ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಹೊಸ ಕೃಷಿ ಕಾಯ್ದೆಗಳು ರೈತರಿಗೆ ಮರಣ ಶಾಸನವಾಗಿದ್ದು, ದೆಹಲಿಯ ಗಡಿಭಾಗಗಳಲ್ಲಿ 2020 ನವೆಂಬರ್ ತಿಂಗಳಿಂದ ಆರಂಭವಾದ ರೈತ ಹೋರಾಟ ಇಲ್ಲಿಯವರೆಗೂ ಮುಂದುವರೆದಿದೆ. ಕಳೆದ ವರ್ಷ ಜೂನ್ 5 ರಂದು ಮೂರು ಕೃಷಿಕಾನೂನುಗಳನ್ನು ಕೇಂದ್ರ ಸರ್ಕಾರ ಸುಗ್ರೀವಾಜ್ಞೆಯ ಮೂಲಕ ಜಾರಿಗೆ ತಂದ ದಿವಸ. ಈ ಸಂಬಂಧ ಕೃಷಿ ಕಾನೂನುಗಳನ್ನು ವಿರೋಧಿಸಿ ಬಿಜೆಪಿ ಸಂಸದರು ಮತ್ತು ಶಾಸಕರ ಕಚೇರಿಗಳ ಮುಂದೆ ಕೃಷಿ ಕಾನೂನು ಪ್ರತಿಗಳನ್ನು ಸುಟ್ಟು ಜೂನ್ 5 ರಂದು`ಸಂಪೂರ್ಣ ಕ್ರಾಂತಿ ದಿನವನ್ನಾಗಿ ಆಚರಿಸಲು ಸಂಯುಕ್ತ ಕಿಸಾನ್ ಮೋರ್ಚಾ ಕರೆನೀಡಿದೆ.
ಕೇಂದ್ರ ಸರ್ಕಾರ ಮೊದಲಿಗೆ ಸುಗ್ರೀವಾಜ್ಞೆ ಮೂಲಕ ಜಾರಿಗೆ ತಂದ 3 ಕೃಷಿ ಕಾಯ್ದೆಗಳು 2020 ಸೆಪ್ಟೆಂಬರ್‌ನಲ್ಲಿ ಸಂಸತ್ತಿನಲ್ಲಿ ಅಂಗೀಕರಿಸಿತು, ರಾಷ್ಟ್ರಪತಿ ಕೂಡ ಸಹಿ ಹಾಕಿ ಅನುಮೋದನೆ ನೀಡಿದ್ದರು. ಆದರೆ ಈ ಕಾಯ್ದೆಗಳಿಂದ ತಮಗಾಗುವ ನಷ್ಟವನ್ನು ತಿಳಿದ ರೈತರು ದೇಶಾದ್ಯಂತ ರೈತ ಸಂಘಗಳು ಒಗ್ಗೂಡಿ ಒಕ್ಕೊರಳಿನಿಂದ ಧ್ವನಿ ಎತ್ತಿದ್ದಾರೆ. ಸರ್ಕಾರ ರೈತರ ಮನವೊಲಿಸುವ ಪ್ರಯತ್ನ ನಡೆಸಿದ್ದರು ವಿಫಲವಾಗಿದ್ದು, ಕಾನೂನು ಹಿಂಪಡೆಯುವವರೆಗೂ ನಮ್ಮ ಪ್ರತಿಭಟನೆ ಮುಂದುವರೆಯುತ್ತದೆ ಎಂಬುವುದು ಪ್ರತಿಭಟನಾ ನಿರತ ರೈತರ ಮಾತಾಗಿದೆ. ಕಳೆದ ನವೆಂಬರ್ ನಿಂದ ಹೊಸ ಕೃಷಿ ಕಾಯ್ದೆಗಳನ್ನು ವಿರೋಧಿಸಿ ಹಾಗೂ ರೈತರ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ ಖಾತರಿಪಡಿಸುವ ಕಾನೂನು ಜಾರಿಗೆ ಒತ್ತಾಯಿಸಿ ಸ್ವಂತ ಮನೆಗಳನ್ನು ತೊರೆದು ದೆಹಲಿಯ ಗಡಿಭಾಗಗಳಲ್ಲಿ ಬೀಡು ಬಿಟ್ಟಿದ್ದಾರೆ.
ಜೂನ್ 5 2020 ಕೇಂದ್ರ ಸರ್ಕಾರ ಮೊದಲಿಗೆ ಸುಗ್ರೀವಾಜ್ಞೆ ಮೂಲಕ ಕೃಷಿಕಾಯ್ದೆಗಳನ್ನು ಜಾರಿಗೆ ತಂದ ಕರಾಳ ದಿನ ಒಂದೆಡೆಯಾದ್ರೆ, ಜೂನ್ 5 1974 ರಲ್ಲಿ ಪಾಟ್ನಾದ ಗಾಂಧಿ ಮೈದಾನದಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಜಯಪ್ರಕಾಶ್ ನಾರಾಯಣ್ ಅವರು ʼಸಂಪೂರ್ಣ ಕ್ರಾಂತಿ’ ದಿವಸ ಎಂದು ಘೋಷಿಸಿ ಅಂದಿನ ಕೇಂದ್ರ ಸರ್ಕಾರದಿಂದಾದ ಅನ್ಯಾಯದ ವಿರುದ್ಧ ಆಂದೋಲನ ಆರಂಭಿಸಿ, ಹೊಸ ಸಾಮಾಜಿಕ ವ್ಯವಸ್ಥೆ ರೂಪಿಸಲು ಪ್ರತಿ ಹಳ್ಳಿಯಲ್ಲೂ `ಜನತಾ ಸರ್ಕಾರ್’ ರಚಿಸಿದ್ದರು. ಆದರ ನೆನಪಿಗೆ ಸಂಯುಕ್ತ ಕಿಸಾನ್ ಮೋರ್ಚಾ ಹೊಸ ಕೃಷಿ ಕಾಯ್ದೆಗಳ ಪ್ರತಿಗಳನ್ನು ಸುಟ್ಟು ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಲಿದೆ ಎಂದು ಮೂಲಗಳು ತಿಳಿಸಿವೆ.
ಸಂಯುಕ್ತ ಕಿಸಾನ್ ಮೋರ್ಚಾ ಈ ಸಂಬಂಧ ಮಾಧ್ಯಮ ಪ್ರಕಟಣೆಯನ್ನು ಬಿಡುಗಡೆ ಮಾಡಿದ್ದು, ಜೂನ್ 5 ರಂದು ದೇಶಾದ್ಯಂತ ‘ಸಂಪೂರ್ಣ ಕ್ರಾಂತಿ ದಿವಾಸ್’ ಆಚರಿಸಲಾಗುವುದು ಎಂದು ತಿಳಿಸಿದೆ. ಹೊಸ ಮೂರು ಕೃಷಿ ಕಾನೂನುಗಳ ಪ್ರತಿಗಳನ್ನು ಬಿಜೆಪಿ ಸಂಸದರು, ಶಾಸಕರು ಮತ್ತು ಜನ ಪ್ರತಿನಿಧಿಗಳ ಕಚೇರಿಗಳ ಮುಂದೆ ಸುಡುವಂತೆ ನಾಗರಿಕರಿಗೆ ಮತ್ತು ರಾಜ್ಯಗಳ ರೈತ ಸಂಘಟನೆಗಳಿಗೆ ಮನವಿ ಮಾಡಿದೆ. ಜೊತೆಗೆ ಕೇಂದ್ರ ಸರ್ಕಾರಕ್ಕೆ ಕೃಷಿ ಕಾನೂನುಗಳನ್ನು ಹಿಂಪಡೆಯುವಂತೆ ಆಗ್ರಹಿಸಲು ತಿಳಿಸಿದೆ.