ಕೇಂದ್ರ ಸಚಿವ ಸಂಪುಟ ಪುನರ್ ರಚನೆಯ ಕಸರತ್ತು ಕೊನೆಗೊಂಡಿದೆ. ಈಗ ರಾಜ್ಯಗಳಲ್ಲಿ ಪಕ್ಷದ ಹುದ್ದೆ ಹೊಂದಿದ್ದ ನೂತನ ಸಚಿವರು ತಮ್ಮ ಸ್ಥಾನಗಳಿಗೆ ರಾಜಿನಾಮೆ ನೀಡಬೇಕಾಗಿದೆ. ಒಬ್ಬರಿಗೆ ಒಂದು ಹುದ್ದೆ ಎಂಬ ಬಿಜೆಪಿ ನಿಯಮದ ಪ್ರಕಾರ, ರಾಜ್ಯ ಅಥವಾ ರಾಷ್ಟ್ರ ಮಟ್ಟದಲ್ಲಿ ಪಕ್ಷದೊಳಗೆ ಹುದ್ದೆ ವಹಿಸಿಕೊಂಡವರಿಗೆ ಸಚಿವ ಸ್ಥಾನ ದೊರಕಿದ್ದಲ್ಲಿ ಅವರು ತಮ್ಮ ಪಕ್ಷದ ಹುದ್ದೆಗೆ ರಾಜಿನಾಮೆ ನೀಡಬೇಕಾಗಿದೆ.
ಈ ಲೆಕ್ಕಾಚಾರದ ಪ್ರಕಾರ ತಮಿಳುನಾಡಿನ ಬಿಜೆಪಿ ರಾಜ್ಯಾಧ್ಯಕ್ಷರಾಗಿರುವ ಎಲ್ ಮುರುಗನ್ ಅವರು ತಮ್ಮ ಸ್ಥಾನಕ್ಕೆ ರಾಜಿನಾಮೆ ಸಲ್ಲಿಸಬೇಕಾಗಿದೆ. ಕೇಂದ್ರ ಮಾಹಿತಿ ಮತ್ತು ಪ್ರಸರಣ ಹಾಗೂ ಮೀನುಗಾರಿಕೆ, ಹೈನುಗಾರಿಕೆ ಮತ್ತು ಹಾಲೋತ್ಪನ್ನ ಇಲಾಖೆಯ ರಾಜ್ಯ ಸಚಿವರಾಗಿ ಮುರುಗನ್ ಅವರನ್ನು ನೇಮಕ ಮಾಡಲಾಗಿದೆ. ತಮಿಳುನಾಡಿನಲ್ಲಿ ಬಿಜೆಪಿಯ ನೆಲೆಯನ್ನು ವಿಸ್ತರಿಸುವ ನಿಟ್ಟಿನಲ್ಲಿ ಮುರುಗನ್ ಅವರಿಗೆ ಸಚಿವ ಸ್ಥಾನ ನೀಡಲಾಗಿದೆ.
ಈಗ ತಮಿಳುನಾಡು ಬಿಜೆಪಿಗೆ ಹೊಸ ಸಾರಥಿಯನ್ನು ನೇಮಿಸಬೇಕಾದ ಅಗತ್ಯವಿದ್ದು, ಮಾಜಿ ಐಪಿಎಸ್ ಅಧಿಕಾರಿ ಅಣ್ಣಾಮಲೈ ಅವರ ಹೆಸರು ದಟ್ಟವಾಗಿ ಕೇಳಿ ಬರುತ್ತಿದೆ. ಅಣ್ಣಾಮಲೈ ಅವರನ್ನು ಪಕ್ಷಕ್ಕೆ ಸೇರಿಸುವಲ್ಲಿ ಮುರುಗನ್ ಅವರ ಪಾತ್ರ ಮಹತ್ವದ್ದು. ತಮಿಳುನಾಡು ವಿಧಾನಸಭೆ ಚುನಾವಣೆಗೂ ಮುನ್ನ ಪಕ್ಷಕ್ಕೆ ಸೇರ್ಪಗೊಂಡ ಪ್ರಮುಖರಿಗೆ ಚುನಾವಣೆಗೆ ಸ್ಪರ್ಧಿಸಲು ಟಿಕೆಟ್ ಕೊಡಿಸುವಲ್ಲಿ ಮುರುಗನ್ ಅವರು ಶ್ರಮವಹಿಸಿದ್ದರು. ಈಗ ಪಕ್ಷದ ರಾಜ್ಯಾಧ್ಯಕ್ಷ ಸ್ಥಾನವನ್ನು ಮುಂದುವರೆಸುವವರು ಯಾರು ? ಎಂಬ ಚರ್ಚೆ ರಾಜ್ಯದಲ್ಲಿ ಮುನ್ನೆಲೆಗೆ ಬಂದಿದೆ.
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಅವರ ಕುರಿಚ್ಚಿ ಕ್ಷೇತ್ರದಲ್ಲಿ ಡಿಎಂಕೆ ಅಭ್ಯರ್ಥಿ ಎಲಂಗೊ ಅವರ ವಿರುದ್ದ 24,816 ಮತಗಳ ಬೃಹತ್ ಅಂತರದ ಸೋಲು ಕಂಡಿದ್ದ ಅಣ್ಣಾಮಲೈ ಅವರಿಗೆ ಪಕ್ಷ ಸಂಘಟನೆಯ ಜವಾಬ್ದಾರಿ ನೀಡುವ ಸಾಧ್ಯತೆಗಳಿವೆ. ಈ ಕುರಿತು ಮಾತನಾಡಿರುವ ತಮಿಳುನಾಡು ಬಿಜೆಪಿಯ ನಾಯಕರೊಬ್ಬರು, ಪಕ್ಷದಲ್ಲಿ ಒಬ್ಬರಿಗೆ ಒಂದೇ ಸ್ಥಾನ ಎಂಬ ನಿಯಮದ ಪ್ರಕಾರ ಮುರುಗನ್ ಅವರು ತಮ್ಮ ಸ್ಥಾನವನ್ನು ಬಿಟ್ಟುಕೊಡಬೇಕಾಗಿದೆ. ಮತ್ತೊಬ್ಬ ನಾಯಕ ನಾಗೇಂದ್ರನ್ ಅವರು ಬಿಜೆಪಿ ಶಾಸಕಾಂಗ ಪಕ್ಷದ ನಾಯಕರಾಗಿ ಆಯ್ಕೆಯಾಗಿರುವ ಕಾರಣ ಅವರಿಗೂ ರಾಜ್ಯಾಧ್ಯಕ್ಷ ಸ್ಥಾನ ಕೊಡುವಂತಿಲ್ಲ. ಹೀಗಾಗಿ ರಾಜ್ಯಾಧ್ಯಕ್ಷರನ್ನಾಗಿ ಅಣ್ಣಾಮಲೈ ಅವರನ್ನು ನೇಮಿಸುವ ಸಾಧ್ಯತೆಗಳೇ ಹೆಚ್ಚು ಎಂದಿದ್ದಾರೆ.
ಕರ್ನಾಟಕ ಕೇಡರ್ ನಿಂದ ಐಪಿಎಸ್ ಅಧಿಕಾರಿಯಾಗಿದ್ದ ಅಣ್ಣಾಮಲೈ ಅವರು, ಈಗ ತಮಿಳುನಾಡು ಬಿಜೆಪಿಯ ಮುಖ್ಯಸ್ಥರಾಗುತ್ತಾರೆಯೊ ಇಲ್ಲವೋ ಎಂಬುದು ಪಕ್ಷದ ಹೈಕಮಾಂಡ್ ನಿರ್ಧರಿಸಲಿದೆ. ಹೆಚ್ಚಿನ ಪೈಪೋಟಿಯೂ ಇಲ್ಲದಿರುವುದರಿಂದ, ಇವರ ಆಯ್ಕೆ ಸುಲಭದಲ್ಲಿ ಆಗಬಹುದು ಎಂಬ ಆಲೋಚನೇಯೂ ಇದೆ.