ಕಾವೇರಿ ನೀರಾವರಿ ನಿಗಮ ನಿಯಮಿತ (ಸಿಎನ್ಎನ್ಎಲ್) ವ್ಯವಸ್ಥಾಪಕ ನಿರ್ದೇಶಕ ಕೆ.ಜಯಪ್ರಕಾಶ್ ಅವರು ʼಕೆಆರ್‌ಎಸ್ (ಕೃಷ್ಣ ರಾಜ ಸಾಗರ) ಅಣೆಕಟ್ಟು ಸುರಕ್ಷಿತವಾಗಿದೆ. ಅಣೆಕಟ್ಟಿನ ಗೋಡೆಯಲ್ಲಿ ಯಾವುದೇ ಬಿರುಕು ಇಲ್ಲದಿರುವುದು ಆಗಾಗ್ಗೆ ನಡೆಸಿದ ತಪಾಸಣೆಯಿಂದ ಖಚಿತವಾಗಿದೆʼ ಎಂದು ಸ್ಪಷ್ಟಪಡಿಸಿದ್ದಾರೆ.

ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಹಾಗೂ ಸಂಸದೆ ಸುಮಲತಾ ಅಂಬರೀಶ್ ಮಧ್ಯೆ ಕೆಆರ್‌ಎಸ್ ಬಿರುಕು ವಿಚಾರಕ್ಕೆ ಸಂಬಂಧಿಸಿದಂತೆ ಮಾತಿನ ಚಕಮಕಿ ತಾರಕಕ್ಕೇರಿರುವ ನಡುವಲ್ಲೇ ರಾಜ್ಯ ಸರ್ಕಾರ ಕೆಆರ್‌ಎಸ್ ಸುರಕ್ಷಿತವಾಗಿದೆ ಎಂದು ಸ್ಪಷ್ಟನೆ ನೀಡಿರುವುದು ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ.
ʼಅಣೆಕಟ್ಟು ಸುರಕ್ಷಾ ಪರಿಶೀಲನಾ ಸಮಿತಿ (ಡಿಎಸ್ಆರ್’ಪಿ) ಸದಸ್ಯರು ಹಾಗೂ ಇಲಾಖಾ ಮುಖ್ಯಸ್ಥರು ಅಣೆಕಟ್ಟನ್ನು ನಿಯಮಿತ ಅವಧಿಗಳಲ್ಲಿ ಪರಿವೀಕ್ಷಿಸಿ ವರದಿಯನ್ನು ನೀಡುತ್ತಾ ಬಂದಿದ್ದಾರೆ. ಅಣೆಕಟ್ಟು ರಚನೆಯಲ್ಲಿ ಯಾವುದೇ ದೋಷ ಇಲ್ಲ ಮತ್ತು ಬಿರುಕುಗಳು ಇಲ್ಲʼ ಎಂದು ತಿಳಿಸಿದ್ದಾರೆ.

ʼಡಿಎಸ್ಆರ್’ಪಿ ಸದಸ್ಯರು ನೀಡಿರುವ ಸಲಹೆಗಳ ಆಧಾರದ ಮೇಲೆ ಅಣೆಕಟ್ಟಿನ ಬಲವನ್ನು ವೃದ್ಧಿಸಲು ಅವಕಾಶವಿರುವ ಕಾಮಗಾರಿಗಳನ್ನು ಅಣೆಕಟ್ಟು ಪುನಶ್ಚೇತನ ಮತ್ತು ಅಭಿವೃದ್ಧಿ ಯೋಜನೆಯ ಹಂತ-1ರ ಅಡಿ ಕೈಗೊಳ್ಳಲಾಗಿದೆ. 70 ಅಡಿಯಿಂದ 131 ಅಡಿಯವರೆಗೆ ಹೊಸದಾಗಿ ಕಟ್ಟಡದ ಕಲ್ಲುಗಳ ಸಂದಿಯಲ್ಲಿ ದುರಸ್ತಿ ಮಾಡಿ ಅಣೆಕಟ್ಟೆಯನ್ನು ಭದ್ರಗೊಳಿಸಲಾಗಿದೆʼ ಎಂದು ವಿವರಿಸಿದ್ದಾರೆ.
ʼಅಣೆಕಟ್ಟೆಯ ಪುನಶ್ಚೇತನ ಕಾಮಗಾರಿಗೆ ವಿಶ್ವಬ್ಯಾಂಕ್ ಮತ್ತು ಕೇಂದ್ರ ಜಲ ಆಯೋಗದಿಂದ ರಾಷ್ಟ್ರೀಯ ಪ್ರಶಸ್ತಿ ದೊರೆತಿದೆ. ಜು.2ರಂದು ಅಣೆಕಟ್ಟು ಪುನಶ್ಚೇತನ ಮತ್ತು ಅಭಿವೃದ್ಧಿ ಯೋಜನೆಯ ಸಲಹೆಗಾರರು ಹಾಗೂ ರಾಜ್ಯದ ಗೇಟ್ ಸಲಹಾ ಸಮಿತಿ ಸದಸ್ಯರು ಅಣೆಕಟ್ಟೆಯ 136 ಗೇಟುಗಳ ಬದಲಾವಣೆ ಕಾಮಗಾರಿಯ ಸ್ಥಳ ಪರಿವೀಕ್ಷಣೆ ನಡೆಸಿದ್ದು, ಅಣೆಕಟ್ಟೆಯ ಗೋಡೆಯಲ್ಲಿ ಯಾವುದೇ ತರಹದ ಬಿರುಕು ಇಲ್ಲವೆಂದು ತಿಳಿಸಿದ್ದಾರೆಂದುʼ ಸ್ಪಷ್ಟನೆ ನೀಡುವ ಮೂಲಕ ಬಿರುಕು ಬಿಟ್ಟಿದೆ ಎಂಬ ನಾಯಕರ ಹೇಳಿಕೆ ವಿರುದ್ಧ ಕಿಡಿಕಾರಿದ್ದಾರೆ.






