ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯನ ʼಬಿಬಿಎಂಪಿ ಬೆಡ್ ಅವ್ಯವಹಾರ ಬಯಲುʼ ಪ್ರಹಸನ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಸರ್ಕಾರದ ವೈಫಲ್ಯವನ್ನು ಮರೆ ಮಾಚಲು ಒಂದು ಸಮುದಾಯದ ಮೇಲೆ ಗೂಬೆ ಕೂರಿಸುವ ಪ್ರಯತ್ನಕ್ಕೆ ಪ್ರತಿಪಕ್ಷ ಮಾತ್ರವಲ್ಲದೆ ಸಾಮಾಜಿಕ ಜಾಲತಾಣ ಬಳಕೆದಾರರು ಕೂಡಾ ಕಿಡಿಕಾರಿದ್ದಾರೆ.
ತೇಜಸ್ವಿ ಸೂರ್ಯನ ʼಕೋಮು ಆಯಾಮದ ತಿರುಚುವಿಕೆಗೆʼ ಕಾಂಗ್ರೆಸ್ ಖಂಡನೆ ವ್ಯಕ್ತಪಡಿಸಿದ್ದು, ಬೆಂಗಳೂರು ದಕ್ಷಿಣದ ‘ಎಳೆ ಸಂಸದ’ ಈ ಸಮಾಜಕ್ಕೆ ಅಂಟಿದ ಕರೋನಾಗಿಂತಲೂ ಭೀಕರ ವೈರಸ್ ಎಂದಿದೆ.
ತಮ್ಮ ವೈಫಲ್ಯ, ಭ್ರಷ್ಟಾಚಾರ ಮರೆಮಾಚಲು ಬಿಜೆಪಿ ಮೊರೆ ಹೋಗುವುದೇ ಕೋಮು ಬಣ್ಣಕ್ಕೆ. ಬಿಬಿಎಂಪಿ ವಾರ್ ರೂಮಿನಲ್ಲಿ ಸರ್ವ ಜಾತಿ, ಜನಾಂಗದ 205 ಮಂದಿ ಕೆಲಸ ಮಾಡುತ್ತಿದ್ದಾರೆ. ಈ ತಲೆಮಾಸದ ಎಳೆ ಸಂಸದನ ಕೋಮುಕಣ್ಣಿಗೆ ಒಂದು ಕೋಮಿನ 16 ಜನರಷ್ಟೇ ಕಂಡಿದ್ದಾರೆ ಎಂದು ಕಾಂಗ್ರೆಸ್ ತರಾಟೆಗೆ ತೆಗೆದುಕೊಂಡಿದೆ.
ಸಂಕಟದ ಹೊತ್ತಿನಲ್ಲೂ ಬಿಜೆಪಿಗರ ರಕ್ತದೊಳಗೆ ಅಡಕವಾಗಿರುವ ವಿಷವನ್ನು ಬಿಡಲಾರರು. ಕಳೆದ ಭಾರಿ ತಮ್ಮ ವೈಫಲ್ಯಕ್ಕೆ “ತಬ್ಲಿಘಿ” ಹೆಸರನ್ನು ಬಳಸಿದ್ದಕ್ಕೆ ಕೋರ್ಟ್ ಛಿಮಾರಿ ಹಾಕಿದ್ದು ಮರೆತು ಈಗಲೂ ಮತ್ತೆ ಕೋಮು ಬಣ್ಣ ಬಡಿಯುತ್ತಿದ್ದಾರೆ. ಬಿಜೆಪಿ ಈ ದೇಶಕ್ಕೆ ಅಂಟಿದ ಮಾರಣಾಂತಿಕ ವೈರಸ್. ಬಿಜೆಪಿ ಮುಕ್ತವಾದರೆ ಕರೊನವೂ ಮುಕ್ತವಾದಂತೆ ಎಂದು ಕಾಂಗ್ರೆಸ್ ತನ್ನ ಅಧಿಕೃತ ಟ್ವಿಟರ್ ಖಾತೆಯಿಂದ ಪ್ರತಿಕ್ರಿಯಿಸಿದೆ.
ಕರೋನಾ ಸಂಧರ್ಭದಲ್ಲೂ ಬಿಜೆಪಿ ಕೋಮು ಧ್ವೇಷ ಬಿತ್ತುವ ರಾಜಕಾರಣದಲ್ಲಿ ತೊಡಗಿರುವುದನ್ನು ಪ್ರಜ್ಞಾವಂತ ನಾಗರಿಕರು ಖಂಡಿಸುತ್ತಿದ್ದಾರೆ. ಕರೋನಾದಿಂದ ಮೃತಪಟ್ಟವರ ಅಂತ್ಯಸಂಸ್ಕಾರ ನಡೆಸಲು ಕುಟುಂಬಸ್ಥರೂ ಭಯಬಿದ್ದು ಹಿಂದೇಟು ಹಾಕುತ್ತಿದ್ದಾರೆ, ಅಂತಹ ಸಂಧರ್ಭದಲ್ಲಿ ಮುಸ್ಲಿಮ್ ಯುವಕರು ಅಂತಹ ಮೃತದೇಹಗಳ ಅಂತಿಮ ಸಂಸ್ಕಾರವನ್ನು ಗೌರವಯುತವಾಗಿ ನಡೆಸುತ್ತಿದ್ದಾರೆ. ಹಲವು ಕಡೆಗಳಲ್ಲಿ, ಮಸೀದಿಗಳೇ ಕೋವಿಡ್ ಕೇರ್ ಸೆಂಟರ್ಗಳಾಗಿ ಸೇವೆಯಲ್ಲಿವೆ. ಆದರೂ, ತನ್ನ ಮಾನ ಉಳಿಸುವ ಏಕೈಕ ಕಾರಣದಿಂದ ಮುಸ್ಲಿಮರ ವಿರುದ್ಧ ಬಿಜೆಪಿ ಅಪಪ್ರಚಾರ ನಡೆಸುತ್ತಿದೆ ಎಂದು ಸಾಮಾಜಿಕ ಜಾಲತಾಣದ ಹಲವಾರು ಬಳಕೆದಾರರು ಬಿಜೆಪಿ ನಡೆಯನ್ನು ಖಂಡಿಸಿದ್ದಾರೆ.