ಕೇಂದ್ರ ಸರ್ಕಾರದ ಮಹತ್ವಕಾಂಕ್ಷೆಯ 2020ರ ಹೊಸ ಶಿಕ್ಷಣ ನೀತಿ ಜಾರಿಗೊಳಿಸಲು ಹೊರಟಿದ್ದು ಇದರಲ್ಲಿ ಕನ್ನಡ ಭಾಷೆಯನ್ನು ಸಂಪೂರ್ಣ ಕಡೆಗಣಿಸಲಾಗಿದೆ. ಕೇಂದ್ರ ಸರ್ಕಾರದ ಈ ನಡೆಯಿಂದ ಕನ್ನಡ ಭಾಷೆಗೆ ಕುತ್ತು ಬಂದಿದೆ ಎಂದು ಸಾಹಿತಿ ಬರಗೂರು ರಾಮಚಂದ್ರಪ್ಪ ಸೇರಿದಂತೆ ಹಲವಾರು ಸಾಹಿತಿಗಳು, ಚಲನಚಿತ್ರ ನಟರು, ಪ್ರಾಧ್ಯಾಪಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹೊಸ ಶಿಕ್ಷಣ ನೀತಿ ಇಂಪ್ಲಿಮೆಂಟೇಶನ್ ಮಾಡುವ ಹಿನ್ನೆಲೆಯಲ್ಲಿ ಕರ್ನಾಟಕದಲ್ಲಿ 4 ವರ್ಷಗಳ ಸಾಮಾನ್ಯ ಪದವಿ ಮತ್ತು ಶಿಕ್ಷಕ ಪದವಿ ಕೋರ್ಸುಗಳನ್ನು ರೂಪಿಸಿದ್ದು, ಅದಕ್ಕಾಗಿ ಇಂಪ್ಲಿಮೆಂಟೇಶನ್ ವರ್ಕ್ ಪೊರ್ಸ್ ಅನ್ನು (ಅನುಷ್ಠಾನ ಕಾರ್ಯಪಡೆ) ರಚಿಸಲಾಗಿದೆ.
ಈ ಕುರಿತು ಸಾಹಿತಿ ಬರಗೂರು ರಾಮಚಂದ್ರಪ್ಪನವರು, ಉಪ ಮುಖ್ಯಮಂತ್ರಿ ಹಾಗೂ ಉನ್ನತ ಶಿಕ್ಷಣ ಸಚಿವರಾದ ಅಶ್ವಥನಾರಾಯಣ್ ಅವರಿಗೆ ಪತ್ರ ಬರೆದಿದ್ದು ಅದರಲ್ಲಿ, ಉನ್ನತ ಶಿಕ್ಷಣ ಪಠ್ಯಕ್ರಮ ರಚನೆಗೆ ನೇಮಿಸಲಾಗಿದ್ದ ಕಾರ್ಯಪಡೆ ಉಪ ಸಮಿತಿಯು ಸಲ್ಲಿಸಿರುವ ಪ್ರಸ್ತಾವನೆಯಲ್ಲಿ ಕನ್ನಡವನ್ನೂ ಒಳಗೊಂಡಂತೆ ಎಲ್ಲಾ ಭಾಷಾ ಪಠ್ಯ ವಿಷಯವನ್ನು ಕೇವಲ ಎರಡು ಸೆಮಿಸ್ಟಾರ್‌ಗಳಿಗೆ ಅಂದರೆ ಒಂದೇ ವರ್ಷಕ್ಕೆ ಮಿತಿಗೊಳಿಸಲಾಗಿದೆ. ಇದರ ವಿರುದ್ದ ಹಲವಾರು ಸಾಹಿತಿಗಳು ಉನ್ನತ ಶಿಕ್ಷಣ ಸಚಿವರಿಗೆ ಪತ್ರ ಬರೆದಿದ್ದಾರೆ.
ಮೂರು ವರ್ಷಗಳ ಪದವಿಯಲ್ಲಿ ಮೊದಲ ಎರಡು ವರ್ಷ ಅಂದರೆ ನಾಲ್ಕು ಸೆಮಿಸ್ಟರ್‌ಗಳಲ್ಲಿ ಕನ್ನಡಾದಿಯಾಗಿ ಭಾಷಾ ವಿಷಯ ಬೋಧನೆಗೆ ಅವಕಾಶವಿತ್ತು. ಈಗ ನಾಲ್ಕು ವರ್ಷಗಳ ಪದವಿಯಲ್ಲಿ ಎರಡು ವರ್ಷಗಳ ಭಾಷಾ ಬೋಧನೆಯನ್ನು ಮೂರು ವರ್ಷಗಳಿಗೆ ವಿಸ್ತರಿಸಬೇಕಾಗಿತ್ತು. ಕಡೇ ಪಕ್ಷ ಹಿಂದೆ ಇದ್ದಂತೆ ಎರಡು ವರ್ಷಗಳ ಅವಧಿಯನ್ನಾದರೂ ಉಳಿಸಿಕೊಳ್ಳಬೇಕಿತ್ತು. ಅದರ ಬದಲು ಒಂದು ವರ್ಷಕ್ಕೆ ಮಿತಿಗೊಳಿಸಿರುವುದು ಇದು ಭಾಷಾ ವಿಷಯಗಳಿಗೆ ಅದರಲ್ಲೂ ವಿಶೇಷವಾಗಿ ಕನ್ನಡಕ್ಕೆ ಆಗಿರುವ ಅನ್ಯಾಯ. ಇದು ಖಂಡನೀಯ ಎಂದು ಬರಗೂರು ರಾಮಚಂದ್ರಪ್ಪ ಪತ್ರದಲ್ಲಿ ತಿಳಿಸಿದ್ದಾರೆ.
ಯಾವುದೇ ವಿಶೇಷ ವಿಷಯದಲ್ಲಿ ಪದವಿ ವ್ಯಾಸಂಗ ಮಾಡುವವರಿಗೆ ಕನ್ನಡ ಭಾಷೆ, ಸಾಹಿತ್ಯದ ಸಾಮಾನ್ಯ ಪರಿಚಯ ಕಡ್ಡಾಯವಾಗಬೇಕು. ಇದು ಕೇವಲ ಕನ್ನಡಾಭಿಮಾನದ ಪ್ರಶ್ನೆಯಲ್ಲಿ, ಯಾವುದೇ ವ್ಯಾಸಂಗಗಳಲ್ಲಿ ಸಾಂಸ್ಕೃತಿಕ ಅರಿವು ಮೂಡಿಸಿ ಮಾನವೀಯ ಮೌಲ್ಯಗಳನ್ನು ನೆಲೆಗೊಳಿಸಲು ಕನ್ನಡ ಭಾಷೆ, ಸಾಹಿತ್ಯಗಳ ಸಂಕ್ಷಿಪ್ತ ಸಾಮಾನ್ಯ ಪರಿಚಯವು ಪೂರಕವಾಗುತ್ತದೆ. ಶಿಕ್ಷಣವನ್ನು ಸಾಂಸ್ಕೃತಿಕ ಜನಪರ ಪ್ರಜೆಯ ನೆಲೆಯಲ್ಲೂ ಪರಿಭಾವಿಸಬೇಕಾಗುತ್ತದೆ. ಈ ಹಿನ್ನೆಲೆಯಲ್ಲಿ ಕನ್ನಡ ಪಠ್ಯ ವಿಷಯವನ್ನು ನಾಲ್ಕು ವರ್ಷಗಳ ಪದವಿಯಲ್ಲಿ ಮೂರು ವರ್ಷ ಬೋಧಿಸುವ ತೀರ್ಮಾನ ಕೈಗೊಳ್ಳಬೇಕು. ಒಂದೇ ವರ್ಷಕ್ಕೆ ಮಿತಿಗೊಳಿಸಿದರೆ ಖಂಡಿತ ಸಂಘಟಿತ ಪ್ರತಿರೋಧವನ್ನು ಎದುರಿಸಬೇಕಾಗುತ್ತದೆ ಎಂದು ಅವರು ಎಚ್ಚರಿಕೆ ನೀಡಿದ್ದಾರೆ.
ಈ ಕುರಿತು ಚಿತ್ರನಟ ಚಕ್ರವರ್ತಿ ಚಂದ್ರಚೂಡ್ ಅವರು ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದು ಅವರು, ಕನ್ನಡ ನಮ್ಮ ಜೀವಕೋಶದ ಭಾಷೆ ಯಾವುದೇ ಮಾತೃಭಾಷೆಯು ಶಿಕ್ಷಣದ ಅಡಿಪಾಯವಾಗಬೇಕು.ಅದನ್ನು ಆಳುವ ಸರಕಾರಗಳು ಜಾರಿಗೆ ತರಬೇಕು.ಆಡಳಿತದಲ್ಲಿ ಸಂಪೂರ್ಣ ಕನ್ನಡವನ್ನು ಜಾರಿಗೆ ತರಲಾಗದ ರಾಜಕಾರಣದ ವ್ಯವಸ್ಥೆ ತನ್ನ ರಾಜಕೀಯ ಕುತಂತ್ರಗಳಿಗಾಗಿ ಕನ್ನಡವನ್ನೇ ಕಡೆಗಣಿಸುತ್ತಿರುವುದು ಹೊಸ ಶಿಕ್ಷಣ ನೀತಿಯಲ್ಲೂ ಕಾಣುತ್ತಿದೆ. ಯಾವುದೇ ಹೇರಿಕೆ ಕನ್ನಡವನ್ನು ಕಡೆಗಣಿಸದು ಎಂದು ಹೇಳಿದ್ದಾರೆ.
ಪ್ರಾಧ್ಯಾಪಕ ಹುಲಿಕುಂಟೆ ಮೂರ್ತಿಯವರು ಈ ಕುರಿತು ಅಭಿಪ್ರಾಯ ಹಂಚಿಕೊಂಡ ಅವರು, ನೂತನ ಶಿಕ್ಷಣ ನೀತಿಯ ಪ್ರಕಾರ ನಾಲ್ಕು ವರ್ಷಗಳ ಪದವಿ ಶಿಕ್ಷಣದಲ್ಲಿ ಕನ್ನಡವನ್ನು ಒಂದು ವರ್ಷ ಮಾತ್ರ ಪ್ರಥಮ ಮತ್ತು ದ್ವಿತೀಯ ಭಾಷೆಯಾಗಿ ಕಲಿಯಬಹುದು ಎಂಬ ಅಂಶ ಇರುವುದು ಆತಂಕದ ವಿಷಯ. ಯಾವುದೇ ದೇಶದ ಶಿಕ್ಷಣ ಸ್ಥಳೀಯ ಭಾಷೆಗಳನ್ನು ಕಡೆಗಣಿಸಿ ಏನನ್ನೂ ಸಾಧಿಸದು. ಹಾಗೂ ಉನ್ನತ ಶಿಕ್ಷಣವು ಸ್ಥಳೀಯ ಭಾಷೆಗಳಿಗೆ ಹೆಚ್ಚಿನ ಆದ್ಯತೆ ಕೊಡಬೇಕಾದ ಕಾಲಘಟ್ಟದಲ್ಲಿ ಕೇಂದ್ರ ಸರ್ಕಾರದ ಈ ನಿರ್ಧಾರವು ಅವೈಜ್ಞಾನಿಕವಾದುದಾಗಿದೆ. ಇದು ನೇರವಾಗಿ ಪ್ರಾದೇಶಿಕ ಭಾಷೆ ಹಾಗೂ ಆಮೂಲಕ ಪ್ರಾದೇಶಿಕ ಸಂಸ್ಕೃತಿಯ ಕೊಲೆಯೇ ಆಗಿದೆ. ನಾಲ್ಕು ವರ್ಷಗಳ ಪದವಿ ಶಿಕ್ಷಣವನ್ನು ನೀಡುವುದಾದರೆ ಮೂರು ವರ್ಷಗಳ ಕಾಲ ಕನ್ನಡವನ್ನು ಒಂದು ಭಾಷೆಯಾಗಿ ಕಲಿಸುವ ಅವಕಾಶವಿರಬೇಕು ಎಂದು ಹೇಳಿದ್ದಾರೆ.