ರಾಜ್ಯದಲ್ಲಿ ಈಗ ಲಾಕ್‍ಡೌನ್ ಹೇರಿಕೆ ಮಾಡಿರುವುದರಿಂದ ಈಗಾಗಲೇ ಬಸವಳಿದು ಹೋಗಿರುವ ದುಡಿಯುವ ವರ್ಗದ ಜನರಿಗೆ ನ್ಯಾಯಯುತವಾದ ಆರ್ಥಿಕ ಪ್ಯಾಕೇಜನ್ನು ಘೋಷಿಸುವ ಮೂಲಕ ಬಿಕ್ಕಟ್ಟಿನಲ್ಲಿರುವ ರಾಜ್ಯದ ದುಡಿಯುವ ಸಮುದಾಯಗಳ ಸಂಕಷ್ಟವನ್ನು ಹೋಗಲಾಡಿಸಬೇಕು ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಪತ್ರ ಬರೆದು ಒತ್ತಾಯಿಸಿದ್ದಾರೆ.
ಸಿದ್ದರಾಮಯ್ಯ ಅವರ ಪ್ರಮುಖ ಬೇಡಿಕೆಗಳು
ಉತ್ತರ ಕರ್ನಾಟಕವೂ ಸೇರಿದಂತೆ ಅನೇಕ ಜಿಲ್ಲೆಗಳ ಜನ ಬೇಸಿಗೆಯಲ್ಲಿ ನಗರಗಳಿಗೆ ವಲಸೆ ಹೋಗಿ ಕೂಲಿ ನಾಲಿ ಮಾಡಿ ಒಂದಿಷ್ಟು ಹಣ ಸಂಪಾದಿಸಿ ಅದನ್ನು ಮುಂಗಾರಿನ ಕೃಷಿ ಕೆಲಸಗಳಿಗೆ ವಿನಿಯೋಗಿಸುತ್ತಾರೆ. ಈಗ ಲಾಕ್ ಡೌನ್ ಹೇರಿಕೆ ಮಾಡಿರುವುದರಿಂದ ಅವರ ದುಡಿಮೆ ಸಂಪೂರ್ಣ ಹಾಳಾಗಿದೆ. ದುಡಿಯಲೆಂದು ಬಂದವರು ಮರಳಿ ವಾಪಸ್ಸು ಹೋಗಿದ್ದಾರೆ. ಆದ್ದರಿಂದ ಸರ್ಕಾರ ಈ ಎಲ್ಲ ರೈತಾಪಿ ಕುಟುಂಬಗಳಿಗೆ ಬೀಜ, ಗೊಬ್ಬರ, ಔಷಧ ಮುಂತಾದವುಗಳನ್ನು ಉಚಿತವಾಗಿ ವಿತರಿಸಬೇಕು ಎಂದು ಆಗ್ರಹಿಸಲಾಗಿದೆ.
ರಾಜ್ಯದಲ್ಲಿ ಸುಮಾರು 1.30 ಲಕ್ಷ ಬಿ.ಪಿ.ಎಲ್. ವರ್ಗಕ್ಕೆ ಸೇರಿದ ಕುಟುಂಬಗಳಿವೆ. ಈ ಕುಟುಂಬಗಳಿಗೆ ಸೇರಿದ ಬಹುಪಾಲು ಜನರು ಅಸಂಘಟಿತ ವಲಯಗಳಲ್ಲಿ ದುಡಿಯುತ್ತಿದ್ದಾರೆ. ಸಂಘಟಿತ ಮತ್ತು ಅಸಂಘಟಿತ ವಲಯಗಳಲ್ಲಿ ದುಡಿಯುತ್ತಿರುವ ಕಾರ್ಮಿಕರ ಸಂಖ್ಯೆ ಸುಮಾರು 1.5 ಕೋಟಿಗಳಷ್ಟಿದೆ.
ಎಲ್ಲ ದುಡಿಯುವ ವರ್ಗಗಳು, ಸಮುದಾಯಗಳು ಹಾಗೂ ಬಿ.ಪಿ.ಎಲ್ ವರ್ಗದಡಿ ಬರುವ ಕುಟುಂಬಗಳು ದುಡಿಮೆ ಇಲ್ಲದೆ ಆರ್ಥಿಕ ಚೈತನ್ಯ ಕಳೆದುಕೊಂಡು ತೀವ್ರ ಆರ್ಥಿಕ ಸಂಕಷ್ಟದಲ್ಲಿವೆ ಅವರೆಲ್ಲರಿಗೂ ಪ್ರತಿ ತಿಂಗಳು ಕನಿಷ್ಟ 10000 ಸಾವಿರ ರೂಪಾಯಿಗಳ ಆರ್ಥಿಕ ಪ್ಯಾಕೇಜನ್ನು ಈ ಕೂಡಲೇ ಘೋಷಿಸಬೇಕೆಂದು ಒತ್ತಾಯಿಸಿದ್ದಾರೆ.
ರಾಜ್ಯದಲ್ಲಿ 87 ಲಕ್ಷ ರೈತಾಪಿ ಕುಟುಂಬಗಳಿವೆ. ರೈತರಲ್ಲಿ ಸಣ್ಣ ,ಅತಿ ಸಣ್ಣ ಮತ್ತು ಮಧ್ಯಮ ಪ್ರಮಾಣದ ಹಿಡುವಳಿಗಳನ್ನು ಹೊಂದಿರುವ ಕಟುಂಬಗಳು ಶೇ. 90 ರಷ್ಟಿವೆ. ಬಹುಪಾಲು ಈ ಕುಟುಂಬಗಳೂ ಸಹ ಬಿ.ಪಿ.ಎಲ್ ವರ್ಗದಡಿಯೇ ಇವೆ. ಹಾಗಾಗಿ ಈ ರೈತಾಪಿ ಕುಟುಂಬಗಳಿಗೂ ಸಹ ತಿಂಗಳಿಗೆ 10000 ರೂ ಗಳ ಪ್ಯಾಕೇಜನ್ನು ಘೋಷಿಸಬೇಕು ಎಂದಿದ್ದಾರೆ.
ರಾಜ್ಯದ ಕೃಷಿಕರು ಸಂಕಷ್ಟದಲ್ಲಿರುವುದರಿಂದ ಅವರಿಗೆ ಸಹಕಾರಿ ಬ್ಯಾಂಕುಗಳು, ವಾಣಿಜ್ಯ ಬ್ಯಾಂಕುಗಳ ಮೂಲಕ ಬಡ್ಡಿರಹಿತ ಕೃಷಿ ಸಾಲಗಳನ್ನು ಕನಿಷ್ಟ 5 ಲಕ್ಷ ರೂಗಳವರೆಗೆ ನೀಡಬೇಕು. ಇದನ್ನು ಮಾಡುವುದು ಕಷ್ಟದ ವಿಚಾರವೇನೂ ಅಲ್ಲ. ದೇಶದ ದೊಡ್ಡ ದೊಡ್ಡ ಕಾರ್ಪೊರೇಟ್ ಕುಳಗಳಿಗೆ ಸಂಬಂಧಿಸಿದ ಸುಮಾರು 10.5 ಲಕ್ಷ ಕೋಟಿಗೂ ಹೆಚ್ಚು ಸಾಲವನ್ನು ವಸೂಲು ಮಾಡದೆ ಕೈ ಬಿಡಲಾಗಿದೆ.
ಅಂಥದ್ದರಲ್ಲಿ ರೈತಾಪಿವರ್ಗಗಳಿಗೆ ನೀಡುವ ಕೆಲವು ಸಾವಿರ ಕೋಟಿಗಳಷ್ಟು ಬಡ್ಡಿ ರಹಿತ ಸಾಲದಿಂದ ದೇಶದ ಆರ್ಥಿಕತೆ ಮುಳುಗಿ ಹೋಗುವುದಿಲ್ಲ. ಬದಲಿಗೆ ಆರ್ಥಿಕತೆ ಸುಧಾರಣೆಯಾಗುತ್ತದೆ. ಆದ್ದರಿಂದ ಬಡ್ಡಿ ರಹಿತ ಸಾಲವನ್ನು ನೀಡಿ ರೈತರ ನೆರವಿಗೆ ನಿಲ್ಲಬೇಕೆಂದು ಸರ್ಕಾರವನ್ನು ಕೇಳಿಕೊಂಡಿದ್ದಾರೆ.
ಗ್ರಾಮೀಣ ಪ್ರದೇಶಗಳಿಗೆ ವ್ಯಾಪಕ ವಲಸೆ ಹೋಗುತ್ತಿರುವುದರಿಂದ ಕಳೆದ ವರ್ಷದಂತೆ ಈ ವರ್ಷವೂ ಸಹ ಕೃಷಿ ಕ್ಷೇತ್ರದ ಮೇಲೆ ಒತ್ತಡ ಹೆಚ್ಚುತ್ತದೆ. ಆದ್ದರಿಂದ ಕೃಷಿ ಅವಶ್ಯಕ ವಸ್ತುಗಳಾದ ಬೀಜ, ಔಷಧ, ರಸಗೊಬ್ಬರಗಳ ಪೂರೈಕೆಯನ್ನು, ದಾಸ್ತಾನನ್ನು ಅಗತ್ಯಕ್ಕೆ ಅನುಗುಣವಾಗಿ ಹೆಚ್ಚಿಸಬೇಕು.
ಏಪ್ರಿಲ್ 15 ರಿಂದ ರಸಗೊಬ್ಬರಗಳ ಬೆಲೆಗಳನ್ನು ಅದರಲ್ಲೂ ಮುಖ್ಯವಾಗಿ ಡಿ.ಎ.ಪಿ. ಕಾಂಪ್ಲೆಕ್ಸ್‍ಗಳ ಬೆಲೆಗಳನ್ನು ಕ್ವಿಂಟಾಲಿಗೆ ರೂ.1,250/- ರಿಂದ ರೂ.1,400/- ಗಳವರೆಗೆ ಹೆಚ್ಚಿಸಿ ಸರ್ಕಾರ ಆದೇಶ ಮಾಡಿದೆ. ಸದರಿ ಆದೇಶವನ್ನು ಹಿಂಪಡೆದು ಹಳೆಯ ದರಗಳಲ್ಲೇ ಮಾರಾಟ ಮಾಡಬೇಕು. ಸಣ್ಣ, ಅತಿ ಸಣ್ಣ ಮತ್ತು ಮಧ್ಯಮ ಪ್ರಮಾಣದ ರೈತರಿಗೆ ರಿಯಾಯಿತಿ ದರಗಳಲ್ಲಿ ಸಾಧ್ಯವಾದರೆ ಉಚಿತವಾಗಿ ರಸಗೊಬ್ಬರಗಳನ್ನು ವಿತರಿಸಬೇಕೆಂದಿದ್ದಾರೆ.
ನಗರಗಳಿಂದ ಗ್ರಾಮಗಳಿಗೆ ವಲಸೆ ಹೊರಟ ಕಾರ್ಮಿಕರಿಗೆ ಮಹಾತ್ಮಗಾಂಧಿ ಗ್ರಾಮೀಣ ಉದ್ಯೋಗ ಯೋಜನೆಯಡಿ [ನರೇಗಾ] ಯೋಜನೆಯಡಿ ಕನಿಷ್ಟ 150 ಮಾನವ ದಿನಗಳಷ್ಟು ಮತ್ತು ಅದಕ್ಕೂ ಹೆಚ್ಚು ಬೇಡಿಕೆ ಇರುವ ಕಡೆ ಬೇಡಿಕೆಯನ್ನು ಆಧರಿಸಿ ಉದ್ಯೋಗನೀಡಬೇಕು. ಹಿಂದೆ ನಿಮ್ಮದೇ ಸರ್ಕಾರವಿದ್ದಾಗ ಮನಮೋಹನಸಿಂಗರು ಪ್ರಧಾನಮಂತ್ರಿಗಳಾಗಿದ್ದಾಗ ರಾಜ್ಯ ಸರ್ಕಾರ ಪ್ರತಿಯೊಬ್ಬರಿಗೆ 150 ಮಾನವ ದಿನಗಳಿಗೆ ಹೆಚ್ಚಿಸಿ ಎಂದಾಗ ಅವರು ಅದಕ್ಕೆ ಸ್ಪಂದಿಸಿ ಬೇಡಿಕೆ ಈಡೇರಿಸಿದ್ದರು. ಈಗಲೂ ರಾಜ್ಯ ಸರ್ಕಾರ, ರಾಜ್ಯವನ್ನು ಪ್ರತಿನಿಧಿಸುವ ಕೇಂದ್ರದ ಸಚಿವರು, ರಾಜ್ಯದ ಬಿ.ಜೆ.ಪಿ ಸಂಸದರುಗಳು ಈ ಕುರಿತು ಪ್ರಧಾನಿಗಳನ್ನು ಒತ್ತಾಯ ಮಾಡಿ ರಾಜ್ಯದ ಜನರ ನೆರವಿಗೆ ನಿಲ್ಲಬೇಕು.
ಈ ಯೋಜನೆಯನ್ನು ಕೃಷಿಯ ವಿಸ್ತರಿತ ಪ್ರದೇಶಗಳಾದ ಪಟ್ಟಣ ಪಂಚಾಯಿತಿ, ಪುರಸಭೆ, ನಗರಸಭೆಗಳ ಜನರಿಗೂ ವಿಸ್ತಿರಿಸಬೇಕು. ಅವರೂ ಸಹ ಉದ್ಯೋಗವಿಲ್ಲದೆ ಕಂಗಾಲಾಗಿದ್ದಾರೆ. ನರೇಗಾ ಯೋಜನೆಯ ಕೂಲಿ ದರಗಳನ್ನು ಹಣದುಬ್ಬರವನ್ನು ಆಧರಿಸಿ ಕೂಡಲೇ ಹೆಚ್ಚು ಮಾಡಬೇಕು.
ರಾಜ್ಯದ ಯಾರೊಬ್ಬರೂ ಹಸಿವಿನಿಂದ ಬಳಲದಂತೆ ನೋಡಿಕೊಳ್ಳಬೇಕು. ಅದಕ್ಕಾಗಿ ಪಕ್ಕದ ಕೇರಳ ರಾಜ್ಯದಂತೆ ಪ್ರತಿ ಕುಟುಂಬಕ್ಕೆ ಆಹಾರ ಧಾನ್ಯಗಳ, ಜೀವನಾವಶ್ಯಕ ಅಗತ್ಯ ವಸ್ತುಗಳನ್ನೊಳಗೊಂಡ ಕಿಟ್‍ಗಳನ್ನು ಒದಗಿಸಬೇಕು. ಕಿಟ್ ಗಳಲ್ಲಿ ಪ್ರತಿಯೊಬ್ಬರಿಗೆ ಕನಿಷ್ಟ 10 ಕೆ.ಜಿ ಅಕ್ಕಿ, ಗೋಧಿ, ಅಡುಗೆ ಎಣ್ಣೆ, ಬೇಳೆಕಾಳುಗಳು ಮುಂತಾದ ದಿನಸಿ ಪದಾರ್ಥಗಳು ಇರುವಂತೆ ನೋಡಿಕೊಳ್ಳಬೇಕೆಂದು ಸಲಹೆ ಕೊಟ್ಟಿದ್ದಾರೆ.
ಸಣ್ಣ, ಅತಿ ಸಣ್ಣ, ಗೃಹ ಮತ್ತು ಮಧ್ಯ ಪ್ರಮಾಣದ ಕೈಗಾರಿಕೆಗಳು ಕೇಂದ್ರದ ನಿರಂತರ ಗದಾ ಪ್ರಹಾರಗಳಿಂದ ಬಸವಳಿದು ಹೋಗಿವೆ. ಮೊದಲು ಕಷ್ಟದಲ್ಲಿರುವವರಿಗೆ ಉಸಿರಾಡಲು ವ್ಯವಸ್ಥೆ ಕಲ್ಪಿಸಬೇಕು. ಉತ್ತಮ ಸ್ಥಿತಿಯಲ್ಲಿರುವವರಿಗೂ ನೆರವಾಗಬೇಕು. ಆದ್ದರಿಂದ ಈ ವಲಯಕ್ಕೆ ಕಡಿಮೆ ಬಡ್ಡಿ ದರದಲ್ಲಿ ಸಾಲ ಸುಗಮವಾಗಿ ಸಿಗುವಂತೆ ನೋಡಿಕೊಳ್ಳಬೇಕು. ಇವರ ಉತ್ಪನ್ನಗಳಿಗೆ ಮಾರುಕಟ್ಟೆಯಲ್ಲಿ ಬೇಡಿಕೆ ಕುದುರುವವರೆಗೆ ಸಾಲದ ಮೇಲಿನ ಬಡ್ಡಿಗಳನ್ನು ಮನ್ನಾ ಮಾಡಬೇಕು. ಇದಕ್ಕಾಗಿ ತಾವು ಕೇಂದ್ರವನ್ನು ಒತ್ತಾಯಿಸಬೇಕು. ಶತಾಯಗತಾಯ ಪ್ರಯತ್ನ ಮಾಡಿ ಇವರ ನೆರವಿಗೆ ಸರ್ಕಾರ ನಿಲ್ಲಬೇಕು.
ರಾಜ್ಯದಲ್ಲಿ ಯಥೇಚ್ಛವಾಗಿ ವಿದ್ಯುತ್ ಉತ್ಪಾದನೆಯಾಗುತ್ತಿದೆ. ಹಾಗಾಗಿ ಸಣ್ಣ, ಅತಿ ಸಣ್ಣ, ಸೂಕ್ಷ್ಮ, ಗೃಹ, ಮಧ್ಯಮ ಪ್ರಮಾಣದ ಈ ಕಂಪೆನಿಗಳಿಗೆ ಉಚಿತವಾಗಿ ವಿದ್ಯುತ್ ಅನ್ನು ಪೂರೈಸಬೇಕು. ರಾಜ್ಯದಲ್ಲಿ ವಿದ್ಯುತ್ ಬೇಡಿಕೆ ಇಲ್ಲದಿದ್ದರೂ ಅದಾನಿ ಮುಂತಾದವರಿಗೆ ವರ್ಷಕ್ಕೆ ಅನಾಮತ್ತಾಗಿ ಸಾವಿರಾರು ಕೋಟಿಗಳನ್ನು ನೀಡಲಾಗುತ್ತಿದೆ. ಅದನ್ನು ನಿಲ್ಲಿಸಿ ಸರ್ಕಾರ ಉದ್ಯೋಗ ಸೃಷ್ಟಿಸುವ ಈ ಕೈಗಾರಿಕೆಗಳ ನೆರವಿಗೆ ನಿಲ್ಲಬೇಕು.
ಈ ಕಂಪೆನಿಗಳು ಉತ್ಪಾದಿಸಿ ರಫ್ತು ಮಾಡುವ ಉತ್ಪನ್ನಗಳಿಗೆ ರಫ್ತು ಶುಲ್ಕಕ್ಕೆ ವಿನಾಯಿತಿ ನೀಡಬೇಕು. ಆಮದು ಶುಲ್ಕವನ್ನೂ ಕಡಿಮೆ ಮಾಡಬೇಕು.
ಆಟೋ, ಕ್ಯಾಬ್, ಟ್ಯಾಕ್ಸಿ ಮುಂತಾದ ವಾಹನಗಳಿಗೆ ಕಳೆದ ಒಂದು ವರ್ಷದಿಂದ ಬಾಡಿಗೆ ಇಲ್ಲ. ಪ್ರಮುಖ ಪ್ರಯಾಣಿಕರಾಗಿದ್ದ ಐ. ಟಿ ಮುಂತಾದ ಕಂಪೆನಿಗಳ ಉದ್ಯೋಗಿಗಳು ಮನೆಗಳಿಂದಲೇ ಕೆಲಸ ಮಾಡುತ್ತಿದ್ದಾರೆ. ಹಾಗಾಗಿ ಈ ವಾಹನಗಳ ದುಡಿಮೆ ನೆಚ್ಚಿಕೊಂಡಿದ್ದ ಚಾಲಕರು, ಮಾಲಿಕರು ವಿಪರೀತ ನಷ್ಟಕ್ಕೆ ಸಿಲುಕಿಕೊಂಡಿದ್ದಾರೆ. ಈ ವಲಯದ ಕೆಲವರು ನಷ್ಟದಿಂದ ಹೊರಬರಲಾಗದೆ ಆತ್ಮಹತ್ಯೆ ಮಾಡಿಕೊಂಡ ಆಘಾತಕಾರಿ ಸುದ್ದಿಗಳು ಬರುತ್ತಿವೆ. ಸರ್ಕಾರ ಕಣ್ಣು ಮುಚ್ಚಿಕೊಂಡು ಮೌನವಾಗಿರುವುದು ಭೀಕರ ಅಮಾನವೀಯತೆಗೆ ಸಾಕ್ಷಿ. ನಿಮ್ಮ ಪ್ಯಾಕೇಜು ಮತ್ತು ಕೇಂದ್ರದ ಆತ್ಮ ನಿರ್ಭರ ಪ್ಯಾಕೇಜು ಸಮರ್ಪಕವಾಗಿ ಈ ವರ್ಗಗಳಿಗೆ ತಲುಪಿದ್ದರೆ ಅವರುಗಳು ಆತ್ಮಹತ್ಯೆ ಮಾಡಿಕೊಳ್ಳಬೇಕಾದ ಪರಿಸ್ಥಿತಿ ಬರುತ್ತಿರಲಿಲ್ಲ. ಕಳೆದ ವರ್ಷ ರಾಜ್ಯ ಸರ್ಕಾರ ಘೋಷಿಸಿದ್ದ ಪ್ಯಾಕೇಜಿನಲ್ಲಿ ಕಾಲು ಭಾಗದಷ್ಟು ಚಾಲಕರಿಗೂ ಅನುಕೂಲವಾಗಲಿಲ್ಲ. ಆದ್ದರಿಂದ ಸರಳ ನಿಯಮಗಳನ್ನು ಮಾಡಿ ಕಳೆದ ವರ್ಷ ಬಾಕಿಯಾಗಿರುವ ಎಲ್ಲರಿಗೂ ಘೋಷಿತ ಪರಿಹಾರವನ್ನು ನೀಡಬೇಕು. ಈ ವರ್ಷ ಮತ್ತೆ ಲಾಕ್ ಡೌನ್ ಹೇರಿರುವುದರಿಂದ ಪರಿಸ್ಥಿತಿ ನಿಯಂತ್ರಣಕ್ಕೆ ಬರುವವರೆಗೆ ಪ್ರತಿ ತಿಂಗಳು ಕನಿಷ್ಟ 10000 ರೂ ನೀಡುವ ಪ್ಯಾಕೇಜನ್ನು ಘೋಷಿಸಬೇಕು.
ಈ ವಾಹನಗಳ ಮಾಲೀಕರಿಗೆ ವಿಮೆಯನ್ನು ಮುಂದೂಡಬೇಕು. ಸಾಲದ ಮೇಲಿನ ಬಡ್ಡಿಯನ್ನು ಮನ್ನಾ ಮಾಡಬೇಕು. ವಿವಿಧ ತೆರಿಗೆಗಳನ್ನು ಮನ್ನಾ ಮಾಡಬೇಕು. ಸಾಲದ ಅಸಲು ಮೊತ್ತದ ವಸೂಲಿಯನ್ನು ಮುಂದೂಡಬೇಕು.
ಖಾಸಗಿ ಶಾಲೆಗಳಲ್ಲಿ ಕಲಿಯುತ್ತಿರುವ ಮಕ್ಕಳ ಶುಲ್ಕಕ್ಕೆ ಸಂಬಂಧಿಸಿದಂತೆ ಸರ್ಕಾರ ದೊಡ್ಡ ಮಟ್ಟದ ರಿಯಾಯಿತಿ ಕೊಡಿಸುವುದಾಗಿ ಘೋಷಿಸಿತು. ಆದರೆ ಅದು ಜಾರಿಗೆ ಬರಲಿಲ್ಲ. ಈ ವರ್ಷ ಮತ್ತೆ ಖಾಸಗಿ ಶಿಕ್ಷಣ ಸಂಸ್ಥೆಗಳು ಶುಲ್ಕ ಹೆಚ್ಚಿಸಿವೆ ಎಂಬ ದೂರುಗಳು ವ್ಯಾಪಕವಾಗಿ ಕೇಳಿ ಬರುತ್ತಿವೆ. ಸರ್ಕಾರ ಕೂಡಲೇ ಮಧ್ಯ ಪ್ರವೇಶಿಸಿ ಶುಲ್ಕ ಮನ್ನಾ ಮಾಡಲು ಅಥವಾ ಶೇ. 50 ರಷ್ಟಾದರೂ ಕಡಿತಗೊಳಿಸಲು ಕಠಿಣ ನಿಯಮಾವಳಿಗಳನ್ನು ರೂಪಿಸಬೇಕು.
ಈ ಎಲ್ಲ ಒತ್ತಾಯಗಳನ್ನು ಗಂಭೀರವಾಗಿ ಪರಿಗಣಿಸಿ ತುರ್ತಾಗಿ ಆರ್ಥಿಕ ಪ್ಯಾಕೇಜುಗಳನ್ನು ಘೋಷಿಸಬೇಕೆಂದು ಸಿದ್ದರಾಮಯ್ಯ ಅವರು ಒತ್ತಾಯಿಸಿದ್ದಾರೆ.