ಒಂದು ಕಡೆ, ಕೇಂದ್ರ ಸರ್ಕಾರದ ರೈತ ವಿರೋಧಿ ಕಾಯ್ದೆಗಳನ್ನು ವಾಪಸು ಪಡೆಯುವಂತೆ ಆಗ್ರಹಿಸಿ ದೆಹಲಿಯ ಸುತ್ತ ಉಡದ ಪಟ್ಟು ಹಿಡಿದು ಕೂತಿರುವ ರೈತರು, ದೇಶದ ಐತಿಹಾಸಿಕ ರೈತ ಚಳವಳಿಯನ್ನು ಕಟ್ಟಿ ನಿಲ್ಲಿಸಿದ್ದಾರೆ. ಮತ್ತೊಂದು ಕಡೆ; ಕಳೆದ ಧರಣಿನಿರತ ರೈತರ ವಿರುದ್ಧದ ಸರ್ಕಾರದ ಪಿತೂರಿಗಳು, ಷಢ್ಯಂತ್ರಗಳಿಗೆ ಪ್ರತಿಯಾಗಿ ಹೋರಾಟದ ಹೊಸ ಮಜಲಾಗಿ ಮಹಾಪಂಚಾಯತಿಗಳನ್ನು ಸಂಘಟಿಸುವ ಮೂಲಕ ಹೋರಾಟದ ಹೊಸ ಸಾಧ್ಯತೆಗಳನ್ನು ವಿಸ್ತರಿಸಿದ್ದಾರೆ.
ನವೆಂಬರ್ 26ರಿಂದ ಬರೋಬ್ಬರಿ 75 ದಿನಗಳ ನಿರಂತರ ಧರಣಿ ಸತ್ಯಾಗ್ರಹ ನಡೆಸುತ್ತಿರುವ ರೈತರನ್ನು ಸರ್ಕಾರ ನಡೆಸಿಕೊಂಡ ರೀತಿಯೇ ಚಳವಳಿಯ ಹೊಸ ಹೊಸ ವಿಸ್ತರಣೆಗೆ, ವಿನ್ಯಾಸಕ್ಕೆ ಇಂಬು ನೀಡಿದೆ. ನವೆಂಬರಿನಿಂದ ಜನವರಿ 26ರ ಗಣರಾಜ್ಯೋತ್ಸವದ ವರೆಗೆ ಎರಡು ತಿಂಗಳ ಕಾಲ ಕೊರೆವ ಚಳಿ-ಗಾಳಿಯ ನಡುವೆಯೂ ಲಕ್ಷಾಂತರ ರೈತರು ಶಾಂತಿಯುತ ಧರಣಿ ನಡೆಸಿದ್ದರು. ದೆಹಲಿ ಚಲೋ ಹೋರಾಟದ ಭಾಗವಾಗಿ ರಾಜಧಾನಿಯತ್ತ ಬಂದ ರೈತರನ್ನು ಕೇಂದ್ರ ಸರ್ಕಾರ, ಮಾತುಕತೆ, ಚರ್ಚೆಯ ಮೂಲಕ ಬಿಕ್ಕಟ್ಟು ಶಮನದ ಪ್ರಯತ್ನದ ಮೂಲಕ ಸಮಧಾನಿಸುವ, ಸಮಜಾಯಿಷಿ ಕೊಡುವ ಪ್ರಯತ್ನ ಮಾಡುವ ಬದಲು, ಹೆದ್ದಾರಿಯಲ್ಲಿ ಗುಂಡಿ ತೋಡಿ, ಬೇಲಿ ನಿರ್ಮಿಸಿ, ತಡೆಗೋಡೆ ಹಾಕಿ, ಲಾಠಿ ಪ್ರಹಾರ ನಡೆಸಿ, ಅಶ್ರುವಾಯು, ಜಲಪಿರಂಗಿ ಸಿಡಿಸಿ ತಡೆಯುವ ತಂತ್ರಗಾರಿಕೆ ಹೂಡಿತು. ಆದರೂ ರೈತರು ದಮನಕ್ರಮಗಳನ್ನೆಲ್ಲಾ ಸಹಿಸಿಕೊಂಡು ಶಾಂತಿಯುತ ಧರಣಿ ನಡೆಸಿದರು.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ಆದರೆ, ಜ.26ರ ಗಣರಾಜ್ಯೋತ್ಸವದ ದಿನ ನಡೆದ ಟ್ರ್ಯಾಕ್ಟರ್ ಪರೇಡ್ ವೇಳೆ ಸರ್ಕಾರದ ಆಯಕಟ್ಟಿನ ಜನರೊಂದಿಗೆ ಆಪ್ತ ನಂಟು ಹೊಂದಿದವರೇ ನಡೆಸಿದ ಪಿತೂರಿಯನ್ನೇ ನೆಪವಾಗಿಟ್ಟುಕೊಂಡು ಸರ್ಕಾರ ರೈತರಿಗೆ ಭಯೋತ್ಪಾದಕರು, ಉಗ್ರಗಾಮಿಗಳು, ದೇಶದ್ರೋಹಿಗಳು ಎಂಬ ಹಣೆಪಟ್ಟಿ ಕಟ್ಟಿತು. ಆ ಮೂಲಕ ಇಡೀ ಹೋರಾಟವನ್ನು, ಸಿಎಎ-ಎನ್ ಆರ್ಸಿ ಮತ್ತು ಜೆಎನ್ ಯು ಹೋರಾಟಗಳಂತೆಯೇ ಒಂದೇ ಏಟಿಗೆ ಮುಗಿಸಿಹಾಕುವ ಯೋಚನೆಯಲ್ಲಿದೆ ಎಂಬ ಸೂಚನೆ ಅರಿತ ರೈತ ಸಂಘಟನೆಗಳ ಒಕ್ಕೂಟ ಸಂಯುಕ್ತ ಕಿಸಾನ್ ಮೊರ್ಚಾದ ನಾಯಕ ರಾಕೇಶ್ ಟಿಕಾಯತ್, ಇಡೀ ಹೋರಾಟಕ್ಕೆ ಹೊಸ ಜನಾಂದೋಲನದ ಆಯಾಮ ನೀಡುವ ನಿರ್ಧಾರದೊಂದಿಗೆ ಹೂಡಿದ ಪ್ರತಿತಂತ್ರವೇ ಮಹಾಪಂಚಾಯಿತಿ.
ಜನವರಿ 26ರಿಂದ ಈವರೆಗೆ ಮುಜಫರನಗರ, ಜಿಂದ್, ದಾದ್ರಿ, ಕುರುಕ್ಷೇತ್ರ, ಶಹರಾಂಪುರ, ಶಾಮ್ಲಿ ಮತ್ತು ಭರತ್ ಪುರದಲ್ಲಿ ಮಹಾಪಂಚಾಯಿತಿಗಳನ್ನು ನಡೆಸಿರುವ ರೈತ ನಾಯಕರು, ಆ ರ್ಯಾಲಿಗಳಲ್ಲಿ ಸಿಕ್ಕ ಅಪಾರ ಜನಬೆಂಬಲದಿಂದ ಉತ್ತೇಜಿತರಾಗಿ ಇದೀಗ ಪಂಜಾಬಿಗೂ ವಿಸ್ತರಿಸಿದ್ದಾರೆ. ಈವರೆಗೆ ಬಿಜೆಪಿ ಆಡಳಿತದ ಉತ್ತರಪ್ರದೇಶ, ಹರ್ಯಾಣಗಳಲ್ಲಿ ನಡೆದ ಮಹಾಪಂಚಾಯ್ತಿಗಳಿಗೆ ಅಲ್ಲಿನ ಸರ್ಕಾರಗಳ ತಂಟೆ-ತಕರಾರುಗಳ ನಡುವೆಯೂ ಭಾರೀ ಸಂಖ್ಯೆಯಲ್ಲಿ ರೈತರು ಭಾಗವಹಿಸಿದ್ಧಾರೆ. ಅದಕ್ಕೆ ಕಾರಣ ಆ ರಾಜ್ಯಗಳಲ್ಲಿ ಗ್ರಾಮೀಣ ಪ್ರದೇಶದಲ್ಲಿ ದೊಡ್ಡ ಮಟ್ಟದ ಪ್ರಭಾವ ಹೊಂದಿರುವ ಖಾಪ್ ಪಂಚಾಯ್ತಿಗಳು ರೈತರ ಹೋರಾಟದ ಪರ ಗಟ್ಟಿಯಾಗಿ ನಿಂತು ಮಹಾ ಪಂಚಾಯ್ತಿಗಳಿಗೆ ಬೆಂಬಲಿಸಿದ್ದು.
ಈಗ ಕಾಂಗ್ರೆಸ್ ಆಡಳಿತದ ಪಂಜಾಬ್ ಮತ್ತು ರಾಜಸ್ತಾನದತ್ತ ರೈತ ನಾಯಕರ ಚಿತ್ತ ಹೊರಳಿದೆ. ರಾಜಸ್ತಾನದ ಭರತ್ ಪುರದಲ್ಲಿ ನಡೆದ ಮಹಾಪಂಚಾಯ್ತಿಗೆ ಸಿಕ್ಕ ಯಶಸ್ಸು ಕೂಡ ಅವರನ್ನು ಹುರಿದುಂಬಿಸಿದೆ. ಹಾಗಾಗಿ ಗುರುವಾರ ಪಂಜಾಬಿನ ಜಾಗ್ರಾನ್ ನಲ್ಲಿ ಆ ರಾಜ್ಯದ ಮೊಟ್ಟಮೊದಲ ಮಹಾಪಂಚಾಯ್ತಿ ನಡೆದಿದ್ದು, ಅಲ್ಲಿ ಸಿಕ್ಕ ಭಾರೀ ಬೆಂಬಲ ಮುಂದಿನ ದಿನಗಳಲ್ಲಿ ಸಿಖ್ಖರ ನಾಡಿನಲ್ಲಿ ಇನ್ನಷ್ಟು ಮಹಾಪಂಚಾಯ್ತಿಗಳು ನಡೆಯುವ ಮುನ್ಸೂಚನೆ ನೀಡಿದೆ.
ದಿಲ್ಲಿಯನ್ನೇ ದೃಷ್ಟಿಯಲ್ಲಿಟ್ಟುಕೊಂಡು ದೆಹಲಿಯ ಗಡಿಗಳಲ್ಲಿ ತಿಂಗಳಾನುಗಟ್ಟಲೆ ನಡೆಯುತ್ತಿರುವ ನಿರಂತರ ಧರಣಿ ಸತ್ಯಾಗ್ರಹದಲ್ಲಿ ಬಹುತೇಕ ರೈತರು ಮತ್ತು ರೈತ ಹಿತ ಚಿಂತಕರು ಭಾಗವಹಿಸಿದ್ದರೆ, ಹಳ್ಳಿಗಳನ್ನೇ ಕೇಂದ್ರವಾಗಿಟ್ಟುಕೊಂಡು ನಡೆಯುತ್ತಿರುವ ಈ ಮಹಾಪಂಚಾಯ್ತಿಗಳಲ್ಲಿ ರೈತರಷ್ಟೇ ಅಲ್ಲದೆ, ಗ್ರಾಮೀಣ ಭಾಗದ ಕೃಷಿ ಕೂಲಿಗಳು, ವಿವಿಧ ವೃತ್ತಿಪರ ಕರಕುಶಲಗಾರರು ಸೇರಿದಂತೆ ಸಮಸ್ತ ಹಳ್ಳಿಯ ಜನ ಭಾಗವಹಿಸುತ್ತಿದ್ದಾರೆ. ಆ ಮೂಲಕ ಮೂಲಭೂತವಾಗಿ ರೈತರ ಹೋರಾಟವಾಗಿರುವ ಈ ಚಳವಳಿ, ಹಳ್ಳಿಯ ಜನರ ಜನಾಂದೋಲನವಾಗಿ ಬದಲಾಗುತ್ತಿದೆ. ಚಳವಳಿಯ ಅಂತಹ ಬಹುಮುಖಿ ವಿಸ್ತರಣೆಗೆ ಈ ಮಹಾಪಂಚಾಯ್ತಿಗಳು ಕಾರಣವಾಗುತ್ತಿವೆ.

ಈ ಮಹಾಪಂಚಾಯ್ತಿಗಳ ಮೂಲಕ ರೈತ ಹೋರಾಟ ಪಡೆಯುತ್ತಿರುವ ವ್ಯಾಪಕ ಜನಬೆಂಬಲದ ಪರಿಣಾಮವಾಗಿ ಹೋರಾಟದ ಮುಂಚೂಣಿ ನಾಯಕರಿಗೆ ಹೊಸ ವಿಶ್ವಾಸ ಮೂಡಿದೆ. ಜನಪರ ಹೋರಾಟಕ್ಕೆ ದೇಶದಲ್ಲಿ ಸರ್ಕಾರಗಳ ಎಲ್ಲ ಕುತಂತ್ರಗಳನ್ನು ಮೀರಿ ಜನಸಾಮಾನ್ಯರು ಶಕ್ತಿ ತುಂಬುತ್ತಾರೆ ಎಂಬ ವಿಶ್ವಾಸ ಅದು. ಆ ಹಿನ್ನೆಲೆಯಲ್ಲೇ ರೈತ ನಾಯಕ ಟಿಕಾಯತ್, ಕಳೆದ ವಾರ ಮಹಾಪಂಚಾಯ್ತಿಯಲ್ಲಿ; “ಈವರೆಗೆ ನಾವು ರೈತ ವಿರೋಧಿ ಕೃಷಿ ಕಾಯ್ದೆಗಳ ವಾಪಸ್ಸಾತಿಗೆ ಮಾತ್ರ ಕೇಳಿದ್ದೇವೆ. ಸರ್ಕಾರ ತನ್ನ ಹಠಮಾರಿತನವನ್ನು ಮುಂದುವರಿಸಿದರೆ, ಅನ್ನದಾತರ ಹೋರಾಟಕ್ಕೆ ಕಳಂಕ ಹಚ್ಚುವ, ಕುತಂತ್ರ ಮುಂದುವರಿದರೆ, ನಿಮ್ಮ ಕುರ್ಚಿ ವಾಪ್ಸಿ ಹಕ್ಕು ಮಂಡಿಸುತ್ತೇವೆ. ದೇಶದ ಯುವಕರು, ನಾಯಕರೇ ನೀವು ದೇಶ ಆಳಲು ಅಯೋಗ್ಯರಿದ್ದೀರಿ, ಗದ್ದುಗೆ ಬಿಟ್ಟು ಹೊರಡಿ ಎನ್ನುತ್ತಾರೆ” ಎಂಬ ಖಡಕ್ ಎಚ್ಚರಿಕೆಯ ಸಂದೇಶ ರವಾನಿಸಿದ್ದಾರೆ.
ಈ ನಡುವೆ, ವಿವಾದಿತ ಕೃಷಿ ಕಾಯ್ದೆಗಳನ್ನು ವಾಪಸು ಪಡೆಯಲು ಕೇಂದ್ರ ಸರ್ಕಾರಕ್ಕೆ ಮುಂದಿನ ಅಕ್ಟೋಬರ್ ವರೆಗೆ ಗಡುವು ನೀಡಿರುವುದಾಗಿ ಟಿಕಾಯತ್ ಘೋಷಿಸಿದ್ದಾರೆ. ಅಂದರೆ; ರೈತ ಸಂಘಟನೆಗಳು ಈ ಮಹಾಪಂಚಾಯ್ತಿಗಳನ್ನು ಮುಂದಿನ ಕೆಲವು ತಿಂಗಳು ಕಾಲ ಚಾಲ್ತಿಯಲ್ಲಿಡುವುದು ಬಹುತೇಕ ಖಚಿತ. ಈ ಮಹಾಪಂಚಾಯ್ತಿಗಳ ಮೂಲಕವೇ ಹೋರಾಟವನ್ನು ಹಳ್ಳಿಹಳ್ಳಿಗೆ ವಿಸ್ತರಿಸಿ, ಸರ್ಕಾರಕ್ಕೆ ದೇಶದ ಅನ್ನದಾತರ ಬಲ ತೋರಿಸುವ ತಂತ್ರ ರೈತರದ್ದು. ಆ ಮೂಲಕ ಮೂರು ಕಾಯ್ದೆಗಳನ್ನು ವಾಪಸು ಪಡೆಯುವವರೆಗೆ ತಾವು ವಿರಮಿಸುವುದಿಲ್ಲ ಮತ್ತು ಸರ್ಕಾರ ಕಾಯ್ದೆ ವಾಪಸು ಪಡೆಯದೆ ಮಾತುಕತೆಗಳು ಕೂಡ ಪೂರ್ಣವಾಗುವುದಿಲ್ಲ ಎಂಬ ಸಂದೇಶ ರವಾನಿಸಿದ್ಧಾರೆ.
ಈ ನಡುವೆ, ರೈತ ಹೋರಾಟದ ವ್ಯಾಪಕತೆಗೆ ಬೆಚ್ಚಿರುವ ಕೇಂದ್ರ ಸರ್ಕಾರ, ದಿನದಿಂದ ದಿನಕ್ಕೆ ಕಾಯ್ದೆಗಳ ವಿಷಯದಲ್ಲಿ ತನ್ನ ಪಟ್ಟು ಸಡಿಲಿಸತೊಡಗಿದ್ದು, ಈ ಮೂರು ಕಾಯ್ದೆಗಳು ಕಡ್ಡಾಯವಲ್ಲ; ಐಚ್ಛಿಕ. ಕಾಯ್ದೆಗಳನ್ನು ಒಪ್ಪುವ ರೈತರು ಆ ಕಾನೂನುಗಳನ್ನು ಪಾಲಿಸಬಹುದು. ಉಳಿದವರು ಈ ಹಿಂದಿನ ಪದ್ಧತಿಯನ್ನೇ ಅನುಸರಿಸಬಹುದು ಎಂಬಂತಹ ವಿಚಿತ್ರ ವಾದ ಮಂದಿಟ್ಟಿದೆ! ಇಂತಹ ವಿಪರ್ಯಾಸಕರ ಸಂಧಾನಕ್ಕೆ ರೈತ ನಾಯಕರು ಹೇಗೆ ಪ್ರತಿಕ್ರಿಯಿಸುತ್ತಾರೆ ಎಂಬುದು ಕುತೂಹಲ ಮೂಡಿಸಿದೆ.