ಇಡೀ ದೇಶಾದ್ಯಂತ ಪ್ರಾಣವಾಯು ಆಕ್ಸಿಜನ್ಗಾಗಿ ಜನರು ಹರ ಸಾಹಸ ಪಡುತಿದ್ದಾರೆ. ಇಂದು ದೇಶದಲ್ಲಿ ಸಂಭವಿಸುತ್ತಿರುವ ಬಹುತೇಕ ಎಲ್ಲ ಸಾವುಗಳೂ ಬೆಡ್ ಸಿಗದೇ ಸಂಭವಿಸುತ್ತಿರುವ ಸಾವುಗಳಾಗಿದ್ದು ಎಲ್ಲ ಬೆಡ್ಗಳಿಗೂ ಆಕ್ಸಿಜನ್ ಸೌಲಭ್ಯ ಇರದಿರುವುದೂ ಸಾವಿನ ಸಂಖ್ಯೆ ಹೆಚ್ಚಳಗೊಳ್ಳಲು ಕಾರಣವಾಗಿದೆ. ನಮ್ಮ ಸರ್ಕಾರಗಳು ಈಗ ಆಕ್ಸಿಜನ್ ಉತ್ಪಾದನೆ ಹೆಚ್ಚಿಸಲು ಕ್ರಮ ಕೈಗೊಳ್ಳುತ್ತಿವೆ. ರಾಜ್ಯ ಅರೋಗ್ಯ ಸಚಿವ ಡಾ ಸುಧಾಕರ್ ಅವರು ಎಲ್ಲ ಜಿಲ್ಲಾ ಕೇಂದ್ರಗಳಲ್ಲಿಯೂ ಆಕ್ಸಿಜನ್ ಉತ್ಪಾದನಾ ಘಟಕಗಳನ್ನು ನಿರ್ಮಿಸುವುದಾಗಿ ಹೇಳಿದ್ದಾರೆ.

ಸಚಿವರ ಹೇಳಿಕೆಯ ನಡುವೆಯೇ ರಾಜ್ಯದಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿದೆ. ರಾಜ್ಯದಲ್ಲಿನ ಒಟ್ಟು ಸೋಂಕಿತರ ಸಂಖ್ಯೆ 17,90,104ಕ್ಕೆ ಏರಿಕೆಯಾಗಿದೆ. ಕೋವಿಡ್ ರೋಗಿಗಳಿಗೆ ಬೆಡ್ ಸಿಗುತ್ತಿಲ್ಲ ಎಂದು ಪರದಾಡುತ್ತಿದ್ದಾರೆ. ಮತ್ತೊಂದು ಕಡೆ ಆಕ್ಸಿಜನ್ ಕೊರತೆಯೂ ಕಾಡುತ್ತಿದೆ.ವಿವಿಧ ಜಿಲ್ಲೆಗಳಲ್ಲಿ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳು ಕೋವಿಡ್ ಸೋಂಕಿತರಿಗೆ ಆಕ್ಸಿಜನ್ ಒದಗಿಸಲು ಹರಸಾಹಸಪಡುತ್ತಿವೆ. 10 ಜಿಲ್ಲಾಸ್ಪತ್ರೆ ಮತ್ತು 30 ತಾಲೂಕು ಆಸ್ಪತ್ರೆಗಳಲ್ಲಿ ಆಮ್ಲಜನಕ ಉತ್ಪಾದನಾ ಘಟಕ ಸ್ಥಾಪನೆಗೆ ಆರೋಗ್ಯ ಇಲಾಖೆ ಒಪ್ಪಿಗೆ ನೀಡಿದೆ.

ಕೋವಿಡ್ ಪರಿಸ್ಥಿತಿ ಹಿನ್ನಲೆಯಲ್ಲಿ ಈ ವಿಷಯವನ್ನು ತುರ್ತಾಗಿ ಪರಿಗಣಿಸಿ ಕ್ರಮ ಕೈಗೊಳ್ಳಬೇಕು ಎಂದು ಸೂಚನೆ ಕೊಡಲಾಗಿದೆ. ಘಟಕ ಸ್ಥಾಪನೆಗೆ ಅಗತ್ಯವಿರುವ ಸಿವಿಲ್ ಮತ್ತು ವಿದ್ಯುತ್ ಕಾಮಗಾರಿಯನ್ನು ತಕ್ಷಣವೇ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವ್ಯಾಪ್ತಿಯಲ್ಲಿ ಕಾರ್ಯ ನಿರ್ವಹಣೆ ಮಾಡುವ ಅರ್ಹ ಗುತ್ತಿಗೆದಾರನಿಂದ ಅನುಷ್ಠಾನಗೊಳಿಸಬೇಕು ಎಂದು ಸೂಚಿಸಲಾಗಿದೆ. 10 ಜಿಲ್ಲಾ ಆಸ್ಪತ್ರೆಗಳಲ್ಲಿ 500 ಎಲ್ಪಿಎಂ ಮತ್ತು 30 ತಾಲೂಕು ಆಸ್ಪತ್ರೆಗಳಲ್ಲಿ 390 ಎಲ್ಪಿಎಂ ಸಾಮರ್ಥ್ಯದ ಆಮ್ಲಜನಕ ಉತ್ಪಾದನಾ ಘಟಕ ನಿರ್ಮಾಣ ಮಾಡಲಾಗುತ್ತಿದೆ. ಪಿಎಸ್ಎ ತಂತ್ರಜ್ಞಾನದ ಅಡಿ ಘಟಕ ನಿರ್ಮಾಣಗೊಳ್ಳಲಿದೆ.40 ಆಸ್ಪತ್ರೆಗಳ ಪೈಕಿ ಬೆಂಗಳೂರು, ಕಲಬುರಗಿ, ಮೈಸೂರು, ಉತ್ತರ ಕನ್ನಡ, ದಕ್ಷಿಣ ಕನ್ನಡ, ಗದಗ, ಹಾಸನ ಮತ್ತು ಶಿವಮೊಗ್ಗದ ಜಿಲ್ಲಾ ಆಸ್ಪತ್ರೆಗಳು ಸೇರಿವೆ.
ಉತ್ತರ ಕರ್ನಾಟಕ ಭಾಗದ ಬಾಗಲಕೋಟೆ ಜಿಲ್ಲೆಯಲ್ಲಿಯೂ ಜೀವವಾಯು ಸಿಗದೇ ಅದೆಷ್ಟೋ ಮಂದಿ ನರಳಿ ನರಳಿ ಪ್ರಾಣ ಬಿಡುತ್ತಿದ್ದಾರೆ. ಆದರೆ ಅಂಗೈಯಲ್ಲಿ ಬೆಣ್ಣೆ ಇಟ್ಟುಕೊಂಡು ತುಪ್ಪಕ್ಕೆ ಅಲೆಯುತ್ತಿದೆ ಬಾಗಲಕೋಟೆ ಜಿಲ್ಲಾಡಳಿತ. ಡಿಸಿಎಂ ಗೋವಿಂದ ಕಾರಜೋಳ ಕ್ಷೇತ್ರದಲ್ಲಿಯೇ ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯ ಕಣ್ಣಿಗೆ ರಾಚುತ್ತಿದೆ. ಆಸ್ಪತ್ರೆಗಳಲ್ಲಿ ಆಕ್ಸಿಜನ್ ಇಲ್ಲದ ಪರಿಣಾಮ ಜನ ಉಸಿರಾಡಲು ಸಾಧ್ಯವಾಗದೆ ಪ್ರಾಣ ಬಿಡುತ್ತಿದ್ದಾರೆ. ಇಷ್ಟೆಲ್ಲಾ ಆದರೂ ಬಾಗಲಕೋಟೆ ಜಿಲ್ಲಾಡಳಿತ ಇನ್ನೂ ಎಚ್ಚೆತ್ತುಕೊಂಡಿಲ್ಲ. ಸಮಸ್ಯೆಗೆ ತಮ್ಮಲ್ಲಿ ಪರಿಹಾರವಿದ್ದರೂ ಸಮಸ್ಯೆ ಬಗೆಹರಿಸುವ ಬಗ್ಗೆ ತಲೆಕೆಡಿಸಿಕೊಂಡಿಲ್ಲ. ಆಕ್ಸಿಜನ್ ಯಂತ್ರೋಪಕರಣ ಧೂಳು ಹಿಡಿಯುತ್ತಿದೆ. ಎರಡು ತಿಂಗಳಾದರೂ ಯಂತ್ರೋಪಕರಣ ಜೋಡಣೆ ಮಾಡದೆ ನಿರ್ಲಕ್ಷ್ಯವಹಿಸಿದೆ.

ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲೂಕು ಆಸ್ಪತ್ರೆಗೆ ಆಕ್ಸಿಜನ್ ಉತ್ಪಾದನಾ ಯಂತ್ರೋಪಕರಣಗಳನ್ನು ತಂದು ತಿಂಗಳಾಗಿದ್ದರೂ ಅದರ ಜೋಡಣೆಯಾಗಿಲ್ಲ. ಆಕ್ಸಿಜನ್ ಯಂತ್ರೋಪಕರಣ ಧೂಳು ಹಿಡಿಯುತ್ತಿದ್ದರೂ ಜಿಲ್ಲಾಡಳಿತ ಕೈಕಟ್ಟಿ ಕುಳಿತಿದೆ. ಇಲ್ಲಿ ದಿನಕ್ಕೆ 20 ಜಂಬೋ ಸಿಲಿಂಡರ್ ಆಕ್ಸಿಜನ್ ಉತ್ಪಾದಿಸುವ ಯೋಜನೆ ಹಾಕಿಕೊಳ್ಳಲಾಗಿದೆ. ಆದರೆ ಈ ಸಂದಿಗ್ದ ಪರಿಸ್ಥಿತಿಯಲ್ಲೂ ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯ ವ್ಯವಸ್ಥೆಗೆ ಹಿಡಿದ ಕೈ ಗನ್ನಡಿ ಆಗಿದೆ. ಆಕ್ಸಿಜನ್ ಉತ್ಪಾದನೆ ಮಾಡದೆ ನಿರ್ಲಕ್ಷ್ಯವಹಿಸಲಾಗುತ್ತಿದೆ.
ಆಕ್ಸಿಜನ್ ಸ್ವಯಂ ಉತ್ಪಾದಿಸಿಕೊಳ್ಳುವ ಅವಕಾಶ ಇದ್ದರೂ ಬಾಗಲಕೋಟೆ ಜಿಲ್ಲಾಡಳಿತ ನಿದ್ದೆ ಮಾಡುತ್ತಿದೆ. ಮುಧೋಳ ತಾಲೂಕು ಆಸ್ಪತ್ರೆಯಲ್ಲಿಯೇ ಸದ್ಯ 30 ಜನ ಕೊವಿಡ್ ರೋಗಿಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಆಕ್ಸಿಜನ್ ಘಟಕ ಶುರುವಾದರೆ ಇನ್ನು 20 ಜನರಿಗೆ ಪ್ರತಿ ದಿನ ಆಕ್ಸಿಜನ್ ನೀಡಬಹುದು. ಆಕ್ಸಿಜನ್ ಘಟಕ ಸ್ಥಾಪನೆಯಾಗದ ಕಾರಣ ಕೋವಿಡ್ ಸೋಂಕಿತರನ್ನು ವಿವಿಧ ಖಾಸಗಿ ಆಸ್ಪತ್ರೆಗೆ ರವಾನಿಸಲಾಗುತ್ತಿದೆ. ಆದಷ್ಟು ಬೇಗ ಜಿಲ್ಲಾಡಳಿತ ನಿದ್ದೆಯಿಂದ ಎದ್ದು ಘಟಕ ಚಾಲನೆ ಮಾಡಿ ಆಕ್ಸಿಜನ್ ಉತ್ಪಾದಿಸಬೇಕಿದೆ. ಇಲ್ಲದಿದ್ದರೆ ಜಿಲ್ಲೆಯಲ್ಲಿ ಆಕ್ಸಿಜನ್ ಸಮಸ್ಯೆಯಿಂದ ಪ್ರಾಣ ಕಳೆದುಕೊಳ್ಳುತ್ತಿರುವವರ ಸಾವಿಗೆ ಜಿಲ್ಲಾಡಳಿತದ ನಿರ್ಲಕ್ಷ್ಯವೇ ಕಾರಣವಾಗಿದೆ.

ಈ ಕುರಿತು ಪ್ರತಿಧ್ವನಿ ವರದಿಗಾರ ಮುಧೋಳ ತಾಲ್ಲೂಕು ವೈದ್ಯಾಧಿಕಾರಿ ಡಾ ವೆಂಕಟೇಶ್ ಅವರಿಂದ ಪ್ರತಿಕ್ರಿಯೆ ಕೇಳಿದಾಗ ಈ ಯಂತ್ರಗಳು ಬಂದು ಎರಡು ತಿಂಗಳಾಗಿರುವುದನ್ನು ಒಪ್ಪಿಕೊಂಡರಲ್ಲದೆ ಈ ಕುರಿತು ತಾವು ಹಲವು ಬಾರಿ ಗುತ್ತಿಗೆದಾರರಿಗೆ ಹೇಳಿದ್ದರೂ ಅವರು ಜೋಡಣೆ ಮಾಡಿಲ್ಲ ಎಂದರು. ಇದೇ ಗುತ್ತಿಗೆದಾರರು ಇತರ 4-5 ಕಡೆಗಳಲ್ಲಿ ಗುತ್ತಿಗೆ ಪಡೆದುಕೊಂಡಿದ್ದು ಬ್ಯುಸಿ ಇರುವುದರಿಂದ ಜೋಡಣೆ ವಿಳಂಬವಾಗಿದೆ ಎಂದರಲ್ಲದೆ ಮುಂದಿನ 15 ನೇ ತಾರೀಖಿನೊಳಗೆ ಯಂತ್ರ ಜೋಡಿಸಿ ಉತ್ಪಾದನೆ ಆರಂಭಿಸವ ಬಗ್ಗೆ ಮಾಹಿತಿ ತಿಳಿಸಿದ್ದಾರೆ.
ಬಾಗಲಕೋಟೆ ಜಿಲ್ಲೆಯಲ್ಲಿ ಕರೋನಾ ರೋಗಿಗಳಿಗೆ ನಿತ್ಯ ಸರಾಸರಿ 18 ಕಿಲೋ ಲೀಟರ್ ನಷ್ಟು ಆಮ್ಲಜನಕದ ಬೇಡಿಕೆ ಇದೆ. ಆದರೆ ಎಂಟು ಕಿಲೋ ಲೀಟರ್ ಮಾತ್ರ ಪೂರೈಕೆ ಆಗುತ್ತಿದೆ. ಈ ಕುರಿತು ಜಿಲ್ಲಾ ಉಸ್ತುವಾರಿ ಸಚಿವ ಉಮೇಶ್ ಕತ್ತಿ ಅವರಿಗೆ ಸಭೆಯೊಂದರಲ್ಲಿ ಮನವಿ ಮಾಡಿಕೊಂಡ ಜಿಲ್ಲಾ ಆರೋಗ್ಯ ಅಧಿಕಾರಿ ಡಾ ಅನಂತ್ ದೇಸಾಯಿ ಅವರು ಪರಿಸ್ಥಿತಿ ಕೈ ಮೀರುವ ಮುನ್ನ ಆಮ್ಲಜನಕ ಪೂರೈಕೆಗೆ ವ್ಯವಸ್ಥೆ ಮಾಡಿ ಎಂದು ಹೇಳಿದ್ದರು.

ಜಿಲ್ಲೆಯ ಉಸ್ತುವಾರಿ ವಹಿಸಿಕೊಂಡ ನಂತರ ಬುಧವಾರ ಸಚಿವ ಉಮೇಶ ಕತ್ತಿ ಮೊದಲ ಬಾರಿಗೆ ಬಾಗಲಕೋಟೆಗೆ ಭೇಟಿ ನೀಡಿ ಜನಪ್ರತಿನಿಧಿಗಳು, ಅಧಿಕಾರಿಗಳ ಸಭೆ ನಡೆಸಿ ಕೋವಿಡ್ ಪರಿಸ್ಥಿತಿ ಅವಲೋಕಿಸಿದ ಸಮಯದಲ್ಲಿ ಡಿಎಚ್ಒ ವಾಸ್ತವ ಸ್ಥಿತಿಯನ್ನು ಮನದಟ್ಟು ಮಾಡಿಸಿದರು. ಮಂಗಳವಾರ ಸಂಜೆ ಬಾಗಲಕೋಟೆ ಜಿಲ್ಲಾ ಆಸ್ಪತ್ರೆಯಲ್ಲಿ ಆಮ್ಲಜನಕದ ಕೊರತೆ ಆಗಿ ಅರ್ಧ ಗಂಟೆ ಕಳೆದಿದ್ದರೆ ದುರಂತವೇ ಘಟಿಸುತ್ತಿತ್ತು. ಪರಿಸ್ಥಿತಿಯ ಗಂಭೀರತೆ ಅರಿತ ಶಾಸಕ ವೀರಣ್ಣ ಚರಂತಿಮಠ ತಾವು ಕಾರ್ಯಾಧ್ಯಕ್ಷರಾಗಿರುವ ಹಾನಗಲ್ ಕುಮಾರೇಶ್ವರ ಆಸ್ಪತ್ರೆಯಲ್ಲಿ ಇದ್ದ ಆಮ್ಲಜನಕದ ಸಿಲಿಂಡರ್ ಕಳುಹಿಸಿಕೊಟ್ಟು ಅನಾಹುತ ತಪ್ಪಿಸಿದರು. ಪರಿಸ್ಥಿತಿ ಹೀಗಿದ್ದರೂ ಅಧಿಕಾರಿಗಳು ಆಕ್ಸಿಜನ್ ಘಟಕ ಜೋಡಣೆಗೆ ಮುಂದಾಗದಿರುವುದು ನಿಜಕ್ಕೂ ವಿಷಾದನೀಯ.