ಕೊಡಗು ಜಿಲ್ಲೆಯ ವೀರಾಜಪೇಟೆ ಪೋಲೀಸರು ತಮ್ಮ ಕ್ರೌರ್ಯವನ್ನು ಮೆರೆದು ರಾಜ್ಯಾದ್ಯಂತ ಸುದ್ದಿ ಆಗಿದ್ದಾರೆ. ನಮ್ಮ ದೇಶದಲ್ಲಿ ಪೋಲೀಸರು ಆರೋಪಿಗಳ ಮೇಲೆ ಹಲ್ಲೆ ನಡೆಸುವುದು ಸಾಮಾನ್ಯ ಸಂಗತಿ ಎಂಬಂತೆ ಪರಿಗಣಿಸಲಾಗಿದೆ. ಇತ್ತಿಚೆಗೆ ಕಳೆದ ವರ್ಷ ತಮಿಳುನಾಡಿನಲ್ಲಿ ಲಾಕ್‌ಡೌನ್ ಸಮಯದಲ್ಲಿ ಅಂಗಡಿ ತೆರೆಯುವ ವಿಚಾರದಲ್ಲಿ ಮಾತಿನ ಚಕಮಕಿ ನಡೆದು ಪೋಲೀಸರು ತಂದೆ ಮಗ ಇಬ್ಬರನ್ನೂ ಠಾಣೆಗೆ ಕರೆದೊಯ್ದು ಹಿಂಸೆ ನೀಡಿ ಕೊಲೆ ಮಾಡಿದರೆಂದು ಆರೋಪಿಸಲಾಗಿತ್ತು. ಇದಕ್ಕೆ ದೇಶಾದ್ಯಂತ ದೊಡ್ಡ ಮಟ್ಟದ ಖಂಡನೆ ವ್ಯಕ್ತವಾಗಿತ್ತು. ಇದೀಗ ವೀರಾಜಪೇಟೆ ಪೋಲೀಸರು ಮಾಡಿರುವ ಅಮಾನವೀಯ ಕೃತ್ಯಕ್ಕೆ ಅದರಲ್ಲೂ ಮಾನಸಿಕ ಅಸ್ವಸ್ಥನ ಮೇಲಿನ ಮಾರಣಾಂತಿಕ ಹಲ್ಲೆಗೆ ರಾಜ್ಯಾದ್ಯಂತ ಖಂಡನೆ ವ್ಯಕ್ತವಾಗುತ್ತಿದೆ.
ವಿರಾಜಪೇಟೆ ನಗರ ಪೋಲೀಸರು ಇಲ್ಲಿನ ಚಿಕ್ಕಪೇಟೆಯ ನಿವಾಸಿ ಮೆಟ್ಟಿಲ್ಡಾ ಡಿಸೋಜಾ ಅವರ ಮಗ ಮಾನಸಿಕ ಅಸ್ವಸ್ಥರಾಗಿದ್ದ ರಾಯ್ ಡಿಸೋಜಾ (50) ಪೊಲೀಸರ ಮೇಲೆ ಹಲ್ಲೆಗೆ ಮುಂದಾದ ಎಂದು ಪೊಲೀಸರು ಮನಸೋ ಇಚ್ಛೆ ಥಳಿಸಿದ ಪರಿಣಾಮ ಆತನ ಪ್ರಾಣಬಿಟ್ಟಿದ್ದಾನೆ.

ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದ ರಾಯ್ ಡಿಸೋಜಾ ಜೂ.9ರಂದು ತಡರಾತ್ರಿ ಮನೆಯಿಂದ ಹೊರಗೆ ಹೋಗಿ ಓಡಾಡುತ್ತಿದ್ದರಂತೆ. ಈ ವೇಳೆ ಯಾವ ಕಾರಣಕ್ಕೆ ರಾಯ್ ಡಿಸೋಜಾನನ್ನು ಪೊಲೀಸರು ಠಾಣೆಗೆ ಕರೆದೊಯ್ದು ಮೃಗೀಯವಾಗಿ ವರ್ತಿಸಿ ಮನಸ್ಸೋ ಇಚ್ಛೆ ಥಳಿಸಿದ್ದರೋ ಗೊತ್ತಿಲ್ಲ. ಹಾಗೆ ಥಳಿಸಿದ್ದ ಪೊಲೀಸರು, ಅರೆಪ್ರಜ್ಞಾ ಸ್ಥಿತಿಯಲ್ಲಿದ್ದ ರಾಯ್ ಡಿಸೋಜಾನನ್ನು ಠಾಣೆಯ ಕಾಂಪೌಂಡ್ ಒಳಗೆ ಎಸೆದಿದ್ದರು ಎಂದು ಮೃತ ರಾಯ್ ಡಿಸೋಜಾ ಅವರ ತಾಯಿ ಮೆಟ್ಟಿಲ್ಡಾ ಡಿಸೋಜಾ ತಮ್ಮ ಮಗನ ಸ್ಥಿತಿಯನ್ನು ಗದ್ಗದಿತರಾಗಿ ವಿವರಿಸಿದ್ದಾರೆ.
ಮಲಗಿದ್ದ ಮಗ, ಮಧ್ಯರಾತ್ರಿ ಎಚ್ಚರವಾದಾಗ ಮನೆಯಲ್ಲಿರಲಿಲ್ಲ, ನಾನು ಹುಡುಕಾಡುತ್ತಿದ್ದೆ. ಬೆಳಗಿನಜಾವ ಪೊಲೀಸರು ಮನೆ ಬಳಿಗೆ ಬಂದು, ಸ್ಟೇಷನ್ ಗೆ ಬರುವಂತೆ ಹೇಳಿದರು. ಹೋಗಿ ನೋಡಿದಾಗ ನನ್ನ ಮಗನ ಮೈ ಮೂಳೆ ಮುರಿಯುವಂತೆ ಹೊಡೆದು ಸ್ಟೇಷನ್ ಕಾಂಪೌಂಡ್ ಒಳಗೆ ಹಾಕಿದ್ದರು. ತಕ್ಷಣವೇ ಅಲ್ಲಿಯ ಖಾಸಗಿ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಿದೆ. ಆದರೆ ಡಾಕ್ಟರ್ ಮಗನ ಸ್ಥಿತಿ ಗಂಭೀರವಾಗಿದ್ದು, ಜಿಲ್ಲಾಸ್ಪತ್ರೆಗೆ ಕರೆದೊಯ್ಯುವಂತೆ ಹೇಳಿದರು. ಬಳಿಕ ಮಡಿಕೇರಿಗೆ ಬಂದು ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಿದೆವು. ಆದರೆ ಕಿಡ್ನಿ ಕೂಡ ಹೋಗಿದ್ದರಿಂದ ನನ್ನ ಮಗ ಬದುಕುಳಿಯಲಿಲ್ಲ ಎಂದು ಕರುಳ ಕುಡಿಯನ್ನು ಕಳೆದುಕೊಂಡ ತಾಯಿ ಕಣ್ಣೀರಿಟ್ಟಿದ್ದಾರೆ.

ಮಡಿಕೇರಿ ಆಸ್ಪತ್ರೆಗೆ ಕರೆದೊಯ್ಯುವುದಕ್ಕೂ ಮುನ್ನವೇ ವಿರಾಜಪೇಟೆ ಪೊಲೀಸರು ಮೃತ ರಾಯ್ ಡಿಸೋಜಾ ಅವರ ತಾಯಿಗೆ ಬೆದರಿಕೆ ಹಾಕಿದ್ದು, ನಾವು ಹೊಡೆದಿದ್ದು ಎಂದು ಹೇಳಿದರೆ ಅಥವಾ ದೂರು ನೀಡಿದರೆ ನಿಮಗೆ ತೊಂದರೆಯಾಗುತ್ತದೆ. ಬದಲಿಗೆ ನಾವೇ ಆತನನ್ನು ಮಂಗಳೂರು ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸುವುದಾಗಿಯೂ ಧಮಕಿ ಹಾಕಿದ್ದರಂತೆ.
ಇತ್ತ ಮಡಿಕೇರಿಯ ಅಶ್ವಿನಿ ಆಸ್ಪತ್ರೆಯಲ್ಲಿ ರಾಯ್ ಡಿಸೋಜಾ ಅವರ ಸ್ಥಿತಿ ವಿಷಮಿಸುತಿದ್ದಂತೆ ಪೊಲೀಸರು ತಮ್ಮ ಹಲ್ಲೆಯನ್ನು ಮುಚ್ಚಿ ಹಾಕಲು ಪ್ಲಾನ್‌ಮಾಡಿದ್ದಾರೆ. ಅದರಂತೆ ಜೂ.10ರಂದು ಮಧ್ಯಾಹ್ನ 1.30ಕ್ಕೆ ರಾಯ್ ಡಿಸೋಜಾ, ಕರ್ತವ್ಯದಲ್ಲಿದ್ದ ಸಂಗಮೇಶ್ ಎಂಬ ಪೊಲೀಸ್ ಪೇದೆ ಮೇಲೆ ಹಲ್ಲೆ ಮಾಡಿದ್ದಾನೆ ಎಂದು ದೂರು ದಾಖಲಿಸಿಕೊಂಡಿದ್ದಾರೆ.
ಮಡಿಕೇರಿಯ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ರಾಯ್ ಡಿಸೋಜಾ ಚಿಕಿತ್ಸೆ ಫಲಿಸದೆ ಶನಿವಾರ ಬೆಳಗ್ಗೆ ಸಾವನ್ನಪ್ಪಿದ್ದಾರೆ. ರಾಯ್ ಡಿಸೋಜಾ ಸಾವನ್ನಪ್ಪುತ್ತಿದ್ದಂತೆ ಕ್ರಿಶ್ಚಿಯನ್ ಸಮುದಾಯದ ಮುಖಂಡರು ವಿರಾಜಪೇಟೆಯಲ್ಲಿ ಪ್ರತಿಭಟನೆ ನಡೆಸಲು ಮುಂದಾಗಿದ್ದಾರೆ. ಠಾಣೆ ಬಳಿಗೆ ಹೋಗುತ್ತಿದ್ದ ನೂರಾರು ಜನರನ್ನು ಮಾರ್ಗ ಮಧ್ಯದಲ್ಲಿಯೇ ಪೊಲೀಸರು ತಡೆದಿದ್ದಾರೆ. ಪ್ರತಿಭಟನೆಗೆ ತೆರಳಿದ್ದ ನೂರಾರು ಜನರು ಅಲ್ಲಿಯೇ ಪೊಲೀಸರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪೊಲೀಸರು ಪ್ರತಿಭಟನೆಗೆ ಅವಕಾಶ ನೀಡದೆ ಅಲ್ಲಿಂದ ವಾಪಸ್ ಕಳುಹಿಸಿದ್ದಾರೆ. ಇತ್ತ ಮಡಿಕೇರಿಯಲ್ಲಿ ಮೃತ ರಾಯ್ ಡಿಸೋಜಾ ಅವರ ತಾಯಿ ಮೆಟ್ಟಿಲ್ಡಾ ಡಿಸೋಜಾ ವಿರಾಜಪೇಟೆ ಪೊಲೀಸರ ವಿರುದ್ಧ ಎಸ್‍ಪಿ ಕ್ಷಮಾ ಮಿಶ್ರಾ ಅವರ ಬಳಿ ದೂರು ನೀಡಿದ್ದಾರೆ. ಈ ಕುರಿತು ಪ್ರತಿಕ್ರಿಯಿಸಿರುವ ಎಸ್‍ಪಿ ಕ್ಷಮಾ ಮಿಶ್ರಾ, ಈ ಕುರಿತು ವಿಚಾರಣೆ ಮಾಡಲಾಗುವುದು. ಯಾರೇ ತಪ್ಪು ಮಾಡಿದ್ದರೂ ಕಾನೂನಿನ ರೀತಿ ಕ್ರಮ ಕೈಗೊಳ್ಳಲಾಗುವುದು ಎಂದಿದ್ದಾರೆ.
ಜಿಲ್ಲಾದ್ಯಂತ ಜನರ ಖಂಡನೆ ಹೆಚ್ಚಾಗುತಿದ್ದಂತೆ ಮೈಸೂರಿನ ದಕ್ಷಿಣ ವಲಯ ಐಜಿಪಿ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದ್ದಾರೆ. ತಪ್ಪಿತಸ್ಥ ಹೆಡ್ ಕಾನ್‍ಸ್ಟೇಬಲ್ ಸೇರಿ ಎಂಟು ಪೊಲೀಸರನ್ನು ಸ್ಥಳದಲ್ಲೇ ಅಮಾನತುಗೊಳಿಸಿದ್ದಾರೆ. ಪ್ರಕರಣವನ್ನು ಸಿಐಡಿಗೆ ವಹಿಸಲಾಗುವುದು ಎಂದು ಪ್ರವೀಣ್ ಪವಾರ್ ತಿಳಿಸಿದ್ದಾರೆ.

ಶನಿವಾರ ಪೊಲೀಸ್ ಠಾಣೆಗೆ ಭೇಟಿ ನೀಡಿದ ಸಂದರ್ಭ ಘಟನೆ ನಡೆದ ಸ್ಥಳಕ್ಕೂ ಭೇಟಿ ನೀಡಿ ಪರಿಶೀಲಿಸಿದರು. ಬಳಿಕ ಮಾಧ್ಯಮದವರಿಗೆ ಮಾಹಿತಿ ನೀಡಿದ ಪ್ರವೀಣ್ ಪವಾರ್, ಪೊಲೀಸರ ಹಲ್ಲೆಯಿಂದ ರಾಯ್ ಡಿಸೋಜಾ ಮೃತ ಪಟ್ಟಿದ್ದಾರೆ ಎಂದು ಕುಟುಂಬಸ್ಥರು ಆರೋಪಿಸಿದ್ದು, ಅವರ ಸಹೋದರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ದೂರು ಸಲ್ಲಿಸಿದ್ದಾರೆ. ದೂರು ಸ್ವೀಕರಿಸಿ, ಠಾಣೆಯ ಸಿಬ್ಬಂದಿ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಪ್ರಾಥಮಿಕ ತನಿಖೆ ನಡೆಸಿದ ವಿರಾಜಪೇಟೆ ಡಿವೈಎಸ್ಪಿ ಜಯ ಕುಮಾರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ನೀಡಿದ ವರದಿಯ ಆಧಾರದ ಮೇಲೆ 8 ಮಂದಿ ಪೊಲೀಸ್ ಸಿಬ್ಬಂದಿಯನ್ನು ಅಮಾನತು ಮಾಡಲಾಗಿದೆ. ಪ್ರಕರಣವನ್ನು ಸಿಐಡಿಗೆ ಹಸ್ತಾಂತರಿಸಲಾಗುವುದು ಎಂದರು.
ವಿರಾಜಪೇಟೆಯ ಸಂತ ಅನ್ನಮ್ಮ ದೇವಾಲಯದ ಪ್ರಧಾನ ಧರ್ಮಗುರು ಮದಲೈ ಮುತ್ತು ಮಾತನಾಡಿ, ಐಜಿಪಿ ಹಾಗೂ ಎಸ್‍ಪಿ ನಿಷ್ಪಕ್ಷಪಾತ ತನಿಖೆ ನಡೆಸುವ ಭರವಸೆ ನೀಡಿದ್ದಾರೆ ಎಂದರು. ಮಾನಸಿಕ ಅಸ್ವಸ್ಥ ಎಂಬುದನ್ನೂ ಪರಿಗಣಿಸದೆ ಮಾರಣಾಂತಿಕ ಹಲ್ಲೆ ನಡೆಸಿರುವ ಪೋಲೀಸರ ವರ್ತನೆಗೆ ಕಾಂಗ್ರೆಸ್, ಎಸ್‌ಡಿಪಿಐ ಮತ್ತು ಜೆಡಿಎಸ್‌ಪಕ್ಷಗಳಿಂದ ತೀವ್ರ ಖಂಡನೆ ವ್ಯಕ್ತವಾಗಿದೆ. ಪೋಲೀಸರನ್ನು ಬಂಧಿಸುವಂತೆ ಒತ್ತಾಯಿಸಲಾಗುತ್ತಿದೆ. ಬಂಧನವಾಗದಿದ್ದರೆ ಉಗ್ರ ಪ್ರತಿಭಟನೆ ಮಾಡುವುದಾಗಿ ಸ್ಥಳೀಯರು ಎಚ್ಚರಿಸಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿರುವ ವಿರಾಜಪೇಟೆ ಶಾಸಕ ಕೆ.ಜಿ.ಬೋಪಯ್ಯ ಆತ ಮಾನಸಿಕ ಅಸ್ವಸ್ಥ ಎಂದು ಪೊಲೀಸರೇ ಹೇಳಿದ್ದಾರೆ. ಮಾನಸಿಕ ಅಸ್ವಸ್ಥ ಎಂದ ಮೇಲೆ ಪೊಲೀಸರ ಮೇಲೆ ಹಲ್ಲೆಗೆ ಮುಂದಾಗಿದ್ದರೂ, ಈ ರೀತಿ ಥಳಿಸಿದ್ದು ಸರಿಯಲ್ಲ. ಯಾರೇ ತಪ್ಪು ಮಾಡಿದರೂ ಅವರ ವಿರುದ್ಧ ಕಾನೂನು ಕ್ರಮ ಆಗಲೇ ಬೇಕೆಂದಿದ್ದಾರೆ.