ನಟ ಚೇತನ್ ಫೇಸ್ ಬುಕ್ ನಲ್ಲಿ ಮಾತನಾಡಿರುವ ವಿಡಿಯೋ ಮತ್ತು ಬರವಣಿಗೆಯಲ್ಲಿ ಬ್ರಾಹ್ಮಣರ ಅವಹೇಳನ ಮಾಡಿದ್ದಾರೆ ಎಂದು ದೂರು ದಾಖಲಾಗಿದೆ. ಚೇತನ್ ಎತ್ತಿರುವ ಆಕ್ಷೇಪಗಳನ್ನು ಸಕಾರಾತ್ಮಕವಾಗಿ ತೆಗೆದುಕೊಂಡರೆ ಬ್ರಾಹ್ಮಣ ಸಮುದಾಯದ ಸುಧಾರಣೆಗೆ ಸಹಕಾರಿಯಾದೀತು. ಸಂವಿಧಾನ ಬದ್ಧ ಆಧುನಿಕ ಸಮಾಜಕ್ಕೆ ತೆರೆದುಕೊಳ್ಳುತ್ತಿರುವ ಬ್ರಾಹ್ಮಣ ಸಮುದಾಯದ ಅಧಿಕೃತ ಸಂಘಟನೆಗಳ್ಯಾವುವೂ ಕೂಡಾ ಚೇತನ್ ವಿರುದ್ದ ಪ್ರತಿಭಟನೆಯನ್ನೂ ದಾಖಲಿಸಿಲ್ಲ, ದೂರನ್ನೂ ಕೊಟ್ಟಿಲ್ಲ. ಹಾಗಾದರೆ ಚೇತನ್ ಬೆನ್ನು ಬಿದ್ದಿರುವವರು ಯಾರು ? ಚೇತನ್ ವಿರುದ್ದ ಹೇಳಿಕೆ ಕೊಟ್ಟವರ ಹಿನ್ನಲೆಯೇನು ಎಂಬುದನ್ನು ಗಮನಿಸಬೇಕಾಗುತ್ತದೆ.


ಚೇತನ್ ಬ್ರಾಹ್ಮಣ್ಯದ ಅಮಾನವೀಯತೆಗಳ ಬಗ್ಗೆ ಮಾತಾಡಿ ವಿಡಿಯೋ ಹಾಕುತ್ತಿದ್ದಂತೆ ಜೂನ್ ಐದರಂದು ಜೋತಿಷಿಯೊಬ್ಬರು “**ನಂದ ಟಿವಿ” ಎಂಬ ಫೇಸ್ ಬುಕ್ ಅಕೌಂಟ್ ನಲ್ಲಿ ಚೇತನ್ ವಿರುದ್ದ ಆಕ್ರೋಶ ವ್ಯಕ್ತಪಡಿಸುತ್ತಾರೆ. ಈ ಅಕೌಂಟ್ ನಲ್ಲಿ ಮಾತನಾಡುವ ಜೋತಿಷಿ ಇತ್ತೀಚೆಗೆ ಉದ್ಭವಗೊಂಡ ಗುರೂಜಿಯಾಗಿದ್ದು ಶೃಂಗೇರಿ ಶ್ರೀಗಳ ವೇಷಭೂಷಣವನ್ನು ಧರಿಸಿಕೊಂಡು ಜನರನ್ನು ಯಾಮಾರಿಸುತ್ತಾರೆ. ಈ ಗುರೂಜಿಗೂ ನೈಜ ಬ್ರಾಹ್ಮಣರಿಗೂ ಸಂಬಂಧವೇ ಇಲ್ಲ. ಸಾಮಾಜಿಕ ಜಾಲತಾಣಗಳಲ್ಲಿ ಬೇಕಾಬಿಟ್ಟಿ ಜೋತಿಷ್ಯ ಹೇಳುವ ಇವರ ಬಗ್ಗೆಯೇ ಶೃಂಗೇರಿಯ ನಿಜವಾದ ಭಕ್ತರಿಗೆ ಆಕ್ರೋಶ ಇದೆ.
ಇದಾದ ಬಳಿಕ ಜೂನ್ 6 ರಂದು ಚೇತನ್ ಮಾತುಗಳ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿ, “ಸೌಭಾಗ್ಯ” ಎಂಬ ಫೇಸ್ ಬುಕ್ ಅಕೌಂಟ್ ನಲ್ಲಿ ಜೋತಿಷಿಯೊಬ್ಬರು ವಿಡಿಯೋ ಮಾಡುತ್ತಾರೆ. ಚೇತನ್ ಮಾತನಾಡಿರುವ ವಿಡಿಯೋವನ್ನು ಡೌನ್ ಲೋಡ್ ಮಾಡಿ ಇದೇ ಜೋತಿಷಿ ಎಡಿಟ್ ಮಾಡಿದ್ದಾರೆ. ಚೇತನ್ ಹೇಳಿರುವ ಡಾ ಬಿ ಆರ್ ಅಂಬೇಡ್ಕರ್ ಹೆಸರುಗಳನ್ನು ಕಟ್ ಮಾಡಿ ಎಡಿಟೆಡ್ ವಿಡಿಯೋದಲ್ಲಿ ಬೇಕಾದಂತೆ ತಿರುಚಿ ಅದಕ್ಕೆ ಅವರ ಆಡಿಯೋವನ್ನು ಜೋಡಣೆ ಮಾಡಲಾಗಿದೆ.
ಚೇತನ್ ವಿಡಿಯೋವನ್ನು ತಿರುಚಿ ಎಡಿಟ್ ಮಾಡಿದ ಜೋತಿಷಿ ಆ ಬಳಿಕ ಬ್ರಾಹ್ಮಣರ ಯುವ ವೇದಿಕೆಯೊಂದನ್ನು ಬಳಸಿಕೊಂಡು ದೂರು ಚೇತನ್ ವಿರುದ್ದ ದೂರು ನೀಡಲು ವೇದಿಕೆ ಸಿದ್ದಗೊಳಿಸುತ್ತಾರೆ. ಆ ಜೋತಿಷಿಯ ದೂರವಾಣಿ ಸಂಖ್ಯೆ *42068 ಎಂಬ ಮೊಬೈಲ್ ಸಂಖ್ಯೆಯಿಂದ ಎಲೆಕ್ಟ್ರಾನಿಕ್ ಮಾಧ್ಯಮಗಳ ಪತ್ರಕರ್ತರಿಗೆ ದೂರಿನ ಬಗ್ಗೆ ಮೆಸೇಜ್ ಹಾಕಲಾಗುತ್ತದೆ.
ಜೋತಿಷಿಯ *42068 ಮೊಬೈಲ್ ನಂಬರ್ ನಿಂದ ಪತ್ರಕರ್ತರಿಗೆ ಬಂದ ಮೆಸೇಜ್ ಹೀಗಿರುತ್ತದೆ. “ಮಹಾ ಗಣೇಶ ಎಲ್ಲರಿಗೂ ನಮಸ್ಕಾರ ಶುಭೋದಯ ತಮ್ಮೆಲ್ಲರ ಮಾರ್ಗದರ್ಶನದಂತೆ ಇವತ್ತು ಬೆಳಿಗ್ಗೆ 10 ಗಂಟೆ 30 ನಿಮಿಷಕ್ಕೆ ಸೌತ್ ಎಂಡ್ ಸರ್ಕಲ್ ಬಳಿಯಿರುವ ಡಿಸಿಪಿ ಕಚೇರಿ ಬಳಿ ಎಲ್ಲರೂ ಆಗಮಿಸಬೇಕಾಗಿ ವಿನಂತಿಸಿಕೊಳ್ಳುತ್ತೇನೆ. ದಯವಿಟ್ಟು ಎಲ್ಲರೂ ತಮ್ಮ ಸಹಮತವನ್ನು ನಮ್ಮೆಲ್ಲರ ಧರ್ಮಯುದ್ಧ ತಂಡದಲ್ಲಿ ವ್ಯಕ್ತಪಡಿಸಬೇಕಾಗಿ ಬೇಡಿಕೊಳ್ಳುತ್ತೇನೆ. ಮಾಸ್ಕ್ ಮತ್ತು ಸಾಮಾಜಿಕ ಅಂತರ ಬಹಳ ಮುಖ್ಯವಾದ ವಿಷಯ” ಎಂದು ಮೆಸೇಜ್ ಹಾಕಿದ್ದಾರೆ.

ಅಂದರೆ ಚೇತನ್ ಮಾತನಾಡಿರುವ ವಿಡಿಯೋವನ್ನು ಎಡಿಟ್ ಮಾಡಿ, ಬ್ರಾಹ್ಮಣರಿಗೆ ಅವಹೇಳನ ಮಾಡಿದ್ದೇನೆ ಎಂದು ಸುಳ್ಳು ವಿಡಿಯೋ ತಾನೇ ಸೃಷ್ಟಿಸಿ ತಾನೇ ದೂರು ನೀಡಿರುವುದು ಸ್ಪಷ್ಟವಾಗಿದೆ. ಪೊಲೀಸರು ಈ ನಿಟ್ಟಿನಲ್ಲಿ ತನಿಖೆ ನಡೆಸಬೇಕಿದೆ.
ಚೇತನ್ ಬ್ರಾಹ್ಮಣ್ಯದ ವಿರುದ್ದ ಮಾತನಾಡಿದ್ದು ಇದೇ ಮೊದಲಲ್ಲ. ಲಿಂಗಾಯತ ಪ್ರತ್ಯೇಕ ಧರ್ಮವಾಗಬೇಕು ಎಂಬ ಕರ್ನಾಟಕದ ಅತೀ ದೊಡ್ಡ ಚಳವಳಿಯಲ್ಲೂ ಚೇತನ್ ಪ್ರಮುಖ ಪಾತ್ರ ವಹಿಸಿದ್ದರು. ಆಗ ಚೇತನ್ ಭಾಷಣಗಳಲ್ಲಿ ಬ್ರಾಹ್ಮಣ್ಯದ ಉಲ್ಲೇಖ ಹಲವು ಬಾರಿ ಆಗಿದೆ. ಮೂಢನಂಬಿಕೆ ನಿಷೇಧ ಕಾಯ್ದೆ ಜಾರಿಯಾಗಬೇಕು ಎಂಬ ಚಳವಳಿಯಲ್ಲೂ ಚೇತನ್ ಸಕ್ರೀಯವಾಗಿದ್ದರು. ಆಗಲೂ ಚೇತನ್ ಬ್ರಾಹ್ಮಣ್ಯದ ಬಗ್ಗೆಯೇ ಒತ್ತು ನೀಡಿದ್ದರು. ಇವ್ಯಾವ ಭಾಷಣಗಳೂ ಬ್ರಾಹ್ಮಣ ಸಮುದಾಯಕ್ಕೆ ನೋವು ತಂದಿಲ್ಲ. ಬ್ರಾಹ್ಮಣರ ಹಳೇ ಆಚರಣೆಗಳನ್ನು ಈಗಿನ ಕಾಲಮಾನಕ್ಕೆ ಬದಲಿಸಬೇಕು, ಯಾವುದೇ ಆಚರಣೆಗಳು ಅಸಮಾನತೆಯನ್ನು ಪ್ರತಿಪಾಧಿಸಬಾರದು ಎಂಬುದಕ್ಕೆ ಬ್ರಾಹ್ಮಣ ಸಮುದಾಯಗಳ ಆಕ್ಷೇಪ ಇರಲು ಸಾಧ್ಯವೇ ಇಲ್ಲ. ಈ ಬಾರಿ ಚೇತನ್ ಮಾತನಾಡಿದಾಗ ಬ್ರಾಹ್ಮಣರ ಸಮುದಾಯ ಆಕ್ಷೇಪ ವ್ಯಕ್ತಪಡಿಸಿಲ್ಲ, ಹೇಳಿಕೆ ನೀಡಿಲ್ಲ.

ಚೇತನ್ ವಿರುದ್ದ ಹೇಳಿಕೆ ನೀಡಿದ್ದು ನಕಲಿ ಜೋತಿಷಿಗಳು ಮಾತ್ರ. ಯಾವ ಅಧ್ಯಯನವನ್ನೂ ಮಾಡದೇ, ಯಾವ ಮಠಗಳ ಪಾಠ ಶಾಲೆಗೂ ಸೇರದೆ ಪೌಂಡ್ಸ್ ಪೌಡರ್ ಅನ್ನು ವಿಭೂತಿಯಂತೆ ಹಚ್ಚಿ ಜನರನ್ನು ಯಾಮಾರಿಸುವ ಜೋತಿಷಿಗಳು ಚೇತನ್ ವಿರುದ್ದದ ದೂರಿನ ಹಿಂದೆ ಇದ್ದಾರೆ ಎಂಬುದಂತೂ ಸ್ಪಷ್ಟ. ಅದಕ್ಕೆ ಕಾರಣ ಚೇತನ್ ಮಾಡಿರುವ ಮೂಢನಂಬಿಕೆ ನಿಷೇಧ ಚಳವಳಿಗಳು.
ಚೇತನ್ ಕಳೆದ ಹಲವು ವರ್ಷಗಳಿಂದ ಕನ್ನಡ ನಾಡಿನಲ್ಲಿ ಸಾಮಾಜಿಕ, ಸಾಂಸ್ಕೃತಿಕ ಚಳುವಳಿಯಲ್ಲಿ ತೊಡಗಿಸಿಕೊಂಡಿದ್ದಾರೆ. ಬಸವಣ್ಣ, ಡಾ ಬಿ ಆರ್ ಅಂಬೇಡ್ಕರ್, ಪೆರಿಯಾರ್ ಅವರ ಆಶಯ ಮತ್ತು ಮಾರ್ಗದರ್ಶನದಂತೆ ಸಾಮಾಜಿಕ ಚಳುವಳಿ ನಡೆಸುತ್ತಿದ್ದಾರೆ. ಇದು ಯಾವ ಬ್ರಾಹ್ಮಣ್ಯದಲ್ಲೇ ಹೊಟ್ಟೆಹೊರೆಯುವ ನಕಲಿ ಜೋತಿಷಿಗಳ ಎದೆ ನಡುಕಕ್ಕೆ ಕಾರಣವಾಗಿದೆಯೇ ಹೊರತು ಇದಕ್ಕೂ ಬ್ರಾಹ್ಮಣ ಸಮುದಾಯಕ್ಕೂ ಸಂಬಂಧವೇ ಇಲ್ಲ.