ಇತ್ತೀಚಿಗಷ್ಟೇ ಭ್ರಷ್ಟಾಚಾರ ಆರೋಪದ ಮೇಲೆ ದೇಶದೆಲ್ಲೆಡೆ ಸುದ್ದಿಯಾಗಿದ್ದ ಕೇರಳ ಬಿಜೆಪಿ ರಾಜ್ಯಾಧ್ಯಕ್ಷ ಸುರೇಂದ್ರ ಅವರಿಗೆ ಮತ್ತೊಂದು ಕಂಟಕ ಎದುರಾಗಿದೆ. ಬಿಜೆಪಿ ಮೈತ್ರಿಕೂಟವನ್ನು ಸೇರಿ ಚುನಾವಣೆಗೆ ಸ್ಪರ್ಧಿಸುವಂತೆ ಬುಡಕಟ್ಟು ಜನಾಂಗದ ಮುಖಂಡರೊಬ್ಬರಿಗೆ ಲಂಚ ನೀಡಿರುವ ಕುರಿತು ಆರೋಪಗಳು ಕೇಳಿ ಬಂದಿವೆ.
ಈ ಕುರಿತಾಗಿ ಈಗಾಗಲೇ ಪ್ರಕರಣ ದಾಖಲಿಸಲಾಗಿದೆ. ಮುಸ್ಲಿಂ ವಿದ್ಯಾರ್ಥಿ ಒಕ್ಕೂಟದ ನಾಯಕರಾಗಿರುವ ಪಿ ಕೆ ನವಾಜ್ ಅವರು ಸ್ಥಳೀಯ ನ್ಯಾಯಾಲಯದಲ್ಲಿ ಮೊಕದ್ದಮೆ ದಾಖಲಿಸಲು ಅನುಮತಿ ಕೋರಿದ್ದರು. ಆಡಿಯೋ ಕ್ಲಿಪ್ ಗಳ ಆಧಾರದ ಮೇಲೆ ಪ್ರಕರಣವನ್ನು ದಾಖಲಿಸಲು ಕೋರ್ಟ್ ಸಮ್ಮತಿಯನ್ನು ಸೂಚಿಸಿತ್ತು.

ಸುರೇಂದ್ರನ್ ಅವರು ಸ್ಥಳಿಯ ಬುಡಕಟ್ಟು ಜನಾಂಗದ ಮುಖಂಡರಾದ ಸಿ ಕೆ ಜಾನು ಅವರಿಗೆ ಬಿಜೆಪಿ ಪರವಾಗಿ ಚುನವಣೆಯಲ್ಲಿ ಸ್ಪರ್ಧಿಸಲು ರೂ. ಹತ್ತು ಲಕ್ಷದಷ್ಟು ಮೊತ್ತವನ್ನು ಲಂಚವಾಗಿ ನೀಡಿದ್ದರು ಎಂದು ಆರೋಪಿಸಲಾಗಿದೆ. ಹಿಂದಿನಂತೆಯೇ ಈ ಬಾರಿಯೂ ಸುರೇಂದ್ರನ್ ಅವರು ಈ ಆರೋಪವನ್ನು ಅಲ್ಲಗೆಳೆದಿದ್ದಾರೆ.
ಈ ಕುರಿತಾಗಿ ಪ್ರತಿಕ್ರಿಯೆ ನೀಡಿರುವ ಮಿಜೊರಾಂ ಮಾಜಿ ರಾಜ್ಯಪಾಲ ಹಾಗೂ ಕೇರಳ ಬಿಜೆಪಿ ಮುಖಂಡ ಕುಮ್ಮನಮ್ ರಾಜಶೇಖರನ್ ಅವರು, ಇದು ಸುರೇಂದ್ರನ್ ಅವರ ಘನತೆಗೆ ಚ್ಯುತಿ ತರಲು ಮಾಡುತ್ತಿರುವ ಸುಳ್ಳು ಆರೋಪಗಳು. ಕಾಂಗ್ರೆಸ್, ಸಿಪಿಎಂ ಮತ್ತು ಮುಸ್ಲಿಂ ಲೀಗ್ ಜತೆ ಸೇರಿ ಈ ಷಡ್ಯಮತ್ರ ರಚಿಸಿವೆ, ಎಂದಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿರುವ ಸಿಪಿಎಂ ರಾಜ್ಯ ಕಾರ್ಯದರ್ಶಿ ವಿಜಯರಾಘವನ್ ಅವರು, ಕೇಂದ್ರದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ ದೇಶದಲ್ಲಿ ಪ್ರಜಾಪ್ರಭುತ್ವ ಮೌಲ್ಯಗಳನ್ನು ಎತ್ತಿಹಿಡಿಯಬೇಕಾದ ಕೆಲಸ ಮಾಡಬೇಕಿದೆ. ಆದರೆ, ಅವರ ಅಕ್ರಮಗಳು ಕೇರಳ ಜನರ ಮುಂದೆ ಜಗಜ್ಜಾಹೀರಾಗಿದೆ, ಎಂದು ಹೇಳಿದ್ದಾರೆ.

ಈ ಹಿಂದೆ ಸುರೇಂದ್ರನ್ ಅವರು ಮಂಜೇಶ್ವರ ಕ್ಷೇತ್ರದಲ್ಲಿ ಸ್ಪರ್ಧಿಸಿದ್ದ ಬಿ ಎಸ್ ಪಿ ಮುಖಂಡ ಕೆ ಸುಂದರ ಅವರು ನಾಮ ಪತ್ರ ಹಿಂಪಡೆಯಲು ಎರಡೂವರೆ ಲಕ್ಷ ಲಂಚ ನೀಡಿದ್ದರು ಎಂಬ ಆರೋಪ ಕೇಳಿ ಬಂದಿತ್ತು.







