ನಾನೊಬ್ಬ ಗಾರೇ ಕೆಲಸ ಮಾಡುವವನು, ನನಗೆ ಒಬ್ಬ ಮಗ, ಒಬ್ಬಳು ಮಗಳು, ಆದ್ರೆ ಏನ್ಮಾಡೋಣ ಮುಂದೆ ನಮ್ಮನ್ನ ಸಾಕುವ ಮಗ ಹುಟ್ಟಿನಿಂದೇ ಬೌದ್ಧಿಕ ಅಂಗವೈಕಲ್ಯ(ಮಾನಸಿಕ) ಸಮಸ್ಯೆಯಿಂದ ಬಳಲುತ್ತಿದ್ದಾನೆ. ಆತ ನಮ್ಮಂತಾಗಲು ಮಗನಿಗೆ 18 ವರ್ಷ ತುಂಬುವವರೆಗೂ ಪ್ರತಿದಿನ ಔಷಧಿ ಕೊಡ್ಬೇಕು. ಅದು ಬೆಂಗಳೂರಿನ ನಿಮ್ಹಾನ್ಸ್ ಆಸ್ಪತ್ರೆಯಲ್ಲಿ ಮಾತ್ರ ಉಚಿತವಾಗಿ ಸಿಗುತ್ತೆ. ಈಗ ಬೇರೆ ಕರೋನಾ ಲಾಕ್‌ಡೌನ್ ನನ್ನ ಅಳಲನ್ನು ಯಾರೂ ಕೇಳಲಿಲ್ಲ, ಮಗನ ಆರೋಗ್ಯ ರಕ್ಷಿಸಲೇ ಬೇಕೆಂದು ಮೈಸೂರು ಜಿಲ್ಲೆ, ಟಿ ನರಸೀಪುರ ತಾಲ್ಲೂಕಿನ ಬನ್ನೂರು ಗ್ರಾಮದ ಆನಂದ್ ಎಂಬುವವರು ಸೈಕಲ್‌ನಲ್ಲಿಯೇ 300 ಕಿ.ಮೀ ದೂರ ತೆರಳಿ ರಾಜ್ಯಾದ್ಯಂತ ಸುದ್ದಿಯಲ್ಲಿದ್ದಾರೆ. ಅವರು ಪ್ರತಿಧ್ವನಿಯೊಂದಿಗೆ ತಮ್ಮ ನೋವನ್ನು ಹಂಚಿಕೊಂಡಿದ್ದು ಹೀಗೆ
ಮಗನಿಗಿರುವ ಸಮಸ್ಯೆ ಏನು..? ತಂದೆ ಆನಂದ್ ಹಂಚಿಕೊಂಡ ಮಾಹಿತಿ
ಚಿಕ್ಕಂದಿನಿಂದಲೇ ನನ್ನ ಮಗ ಭೈರೇಶ್ ಸರಿಯಾಗಿ ಮಾತನಾಡುತ್ತಿರಲ್ಲಿಲ್ಲ, ಆತನ ಹಾವಭಾವಗಳು ಎಲ್ಲರಂತಿರಲಿಲ್ಲ, ಊರ ಸುತ್ತಮುತ್ತಲಿನ ಆಸ್ಪತ್ರೆಗೆ ತೋರಿಸಿದ್ದೆ, ಯಾವ ವೈದ್ಯರು ಆತನಿಗಿರುವ ಸಮಸ್ಯೆ ಏನೆಂದು ಸರಿಯಾಗಿ ಹೇಳಿರಲ್ಲಿಲ್ಲ, ನಂತರ ಸಂಬಂಧಿಕರೊಬ್ಬರು ನಿಮ್ಹಾನ್ಸ್ಗೆ ತೋರಿಸುವಂತೆ ಸಲಹೆ ಕೊಟ್ಟಿದ್ದರು. ಬೆಂಗಳೂರನ್ನೆ ನೋಡದ ನಾನು ಇತರರ ಸಹಾಯ ಪಡೆದು ಬೆಂಗಳೂರಿನ ನಿಮ್ಹಾನ್ಸ್ಗೆ ತೋರಿಸಿದೆ. ನಿಮ್ಮ ಮಗನಿಗೆ ಮೆದುಳಿನ ನರಗಳು ವೀಕಿದೆ,. ನಾವು ಹೇಳಿದ ಔಷಧಿಯನ್ನು ಆತನಿಗೆ 18 ವರ್ಷ ಆಗುವವರೆಗೂ ನೀಡಬೇಕೆಂದು ವೈದ್ಯರು ತಿಳಿಸಿದ್ದು, ಅದನ್ನು ಮುಂದುವರೆಸಲಾಗಿದೆ ಎಂದು ಆನಂದ್ ತಿಳಿಸಿದ್ದಾರೆ.
ಲಾಕ್‌ಡೌನ್- ಮಗನ ಔಷಧಿ ಖಾಲಿ..? ನನ್ಗೆ ಸಹಾ ಮಾಡಿ ಅಂದ್ರೂ ಯಾರು ಸ್ಪಂದಿಸಿಲ್ಲ
ರಾಜ್ಯದಲ್ಲಿ ಕರೋನಾ ನಿಯಂತ್ರಣದ ಸಲುವಾಗಿ ಲಾಕ್‌ಡೌನ್ ನಿರ್ಬಂಧ ಹಿನ್ನೆಲೆ, ವಾಹನ ಸಂಚಾರ ಸ್ಥಗಿತಗೊಳಿಸಲಾಗಿದೆ. ಆದ್ರೆ ತಂದೆ ಆನಂದ್ ಮಗನಿಗೆ ಔಷಧಿ ತರಲು ಬೆಂಗಳೂರಿಗೆ ಬರಲೇ ಬೇಕಿತ್ತು. ಸರ್ಕಾರದ ನಿಯಮಾವಳಿ ಪ್ರಕಾರ ಅಗತ್ಯ ಸೇವೆಗೆ ಅವಕಾಶ ಮಾಡಿಕೊಡುವುದಾಗಿ ಜನಪ್ರತಿನಿಧಿಗಳಿಗೆ, ಅಧಿಕಾರಿಗಳಿಗೆ, ಪೊಲೀಸ್ ಇಲಾಖೆಗೆ, ಆಶಾ ಕಾರ್ಯಕರ್ತೆಯರಿಗೆ ಮಾಹಿತಿ ನೀಡಲಾಗಿದ್ರೂ ಇವ್ರ ನೋವಿಗೆ ಯಾರೂ ಸ್ಪಂದಿಸಲ್ಲಿಲ್ಲ..! ಮಗನ ಸಮಸ್ಯೆ ತಿಳಿಸಿದ ಆನಂದ್ ನಾನೀಗ ಔಷಧಿ ತರಲು ಬೆಂಗಳೂರಿನ ನಿಮ್ಹಾನ್ಸ್ಗೆ ಹೋಗಬೇಕು ನನ್ಗೊಂದು ಒಪ್ಪಿಗೆ ಪತ್ರ ಕೊಡಿ ಎಂದು ಬನ್ನೂರು ಪೊಲೀಸ್ ಠಾಣೆ ಸಂಪರ್ಕಿಸಿದ್ದೆ, ಬೇರೊಂದು ಕೇಸ್‌ನಲ್ಲಿ ಕಾರ್ಯನಿರತರಾದ ಅಧಿಕಾರಿಗಳು ನನ್ನ ಮಾತಿಗೆ ಸರಿಯಾಗಿ ಪ್ರತಿಕ್ರಿಯಿಸಿಲ್ಲ, ತುಂಬಾ ಜನ ಬಂದು ಹೀಗೆ ಕೇಳ್ತಾರೆ ಹಾಗೆಲ್ಲ ಕೊಡೋಕ್ಕಾಗಲ್ಲ ಎಂಬುವುದು ಪೊಲೀಸ್ ಸಿಬ್ಬಂದಿಯೊಬ್ಬರ ಪ್ರತಿಕ್ರಿಯೆಯಾಗಿತ್ತು ಎಂದು ಆನಂದ್ ತಿಳಿಸಿದ್ದಾರೆ.
ವೈದ್ಯರ ನಂಬರ್ ಕೇಳಿದ್ರೆ ಯಾರೂ ಕೊಡುವುದಿಲ್ಲ..?
ವೈದ್ಯರು ಇಲ್ಲಿಯವರೆಗೂ ಉತ್ತಮ ಸಲಹೆ, ಚಿಕಿತ್ಸೆ ಕೊಡುತ್ತಿದ್ದಾರೆ. ಆದ್ರೆ ಕೋವಿಡ್ ಕಾರಣ ಆಸ್ಪತ್ರೆಗೆ ಮಗನನ್ನು ಕರೆದುಕೊಂಡು ಹೋಗುತ್ತಿಲ್ಲ, ಎರಡು ವರ್ಷದಿಂದ ನಾನೊಬ್ಬನೆ ಬಂದು ಕಾರ್ಡ್ ತೋರಿಸಿ ಔಷಧಿ ಪಡೆಯುತ್ತಿದ್ದಾನೆ. ಇದು ನನಗೆ ಕಷ್ಟವಾಗುತ್ತಿದೆ. ವೈದ್ಯರಿಗೆ ಪೋನ್ ಮಾಡಿ ಸಲಹೆ ಪಡೆಯೋಣ ಎಂದು ಆಸ್ಪತ್ರೆ ಸಿಬ್ಬಂದಿಗಳ ಹತ್ತಿರ ವೈದ್ಯರ ನಂಬರ್ ಕೇಳಿದ್ರೆ ಯಾರು ಕೊಡುತ್ತಿಲ್ಲ ಎಂಬ ಮಾಹಿತಿಯನ್ನು ಆನಂದ್ ಪ್ರತಿಧ್ವನಿಯೊಂದಿಗೆ ಹಂಚಿಕೊಂಡಿದ್ದಾರೆ. ಈ ಔಷಧಿ ಎರಡು ತಿಂಗಳಿಗೆ ಆಗುವಷ್ಟು ಮಾತ್ರಾ ಕೊಡುವುದರಿಂದ ಕರೋನಾ ಸಂಕಷ್ಟ ಪರಿಸ್ಥಿತಿಯಲ್ಲಿ ಬೆಂಗಳೂರಿಗೆ ಬಂದು ತೆಗೆದುಕೊಂಡು ಹೋಗುವುದು ಕಷ್ಟವಾಗುತ್ತಿದೆ ಎಂದು ಅಳಲು ತೋಡಿಕೊಂಡಿದ್ದಾರೆ.
ತಿಂಗಳಿಗೆ 600 ರೂ ಮಾತ್ರಾ- ಸರ್ಕಾರದಿಂದ ಬೇರೆಯಾವ ಸೌಲಭ್ಯವು ಇಲ್ಲ
ನಮ್ಮದು ಬಡ ಕುಟುಂಬ ನಾನೊಬ್ಬನೆ ದುಡಿಯುವವನು ಗಾರೆ ಕೆಲಸ ಮಾಡಿ ಕುಟುಂಬ ನಿರ್ವಹಣೆ ಮಾಡುತ್ತಿದ್ದೇನೆ. ಲಾಕ್‌ಡೌನ್ ನಿಂದಾಗಿ ಕೆಲಸ ಇಲ್ಲ, ಸಾಲ ಹೆಚ್ಚಾಗಿದೆ. ಕಷ್ಟದ ಪರಿಸ್ಥಿತಿಯಲ್ಲಿದ್ದೇವೆ. ಇತ್ತ ಮಗನ ಆರೋಗ್ಯದ ಕಡೆಯೂ ಗಮನಹರಿಸಬೇಕು,ನಿಮ್ಹಾನ್ಸ್ ಆಸ್ಪತ್ರೆ ಸಿಬ್ಬಂದಿ ಸಲಹೆಯಂತೆ ಯೋಜನೆಯೊದರ ಸೌಲಭ್ಯ ಪಡೆಯಲು ಅರ್ಜಿ ಹಾಕಿದ್ದೆ ಅದರಡಿ ತಿಂಗಳಿಗೆ 600 ರೂ ಸಿಗುತ್ತಿದೆ. ಅದು ಬಿಟ್ಟು ಸರ್ಕಾರದಿಂದ ಬೇರೆಯಾವ ಸೌಲಭ್ಯವಿಲ್ಲ, 1000 ರೂ ಆದ್ರೂ ಕೊಡುವಂತೆ ಒತ್ತಾಯಿಸಿದ್ರೂ ಪ್ರತಿಕ್ರಿಯೆ ಸಿಕ್ಕಿಲ್ಲ ಎಂಬುವುದು ನೊಂದ ಆನಂದ್ ಮಾತು.
ಆರ್ಥಿಕವಾಗಿ ತುಂಬಾ ನಷ್ಟದಲ್ಲಿದ್ದೇನೆ. ಸರ್ಕಾರದಿಂದ 1 ಲಕ್ಷದ 20 ಸಾವಿರ ರೂ ಮನೆ ಕಟ್ಟಲು ಮಂಜೂರಾದರು. ಕೊನೆಯ ಬಿಲ್ ಇನ್ನೂ ಆಗಿಲ್ಲ, ಮನೆ ಕೆಲಸ ಕೂಡ ಅರ್ಧಕ್ಕೆ ನಿಂತಿದೆ. ಇರುವ ಒಬ್ಬ ಮಗನಿಗೆ ಈ ರೀತಿ ಸಮಸ್ಯೆ. ಇನ್ನೊಬ್ಬಳು ಮಗಳು ಅವರಿಬ್ಬರ ವಿಧ್ಯಾಭ್ಯಾಸದ ಕಡೆಗೂ ಗಮನಹರಿಸಬೇಕು ಕುಟುಂಬದಲ್ಲಿ ದುಡಿಯುವವನು ನಾನೊಬ್ಬನೆ ಆಗಿರುವುದರಿಂದ ತುಂಬಾ ತೊಂದರೆಯಲ್ಲಿದ್ದೇನೆಂದು ಕುಟುಂಬದ ಪರಿಸ್ಥಿತಿಯನ್ನು ಆನಂದ್ ವಿವರಿಸಿದ್ದಾರೆ.
ನಾನು ಧನ ಸಹಾಯ ಕೇಳಲ್ಲ, ದಯವಿಟ್ಟು ನನ್ನ ಮಗನಿಗೆ ಉಚಿತ ಶಿಕ್ಷಣ ಕೊಡಿಸಿ
ದುಡ್ಡು ಬೇಕೆಂದು ನಾನು ಕೇಳುತ್ತಿಲ್ಲ, ಕಷ್ಟಪಟ್ಟು ದುಡಿದು ಕುಟುಂಬ ನಿರ್ವಹಿಸುತ್ತೇನೆ, ಮುಂದೆ ನನ್ನ ಮಗನ ಭವಿಷ್ಯ ಉತ್ತಮವಾಗಿ ರೂಪುಗೊಳ್ಳಬೇಕು. ಹಾಗಾಗಿ ಆತನ ಶಿಕ್ಷಣಕ್ಕೆ ಸಹಾಯ ಮಾಡಿ ಎಂದು ಧಾನಿಗಳ ಹತ್ತಿರ ಕೇಳಿಕೊಂಡಿದ್ದಾರೆ. ಇದು ಆನಂದ್ ಕುಟುಂಬದ ಸಮಸ್ಯೆಯಾಗಿದ್ದು. ಈ ರೀತಿ ಬೆಳಕಿಗೆ ಬರದ ಅದೆಷ್ಟೋ ಘಟನೆಗಳು ಮರೆಯಾಗುತ್ತಿವೆ. ಕೋವಿಡ್ ಸೋಂಕು ಅದೆಷ್ಟೋ ಜನರ ಬದುಕಿಗೆ ಮುಳುವಾಗಿದ್ದು, ಬಡವರು, ಕೂಲಿ ಕಾರ್ಮಿಕರು ಮಧ್ಯಮವರ್ಗದವರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಹಳ್ಳಿಯ ಮುಗ್ಧ ಜನತೆಗೆ ಸರ್ಕಾರದಿಂದ ಬಂದ ಸೌಲಭ್ಯದ ಬಗ್ಗೆ ಸರಿಯಾದ ಮಾಹಿತಿಯಿಲ್ಲದೆ ಸಾಕಷ್ಟು ಕುಟುಂಬಗಳು ಸೌಲಭ್ಯ ವಂಚಿತವಾಗಿವೆ. ಇಲ್ಲಿ ಅಧಿಕಾರಿಗಳ, ಜನಪ್ರತಿನಿಧಿಗಳ ನಿರ್ಲಕ್ಷ್ಯ ಎದ್ದುಕಾಣುತ್ತಿದೆ.