ಕಳೆದ ಒಂದು ವರ್ಷದಿಂದ ಕೋವಿಡ್ ನಿಂದ ತತ್ತರಿಸಿ ಆಹಾರ, ಆರೋಗ್ಯ ಮತ್ತು ಆಶ್ರಯ ವಂಚಿತ ರಾಗಿ ಹಲವರು ಸಮಸ್ಯೆಗೀಡಾಗಿದ್ದಾರೆ. ಅಂಥವರಿಗೆ ಉಚಿತ ಸೇವೆ ನೀಡಲು ನಾವೇಕೆ ಮುಂದೆ ಬರಬಾರದು ಎಂಬ ಸದುದ್ದೇಶದಿಂದ ಕಳೆದ ಸೆಪ್ಟೆಂಬರ್ ನಲ್ಲಿ ವಿನ್ ಶಿ ಎಂಬ ಸಂಸ್ಥೆ ಆರಂಭಿಸಿದ್ದು ವಿನಯ್ ಮತ್ತು ಶಿಲ್ಪಾ ದಂಪತಿಗಳು. ಶಿಲ್ಪಾ ಅವರು ಗದಗ್ ನ ಮುನಿಸಿಪಲ್ ಕಾಲೇಜಿನ ನಿವೃತ್ತ ಕನ್ನಡ ಪ್ರಾಧ್ಯಾಪಕರಾದ ಎಂ.ಆರ್. ಹಿರೇಮಠ ಇವರ ಸುಪುತ್ರಿ. ಇವರ ಮದುವೆಯಾದದ್ದು ವಿನಯ್, ಇವರು ಒಬ್ಬ ಮ್ಯಾನೆಜ್ ಮೆಂಟ್ ಪ್ರೊಫೆಶನಲ್, ಇವರು ಕೂಡ ಉತ್ತರ ಕರ್ನಾಟಕದವರೆ.
ಈ ದಂಪತಿಗಳು ನಿಸ್ವಾರ್ಥ ಸೇವೆ ಮಾಡಬೇಕೆಂದು ‘ನನ್ನ ಊರು ನನ್ನ ಜನ’ ಎಂಬ ಕಾರ್ಯಕ್ರಮವನ್ನು ಆಯೋಜಿಸಿದರು. ಇವರು ಆಯ್ಕೆ ಮಾಡಿದ್ದು ಧಾರವಾಡದ ನವಲಗುಂದ ತಾಲೂಕಿನ ಶಿರೂರ ಗ್ರಾಮ. ವಿನಯ್ ಅವರು ಶಿರೂರ ಗ್ರಾಮದವರೇ ಆಗಿದ್ದರಿಂದ ಮೊದಲ ಹೆಜ್ಜೆ ಅದೇ ಗ್ರಾಮದಿಂದ ಆರಂಭ. ವಿನಯ್ ತಂದೆ ಶಿರೂರ ಗ್ರಾಮದ ಶಂಕ್ರಯ್ಯ ಶಿರಹಟ್ಟಿಮಠ ಅವರು ನಿವೃತ್ತ ರೇಡಿಯಾಲಾಜಿಸ್ಟ್. ಅವರ ಸಲಹೆಯ ಮೇರೆಗೆ ಗ್ರಾಮದ ಜನರಿಗೆ ವಿನ್ ಶಿ ಲೇಬಲ್ ವುಳ್ಳ ಮಾಸ್ಕು ಗಳನ್ನು ವಿತರಿಸಿದ್ದಾರೆ. ಕೋವಿಡ್ ಹರಡುವಿಕೆ ತಡೆಯಲು ದಂಪತಿಗಳು ಮುಂದಾಗಿದ್ದು ಗ್ರಾಮಸ್ಥರು ಕೊಂಚ ನಿರಾಳರಾಗಿದ್ದಾರೆ.
ವಿನ್ ಶಿ ಸಂಸ್ಥೆ ಎನೇನು ಮಾಡಿದೆ?
ವಿನ್ ಶಿ ಸಂಸ್ಥೆಯು ಗ್ರಾಮೀಣ ಭಾಗದ ಜನರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತ ಬಂದಿದೆ. ಜನೇವರಿಯಲ್ಲಿ ಆಯೋಜಿಸಿದ ನನ್ನ ಊರು ನನ್ನ ಜನ ಕಾರ್ಯಕ್ರಮದಲ್ಲಿ 130 ರೋಗಿಗಳಿಗೆ ಉಚಿತ ತಪಾಸಣೆ ಹಾಗೂ ಉಚಿತ ಔಷಧಿ ವಿತರಿಸಲಾಯಿತು. ಫೆಬ್ರುವರಿಯಲ್ಲಿ 180 ಕ್ಕೂ ಅಧಿಕ ಜನರಿಗೆ ಕಣ್ಣಿನ ತಪಾಸಣೆ ಹಾಗೂ ಅವಶ್ಯವಿದ್ದವರಿಗೆ ಉಚಿತ ಕನ್ನಡಕ ವಿತರಿಸಲಾಯಿತು. ಮಾರ್ಚ್ ನಲ್ಲಿ ಆಯೋಜಿಸಿದ ಕಾರ್ಯಕ್ರಮದಲ್ಲಿ 161 ಮಹಿಳೆಯರಿಗೆ ಉಚಿತ ಆರೋಗ್ಯ ತಪಾಸಣೆ ಅದರಲ್ಲಿ 56 ಮಹಿಳೆಯರಿಗೆ ಗರ್ಭಕೋಶ ತಪಾಸಣೆ ಮಾಡಿ 10 ಮಹಿಳೆಯರಿಗೆ ಕಾಲ್ಪೊಸ್ಕೋಪಿಗೆ ರೆಫರ್ ಮಾಡಲಾಯಿತು. 3 ಮಹಿಳೆಯರಿಗೆ ಹುಬ್ಬಳ್ಳಿಯ ನವನಗರ ಕ್ಯಾನ್ಸರ್ ಆಸ್ಪತ್ರೆಗೆ ಕಳುಹಿಸಿಕೊಡಲಾಯಿತು.
ಇವರಿಂದ ಸೇವೆ ಪಡೆದುಕೊಂಡ ಮಹಿಳೆಯೊಬ್ಬರು, “ಈ ದಂಪತಿಗಳ ಸೇವೆ ನಮ್ಮ ಗ್ರಾಮದ ಜನರಿಗೆ ತುಂಬ ಅನುಕೂಲವಾಗಿದೆ. ನಮ್ಮ ಜನರಿಗೆ ಕೋರೋನಾ ಸಂಕಷ್ಟದ ಮಧ್ಯೆ ಯಾವುದೇ ಸಮಸ್ಯೆ ಇರಲಿ ಅದಕ್ಕೆ ಸೂಕ್ತ ಪರಿಹಾರ ನೀಡಿ ಸಲಹೆ ಸೂಚನೆಗಳನ್ನು ನೀಡಿ ಸಕಾಲಕ್ಕೆ ಬಂದು ಸಹಾಯ ಮಾಡಿದ್ದಕ್ಕೆ ಈ ದಂಪತಿಗಳಿಗೆ ಶುಭವಾಗಲಿ ಹಾಗೂ ಇವರ ಸೇವೆ ಹೀಗೆ ನಿರಂತರವಾಗಿರಲಿ ಎಂದು ಹಾರೈಸುವೆವು”. ಎಂದರು.
ಅಂದಹಾಗೆ ಇವರ ಸೇವೆ ಇಷ್ಟೇ ಅಲ್ಲ, ಗ್ರಾಮದ ಕೋವಿಡ್ ವಾರಿಯರ್ಸ್ ಗೆ ಸನ್ಮಾನ ಹಾಗೂ ಗ್ರಾಮದ ಪ್ರತಿಭೆಗಳನ್ನು ಹೊರತರಲು ಮನರಂಜನಾ ಕಾರ್ಯಕ್ರಮ, ವಿದ್ಯಾರ್ಥಿಗಳಿಗೆ ವಚನ ಬೋಧನೆ, ಗ್ರಾಮಸ್ಥರಿಗೆ ಕಾಯಕವೇ ಕೈಲಾಸ (ಸೋಹಂ ಎಂದೆನಿಸದೆ ದಾಸೋಹಂ ಎಂದೆನಿಸಯ್ಯಾ) ಎಂಬ ವಿಚಾರದಡಿ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದಾರೆ.
ಕೋವಿಡ್ ಆತಂಕ, ವರ್ಕ್ ಫ್ರಾಮ್ ಹೋಮ್, ಭವಿಷ್ಯದೆ ಚಿಂತೆ ಹೀಗೆ ಮುಳುಗಿರುವ ಅನೇಕ ಬೆಂಗಳೂರಿನ ಹಾಗೂ ಮೆಟ್ರೋಗಳಲ್ಲಿ ದುಡಿಯುತ್ತಿರುವ ಲಕ್ಷಾಂತರ ಜನರಲ್ಲಿ ಈ ದಂಪತಿಗಳು ವಿಶಿಷ್ಟ.
ಇವರ ಈ ಕಾಯಕವನ್ನು ಮೆಚ್ಚಿಕೊಂಡು ವಿದೇಶದಲ್ಲಿ ಟೆಕ್ನಿಕಲ್ ರೈಟರ್ ಆದ ಹಾಗೂ ಗದುಗಿನ ನವರಾದ ಪಂಚಾಕ್ಷರಿ ಫ. ಲಕ್ಷ್ಮೇಶ್ವರಮಠ ಅವರು ಶುಭ ಹಾರೈಸಿ ಇವರ ಸೇವೆ ಹೀಗೆ ಮುಂದುವರೆಯಲಿ ಎಂದು ಶುಭ ಹಾರೈಸಿದ್ದಾರೆ.