ಮೈಸೂರು ಜಿಲ್ಲಾಧಿಕಾರಿ ನಿವಾಸದಲ್ಲಿ ಈಜುಕೊಳ ನಿರ್ಮಾಣದ ಬಳಿಕ ಸಾಕಷ್ಟು ವಿವಾದಕ್ಕೆ ಕಾರಣವಾದ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಅವರನ್ನು ಐಪಿಎಸ್ ಅಧಿಕಾರಿ ಡಿ ರೂಪಾ ಮೌದ್ಗಿಲ್ ಟೀಕಿಸಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯಿಸಿರುವ ರೂಪಾ, ʼಕರೋನ ಹಾಗು ಆರ್ಥಿಕ ವ್ಯವಸ್ಥೆಯಿಂದ ಜನರು ಸಂತ್ರಸ್ತರಾಗಿರುವಾಗ ಜನರ ಹಣವನ್ನು ಬಳಸಿಕೊಂಡು ಬಂಗಲೆಯಲ್ಲಿ ಸ್ವಿಮ್ಮಂಗ್ ಪೂಲ್ ಕಟ್ಟಲು ಮುಂದಾಗಿದ್ದು ರೋಹಿಣಿ ಸಿಂಧೂರಿಯವರ ನೈತಿಕ ಅಧಃಪತನವನ್ನು ತೋರಿಸುತ್ತದೆ, ಅವರು ಪರವಾನಗಿ ಪಡೆದುಕೊಂಡಿದ್ದರೋ ಇಲ್ಲವೋ ಎಂಬುದು ಆಮೇಲಿನ ವಿಚಾರʼ ಎಂದು ಬರೆದುಕೊಂಡಿದ್ದಾರೆ.
ಮೈಸೂರಿನ ಹಿಂದಿನ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿಯವರು ಜಿಲ್ಲಾಧಿಕಾರಿ ನಿವಾಸದ ಆವರಣದಲ್ಲಿ ನಿರ್ಮಿಸಿದ್ದ ಈಜುಕೊಳ ಭಾರೀ ವಿವಾದ ಸೃಷ್ಟಿಸಿತ್ತು. ನಿಯಮ ಉಲ್ಲಂಘನೆ ಮಾಡಿ ಅನುಮತಿ ಪಡೆಯದೇ ರೋಹಿಣಿ ಸಿಂಧೂರಿಯವರು ಸ್ವಹಿತಾಸಕ್ತಿಯಿಂದ ಈಜುಕೊಳ ನಿರ್ಮಿಸಿಕೊಂಡಿದ್ದರು ಎಂದು ಮೈಸೂರು ಪ್ರಾದೇಶಿಕ ಆಯುಕ್ತ ಜಿಸಿ ಪ್ರಕಾಶ್ ಸಲ್ಲಿಸಿದ್ದ ವರದಿಯಲ್ಲಿ ಹೇಳಲಾಗಿದೆ.
ಈ ಈಜುಕೊಳ ನಿರ್ಮಾಣಕ್ಕೆ ತಾಂತ್ರಿಕ ವರ್ಗ ಮತ್ತು ಲೋಕೋಪಯೋಗಿ ಇಲಾಖೆಯಿಂದ ಅನುಮತಿ ಪಡೆದಿರಲಿಲ್ಲ. ಆಡಳಿತಾತ್ಮಕ ಮಂಜೂರಾತಿ ಪಡೆದಿಲ್ಲ ಎಂದು ಪ್ರಾದೇಶಿಕ ಆಯುಕ್ತರು ರಾಜ್ಯ ಸರಕಾರಕ್ಕೆ ತನಿಖಾ ವರದಿ ಸಲ್ಲಿಸಿದ್ದಾರೆ.

ರೂಪಾ vs ರೋಹಿಣಿ; ಪರ-ವಿರೋಧ ಚರ್ಚೆ
ರೋಹಿಣಿ ಸಿಂಧೂರಿಯನ್ನು ಟೀಕಿಸಿರುವ ರೂಪಾ ಪೋಸ್ಟ್‌ನಲ್ಲಿ ಪರ-ವಿರೋಧ ಚರ್ಚೆಗಳಾಗಿವೆ.
ಒಂದು ಕಡೆ ಆಡಳಿತ ಪಕ್ಷದೊಳಗೆ ಹಾಗೂ ವಿರೋಧ ಪಕ್ಷದೊಳಗೆ ರಾಜಕಾರಣಿಗಳ ನಡುವೆ ಜಗಳ ನಡೆಯುತ್ತಿವೆ, ಇನ್ನೊಂದು ಕಡೆ ಅಧಿಕಾರಿಗಳ ನಡುವೆ ಚರ್ಚೆ ನಡೆಯುತ್ತಿದೆ. ಇವರ ನಡುವೆ ಜನರು ಬಡವಾಗುತ್ತಿದ್ದಾರೆ ಎಂಬರ್ಥದಲ್ಲಿ ಚರ್ಚೆಗಳು ನಡೆಯುತ್ತಿವೆ.


ಇನ್ನು ಕೆಲವರು ರೂಪ ಪರವಹಿಸಿ ಮಾತನಾಡಿದರೆ, ಮತ್ತೆ ಕೆಲವರು ರೋಹಿಣಿ ಪರ ವಹಿಸಿದ್ದಾರೆ.










