ಸಾಂಸ್ಕೃತಿಕ ನಗರಿ ಮೈಸೂರಿನ ಇಬ್ಬರು ಹಿರಿಯ ಐಎಎಸ್ ಅಧಿಕಾರಿಗಳ ನಡುವಿನ ಜಗಳ ಬೀದಿಗೆ ಬಂದು ನಿಂತಿದೆ. 2009 ನೇ ಬ್ಯಾಚಿನ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಈ ಹಿಂದೆ ಕೆಲಸ ಮಾಡಿದ ಕಡೆಗಳಲ್ಲೆಲ್ಲ ಒಂದಷ್ಟು ಸದ್ದು ಮಾಡಿದ್ದಾರೆ. ಖಡಕ್ ಅಧಿಕಾರಿ ಎಂದೇ ಗುರುತಿಸಿಕೊಂಡಿರುವ ಇವರ ಬಗ್ಗೆ ಈವರೆಗೆ ಭ್ರಷ್ಟಾಚಾರದ ಆರೋಪಗಳು ಕೇಳಿ ಬಂದಿಲ್ಲ. ಸ್ವಲ್ಪ ಹೆಚ್ಚೇ ಎನ್ನಬಹುದಾದಷ್ಟು ಇಗೋ ಇವರಿಗೆ ಇದೆ. ಕಳೆದ ಫೆಬ್ರುವರಿ 14 ರಂದು ಮೈಸೂರು ಮಹಾನಗರ ಪಾಲಿಕೆ ಕಮೀಷನರ್ ಆಗಿ ಅಧಿಕಾರ ವಹಿಸಿಕೊಂಡ ಶಿಲ್ಪಾ ನಾಗ್ ಅವರು ಸೌಮ್ಯ ಅಧಿಕಾರಿ. ಇಬ್ಬರೂ ಜನಪರ ಕೆಲಸ ಮಾಡಿದ್ದಾರೆ.
ಅದರೆ ಇಬ್ಬರ ನಡುವೆ ಜಗಳಕ್ಕೆ ಕಾರಣವಾಗಿರುವ ಅಂಶಗಳ ಬಗ್ಗೆ ಜನತೆಯಲ್ಲಿ ತೀವ್ರ ಕುತೂಹಲಕ್ಕೂ ಕಾರಣವಾಗಿದೆ. ಈ ಹಿಂದೆ ಕೋವಿಡ್ನಿಂದ ಮೃತಪಟ್ಟಿದ್ದ ಮೈಸೂರು ಮಹಾನಗರ ಪಾಲಿಕೆಯ ಆಂಬುಲೆನ್ಸ್ ಚಾಲಕ ರವಿ (ಹೊರ ಗುತ್ತಿಗೆ ನೌಕರ) ಅವರ ತಾಯಿಯನ್ನು ತಬ್ಬಿಕೊಂಡು, ಪಾಲಿಕೆ ಆಯುಕ್ತೆ ಶಿಲ್ಪಾ ನಾಗ್ ಸಾಂತ್ವನ ಹೇಳಿದ್ದರು. ಈ ಘಟನೆಯ ಚಿತ್ರವೊಂದು ಎಲ್ಲೆಡೆ ವೈರಲ್ ಆಗಿತ್ತು. ಇದರೊಂದಿಗೆ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಜೊತೆ ಜಟಾಪಟಿಗೆ ಬಿದ್ದಿದ್ದ ಶಾಸಕರು ಮತ್ತು ಸಂಸದರು, ತಮಗೆ ಅವಕಾಶ ಸಿಕ್ಕಾಗಲೆಲ್ಲಾ ಕೋವಿಡ್ ನಿಯಂತ್ರಣದಲ್ಲಿ ಶಿಲ್ಪಾ ನಾಗ್ ತೆಗೆದುಕೊಂಡಿದ್ದ ಕ್ರಮಗಳನ್ನು ಶ್ಲಾಘಿಸತೊಡಗಿದರು ಎನ್ನಲಾಗಿದೆ. ಇದುವರೆಗೆ ಅಧಿಕಾರಿಗಳ ವಲಯದಲ್ಲಷ್ಟೇ ಕೇಳಿ ಬರುತ್ತಿದ್ದ ಈ ಚರ್ಚೆಯು, ಶಿಲ್ಪಾ ನಾಗ್ ಅವರು ಗುರುವಾರ ಪಾಲಿಕೆಯ ಆಯುಕ್ತರ ಹುದ್ದೆಯ ಜೊತೆಗೆ ಭಾರತೀಯ ಆಡಳಿತ ಸೇವೆಗೂ ರಾಜೀನಾಮೆಗೆ ನೀಡುತ್ತಿರುವುದಾಗಿ ಪ್ರಕಟಿಸುತ್ತಲೇ ಸಾರ್ವಜನಿಕರ ವಲಯದಲ್ಲೂ ತೀವ್ರ ಚರ್ಚೆಗೂ ಗ್ರಾಸವಾಗಿದೆ.
ತಮ್ಮದೇ ಅಧೀನದಲ್ಲಿ ಕೆಲಸ ಮಾಡುತಿದ್ದ ಚಾಲಕನ ಕುಟುಂಬಕ್ಕೆ ಸಾಂತ್ವನ ಹೇಳಲು ಅವರ ಮನೆಗೆ ಶಿಲ್ಪಾ ನಾಗ್ ಹೋಗಿದ್ದಾಗ ಆತನ ತಾಯಿ ದುಃಖಿಸಿದ್ದರು. ಈ ಸಂದರ್ಭದಲ್ಲಿ ಸಹಜವಾಗಿಯೇ ಆಯುಕ್ತರು ತಬ್ಬಿಕೊಂಡು ಸಾಂತ್ವನ ಹೇಳಿದ್ದರು. ಈ ದೃಶ್ಯದ ಫೋಟೊವನ್ನು ಐಎಎಸ್ ಅಧಿಕಾರಿಗಳ ಅಸೋಸಿಯೇಷನ್ ಹಾಗೂ ಅನೇಕ ಹಿರಿಯ ಐಎಎಸ್ ಅಧಿಕಾರಿಗಳು ತಮ್ಮ ಟ್ವಿಟರ್ ಖಾತೆಯಲ್ಲಿ ಪೋಸ್ಟ್ ಮಾಡಿ, ಮೆಚ್ಚುಗೆ ವ್ಯಕ್ತಪಡಿಸಿದ್ದರು. ಜನಪ್ರತಿನಿಧಿಗಳು ಸಹ ಆಗಿನಿಂದಲೇ ಶಿಲ್ಪಾ ನಡೆಗೆ ಪ್ರಶಂಸಿಸುತ್ತಿದ್ದರು. ಜಿಲ್ಲಾಧಿಕಾರಿ ರೋಹಿಣಿ ಅವರನ್ನು ಟೀಕಿಸುತ್ತಿದ್ದರು ಎನ್ನಲಾಗಿದ್ದು ಇದು ಸಿಂಧೂರಿ ಅವರ ಅಸಹನೆಗೆ ಕಾರಣವಾಗಿತ್ತು . ತಾವು ಈ ರೀತಿಯ ಪ್ರಚಾರ ಪಡೆಯಲು ಆಗಲಿಲ್ಲವಲ್ಲ ಎಂಬ ಕೊರಗೂ ಸಿಂಧೂರಿಗೆ ಇತ್ತು ಎನ್ನಲಾಗಿದೆ.
ಶಾಸಕರು, ಸಂಸದರು ಶಿಲ್ಪಾ ಪರವಾಗಿ ಮಾತನಾಡಲು ಶುರು ಮಾಡುತ್ತಿದ್ದಂತೆ, ತಮ್ಮ ಆಪ್ತ ಅಧಿಕಾರಿಗಳ ಮೂಲಕವೇ ಇದಕ್ಕೆ ಜಾತಿಯ ಲೇಪನವನ್ನು ಬಳಿಯುವಲ್ಲಿ ರೋಹಿಣಿ ಯಶಸ್ವಿಯಾಗಿದ್ದರು. ಇದು ಆಯುಕ್ತರನ್ನು ಘಾಸಿಗೊಳಿಸಿತ್ತು ಎನ್ನಲಾಗಿದೆ. ನಗರದಲ್ಲಿ 401ಕ್ಕೂ ಹೆಚ್ಚು ಕೋವಿಡ್ ಸೋಂಕಿತರರಿರುವ ಪ್ರದೇಶವನ್ನು ಕೆಂಪು ಬಣ್ಣದಲ್ಲಿ ಗುರುತಿಸಿ, ನಕ್ಷೆಯೊಂದನ್ನು ಜಿಲ್ಲಾಡಳಿತ ಮೇ 31ರಂದು ಬಿಡುಗಡೆ ಮಾಡಿತ್ತು. ಆದರೆ, ಈ ಸಂಖ್ಯೆಯನ್ನು 51ಕ್ಕೆ ಇಳಿಸಿ, 51ಕ್ಕೂ ಹೆಚ್ಚು ಸೋಂಕಿತರಿರುವ ಪ್ರದೇಶವನ್ನು ಕೆಂಪು ಬಣ್ಣದಲ್ಲಿ ಗುರುತಿಸಿ ಗುರುವಾರ (ಜೂನ್ 3) ಹೊಸ ನಕ್ಷೆಯನ್ನು ಜಿಲ್ಲಾಡಳಿತ ಬಿಡುಗಡೆ ಮಾಡಿದೆ. ಇದರಿಂದ ಮೈಸೂರಿನ ಬಹುತೇಕ ಪ್ರದೇಶವನ್ನು ಕೆಂಪು ವಲಯದಲ್ಲಿದೆ ಎಂಬುದನ್ನು ಬಿಂಬಿಸಿದ್ದೇ ಶಿಲ್ಪಾನಾಗ್ ಅವರ ಸಹನೆಯ ಕಟ್ಟೆಯೊಡೆಯಲು ಕಾರಣ ಎನ್ನಲಾಗಿದೆ.
ನಗರಪಾಲಿಕೆಯ ಆಯುಕ್ತರಾಗಿ ಶಿಲ್ಪಾ ನಾಗ್ ಮೈಸೂರು ನಗರದಲ್ಲಿ ಕೋವಿಡ್ ನಿಯಂತ್ರಿಸಲು ಹಲವು ಕ್ರಮ ತೆಗೆದುಕೊಂಡಿದ್ದರು. ಕೋವಿಡ್ ಮಿತ್ರ, ಟೆಲಿ ಕೇರ್ ಸೇರಿದಂತೆ ಹಲವು ಯೋಜನೆ ಅನುಷ್ಠಾನಗೊಳಿಸಿದ್ದರು. ಆದರೆ ಸಚಿವರು, ಉಪ ಮುಖ್ಯಮಂತ್ರಿ ನಡೆಸಿದ ಸಭೆಗಳಲ್ಲಿ ಜಿಲ್ಲಾಧಿಕಾರಿಯು, ಇದೆಲ್ಲವನ್ನು ತಾವೇ ಜಾರಿಗೊಳಿಸಿದ್ದಾಗಿ ಮಾಹಿತಿ ನೀಡುತ್ತಿದ್ದರು. ಇದು ಶಿಲ್ಪಾ ಅವರಿಗೆ ನೋವು ತರಿಸಿತ್ತು ಎನ್ನಲಾಗಿದೆ. ಇತ್ತೀಚೆಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಆಯ್ದ ಜಿಲ್ಲಾಧಿಕಾರಿಗಳೊಂದಿಗೆ ವೀಡಿಯೋ ಸಂವಾದ ನಡೆಸಿ ಕೋವಿಡ್ ನಿಯಂತ್ರಣಕ್ಕೆ ನಿಮ್ಮ ಜಿಲ್ಲೆಯಲ್ಲಿ ನೀವು ಕೈಗೊಂಡ ವಿಶೇಷ ಕ್ರಮಗಳ ಬಗ್ಗೆ ತಿಳಿಸುವಂತೆ ಸೂಚಿಸಿದ್ದರು . ಇದಕ್ಕೆ ಪ್ರತಿಕ್ರಿಯೆಯಾಗಿ ಸಿಂಧೂರಿ ಅವರು ಕೋವಿಡ್ ಮಿತ್ರ ಯೋಜನೆಯನ್ನು ಜಾರಿಗೆ ತಂದಿರುವ ಮಾಹಿತಿಯನ್ನು ಪ್ರಧಾನ ಮಂತ್ರಿಗಳ ಕಾರ್ಯಾ ಲಯಕ್ಕೆ ಕಳಿಸಿಕೊಟ್ಟಿದ್ದರು. ಇದು ಶಿಲ್ಪಾ ಅವರಿಗೆ ನೋವು ಉಂಟು ಮಾಡಿತ್ತು ಎನ್ನಲಾಗಿದೆ.
ಗುರುವಾರ ಶಿಲ್ಪಾ ನಾಗ್ ಅವರ ರಾಜೀನಾಮೆಯನ್ನು ಪತ್ರಿಕಾ ಗೋಷ್ಟಿಯಲ್ಲೇ ಪ್ರಕಟಿಸಿದ ಬೆನ್ನಲ್ಲೆ ಇಂದು ಅನಿವಾರ್ಯವಾಗಿ ರೋಹಿಣಿ ಸಿಂಧೂರಿ ಅವರೂ ಮಾಧ್ಯಮಗಳೊಂದಿಗೆ ಮಾತನಾಡಿ ತಾವು ಕಮಿಷನರ್ ಅವರೊಂದಿಗೆ ಕೇಳಿದ ಮಾಹಿತಿಯು ಕಂಪೆನಿಗಳ ಸಾಮಾಜಿಕ ಜವಾಬ್ದಾರಿ ನಿಧಿಯ ಕುರಿತು ಮಾತ್ರ ಆಗಿತ್ತು. ಜಿಲ್ಲೆಯ ವಿವಿಧ ಕಂಪೆನಿಗಳಿಂದ ನಿಧಿಗೆ 12 ಕೋಟಿ ರೂಪಾಯಿ ಬಂದಿತ್ತು. ಇದನ್ನು ಯಾವುದಕ್ಕೆ ವೆಚ್ಚ ಮಾಡಲಾಗಿದೆ ಲೆಕ್ಕ ನೀಡಿ ಎಂದಷ್ಟೇ ಕೇಳಿದ್ದು. ಇದನ್ನು ಕೇಳೋದೇ ತಪ್ಪೇ ಎಂದು ಶಿಲ್ಪಾ ವಿರುದ್ದ ಆಕ್ರೋಶ ವ್ಯಕ್ತ ಪಡಿಸಿದರು. ಈ ನಿಧಿಯನ್ನು ತಾವು ವೈದ್ಯರ ನಡೆ ಹಳ್ಳಿಯ ಕಡೆಗೆ ಕಾರ್ಯಕ್ರಮಕ್ಕೆ ಬಳಸಿಕೊಳ್ಳಲು ಉದ್ದೇಶಿಸಿದ್ದು ಗ್ರಾಮೀಣ ಭಾಗದಲ್ಲಿ ಇರುವ ಕೈಗಾರಿಕೆಗಳೂ ದೇಣಿಗೆ ನೀಡಿವೆ, ಹಾಗಾಗಿ ಗ್ರಾಮೀಣ ಭಾಗಕ್ಕೂ ಬಳಸುವುದು ತಮ್ಮ ಆದ್ಯತೆ ಆಗಿತ್ತು ಎಂದು ಹೇಳಿದ್ದಾರೆ. ಆದರೆ ಶಿಲ್ಪಾ ನಾಗ್ ಅವರು ಈವರೆಗೂ ಲೆಕ್ಕ ನೀಡಿಲ್ಲ ಅಲ್ಲದೆ ಕನಿಷ್ಟ ಪಕ್ಷ ಮೈಸೂರು ನಗರ ವ್ಯಾಪ್ತಿಯಲ್ಲಿ ಇರುವ ಸೋಂಕಿತರ ಸಂಖ್ಯೆಯೆ ವಿವರಗಳನ್ನೂ ನೀಡಿಲ್ಲ ಎಂದು ಆರೋಪಿಸಿದ್ದಾರೆ.
ಶಿಲ್ಪಾ ನಾಗ್ ಅವರ ಆರೋಪದ ಪ್ರಕಾರ ಅವರು ಉತ್ತಮ ಕೆಲಸ ಮಾಡುತ್ತಿದ್ದರೂ ಡಿಸಿ ಸಿಂಧೂರಿ ಅವರು ತುಳಿಯುವ ಕೆಲಸ ಮಾಡುತ್ತಿದ್ದಾರೆ. ಕಂಪೆನಿಯೊಂದು ಮೆಡಿಕಲ್ 3000 ಕಿಟ್ ಗಳನ್ನು ಪಾಲಿಕೆಗೆ ದೇಣಿಗೆ ನೀಡಿದರೆ ಸಿಂಧೂರಿ ಅವರು ಪೋಲೀಸರನ್ನು ಕಳಿಸಿ ಅದೆಲ್ಲವನ್ನು ತೆಗೆಸಿಕೊಂಡು ಹೋದರು ಎಂದು ಆರೋಪಿಸಿದ್ದಾರೆ. ತಾವೂ ಓರ್ವ ಐಏಎಸ್ ಅಧಿಕಾರಿಯೇ ಆಗಿದ್ದು ತಮ್ಮೊಂದಿಗೆ ಇಂತಹ ವರ್ತನೆ ತೋರಿರುವುದನ್ನು ಸಹಿಸಲು ಸಾಧ್ಯವಿಲ್ಲ ಎಂದೇ ಹೇಳಿ ರಾಜೀನಾಮೆ ನೀಡಿದ್ದಾರೆ.
ಈ ರಾಜೀನಾಮೆ ಪತ್ರ ಅಂಗೀಕಾರ ಆಗುವ ಸಾದ್ಯತೆ ಇಲ್ಲ. ಇಂದು ನಾಳೆಯೊಳಗೆ ಇಬ್ಬರು ಅಧಿಕಾರಿಗಳ ಜಟಾಪಟಿಗೆ ರಾಜ್ಯದ ಮುಖ್ಯ ಕಾರ್ಯದರ್ಶಿ ಪಿ ರವಿಕುಮಾರ್ ಅವರು ಫುಲ್ ಸ್ಟಾಪ್ ಹಾಕುವ ಸಾದ್ಯತೆ ಇದೆ.