“ಕನ್ನಡಿಗರು ನನ್ನನ್ನು ಏಕೆ ಇಷ್ಟು ಪ್ರೀತಿಸುತ್ತಾರೆ, ಅಭಿಮಾನಿಸುತ್ತಾರೆ ಎಂದು ಗೊತ್ತಿಲ್ಲ. ಕನ್ನಡಿಗರ ಪ್ರೀತಿಗೆ ನಾನು ಯಾವತ್ತೂ ಚಿರಋಣಿ. ಮಂದಿನ ಜನ್ಮದಲ್ಲಿ ನಾನು ಕನ್ನಡ ನಾಡಿನಲ್ಲಿ ಜನಿಸಲು ಬಯಸುತ್ತೇನೆ”
ಇದು ಭಾರತದ ಗಾಯನ ಕ್ಷೇತ್ರದ ದಂತಕತೆ, ಮೂಲತಃ ಆಂಧ್ರದವರಾದರೂ ಕನ್ನಡವನ್ನು ತಮ್ಮ ಎರಡನೇ ಮನೆ ಎನ್ನುತ್ತಿದ್ದ ಗಾನ ಗಾರುಡಿಗ ಎಸ್.ಪಿ.ಬಾಲಸುಬ್ರಹ್ಮಣ್ಯಂ ಅವರು ಅನೇಕ ಸಂದರ್ಶನಗಳಲ್ಲಿ ಹೃದಯತುಂಬಿ ಹೇಳುತ್ತಿದ್ದ ಹೃದಯಾಂತರಾಳದ ಮಾತು.
16 ಭಾಷೆಗಳಲ್ಲಿ 40 ಸಾವಿರಕ್ಕಿಂತಲೂ ಅಧಿಕ ಹಾಡುಗಳನ್ನು ಹಾಡಿ 6 ಭಾಷೆಗಳ ಹಾಡಿಗೆ ರಾಷ್ಟ್ರಪ್ರಶಸ್ತಿ ಪಡೆದ ಸಹೃದಯಿ ಗಾಯಕನಿಗೆ ಕನ್ನಡ ಭಾಷೆಯ ಮೇಲಿದ್ದ ಪ್ರೀತಿಗೆ ಅವರ ಮಾತುಗಳೇ ಸಾಕ್ಷಿ.ಅವರಿಲ್ಲದ ಮೊದಲ ಜನ್ಮದಿನ ಕಳೆದಿದೆ. ಕನ್ನಡಿಗರ ಹೃದಯದಲ್ಲಿ ಅವರ ಅಗಲಿಕೆಯ ನೋವು ಇನ್ನೂ ಮಾಸಿಲ್ಲ.ಆದರೆ ಅದಕ್ಕಿಂತ ಒಂದು ದಿನ ಮೊದಲು (ಜೂನ್ 3) ಗೂಗಲ್, ಕನ್ನಡಿಗರಿಗೆ ಮಾಡಿದ ಅವಮಾನವನ್ನು ಕಣ್ಣಾರೆ ಕಂಡಿದ್ದರೆ ಎಸ್.ಪಿ.ಬಿ. ಎಷ್ಟು ನೊಂದುಕೊಳ್ಳುತ್ತಿದ್ದರೋ ಏನೋ.
ಪುರಾತನ ಭಾಷೆಗೆ ಅವಮಾನಿಸಿದ ಗೂಗಲ್:
ಆಡು ಭಾಷೆಯಾಗಿ ಸಾವಿರಾರು ವರ್ಷಗಳ ಇತಿಹಾಸವಿರುವ, ಭಾಷಾ ತಜ್ಞರ ಪ್ರಕಾರ ಲಿಪಿಯನ್ನು ಹೊಂದಿ 1600 ವರ್ಷಗಳಾಗಿರುವ,2011ರ ಜನಗಣತಿ ಪ್ರಕಾರ 6.5 ಕೋಟಿ ಜನರು ಮಾತನಾಡುವ,5.5 ಕೋಟಿ ಜನರ ಮಾತೃಭಾಷೆಯಾಗಿರುವ, ಜಗತ್ತಿನಲ್ಲಿ ಅತಿ ಹೆಚ್ಚು ಮಂದಿ ಮಾತನಾಡುವ ಭಾಷೆಗಳ ಪಟ್ಟಿಯಲ್ಲಿ 29ನೇ ಸ್ಥಾನದಲ್ಲಿರುವ ಕನ್ನಡ ಭಾಷೆಗೆ ಗೂಗಲ್, ಕೆಟ್ಟ, ಕೊಳಕು ಭಾಷೆ ಎಂಬರ್ಥದಲ್ಲಿ ಹಣೆಪಟ್ಟಿ ಹಚ್ಚಿರುವುದು ಕನ್ನಡ ಭಾಷೆ, ನಾಡು, ಜನ, ನೆಲಕ್ಕೆ ಮಾಡಿದ ಅವಮಾನವಾಗಿದೆ.
ಸಾಹಿತ್ಯ ಚರಿತ್ರೆಯಲ್ಲಿ ಹಳಗನ್ನಡ, ನಡುಗನ್ನಡ, ಹೊಸಗನ್ನಡವೆಂದು ವಿಂಗಡಿತವಾಗಿರುವ ಕಾಲ ಕಾಲಕ್ಕೆ ರೂಪಾಂತರವಾಗಿ ಜನಮಾನಸದಲ್ಲಿ ಉಳಿದಿರುವ ಸುಂದರ ಭಾಷೆಗೆ ಕೊಳಕು ಭಾಷೆ ಎಂದು ಹೇಳಿದ್ದು ಸಹಜವಾಗಿಯೇ ಕನ್ನಡಿಗರಿಗೆ ಅವಮಾನ,ಬೇಸರ ಮೂಡಿಸಿತ್ತು.ಅದಕ್ಕೆ ಕನ್ನಡಿಗರು ಕೊಟ್ಟಿರುವ ತಿರುಗೇಟಿಗೆ ಗೂಗಲ್ ಕೂಡ ಮುಟ್ಟಿ ನೋಡುವಂತಾಗಿದೆ.
ಗೂಗಲ್ ಸರ್ಚ್ಗೆ ಹೋಗಿ ಭಾರತ ದೇಶದಲ್ಲಿ ಅತ್ಯಂತ ಕೆಟ್ಟ,ಕೊಳಕು ಭಾಷೆ ಯಾವುದು ಎಂದು ಟೈಪ್ ಮಾಡಿದರೆ “ಕನ್ನಡ” ಎಂಬ ಉತ್ತರದ ವೈಬ್ ಪೇಜ್ ತೆರೆದುಕೊಳ್ಳುತ್ತಿದ್ದುದನ್ನು ಕಂಡ ಕನ್ನಡಿಗರು ಜೂನ್ 3 ರಂದು ಸಿಡಿದೇಳದಿದ್ದರೆ ಗೂಗಲ್‍ಗೆ ಅರ್ಥವಾಗುತ್ತಿರಲಿಲ್ಲವೇನೋ. ಈ ಬೆಳವಣಿಗೆಯಿಂದ ಸ್ವಾಭಿಮಾನಿ ಕನ್ನಡಿಗರ ರಕ್ತ ಕುದ್ದು ಹೋಗಿದೆ. ದೊಡ್ಡ ಸಂಖ್ಯೆಯಲ್ಲಿ ಕನ್ನಡಿಗರು ಗೂಗಲ್ ಗೆ ಕ್ಲಾಸ್ ತೆಗೆದುಕೊಂಡಿದ್ದಾರೆ. ಎಲ್ಲಕ್ಕಿಂತ ಹೆಚ್ಚಾಗಿ ಡಿಜಿಟಲ್ ಯುಗದಲ್ಲಿ ಕನ್ನಡ ನಾಡು, ನುಡಿಗೆ ಅವಮಾನವಾಗುವುದನ್ನು ಸಹಿಸದೆ ಯುವ ಕನ್ನಡಿಗರು ಕನ್ನಡ ಹೋರಾಟದ ಚುಕ್ಕಾಣಿ ಹಿಡಿದು ಮುನ್ನಡೆದಿದ್ದು ಮೆಚ್ಚುಗೆಗೆ ಪಾತ್ರವಾಗಿದೆ.
ಕ್ಷಿಪ್ರ ಸಮಯದಲ್ಲಿ ಸಿಡಿದ ಕನ್ನಡದ ಕಣ್ಮಣಿಗಳು:
ಗೂಗಲ್ ಸರ್ಚ್ ಪುಟದಲ್ಲಿ ಇಂಥದ್ದೊಂದು ಅಸಂಬದ್ಧವನ್ನು ಗಮನಿಸಿದ ಕನ್ನಡಿಗರೊಬ್ಬರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಾಗ ಈ ವಿಚಾರ ತಕ್ಷಣವೇ ದೊಡ್ಡ ಟ್ರೆಂಡ್ ಆಯಿತು. ಕನ್ನಡ ಮಾಧ್ಯಮಗಳೂ ಕೂಡ ಈ ಸುದ್ದಿಗೆ ಒತ್ತು ನೀಡಿದ್ದರಿಂದ ಮಂದಿ ಕೂಡಲೇ ಸಾಮಾಜಿಕ ಮಾಧ್ಯಮಗಳ ಮೂಲಕವೂ ಈ ಸುದ್ದಿಗೆ ಪ್ರಚಾರ ನೀಡಿದರು. ಅಸಂಬದ್ಧ ಪುಟವನ್ನು ತೆರೆದು ಅದನ್ನು ಖಂಡಿಸುವುದು ಹೇಗೆ ಎಂದು ಸಣ್ಣ ವಿಡಿಯೋ ಮಾಡಿ ಮಾಹಿತಿಯನ್ನೂ ಹಂಚಿಕೊಳ್ಳಲಾಯಿತು. ಇದರ ಪರಿಣಾಮವಾಗಿ ಗೂಗಲ್ ನಲ್ಲಿ ಆಕ್ಷೇಪಗಳ, ಖಂಡನೆಗಳ ಮಹಾಪೂರವೇ ಹರಿದುಬಂದಿತ್ತು. ಪುಟದ ವಿರುದ್ದ ರಿಪೋರ್ಟ್ ಆಗಿದ್ದನ್ನು ಕಂಡು ಗೂಗಲ್ ತಬ್ಬಿಬ್ಬಾಯಿತು. ಕನ್ಡಡ ನಾಡಿನ ಯುವ ಪೀಳಿಗೆ ಜನಾಕ್ರೋಶಕ್ಕೆ ಮಣಿದು ಕ್ಷಮೆ ಯಾಚನೆಯನ್ನೂ ಮಾಡಿತು.
ಕನ್ನಡಿಗರ ಕ್ಷಮೆ ಕೋರಿದ ಆಶಿಕಾ,ಚಂದುಗೌಡ:
ಗೂಗಲ್ ವಿಚಾರದಲ್ಲಿ ಮೊದಲೇ ಕ್ರುದ್ಧರಾಗಿದ್ದ ಕನ್ನಡಿಗರ ಸ್ವಾಭಿಮಾನವನ್ನು ಸಂದರ್ಶನವೊಂದರಲ್ಲಿ ಸೀರಿಯಲ್ ನಟ, ನಟಿ ನೀಡಿದ ಹೇಳಿಕೆ ಮತ್ತೊಮ್ಮೆ ಕೆಣಕಿತು. ಅವರ ಮೇಲೂ ಕನ್ನಡಿಗರ ಕೋಪ ತಿರುಗಿತ್ತು. “ಬೆಂಗಳೂರಿನಲ್ಲಿ ಶೇ.70ರಿಂದ 80 ಮಂದಿ ತೆಲುಗು ಜನರೇ ಇದ್ದಾರೆ” ಎಂಬರ್ಥದ ಮಾತನ್ನು ತ್ರಿನಯನಿ ಧಾರವಾಹಿಯ ನಟಿ ಆಶಿಕಾ ಪಡುಕೋಣೆ, ಚಂದುಗೌಡ ತೆಲುಗು ಭಾಷೆಯ ಮಾಧ್ಯಮಕ್ಕೆ ನೀಡಿದ ಸಂದರ್ಶನದಲ್ಲಿ ಕನ್ನಡದ ಬಗ್ಗೆ ತಪ್ಪಾಗಿ ಮಾತನಾಡಿದ್ದರು. ಆದರೆ ಈ ವಿಚಾರದಲ್ಲಿ ಕನ್ನಡಿಗರು ಸಿಡಿದಿರುವುದನ್ನು ಕಂಡು ತಪ್ಪು ಅರ್ಥ ಮಾಡಿಕೊಂಡ ಧಾರವಾಹಿಯ ನಟ, ನಟಿಯರಾದ ಚಂದುಗೌಡ ಹಾಗೂ ಆಶಿಕಾ ಬಹಿರಂಗವಾಗಿ ಕ್ಷಮೆ ಕೋರಿ ಪ್ರಕರಣವನ್ನು ಮುಗಿಸಿದ್ದರು.
ನಾಡು,ನುಡಿ ಪರ ನಿಂತ ರಾಜಕಾರಣಿಗಳು,ಗಣ್ಯರು:
“ugliest Language in India ಎಂಬ ಹುಡುಕಾಟಕ್ಕೆ ಕನ್ನಡ ಎಂದು ಉತ್ತರ ಕೊಡುತ್ತಿದ್ದ ವೆಬ್ ಪುಟ ಕಿತ್ತುಹಾಕಲು ಕನ್ನಡಿಗರು ಹೋರಾಡಬೇಕಾಯಿತೇ? ಗೂಗಲ್ ಇಂಡಿಯಾ ಭಾಷೆಯ ವಿಚಾರದಲ್ಲಿ ಏಕಿಷ್ಟು ಅಸೂಕ್ಷ್ಮವಾಗಿ ನಡೆದುಕೊಳ್ಳುತ್ತಿದೆ? ಭಾಷೆ ಯಾವುದೇ ಇರಲಿ, ಇಂಥ ದ್ವೇಷವನ್ನು ನಿಯಂತ್ರಿಸಲು ಗೂಗಲ್ ಗೆ ಸಾಧ್ಯವಿಲ್ಲವೇ? ಗೂಗಲ್ ನ ಪ್ರಮಾದ ಒಪ್ಪಲಾಗದು. ಭಾಷೆ ವಿಚಾರದಲ್ಲಿ ಅದರಲ್ಲೂ ಕನ್ನಡ ಭಾಷೆ ವಿಚಾರದಲ್ಲಿ ಎರಡು ಪಟ್ಟು ಎಚ್ಚರಿಕೆಯಿಂದ ಇರಬೇಕು. ಒಂದು ಗಂಟೆಯಲ್ಲಿ ಸೃಷ್ಟಿಯಾದ ಕನ್ನಡಿಗರ ಸ್ವಾಭಿಮಾನದ ಅಲೆ, ಮುಂದೆ ಸುನಾಮಿಯಾದರೂ ಅಚ್ಚರಿ ಇಲ್ಲ” ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಗೂಗಲ್ ವಿರುದ್ಧ ಟ್ವೀಟ್ ಮಾಡಿ ಕಿಡಿ ಕಾರಿದ್ದರಲ್ಲದೆ,ಎಚ್ಚರಿಕೆಯನ್ನೂ ನೀಡಿದ್ದರು.
“2.5 ಸಾವಿರ ವರ್ಷಗಳಿಂದ ಕನ್ನಡ ಭಾಷೆ ಅಸ್ತಿತ್ವದಲ್ಲಿರುವುದು ಸಾಬೀತಾಗಿದ್ದು, ತನ್ನದೇ ಇತಿಹಾಸವಿರುವ ಕನ್ನಡ ಭಾಷೆ ಕನ್ನಡಿಗರ ಹೆಮ್ಮೆ. ಗೂಗಲ್ ಸರ್ಚ್ ಎಂಜಿನ್ ಕನ್ನಡಿಗರ ಸ್ವಾಭಿಮಾನಕ್ಕೆ ಧಕ್ಕೆ ತರುವ ಕೆಲಸ ಮಾಡಿದ್ದು, ಕೂಡಲೇ ಕ್ಷಮೆ ಕೇಳಬೇಕು.ಕನ್ನಡ ಭಾಷೆಯ ಬಗ್ಗೆ ಅಪಪ್ರಚಾರ ಮಾಡಿರುವ ಗೂಗಲ್ ವಿರುದ್ಧ ಕ್ರಮ ಕೈಗೊಳ್ಳಲಾಗುವುದು” ಎಂದು ಕನ್ನಡ ಮತ್ತು ಸಂಸ್ಕೃತಿ ಸಚಿವ ಅರವಿಂದ ಲಿಂಬಾವಳಿ ಫೇಸ್ ಬುಕ್ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದರು.
ಇವರಲ್ಲದೆ ಅನೇಕ ಕನ್ನಡ ಸಾಹಿತಿಗಳು, ಸಿನಿಮಾ ನಿರ್ದೇಶಕರು, ಕಲಾವಿದರೂ ಕೂಡ ಗೂಗಲ್ ನ ಅಸಂಬದ್ಧದ ಸ್ಕ್ರೀನ್ ಶಾಟ್ ಶೇರ್ ಮಾಡಿ ತಮ್ಮ ಆಕ್ರೋಶವನ್ನು ಹಂಚಿಕೊಂಡಿದ್ದರು.
ಕ್ಷಮೆ ಕೋರಿ ಪ್ರಕರಣ ಅಂತ್ಯಗೊಳಿಸಿದ ಗೂಗಲ್:
“ಹುಡುಕುವುದು ಯಾವಾಗಲೂ ಪರಿಪೂರ್ಣವಾಗಿರುವುದಿಲ್ಲ.ಕೆಲವೊಮ್ಮೆ ಅಂತರ್ಜಾಲದಲ್ಲಿ ನಿರ್ದಿಷ್ಟವಾದ ಹುಡುಕಾಟಗಳಿಗೆ ಬರುವ ಫಲಿತಾಂಶಗಳು ಅಚ್ಚರಿಯನ್ನು ಉಂಟುಮಾಡುತ್ತವೆ. ಇದು ಸೂಕ್ತವಲ್ಲ ಎಂಬುದು ನಮಗೆ ಗೊತ್ತು. ಆದರೆ ಯಾವುದೇ ಒಂದು ಸಮಸ್ಯೆ ಎದುರಾದಾಗ ಮತ್ತು ಅದು ನಮ್ಮ ಗಮನಕ್ಕೆ ಬಂದಾಗ ನಾವು ತ್ವರಿತ ಸಮರ್ಪಕ ಕ್ರಮ ಕೈಗೊಳ್ಳುತ್ತೇವೆ. ಹಾಗೂ ನಮ್ಮ ಆಲ್ಗೊರಿದಂ ಸುಧಾರಣೆ ಮಾಡುವ ನಿಟ್ಟಿನಲ್ಲಿ ಸದಾ ಕ್ರಿಯಾಶೀಲರಾಗಿರುವುದನ್ನು ಮುಂದುವರಿಸಿದ್ದೇವೆ. ತಪ್ಪು ಅರ್ಥ ಬಂದಿರುವುದಕ್ಕೆ ಹಾಗೂ ಯಾವುದೇ ಭಾವನೆಗಳಿಗೆ ಧಕ್ಕೆ ಆಗಿದ್ದರೆ ನಾವು ಕ್ಷಮೆ ಯಾಚಿಸುತ್ತೇವೆ”
ಹೀಗೆಂದು ಗೂಗಲ್ ಇಂಡಿಯಾ ತನ್ನ ಟ್ವೀಟ್ ಸಂದೇಶದಲ್ಲಿ ಕ್ಷಮೆ ಯಾಚನೆ ಮಾಡಿ ಪುಟವನ್ನು ಅಳಿಸಿಹಾಕಿದೆ.
ಅಸಲಿಗೆ ಗೂಗಲ್ ಪಾಠ ಕಲಿತದ್ದು ಹೇಗೆ?
ಗೂಗಲ್ ಸರ್ಚ್ ಗೆ ಹೋಗಿ ‘ಅಗ್ಲಿಯೆಸ್ಟ್ ಲ್ಯಾಂಗ್ವೇಜ್ ಇನ್ ಇಂಡಿಯಾ’ (ugliest Language in India) ಎಂದು ಟೈಪಿಸಿದರೆ ಬಂದ ಫಲಿತಾಂಶದ ಬಲಭಾಗದ ಮೂಲೆಯಲ್ಲಿ ಕೆಳಗೆ ಫೀಡ್ ಬ್ಯಾಕ್ ಎಂಬ ಆಯ್ಕೆ ಇತ್ತು. ಅದನ್ನು ಕ್ಲಿಜಕ್ ಮಾಡಿದಾಗ ಬಲಭಾಗದಲ್ಲಿ ಬರುವ ಆಯ್ಕೆಗಳಲ್ಲಿThis is hateful, racist or offensive ಎಂಬುದನ್ನು ಕ್ಲಿಕ್ ಮಾಡಿ, ಕಮೆಂಟ್ ಬರೆದು ಪೋಸ್ಟ್ ಮಾಡಿದರೆ ಸಾಕಿತ್ತು. ಈ ಕೆಲಸವನ್ನು ಕನ್ನಡಿಗರು ಬಹಳ ದೊಡ್ಡ ಸಂಖ್ಯೆಯಲ್ಲಿ ಮಾಡಿದ್ದರಿಂದ ಗೂಗಲ್ ಇದೇನಪ್ಪಾ ಹೀಗಾಗ್ತಿದೆ ಎಂದು ಕಂಗಾಲಾಗಿ ಹೋಯಿತು.
ಸುಲಿದ ಬಾಳೆ ಹಣ್ಣಿನಂದದಿ, ಕಳೆದ ಸಿಗುರಿನ ಕಬ್ಬಿನಂದದಿ ಇರುವ ಭಾಷೆ ಕನ್ನಡ ಎಂದು ಕನ್ನಡವನ್ನು ನಾಲ್ಕೈದು ಶತಮಾನಗಳ ಹಿಂದೆಯೇ ಕವಿಗಳು ಹಾಡಿ ಹೊಗಳಿದ್ದಾರೆ. ಕನ್ನಡದ ಬಗೆಗಿನ ಇಂಥ ಮಾತುಗಳನ್ನು ಗೂಗಲ್ ಗೂ ಸ್ವಲ್ಪ ಕೇಳಿಸಬೇಕಿದೆ. ಒಂದು ಭಾಷೆಯನ್ನು ಯಾವ ಆಧಾರದ ಮೇಲೆ ಕೆಟ್ಟದು ಎಂದು ಗೂಗಲ್ ಆಗಲಿ ಇನ್ಯಾರೇ ಆಗಲಿ ನಿರ್ಧರಿಸಬಲ್ಲರು? ಅದಕ್ಕೆ ಇರುವ ಮಾನದಂಡವಾದರೂ ಯಾವುದು?
ನರಕಕ್ಕೆ ಇಳಿಸಿ, ನಾಲಿಗೆ ಸೀಳ್ಸಿ, ಬಾಯಿ ಹೊಲಿಸಿ ಹಾಕಿದ್ರೂನು ಮೂಗಿನಲ್ ಮಾತಾಡ್ತೀನ್ ಕನ್ನಡ ಪದವನ್ನ…ಎಂದು ಕವಿ ಜೆ.ಪಿ.ರಾಜರತ್ನಂ ಅವರ ಹಾಡಿನ ಸಾಲುಗಳನ್ನು ಕನ್ನಡಿಗರು ಆಗಾಗ ಸ್ಮರಿಸಿಕೊಳ್ಳುವುದು ಕನ್ನಡದ ಮೇಲಿನ ಪ್ರೀತಿಯಿಂದ. ಕನ್ನಡದ ಯುವ ಜನಾಂಗದ ಕನ್ನಡ ಪ್ರೀತಿಯನ್ನು ಗೂಗಲ್ ನ ಈ ಪ್ರಕರಣ ಮತ್ತೆ ಎತ್ತಿ ತೋರಿಸಿದೆ.