ರಾಜ್ಯದಲ್ಲಿ ನಾಯಕತ್ವ ಬದಲಾವಣೆಯ ಕೂಗು ಹೆಚ್ಚಾಗುತ್ತಿರುವ ಬೆನ್ನಲ್ಲೇ, ಬಿಜೆಪಿಯೊಳಗೆ ಆಂತರಿಕ ಬೇಗುದಿ ಮತ್ತಷ್ಟು ತೀವ್ರಗೊಳ್ಳುತ್ತಿದೆ. ಬಿಜೆಪಿ ನಾಯಕರೇ ತಮ್ಮೊಳಗಿನ ಕಚ್ಚಾಟವನ್ನು ಬಹಿರಂಗವಾಗಿ ತೋಡಿಕೊಳ್ಳುತ್ತಿದ್ದಾರೆ. ಬಿಜೆಪಿಯೊಳಗಿನ ಈ ಬೆಂಕಿಗೆ ಕಾಂಗ್ರೆಸ್ ತುಪ್ಪ ಸುರಿಯುವ ಪ್ರಯತ್ನವನ್ನು ಮಾಡುತ್ತಿದೆ.
ಸಿಎಂ ಯಡಿಯೂರಪ್ಪ ಅವರನ್ನು ಬದಲಾಯಿಸಿ ಹೊಸ ನಾಯಕರನ್ನು ಸಿಎಂ ಮಾಡಬೇಕು ಎಂಬ ರಾಜಕೀಯ ಕೆಸರೆರಚಾಟವನ್ನು ತೀಕ್ಷ್ಣವಾಗಿ ಟೀಕಿಸಿರುವ ಕಾಂಗ್ರೆಸ್, ಕರೋನಾ ಇಲ್ಲದೇ ಇದ್ದರೆ ಇಷ್ಟೊತ್ತಿಗೆ ಬಿಜೆಪಿ ನಾಯಕರು ರೆಸಾರ್ಟ್ ಸೇರಿರುತ್ತಿದ್ದರು, ಎಂದು ಲೇವಡಿ ಮಾಡಿದೆ.
“ಇಷ್ಟು ದಿನ ಕರೋನಾ ನಿರ್ವಹಣೆಗೆ ಹೊರಬರದೆ ಅಡಗಿದ್ದ ಬಿಜೆಪಿ ಸಚಿವ ಶಾಸಕರೆಲ್ಲ ಈಗ ಕುರ್ಚಿ ಕದನಕ್ಕಾಗಿ ದಿಢೀರ್ ಪ್ರತ್ಯಕ್ಷರಾಗಿದ್ದಾರೆ,” ಎಂದು ಕಾಂಗ್ರೆಸ್’ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ಪೋಸ್ಟ್ ಮಾಡಲಾಗಿದೆ.
ತಮ್ಮ ಅಧಿಕಾರಾವಧಿಯಲ್ಲಿ ಕೇವಲ ಖುರ್ಚಿಗಾಗಿ ಜಗಳದಲ್ಲಿ ತೊಡಗುವ ಪಕ್ಷದಿಂದ ಜನರ ರಕ್ಷಣೆ ಸಾಧ್ಯವಿಲ್ಲ ಎಂದು ಕಾಂಗ್ರೆಸ್ ಟೀಕಿಸಿದೆ.
ನಳಿನ್ ಕುಮಾರ್ ಕಟೀಲ್ ವಿರುದ್ದ ಟೀಕಾಪ್ರಹಾರ:
ಎರಡು ದಿನಗಳ ಹಿಂದೆ ನಾಯಕತ್ವ ಬದಲಾವಣೆಯ ಕುರಿತು ಸಚಿವ ಸಿ ಪಿ ಯೋಗೇಶ್ವರ್ ಅವರು ನೀಡದ ಹೇಳಿಕೆಗೆ ಬಿಜೆಪಿಯಲ್ಲಿಯೇ ತೀವ್ರ ಅಪಸ್ವರ ಕೇಳಿ ಬರುತ್ತಿದ್ದು, ಬಿಜೆಪಿ ರಾಜ್ಯಾಧ್ಯಕ್ಷರಾದ ನಳಿನ್ ಕುಮಾರ್ ಕಟೀಲ್ ಅವರು ಡ್ಯಾಮೇಜ್ ಕಂಟ್ರೋಲ್ ಮಾಡಲು ಮುಂದಾಗಿದ್ದಾರೆ. ಸದ್ಯಕ್ಕೆ ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಇಲ್ಲ ಎಂದು ಹೇಳಿ ಗೊಂದಲಗಳಿಗೆ ತೆರೆ ಎಳೆಯುವ ಪ್ರಯತ್ನವನ್ನು ಮಾಡಿದ್ದಾರೆ.
ಬಿಜೆಪಿ ರಾಜ್ಯಾಧ್ಯಕ್ಷರ ಈ ಡ್ಯಾಮೇಜ್ ಕಂಟ್ರೋಲ್ ನಡೆಯನ್ನು ಟೀಕಿಸಿರುವ ಕಾಂಗ್ರೆಸ್, ಸರ್ಕಾರದ ಆದ್ಯತೆ ಡ್ಯಾಮೆಜ್ ಕಂಟ್ರೋಲ್ ಹೊರತಾಗಿ ಕರೋನಾ ಕಂಟ್ರೋಲ್ ಅಲ್ಲ ಎಂದು ಹೇಳಿದೆ.
“ಯತ್ನಾಳ್’ತನ್ನಂತೂ ಏನೂ ಮಾಡಲಾಗಲಿಲ್ಲ, ಯೋಗೀಶ್ವರ್ರವರ ವಿರುದ್ಧವಾದರೂ ಕ್ರಮ ಕೈಗೊಂಡು ತಮ್ಮ ಬೆನ್ನುಮೂಳೆ ಗಟ್ಟಿ ಇದೆ ಎಂದು ನಿರೂಪಿಸುವಿರಾ ನಳಿನ್ ಕುಮಾರ್ ಕಟೀಲ್ ಅವರೇ ಎಂದು,” ಟ್ವೀಟ್ ಮೂಲಕ ಕಾಂಗ್ರೆಸ್ ಟೀಕಿಸಿದೆ.
ಇನ್ನು ಬಿಜೆಪಿ ಕೇವಲ ತನ್ನ ಒಡೆದ ಮನೆಯ ಬಗ್ಗೆ ಚಿಂತೆ ಮಾಡುತ್ತಿದೆಯೇ ಹೊರತಾಗಿ ಜನರ ಬಗ್ಗೆ ಎಳ್ಳಷ್ಟೂ ಕಾಳಜಿ ಹೊಂದಿಲ್ಲ ಎಂದು ಕರ್ನಾಟಕ ಕಾಂಗ್ರೆಸ್ ಆರೋಪಿಸಿದೆ.