ಕನ್ನಡದಲ್ಲಿ ಒಂದು ಗಾದೆ ಮಾತಿದೆ, ಕೋತಿ ತಾನು ಮೊಸರು ತಿಂದು ಮೇಕೆ ಮೂತಿಗೆ ಒರೆಸಿತಂತೆ. ಸದ್ಯಕ್ಕೆ ಭಾರತದ ಕೇಂದ್ರ ಸರ್ಕಾರದ ಪರಿಸ್ಥಿತಿಯೂ ಅದೇ ರೀತಿಯಾಗಿದೆ. ಕೋವಿಡ್ ಪರಿಸ್ಥಿತಿ, ಪೆಟ್ರೋಲ್ ದರ ಏರಿಕೆ, ಲಸಿಕೆ ಸೇರಿದಂತೆ ತನ್ನ ಇತರ ವೈಫಲ್ಯಗಳಿಗೆ ಹಿಂದಿನ ಕಾಂಗ್ರೆಸ್ ಸರ್ಕಾರ ಅಥವಾ ಈಗಿನ ರಾಜ್ಯ ಸರ್ಕಾರಗಳೆಡೆಗೆ ಬೆಟ್ಟು ಮಾಡಿ ತೋರಿಸುತ್ತಿದೆ.
ಈಗ ಹೊಸದಾಗಿ ಕೇಂದ್ರ ಆರೋಗ್ಯ ಮಂತ್ರಿಯಾಗಿ ಅಧಿಕಾರ ಸ್ವೀಕರಿಸಿರುವ ಮನ್ಸುಖ್ ಮಾಂಡವಿಯ ಅವರು ಇದೇ ಚಾಳಿಯನ್ನು ಮುಂದುವರೆಸಿದ್ದಾರೆ. ರಾಜ್ಯ ಸರ್ಕಾರಗಳು ಲಸಿಕೆ ವಿತರಣೆಯ ಕೆಲಸವನ್ನು ಕೆಟ್ಟದಾಗಿ ನಿಭಾಯಿಸಿದ್ದರಿಂದ ಪರಿಸ್ಥಿತಿ ಬಿಗಡಾಯಿಸಿದೆ ಎಂದು ಹೇಳಿದ್ದಾರೆ.

ರಾಜ್ಯ ಸರ್ಕಾರಗಳು ಪ್ರತಿ ಬಾರಿ ಮನವಿ ಸಲ್ಲಿಸಿದರೂ ಏಕೆ ಹೆಚ್ಚಿನ ಡೋಸ್’ಗಳನ್ನು ಸರಬರಾಜು ಮಾಡುತ್ತಿಲ್ಲ ಎಂಬುದರ ಕುರಿತು ಮಾತನಾಡದೇ, ನೇರವಾಗಿ ರಾಜ್ಯ ಸರ್ಕಾರಗಳ ಮೇಲೆ ಆರೋಪ ಹೊರಿಸಿದ್ದಾರೆ.
“ರಾಜ್ಯ ಸರ್ಕಾರಗಳು ಲಸಿಕೆ ಕೊರತೆಯ ಕುರಿತು ಪ್ರಯೋಜನವಿಲ್ಲದ ಹೇಳಿಕೆಗಳನ್ನು ನೀಡಿ ಜನರಲ್ಲಿ ಭೀತಿ ಉಂಟು ಮಾಡುತ್ತಿದ್ದಾರೆ. ಜುಲೈ ತಿಂಗಳಲ್ಲಿ ಹಿಂದಿಗಿಂತಲೂ ಮೂರು ಪಟ್ಟು ಹೆಚ್ಚು ಲಸಿಕೆ ದೊರೆಯುತ್ತದೆ ಎಂದು ಹೇಳಿದ್ದರೂ, ರಾಜ್ಯ ಸರ್ಕಾರಗಳು ತಯಾರಿ ಮಾಡಿಕೊಳ್ಳಲಿಲ್ಲ,” ಎಂದು ಆರೋಪಿಸಿದ್ದಾರೆ. ಮತ್ತೆ ತಮ್ಮ ಆರೋಪಕ್ಕೆ ಪೂರಕವಾದ ಅಂಕಿಅಂಶಗಳನ್ನು ನೀಡಲು ಮಾತ್ರ ಹಿಂದೇಟು ಹಾಕಿದ್ದಾರೆ.

ಇದು ಮೊದಲ ಬಾರಿ ಮಾತ್ರವಲ್ಲ. ಈ ಹಿಂದೆಯೂ ಕೇಂದ್ರ ಸರ್ಕಾರ ಅಥವಾ ಬಿಜೆಪಿ ನಾಯಕರು, ಸರ್ಕಾರದ ‘ಮರ್ಯಾದೆ’ ಉಳಿಸುವ ಸಲುವಾಗಿ ಬೇರೊಬ್ಬರ ಮೇಲೆ ಗೂಬೆ ಕೂರಿಸುವ ಪ್ರಯತ್ನ ಮಾಡಿದೆ. ಈ ಹಿಂದೆ ದೇಶದಲ್ಲಿ ಎರಡನೇ ಕೊರೋನಾ ಅಲೆ ಆರಂಭವಾದಾಗ, ಎಲ್ಲರೂ ಮೋದಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು. ಇಂತಹ ಸಂದರ್ಭದಲ್ಲಿ ಮೋದಿ ಸರ್ಕಾರವನ್ನು ಮುಖಭಂಗದಿಂದ ಪಾರು ಮಾಡಲು ಅಮಿತ್ ಮಾಳವಿಯ ಅವರು ಓಡೋಡಿ ಬಂದಿದ್ದರು.
ಟ್ವೀಟ್ ಮೂಲಕ ಕೇಂದ್ರ ಸರ್ಕಾರವನ್ನು ಹೊಗಳಿದ್ದ ಅಮಿತ್ ಮಾಳವಿಯ, ಎರಡನೇ ಅಲೆಯ ಕುರಿತು ಕೇಂದ್ರ ಸರ್ಕಾರ ಈ ಹಿಂದೆಯೇ ಎಚ್ಚರಿಕೆ ನೀಡಿತ್ತು. ಅದಾದ ಬಳಿಕೆ ಕಾಲ ಕಾಲಕ್ಕೆ ಮಾರ್ಗಸೂಚಿಗಳನ್ನು ಬಿಡುಗಡೆಮಾಡಿತ್ತು. ಕಾಂಗ್ರೆಸ್ ಮತ್ತು ಇತರ ಪಕ್ಷಗಳು ಈ ಕುರಿತಾಗಿ ಗಮನ ಹರಿಸಲಿಲ್ಲ, ಎಂದು ಹೇಳಿದ್ದಾರೆ.
ಈ ರೀತಿ ಹೇಳಿಕೆಗಳನ್ನು ನೀಡುವ ಮೂಲಕ, ಜನರ ಕೋಪವನ್ನು ರಾಜ್ಯ ಸರ್ಕಾರಗಳ ಕಡೆಗೆ ವರ್ಗಾಯಿಸಿ, ಕೇಂದ್ರ ಸರ್ಕಾರವನ್ನು ಮುಜುಗರದಿಂದ ತಪ್ಪಿಸುವ ಪ್ರಯತ್ನವನ್ನು ಮಾಡಲಾಗಿತ್ತು.
ಇದಾದ ಬಳಿಕ ಪೆಟ್ರೋಲ್ ಡೀಸೆಲ್ ಮತ್ತು ಗ್ಯಾಸ್ ಬೆಲೆ ಗಗನಕ್ಕೆ ಏರಿದಾಗ ಖುದ್ದು ಪ್ರಧಾನಿ ಮೋದಿಯವರೇ ಹಿಂದಿನ ಕಾಂಗ್ರೆಸ್ ಸರ್ಕಾರದ ವಿರುದ್ದ ಹರಿಹಾಯ್ದಿದ್ದರು.
“ಭಾರತದಂತಹ ವೈವಿಧ್ಯಮಯ ದೇಶವನ್ನು ಇಂಧನದ ವಿಚಾರದಲ್ಲಿ ಪರಾವಲಂಬಿಗಳನ್ನಾಗಿ ಮಾಡಿದ್ದು ಹಿಂದಿನ ಸರ್ಕಾರಗಳು. ನಾವು ತುಂಬಾ ಹಿಂದೆ ಇದರ ಬಗ್ಗೆ ಎಚ್ಚುಕೊಳ್ಳಬೇಕಿತ್ತು. ಆಗ ಮಧ್ಯಮ ವರ್ಗದ ಜನರು ಇಷ್ಟೋಂದು ಪರಿತಪಿಸುತ್ತಿರಲಿಲ್ಲ,” ಎಂದು ಹೇಳಿದ್ದರು.
ಹಿಂದಿನ ಪೆಟ್ರೋಲಿಯಂ ಸಚಿವರಾಗಿದ್ದ ಧರ್ಮೇಂದ್ರ ಪ್ರಧಾನ್ ಅವರು ಕಾಂಗ್ರೆಸ್ ಸರ್ಕಾರ ಆಯಿಲ್ ಬಾಂಡ್ ಗಳ ಮೇಲಿನ ಸಾಲವನ್ನು ಮರು ಪಾವತಿ ಮಾಡದೇ ಇದ್ದದ್ದು, ಈ ಸಂಕಷ್ಟಕ್ಕೆ ಕಾರಣ ಎಂದು ಹೇಳಿದ್ದರು.
ಪ್ರಧಾನಿ ಮೋದಿಯವರು ಹೇಳಿದ್ದ ಮಾತುಗಳನ್ನೇ ಪುನರುಚ್ಚರಿಸಿದ್ದ ಧರ್ಮೇಂದ್ರ ಪ್ರಧಾನ್, ದೇಶದಲ್ಲಿ ಬಳಸಲಾಗುವ ೮೦% ತೈಲವನ್ನು ಆಮದು ಮಾಡಿಕೊಳ್ಳಬೇಕಾಗಿದೆ ಎಂದು ಹೇಳಿದ್ದರು.
ಕೇಂದ್ರ ಸಚಿವೆ ಸ್ಮೃತಿ ಇರಾನಿ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ರಾಜ್ಯ ಸರ್ಕಾರಗಳು ಬೇಕಾದರೆ ಅವರ ತೆರಿಯನ್ನು ಕಡಿತಗೊಳಿಸಲಿ, ಎಲ್ಲಾದಕ್ಕು ಕೇಂದ್ರ ಸರ್ಕಾರವನ್ನು ಕೇಳಬೇಡಿ ಎಂದು ಮಾಧ್ಯಮಗಳ ಮೇಲೆ ಹರಿಹಾಯ್ದಿದ್ದರು.
ಹೀಗೆ ಪ್ರತಿಯೊಂದು ವಿಚಾರದಲ್ಲಿಯೂ ಕೇಂದ್ರ ಸರ್ಕಾರವು ರಾಜ್ಯ ಸರ್ಕಾರ ಅಥವಾ ಹಿಂದಿನ ಸರ್ಕಾರಗಳತ್ತ ಬೆಟ್ಟು ಮಾಡಿ ತೋರುತ್ತಿರುವುದು ನಿಜಕ್ಕೂ ನಾಚಿಕೆಗೇಡಿನ ಸಂಗತಿ. ಸಂಕಷ್ಟದ ಪರಿಸ್ಥಿಯನ್ನು ಸಮರ್ಥವಾಗಿ ನಿಭಾಯಿಸಲು ಬರಲಾರದಂತೆ ಇನ್ನೊಬ್ಬರ ತಪ್ಪುಗಳನ್ನು ಹುಡುಕುತ್ತಾ ಕೂರುವುದು ಹೇಡಿಗಳ ಮನಸ್ಥಿತಿ. ಕೇಂದ್ರ ಸರ್ಕಾರ ಈ ಮನಸ್ಥಿತಿಯಿಮದ ಹೊರಬರಬೇಕಿದೆ. ತನ್ನ ತಪ್ಪು ನಿರ್ಧಾರಗಳಿಂದ ದೇಶದಲ್ಲಿ ಉಂಟಾಗಿರುವ ವಿಷಮ ಪರಿಸ್ಥಿತಿಯನ್ನು ಮತ್ತೆ ತಿಳಿಯಾಗಿಸಲು ಕ್ರಮ ಕೈಗೊಳ್ಳಬೇಕಿದೆ.
