ಭಾರತದಲ್ಲಿ ಹೊಸ ಐಟಿ ನಿಯಮಗಳು ಜಾರಿಗೆ ಬಂದ ನಂತರದ ಮೊದಲ ತಿಂಗಳಲ್ಲಿಯೇ, ಸಾಮಾಜಿಕ ಜಾಲತಾಣಗಳಲ್ಲಿ ಮಹತ್ತರವಾದ ಬದಲಾವಣೆಗಳಾಗಿವೆ. ಮೇ ೧೫ರಿಂದ ಜೂನ್ ೧೫ರವರೆಗೆ ಸುಮಾರು ೩೦ ಮಿಲಿಯನ್ ಫೇಸ್ಬುಕ್ ಪೋಸ್ಟ್ ಗಳನ್ನು ಅಳಿಸಲಾಗಿದೆ. ಐಟಿ ನಿಯಮಗಳ ಹತ್ತು ಕೆಟಗರಿಗಳ ಅಡಿಯಲ್ಲಿ ಬರುವಂತಹ ಪೋಸ್ಟ್ ಗಳನ್ನು ಅಳಿಸಲಾಗಿದೆ ಎಂದು ಫೇಸ್ಬುಕ್ ತನ್ನ ವರದಿಯಲ್ಲಿ ತಿಳಿಸಿದೆ.

ಫೇಸ್ಬುಕ್ ಒಡೆತನದ ಇನ್ಸ್ಟಾಗ್ರಾಮ್ ಕೂಡಾ ಐಟಿ ನಿಯಮಗಳನ್ನು ಪಾಲಿಸಿ ಸುಮಾರು ೨ ಮಿಲಿಯನ್ ಪೋಸ್ಟ್ ಗಳನ್ನು ಡಿಲೀಟ್ ಮಾಡಿದೆ.
ಹೊಸ ನಿಯಮಗಳ ಪ್ರಕಾರ ಐದು ಮಿಲಿಯನ್ ಗಿಂತಲೂ ಹೆಚ್ಚು ಬಳಕೆದಾರರಿರುವ ಡಿಜಿಟಲ್ ವೇದಿಕೆಗಳು ಪ್ರತಿ ತಿಂಗಳು ತಮ್ಮ ವರದಿಯನ್ನು ಸಲ್ಲಿಸಬೇಕಾಗಿದೆ. ತಾವು ಸ್ವೀಕರಿಸಿದ ದೂರುಗಳು ಹಾಗೂ ಅವುಗಳ ಮೇಲೆ ತೆಗೆದುಕೊಳ್ಳಲಾದ ಕ್ರಮಗಳನ್ನು ವಿವರಿಸಬೇಕಿದೆ. ಈ ವಿಚಾರಗಳಿಗೆ ಸಂಬಂಧಿಸಿದ ಅಂಕಿಅಂಶಗಳನ್ನು ಕೂಡಾ ನೀಡಬೇಕಾಗಿದೆ.

ಈಗ ಫೇಸ್ಬುಕ್ ನೀಡಿರುವ ವರದಿಯು ಮಧ್ಯಂತರ ವರದಿಯಾಗಿದ್ದು, ಜುಲೈ ೧೫ರಂದು ಸಮಗ್ರ ವರದಿಯನ್ನು ಸಲ್ಲಿಸಲಿದೆ.
ಗೂಗಲ್ ನೀಡಿರುವ ವರದಿಯಲ್ಲಿ, ಸಂಸ್ಥೆಯು ಸ್ವೀಕರಿಸಿದ ೨೭,೭೬೨ ದೂರುಗಳ ಮೇರೆಗೆ ೫೯,೩೫೦ ಪೋಸ್ಟ್ ಗಳನ್ನು ಗೂಗಲ್ ಮತ್ತು ಯೂಟ್ಯೂಬ್ ನಿಂದ ಅಳಿಸಲಾಗಿದೆ.

ದೇಸಿಯ ಆ್ಯಪ್ ಆಗಿರುವ ‘ಕೂ’ ಕೂಡಾ ತನ್ನ ವರದಿ ಸಲ್ಲಿಸಿದ್ದು, ೫,೫೦೨ ದೂರುಗಳ ಮೇರೆಗೆ ೫೪,೨೩೫ ಪೋಸ್ಟ್ ಗಳನ್ನು ಅಳಿಸಿದೆ.






