ಅಸ್ಸಾಂ ಮತ್ತು ಮಿಜೋರಾಮ ನಡುವಿನ ಗಡಿ ವಿವಾದ ತಾರಕ್ಕೇರಿದೆ. ರಾಜ್ಯಗಳಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡಬೇಕಿದ್ದ ಪೊಲೀಸ್ ಪಡೆಯೇ, ಈ ಬಾರಿ ಶತ್ರು ರಾಷ್ಟ್ರಗಳ ಸೈನಿಕರಂತೆ ಬಡಿದಾಡಿಕೊಂಡಿವೆ. ಈ ವಿವಾದದ ಹಿನ್ನೆಲೆಯಲ್ಲಿ ಉಂಟಾದ ಘರ್ಷಣೆಯು ಆರು ಜನ ಪೊಲೀಸ್ ಸಿಬ್ಬಂದಿಗಳನ್ನು ಬಲಿ ಪಡೆದುಕೊಂಡಿದೆ. ಇದರೊಂದಿಗೆ ಉಭಯ ರಾಜ್ಯಗಳ ಅನೇಕ ಪೊಲೀಸರು ಗಾಯಗೊಂಡಿದ್ದಾರೆ.

ಅಸ್ಸಾಂ ಮತ್ತು ಮಿಜೋರಾಂ ನಡುವಿನ ಗಡಿ ವಿವಾದಕ್ಕೆ ಹಲವು ದಶಕಗಳ ಇತಿಹಾಸವಿದೆ. ಎರಡೂ ರಾಜ್ಯಗಳು ಸುಮಾರು 164.6 ಕಿ.ಮೀ. ಗಡಿಯನ್ನು ಹಂಚಿಕೊಂಡಿವೆ. ಮಿಜೋರಾಂನ ಕೋಲಾಸಿಬ್, ಐಜಾಲ್, ಮಾಮಿತ್ ಮತ್ತು ಅಸ್ಸಾಂನ ಕರೀಮ್ ಗಂಜ್, ಕಚಾರ್ ಮತ್ತು ಹೈಲೆ ಕಂಡಿ ಜಿಲ್ಲೆಗಳು ಗಡಿ ಪ್ರದೇಶಕ್ಕೆ ಅಂಟಿಕೊಂಡಿವೆ.
ಇದೇ ಗಡಿಯ ಸಮೀಪ ಇರುವಂತಹ ಹುಟ್ ಗುಟಿ ಎಂಬ ಗ್ರಾಮದ ‘ವಿವಾದಾದ್ಮಕ’ ಪ್ರದೇಶದಲ್ಲಿ ಮಿಜೋರಾಂ ಪೊಲೀಸರು ತಾತ್ಕಾಲಿಕ ಶಿಬಿರಗಳನ್ನು ನಿರ್ಮಿಸಿದ್ದು ಈಗ ದೊಡ್ಡ ಮಟ್ಟದ ಘರ್ಷಣೆಗೆ ಕಾರಣವಾಗಿದೆ.
ಮಿಜೋರಾಂ ಪೊಲೀಸರು ತಮ್ಮ ನಡೆಯನ್ನು ಸಮರ್ಥಿಸಿಕೊಂಡಿದ್ದಾರೆ. ತಾವು ಶಿಬಿರಗಳನ್ನು ನಿರ್ಮಿಸಿರುವ ಸ್ಥಳ ಮಿಜೋರಾಂಗೆ ಸೇರುತ್ತದೆ ಎಂದಿದ್ದಾರೆ. ಇದಕ್ಕೆ ಪ್ರತಿಯಾಗಿ, ಅಸ್ಸಾಂಗೆ ಸೇರಿದ ಪ್ರದೇಶದಲ್ಲಿ ಈ ಶಿಬಿರಗಳನ್ನು ನಿರ್ಮಿಸಲಾಗಿದೆ ಎಂದು ಅಸ್ಸಾಂ ಪೊಲೀಸರು ಕಿಡಿ ಕಾರಿದ್ದಾರೆ.
ಪರಿಸ್ಥಿತಿ ಕೈಮೀರಿ ಹೋಗುತ್ತಿದ್ದಂತೆಯೇ, ಎರಡೂ ರಾಜ್ಯಗಳ ಪೊಲೀಸರು ಗುಂಡಿನ ದಾಳಿ ನಡೆಸಿದ್ದಾರೆ. ಈ ದಾಳಿಯಿಂದಾಗಿ ಆರು ಜನ ಪೊಲೀಸರು ಮೃತಪಟ್ಟಿದ್ದಾರೆ. ಇಷ್ಟು ಮಾತ್ರವಲ್ಲದೇ, ಪೊಲೀಸರೂ ಸೇರಿದಂತೆ 80 ಜನರಿಗೆ ತೀವ್ರವಾದ ಗಾಯಗಳಾಗಿವೆ.
ಅಮಿತ್ ಶಾ ವಿರುದ್ದ ರಾಗಾ ಕಿಡಿ:
ಉಭಯ ರಾಜ್ಯಗಳ ನಡುವಿನ ವಿವಾದ ತಾರಕಕ್ಕೆ ಏರುತ್ತಿದ್ದಂತೆಯೇ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅಮಿತ್ ಶಾ ವಿರುದ್ದ ವಾಗ್ದಾಳಿ ನಡೆಸಿದ್ದಾರೆ.
“ದೇಶದಲ್ಲಿ ದ್ವೇಷ ಮತ್ತು ಅಪನಂಬಿಕೆಯನ್ನು ಬಿತ್ತುವ ಮೂಲಕ ಗೃಹ ಸಚಿವರು ಮತ್ತೆ ಜನರ ಕೈಬಿಟ್ಟಿದ್ದಾರೆ. ಈ ದ್ವೇಷವನ್ನು ಬಿತ್ತಿರುವ ಫಲವನ್ನು ದೇಶದ ಜನರು ಅನುಭವಿಸುತ್ತಿದ್ದಾರೆ,” ಎಂದು ಅವರು ಹೇಳಿದ್ದಾರೆ.
ಇದರೊಂದಿಗೆ ಘರ್ಷಣೆಯಿಂದಾಗಿ ಹಾನಿಗೊಳಗಾಗಿರುವ ಪ್ರದೇಶವನ್ನು ಭೇಟಿ ಮಾಡಲು ಕಾಂಗ್ರೆಸ್’ನ ಏಳು ಜನರ ತಂಡವೊಂದನ್ನು ರಚಿಸಲಾಗಿದೆ. ಬುಧವಾರದಂದು ಗಡಿ ಪ್ರದೇಶಕ್ಕೆ ಭೇಟಿ ನೀಡಲಿರುವ ತಂಡವು ಹೈಕಮಾಂಡ್’ಗೆ ವರದಿಯನ್ನು ನೀಡಲಿದೆ.