ದೇಶದೆಲ್ಲೆಡೆ ಕೋವಿಡ್ ಕಾರಣದಿಂದ ಜನರು ಸಾಯುತ್ತಾ ಇದ್ದರೂ, ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ್ ನೇತೃತ್ವದ ಬಿಜೆಪಿ ಸರ್ಕಾರ ಮಾತ್ರ ತನ್ನ ವರ್ಚನ್ನು ವೃದ್ದಿಸುವತ್ತ ಗಮನ ಹರಿಸಿತ್ತು. ಬರೋಬ್ಬರಿ 160.31 ಕೋಟಿ ಮೊತ್ತದ ಜಾಹಿರಾತು ನೀಡಿ, ಮುಂಬರುವ ಚುನಾವಣೆಗೆ ತಯಾರಿ ನಡೆಸುವಲ್ಲಿ ಸರ್ಕಾರ ತೊಡಗಿತ್ತು.
ಉಮಾಶಂಕರ್ ದುಬೆ ಎಂಬ ಆರ್ ಟಿ ಐ ಕಾರ್ಯಕರ್ತರ ಅರ್ಜಿಗೆ ಉತ್ತರಿಸಿರುವ ಉತ್ತರ ಪ್ರದೇಶ ಸರ್ಕಾರವು, ಈ ಅಧಿಕೃತ ಸಂಖ್ಯೆಯನ್ನು ನೀಡಿದೆ. ಏಪ್ರಿಲ್ 2020ರಿಂದ ಮಾರ್ಚ್ 2021ರ ವರೆಗೆ ಈ ಹಣವನ್ನು ವ್ಯಯಿಸಲಾಗಿದೆ.
ರಾಷ್ಟ್ರೀಯ ಸುದ್ದಿವಾಹಿಗಳಿಗೆ ರೂ. 88.68 ಕೋಟಿ ಹಾಗೂ ಪ್ರಾದೇಶಿಕ ಸುದ್ದಿವಾಹಿನಿಗಳಿಗೆ ರೂ 71.63 ಕೋಟಿ ರೂ ಮೌಲ್ಯದ ಜಾಹೀರಾತು ನೀಡಲಾಗಿದೆ. ಕೇಂದ್ರ ಸರ್ಕಾರದ ಆತ್ಮನಿರ್ಭರ್ ಭಾರತ್ ಯೋಜನೆಯ ಕುರಿತು ಅತೀ ಹೆಚ್ಚು ಹಣವನ್ನು ವ್ಯಯಿಸಲಾಗಿದೆ.
ನೆಟ್ವರ್ಕ್ 18 ಗ್ರೂಪ್ ಗೆ ಅತೀ ಹೆಚ್ಚು ಮೊತ್ತದ ಜಾಹಿರಾತನ್ನು ನೀಡಲಾಗಿದೆ. CNN News18, News18 India and News18 UP Uttarakhand ಚಾನೆಲ್ ಗಳ ಮೂಲಕ ನೆಟ್ವರ್ಕ್ 18 ಗ್ರೂಪ್ ಬರೋಬ್ಬರಿ ರೂ. 28.82 ಕೋಟಿ ಹಣ ಸಂಪಾದಿಸಿದೆ. ಇದರ ನಂತರ ಝೀ ಮೀಡಿಯಾ ಗ್ರೂಪ್ ಗೆ 23.84 ಕೋಟಿ, ಎಬಿಪಿ ಗ್ರೂಪ್ ಗೆ ರೂ. 18.19 ಕೋಟಿ ಹಾಗೂ ಇಂಡಿಯಾ ಟುಡೆ ಗ್ರೂಪ್ ಗೆ ರೂ. 10.64 ಕೋಟಿ ಮೊತ್ತದ ಜಾಹಿರಾತು ನೀಡಲಾಗಿದೆ.
ಸರ್ಕಾರ ನೀಡಿರುವ ಸಂಖ್ಯೆಗಳನ್ನು ನೋಡಿ ಚಕಿತರಾದ ಉಮಾಶಂಕರ್ ದುಬೆ ಅವರು, “ಇದು ಜನರ ತೆರಿಗೆಯ ಹಣ. ಈ ಹಣವನ್ನು ದುರುಪಯೋಗ ಮಾಡಬಾರದಿತ್ತು. ಅದು ಕುಡಾ ಕೋವಿಡ್ ನಂತಹ ಸಂದರ್ಭದಲ್ಲಿ ಜನರ ಸಹಾಯಕ್ಕೆ ವ್ಯಯಿಸಬೇಕಾದ ಹಣ ಇದು. ಇದನ್ನು ಜಾಹಿರಾತುಗಳಿಗಾಗಿ ವ್ಯಯಿಸಿ ಹೇಗೆ ಸ್ಪಷ್ಟನೆ ನಿಡಬಹುದು?” ಎಂದು ಪ್ರಶ್ನಿಸಿದ್ದಾರೆ.
ಇನ್ನು ಕೇವಲ ಮುಸ್ಲಿಂ ವಿರೋಧಿ ಹಾಗೂ ದ್ವೇಷಪೂರಿತ ಕಾರ್ಯಕ್ರಮಗಳನ್ನು ಬಿತ್ತರಿಸಲು ಹೆಸರುವಾಸಿಯಾಗಿರುವ ಸುದರ್ಶನ್ ನ್ಯೂಸ್ ಚಾನೆಲ್ ಗೆ ಕೂಡಾ 2.68 ಕೋಟಿ ಮೊತ್ತದ ಜಾಹಿರಾತು ನೀಡಲಾಗಿದೆ.
ಜಾಹಿರಾತುಗಳು ಕೇವಲ ಜಾಹಿರಾತಿನ ರೂಪದಲ್ಲಿ ಇರದೇ, ಸರ್ಕಾರದ ಪರವಾಗಿ ‘ವಾಸ್ತವಾಂಶ’ವನ್ನು ನಿರೂಪಿಸುವ ರೀತಿಯ ಸುದ್ದಿಗಳನ್ನು ಪ್ರಸಾರ ಮಾಡುವುದು, ಯೋಗಿ ಆದಿತ್ಯನಾಥ್ ಅವರ ಸಂದರ್ಶನದ ರೂಪದಲ್ಲಿಯೂ ಇದ್ದವು.
ಇಲ್ಲಿ ಗಮನಿಸಬೇಕಾದ ಅತೀ ಮುಖ್ಯ ವಿಚಾರವೆಂದರೆ, NDTV 24×7 ಮತ್ತು NDTV ಚಾನೆಲ್ ಗಳು ಕೋವಿಡ್ ನಿರ್ವಹಣೆ ವೈಫಲ್ಯದ ವಿರುದ್ದ ಸರಣಿ ವರದಿಗಳನ್ನು ಪ್ರಕಟಿಸಿದ ಕಾರಣಕ್ಕಾಗಿ ಅವರಿಗೆ ಬಿಡಿಗಾಸಿನ ಜಾಹಿರಾತನ್ನು ಕೂಡಾ ನೀಡಲಾಗಿಲ್ಲ. ಕೇವಲ ಸರ್ಕಾರದ ಪರವಾಗಿ ವರದಿ ಬಿತ್ತರಿಸುತ್ತಿದ್ದ ಚಾನೆಲ್ ಗಳಿಗೆ ಮಾತ್ರ ಮಣೆ ಹಾಕಲಾಗಿದೆ ಎಂಬ ಅಪವಾದವೂ ಕೇಳಿ ಬರುತ್ತಿದೆ.