆ ಹಾಗೂ 10 ವರ್ಷದಿಂದ 19ವರ್ಷದೊಳಗಿನ 136 ಮಕ್ಕಳಲ್ಲಿ ಕರೋನಾ ಸೋಂಕು ಕಾಣಿಸಿಕೊಂಡಿದ್ದು ಆತಂಕ ಇಮ್ಮಡಿಯಾಗಿಸಿದೆ. ಹೀಗೆ ಒಟ್ಟಾರೆ ಕಳೆದ ಐದು ದಿನದಲ್ಲಿ ನಗರದಲ್ಲಿ 242 ಮಕ್ಕಳಿಗೆ ಸೋಂಕು ದೃಢವಾಗಿದೆ. ಈ ಬಗ್ಗೆ ಮಾಹಿತಿ ಕೊಟ್ಟ ಬಿಬಿಎಂಪಿ ಆರೋಗ್ಯ ವಿಭಾದ ವಿಶೇಷ ಆಯುಕ್ಯ ಡಿ ರಂದೀಪ್, ಕೆಲ ದಿನಗಳಿಂದ ಮಕ್ಕಳಲ್ಲಿ ಹೆಚ್ಚೆಚ್ಚು ಸೋಂಕು ದೃಢವಾಗುತ್ತಿದೆ. ಆದರೂ ಆತಂಕ ಪಡುವ ಅಗತ್ಯವಿಲ್ಲ. ಮಕ್ಕಳಲ್ಲಿ ಸೋಂಕಿನ ಪ್ರಮಾಣ ಇನ್ನೂ ಶೇಕಡಾ 5 ಇನ್ನೂ ಮೀರಿಲ್ಲ. ಮಕ್ಕಳಿಗೆ ವಿಶೇಷ ಕ್ರಮಗಳನ್ನು ಪಾಲಿಕೆ ಕೈಗೊಂಡಿದೆ ಎಂದು ತಿಳಿಸಿದರು.

ಆಗಸ್ಟ್ 15ರ ಬಳಿಕ ಸಾಲು ಸಾಲು ಹಬ್ಬ ಹರಿದಿನಗಳು.. ಮೈಮರೆಯದಂತೆ ಪಾಲಿಕೆ ಎಚ್ಚರಿಕೆ.!!
ಇನ್ನು ಅಗಸ್ಟ್ 15ರ ವರೆಗೆ ಸದ್ಯದ ಸ್ಥಿತಿಯೇ ಮುಂದುವರೆಯಲಿದೆ. ಯಾವುದೇ ಬಿಗಿ ಕ್ರಮಗಳು ಇಲ್ಲಾ ಎಂದು ಪಾಲಿಕೆ ಸ್ಪಷ್ಟಪಡಿಸಿದೆ. ಆದಾದ ಬಳಿಕ ಕಠಿಣ ಕ್ರಮಗಳು ಜಾರಿಯಾಗುವ ಸಾಧ್ಯತೆ ಇದೆ. ಯಾಕಂದ್ರೆ, ಇದಾದ ಬಳಿಕ ಸಾಲು ಸಾಲು ಹಬ್ಬದ ದಿನಗಳು ಬರಲಿದೆ. ಈ ವೇಳೆ ಆಚರಣೆ ನೆಪದಲ್ಲಿ ಜನ ಸಂಧಣಿ ಹೆಚ್ಚಾದರೆ ಕರೋನಾ ಮತ್ತೆ ಸಮುದಾಯಕ್ಕೆ ಹರಡುವ ಸಾಧ್ಯತೆ ಇದೆ. ಹೀಗಾಗಿ ಧಾರ್ಮಿಕ ಕೇಂದ್ರಗಳಿಗೆ ವಿಶೇಷ ಮಾರ್ಗಸೂಚಿ ಬಿಡುಗಡೆಯಾಗುವ ಸಂಭವವಿದೆ. ಈ ಬಗ್ಗೆ ಮಾತನಾಡಿದ ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತಾ, ಜನರು ಗುಂಪು ಸೇರಿದರೆ ಮಾರ್ಷಲ್ಸ್ ದಂಡ ಕಟ್ಟಿಸಿಕೊಳ್ಳಲಿದ್ದಾರೆ. ಜನರು ಮೈ ಮರೆತರೆ ಮತ್ತೊಮ್ಮೆ ಅಪಾಯ ತಪ್ಪಿದಲ್ಲ. ಅಲ್ದೇ ಕರೋನಾ ಹೊಸ ಮಾರ್ಗಸೂಚ ಶೀಘ್ರವೇ ಪಾಲಿಕೆ ಬಿಡುಗಡೆ ಮಾಡಲಿದೆ ಎಂದರು. ಇನ್ನು ಕಳೆದ 16 ತಿಂಗಳ ಈ ಕರೋನಾ ಅವಧಿಯಲ್ಲಿ ಬಿಬಿಎಂಪಿ ಒಟ್ಟು 16 ಕೋಟಿಗೂ ಅಧಿಕ ದಂಡವನ್ನು ವಸೂಲಿ ಮಾಡಿಕೊಂಡಿದೆ. ಜನರ ನಿರ್ಲಕ್ಷ್ಯ ಪಾಲಿಕೆಗೆ ಒಂದು ಕಡೆ ಕರೋನಾ ನಿರ್ವಹಣೆ ಕ್ಲಿಷ್ಟಕರ ಮಾಡುತ್ತಿದೆ ಎಂಬುವುದರ ಜೊತೆಗೆ ಪಾಲಿಕೆಯ ಖಜಾನೆಗೆ ಕೋಟಿ ಕೋಟಿ ಹರಿದು ಬರುವಂತೆ ಮಾಡುತ್ತಿದೆ.
ಇನ್ನು ಅಕ್ಕ ಪಕ್ಕದ ರಾಜ್ಯಗಳಿಂದ ರಾಜ್ಯಕ್ಕೆ ಕರೋನಾ ಹರಡುವ ಭೀತಿಯಿಂದ ರಾಜ್ಯದ ಗಡಿ ಜಿಲ್ಲೆಗಳಲ್ಲಿ ಕಟ್ಟೆಚ್ಚರ ವಹಿಸಲು ಸರ್ಕಾರ ಸೂಚಿಸಿತ್ತು. ಈ ಹಿನ್ನೆಲೆ ತಮಿಳುನಾಡಿನ ಜೊತೆ ಗಡಿ ಹಂಚಿಕೊಂಡಿರುವ ಬೆಂಗಳೂರಿನ ಅತ್ತಿಬೆಲೆಯಲ್ಲೂ ಕಣ್ಗಾವಲು ಸೂಕ್ಷ್ಮಗೊಳಿಸಲು ಬೆಂಗಳೂರು ನಗರ ಜಿಲ್ಲಾಡಳಿತ ನಿರ್ಧರಿಸಿದೆ.
ತಮಿಳುನಾಡು ಜೊತೆ ಗಡಿ ಹಂಚಿಕೊಂಡಿರುವ ಮಹಾನಗರ ಬೆಂಗಳೂರು.!!
ಬೆಂಗಳೂರು ನಗರದಲ್ಲಿ ದಿನದಿಂದ ದಿನಕ್ಕೆ ಸೋಂಕಿನ ಪ್ರಮಾಣ ಹೆಚ್ಚಾಗುತ್ತಿದೆ. ಈ ಹಿನ್ನೆಲೆ ಬಿಬಿಎಂಪಿ ಒಂದು ಕಡೆಯಿಂದ ಹರಸಾಹಸ ಪಡುತ್ತಿದ್ದರೆ ಇತ್ತ ಬೆಂಗಳೂರು ನಗರ ಜಿಲ್ಲಾಡಳಿತ ಕೂಡ ಕಟ್ಟೆಚ್ಚರ ವಹಿಸಿ ಮೂರನೇ ಅಲೆಯಿಂದ ಬೆಂಗಳೂರನ್ನು ಪಾರು ಮಾಡಲು ಹೆಣಗಾಡುತ್ತಿದೆ. ಈ ನಿಟ್ಟಿನಲ್ಲಿ ಅತ್ತಿಬೆಲೆ ಗಡಿಯಲ್ಲಿ ಹೆಚ್ಚಿನ ಕಟ್ಟೆಚ್ಚರಕ್ಕೆ ಮುಂದಾಗಿದೆ ಬೆಂಗಳೂರು ಜಿಲ್ಲಾಡಳಿತ. ಒಟ್ಟು ಮೂರು ಶಿಫ್ಟ್ ಗಳಲ್ಲಿ ಸಿಬ್ಬಂದಿಗಳನ್ನು ನಿಯೋಜಿಸಿ ಅಂತರ್ ರಾಜ್ಯ ತಪಾಸಣೆ ಮಾಡಲು ಸೂಚನೆ ನೀಡಲಾಗಿದೆ. ತಮಿಳುನಾಡು ಮೂಲಕ ನಗರಕ್ಕೆ ಬರುವ ಕೇರಳ ಹಾಗೂ ಮಹಾರಾಷ್ಟ್ರ ವಾಹನಗಳಿಗೆ ಕಡ್ಡಾಯ ತಪಾಸಣೆ ಮಾಡಲಾಗಿದೆ. ಪ್ರತಿ ದಿನ ಸುಮಾರು 100 ರಿಂದ 105 ವಾಹನಗಳು ಈ ರಾಜ್ಯದ ನೋಂದಣಿ ಸಂಖ್ಯೆ ಇರುವ ವಾಹನಗಳು ಬರ್ತಿದೆ. ಅಂದಾಜು ನೂರು ವಾಹನಗಳು ಕೇರಳದಿಂದ, 5-10 ವಾಹನಗಳು ಮಹಾರಾಷ್ಟ್ರದಿಂದ ನಗರಕ್ಕೆ ಬರ್ತಿದೆ.

ಸರ್ಕಾರದ ಆದೇಶದಂತೆ 72 ತಾಸಿನೊಳಗಿನ RTPCR ನೆಗೆಟಿವ್ ವರದಿ ಕಡ್ಡಾಯ.!!
ಇನ್ನು ಸರ್ಕಾರದ ಆದೇಶದಂತೆ 72 ತಾಸಿನೊಳಗಿನ RTPCR ನೆಗೆಟಿವ್ ವರದಿ ಕಡ್ಡಾಯವಾಗಿರಲೇ ಬೇಕು. ಅಕಸ್ಮಾತ್ RTPCR ವರದಿ ಇರದಿದ್ದರೆ ಸ್ಥಳದಲ್ಲೇ ಕರೋನಾ ಪರೀಕ್ಷೆ ನಡೆಸಲಾಗುತ್ತದೆ. ಟೆಸ್ಟ್ ಮಾಡಿಸಿ ವರದಿ ಬರುವ ತನಕ ಜಿಲ್ಲಾಡಳಿತದ ಕೋವಿಡ್ ಕೇರ್ ಸೆಂಟರ್ ನಲ್ಲಿ ಕ್ವಾರಂಟೈನ್ ಮಾಡಲು ವ್ಯವಸ್ಥೆ ಮಾಡಲಾಗಿದೆ. ಬೆಂಗಳೂರು ನಗರ ಜಿಲ್ಲಾಡಳಿತ 50 ಹಾಸಿಗೆಯ 8 CCC ಗಳನ್ನು ಸಿದ್ಧತೆ ಮಾಡಿಕೊಡಿದೆ. ಸಿಂಪ್ಟಮ್ಸ್ ಇರುವ ಜನರಿಗೆ ರ್ಯಾಪಿಡ್ ಆ್ಯಂಟಿಜನ್ ಟೆಸ್ಟ್ ಕೂಡ ನಡೆಸಲಿದ್ದಾರೆ ಸಿಬ್ಬಂದಿಗಳು. ಆನೇಕಲ್, ಕೆಆರ್ ಪುರಂ, ಯಲಹಂಕ ತಾಲೂಕು ಆಸ್ಪತ್ರೆಗಳಲ್ಲಿಯೂ ಕ್ವಾರಂಟೈನ್ ಗೆ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಇನ್ನು ನಗರದ ಗಡಿ ಭಾಗಗಳಲ್ಲಿ ವೀಕೆಂಡ್ ಕರ್ಫ್ಯೂ ಆದೇಶಿಸಿರುವ ಸರ್ಕಾರ ವಿಚಾರಕ್ಕೆ ಸಂಬಂಧಿಸಿದಂತೆ ನ್ಯೂಸ್ 18 ಕನ್ನಡಕ್ಕೆ ಪ್ರತಿಕ್ರಿಯಿಸಿರುವ ನಗರ ಜಿಲ್ಲಾಧಿಕಾರಿ ಜೆ ಮಂಜುನಾಥ್, ಬೆಂಗಳೂರು ಪಾಲಿಕೆ ವ್ಯಾಪ್ತಿಗೇ ಸೇರಿರುವಂತೆ ಜಿಲ್ಲಾ ಪ್ರದೇಶಗಳು ಇರುವ ಕಾರಣಕ್ಕೆ ಇಲ್ಲಿ ವೀಕೆಂಡ್ ಕರ್ಫ್ಯೂ ಇಲ್ಲ. ಮುಂದಿನ ಸ್ಥಿತಿಗತಿ ನೋಡಿಕೊಂಡು ಈ ಬಗ್ಗೆ ನಿರ್ಧಾರ ತೆಗೆದುಕೊಳ್ಳಲು ಜಿಲ್ಲಾಡಳಿತ ನಿರ್ಧರಿಸಿದೆ. ಅಗತ್ಯ ಬಿದ್ದರೆ ಮುಲಾಜಿಲ್ಲದೆ ಕ್ರಮಗಳನ್ನು ತೆಗೆದುಕೊಳ್ಳಲು ಸರ್ಕಾರದ ನಿರ್ದೇಶನವಿದೆ ಎಂದು ಒಂದೊಮ್ಮೆ ಮುಂದಿನ ದಿನಗಳಲ್ಲಿ ಕರೋನಾ ಹೆಚ್ಚಾದರೆ ವೀಕೆಂಡ್ ಕರ್ಫ್ಯೂ ಹೇರುವ ಮುನ್ಸೂಚನೆ ನೀಡಿದ್ದಾರೆ.
ಗಡಿಯಲ್ಲಿ ತಪಾಸಣೆ ಹೆಚ್ಚಿಸಿದ ಬೆಂಗಳೂರು ನಗರ ಜಿಲ್ಲಾಡಳಿತ.!!
ನಗರ ಜಿಲ್ಲಾಡಳಿತದ ವ್ಯಾಪ್ತಿಯಲ್ಲಿ ಜಿಗಣಿ, ಬೊಮ್ಮಸಂಧ್ರ, ಇಲೆಕ್ಟ್ರಾನಿಕ್ ಸಿಟಿ ಕೈಗಾರಿಕೆ ಪ್ರದೇಶಗಳು ಹೆಚ್ಚಿನ ಸಂಖ್ಯೆಯಲ್ಲಿವೆ. ಈ ಎಲ್ಲಾ ಇಂಡಸ್ಟ್ರೀಸ್ ಗಳಿಗೆ ಹೋಗಿ ತಪಾಸಣೆ ನಡೆಸಲು ವಿಶೇಷ ತಂಡ ರಚಿಸಿಲಾಗಿದೆ. 1 ನಗರ ಸಭೆ, 6 ಪುರ ಸಭೆ, 87 ಗ್ರಾಮಪಂಚಾಯ್ತಿ, 1038 ಹಳ್ಳಿಗಳ ಮೇಲೆ ನಗರ ಜಿಲ್ಲಾಡಳಿತ ಕಣ್ಗಾವಲು ಇಟ್ಟಿದೆ. ನಗರ ಜಿಲ್ಲೆಯ ಇಲ್ಲಿ ಎಲ್ಲೂ ಕೂಡ ಹೊರಗಿನಿಂದ RTPCR ನೆಗೆಟಿವ್ ವರದಿ ಇಲ್ಲದೆ ಯಾರಿಗೂ ಅನುಮತಿ ಇಲ್ಲ ಎಂದು ಜಿಲ್ಲಾಧಿಲಾರಿಗಳು ನ್ಯೂಸ್ 18 ಕನ್ನಡ ಮೂಲಕ ಸ್ಪಷ್ಟಪಡಿಸಿದ್ದಾರೆ. ಬೆಂಗಳೂರು ನಗರ ಜಿಲ್ಲೆಗಳಲ್ಲಿ ಪ್ರತಿ ದಿನ ಸರಾಸರಿ 40-50 ಕೇಸ್ ದಾಖಲಾಗುತ್ತಿದೆ. ಪ್ರತಿ ದಿನ ಸರಾಸರಿ 8000 ಕರೋನಾ ಟೆಸ್ಟ್ ಗಳು ನಡೆಯುತ್ತಿದೆ. ಹಳ್ಳಿ ಭಾಗದಲ್ಲಿ ಕರೋನಾ ಸೋಂಕು ದೃಢವಾದರೆ ಅವರನ್ನು ನಗರದ ಒಳಕ್ಕೆ ಕರೆತರುವುದಿಲ್ಲ. ಬದಲಿಗೆ ಅಂಥವರನ್ನು ಕ್ವಾರಂಟೈನ್ ಮಾಡಲು ಹಳ್ಳಿ ಭಾಗದ ಶಾಲೆ, ಆಸ್ಪತ್ರೆಗಳಲ್ಲೇ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ನಗರ ಸಭೆ ಟಾಸ್ಕ್ ಫೋರ್ಸ್, ಪುರಸಭೆ ಟಾಸ್ಕ್ ಫೋರ್ಸ್ ಅನ್ನೂ ರಚಿಸಲಾಗಿದೆ. ಇದರ ಜೊತೆಗೆ ಹಳ್ಳಿ ಭಾಗದಲ್ಲಿ ಕರೋನಾ ಬಗ್ಗೆ ಎಚ್ಚರಿಕೆ ಮೂಡಿಸಲು ವೈದ್ಯರ ನಡೆ ಹಳ್ಳಿ ಕಡೆ ಎಂಬ ಕಾರ್ಯಕ್ರಮವನ್ನೂ ಬೆಂಗಳೂರು ನಗರ ಜಿಲ್ಲಾಡಳಿತ ಹಮ್ಮಿಕೊಂಡಿದೆ.