ರಾಜ್ಯದಲ್ಲಿ ಕರೋನಾ ಸೋಂಕಿನ ತೀವ್ರತೆ ಹೆಚ್ಚಾಗಿರುವುದರಿಂದ ಸಾವಿನ ಪ್ರಮಾಣದಲ್ಲಿ ಗಣನೀಯ ಏರಿಕೆಯಾಗಿದೆ. ಈಗ ಮೃತರ ಅಂತ್ಯಸಂಸ್ಕಾರಕ್ಕೂ ಸ್ಥಳಾವಕಾಶದ ಕೊರತೆ ಉಂಟಾಗಿರುವುದು ನಿಜಕ್ಕೂ ಆತಂಕಕಾರಿಯಾಗಿದೆ. ಬೆಂಗಳೂರು ನಗರದ ಪ್ರಮುಖ ಚಿತಾಗಾರಗಳಲ್ಲಿ ಬಿಡುವಿಲ್ಲದೇ ಅಂತ್ಯಸಂಸ್ಕಾರಗಳು ನಡೆಯುತ್ತಿವೆ. ಆದರೂ ಮೃತರ ದೇಹಗಳು ಶವಾಗಾರದ ಮುಂದೆ ಸಾಲುಗಟ್ಟಿ ನಿಂತಿವೆ.
ಕೋವಿಡ್‌ನಿಂದ ಮೃತಪಟ್ಟವರಿಗೆ ಗೌರವಯುತ ಅಂತ್ಯಸಂಸ್ಕಾರಕ್ಕೆ ಕನಿಷ್ಠ ವ್ಯವಸ್ಥೆಯೂ ಮಾಡಿಲ್ಲ ಎಂದು ಜೆಡಿಎಸ್ ನಾಯಕ ಹೆಚ್ ಡಿ ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದರು. ಇದಕ್ಕೂ ಮೊದಲು ಇದೇ ರೀತಿಯಲ್ಲಿ ಕೆಪಿಸಿಸಿ ಅಧ್ಯಕ್ಷರಾಗಿರುವ ಡಿಕೆ ಶಿವಕುಮಾರ್ ಅವರು ಕೂಡಾ ಆರೋಪವನ್ನು ಮಾಡಿದ್ದರು. ಇದು ಸರ್ಕಾರದ ವೈಫಲ್ಯ ಎಂದು ಕಿಡಿ ಕಾರಿದ್ದರು.
ಈಗ ಎಚ್ಚೆತ್ತುಕೊಂಡ ಸರ್ಕಾರ ಬೆಂಗಳೂರು ನಗರದ ಆಸುಪಾಸಿನಲ್ಲಿ ಅಂತ್ಯಸಂಸ್ಕಾರಕ್ಕೆ ಸ್ಥಳವನ್ನು ಹುಡುಕುತ್ತಿದೆ. ತಾವರೆಕೆರೆ ಗ್ರಾಮದ ಬಳಿ ನಿರ್ಮಿಸಲಾಗುತ್ತಿರುವ ಸ್ಮಶಾನದ ಸಿದ್ದತೆ ಕಾರ್ಯವನ್ನು ಕಂದಾಯ ಸಚಿವ ಆರ್ ಅಶೋಕ್ ಹಾಗೂ ಗೃಹ ಸಚಿವ ಬಸವರಾಜ ಬೊಮ್ಮಾಯಿ ಗುರುವಾರ ರಾತ್ರಿ ಪರಿಶೀಲಿಸಿದ್ದಾರೆ.
50 ಎಕರೆ ಪ್ರದೇಶದಲ್ಲಿ ಏಕಕಾಲಕ್ಕೆ 20 ಶವಗಳನ್ನು ದಹನ ಮಾಡುವ ಸಾಮರ್ಥ್ಯದ ಸ್ಮಶಾನ ನಿರ್ಮಾಣವಾಗುತ್ತಿದೆ. 100 ಟನ್‌ಗೂ ಅಧಿಕ ಪ್ರಮಾಣದ ಕಟ್ಟಿಗೆಯನ್ನು ಸಂಗ್ರಹಿಸಿ ಇಡಲಾಗಿದ್ದು, ಬೋರ್‌ವೆಲ್ ಸೇರಿದಂತೆ ಇತರೆ ಅಗತ್ಯ ವ್ಯವಸ್ಥೆಗಳನ್ನು ಮಾಡಲಾಗುತ್ತಿದೆ.
ಸ್ವಂತ ಜಮೀನಿನಲ್ಲಿ ಅಂತ್ಯಸಂಸ್ಕಾರಕ್ಕೆ ಅನುಮತಿ:
ಮಾಧ್ಯಮಗಳೊಂದಿಗೆ ಮಾತನಾಡಿರುವ ಕಂದಾಯ ಸಚಿವ ಆರ್ ಅಶೋಕ್ ಅವರು ಕೋವಿಡ್‌ನಿಂದ ಮೃತಪಟ್ಟವರ ಅಂತ್ಯಸಂಸ್ಕಾರ ಮಾಡಲು ಸ್ವಂತ ತೋಟ, ಜಮೀನಿನಲ್ಲೂ ಅನುಮತಿ ನೀಡಲಾಗಿದೆ ಎಂದಿದ್ದಾರೆ.
“ಕೋವಿಡ್ ಮಾರ್ಗಸೂಚಿಗಳನ್ನು ಪಾಲನೆ ಮಾಡಿ ಅಂತ್ಯಸಂಸ್ಕಾರ ನಡೆಸಲು ಅವಕಾಶ ನೀಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ,” ಎಂದು ಅವರು ತಿಳಿಸಿದ್ದಾರೆ.
ಬೆಂಗಳೂರಿನ ಸುತ್ತಮುತ್ತಲಿನ ಸುಮಾರು 20 ಕಿಲೋಮೀಟರ್ ವ್ಯಾಪ್ತಿಯ ಜನರು ಶವ ಸಂಸ್ಕಾರಕ್ಕೆಂದು ನಗರಕ್ಕೆ ಬರುತ್ತಿದ್ದಾರೆ. ಆ ಕಾರಣದಿಂದಾಗಿ ಮೃತದೇಹಗಳ ಸಂಖ್ಯೆ ದಿಢೀರನೆ ಹೆಚ್ಚಾಗಿದೆ, ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.