ಆತ್ಮನಿರ್ಭರ’ ಭಾರತ ತನ್ನ ಅಂತರಾತ್ಮವನ್ನು ಕಳೆದುಕೊಂಡು ಮತ್ತೊಮ್ಮೆ ವಸಾಹತು ಕಾಲದ ಪರಾವಲಂಬನೆಯತ್ತ ದಾಪುಗಾಲು ಹಾಕುತ್ತಿರುವುದು ದಿನದಿಂದ ದಿನಕ್ಕೆ ಸ್ಪಷ್ಟವಾಗುತ್ತಿದೆ. ಸ್ವಾತಂತ್ರ್ಯ ಪೂರ್ವದಲ್ಲಿ, ವಸಾಹತು ಆಳ್ವಿಕೆಯಲ್ಲಿ ಭಾರತ ಹೇಗಿತ್ತು, ಭಾರತದ ಆಡಳಿತ ವ್ಯವಸ್ಥೆ ಹೇಗಿತ್ತು, ಜನಸಾಮಾನ್ಯರ ಪರಿಸ್ಥಿತಿ ಹೇಗಿತ್ತು ಮುಂತಾದ ಪ್ರಶ್ನೆಗಳಿಗೆ ಉತ್ತರ ಶೋಧಿಸಲು ಇತಿಹಾಸದ ಪುಸ್ತಕಗಳ ಮೊರೆ ಹೋಗಲೇಬೇಕಿಲ್ಲ. ಈ ಹೊತ್ತಿನಲ್ಲಿ ದೇಶದಲ್ಲಿ ನಡೆಯುತ್ತಿರುವ ವಿದ್ಯಮಾನಗಳನ್ನು ಒಮ್ಮೆ ಗಮನಿಸಿದರೆ ಬ್ರಿಟೀಷ್ ವಸಾಹತು ಆಡಳಿತದ ಪರಿಚಯ ಆಗಿಬಿಡುತ್ತದೆ. ದೆಹಲಿಯ ಘಜಿಯಾಬಾದ್ ಗಡಿಯಲ್ಲಿ ಉತ್ತರ ಪ್ರದೇಶ-ಹರಿಯಾಣ ಸರ್ಕಾರ ನಿರ್ಮಿಸುತ್ತಿರುವ ತಡೆಗೋಡೆಗಳನ್ನು, ಮುಳ್ಳಿನ ತಂತಿ ಬೇಲಿಗಳನ್ನು, ಶರಮಂಚಗಳನ್ನು ನೋಡಿದರೆ ಇತಿಹಾಸದ ಸಾಮ್ರಾಟರು ಶತ್ರುಗಳನ್ನು ಹೊಡೆದೋಡಿಸಲು ಅನುಸರಿಸುತ್ತಿದ್ದ ಕ್ರೂರ ಮಾರ್ಗಗಳ ಪರಿಚಯವಾಗುತ್ತದೆ.
ಆ ಸಾಮ್ರಾಟರು ತಮ್ಮ ಸಾಮ್ರಾಜ್ಯವನ್ನು, ಭದ್ರಕೋಟೆಯನ್ನು ರಕ್ಷಿಸಿಕೊಳ್ಳಲು ಈ ಕ್ರೂರ ಮಾರ್ಗಗಳನ್ನು ಅನುಸರಿಸುತ್ತಿದ್ದರು. ಪರಸ್ಪರ ಮಾತನಾಡುವುದನ್ನೇ ನಿಷೇಧಿಸುವ ಪ್ರಾಚೀನ ಕಾಲದ ಆಡಳಿತ ನಿಯಮಗಳಿಗೂ, ಅಂತರ್ಜಾಲ ಸಂಪರ್ಕವನ್ನು ಕಡಿತಗೊಳಿಸುವ 21ನೆಯ ಶತಮಾನದ ಆಡಳಿತ ನೀತಿಗಳಿಗೂ ತಾತ್ವಿಕವಾಗಿ ಯಾವುದೇ ವ್ಯತ್ಯಾಸ ಗುರುತಿಸಲಾಗುವುದಿಲ್ಲ. ಆತ್ಮನಿರ್ಭರ ಭಾರತ ಇಂದು ಈ ಪ್ರಾಚೀನ ಬರ್ಬರತೆಯನ್ನು ಪ್ರದರ್ಶಿಸುತ್ತಿದೆ. ಆಡಳಿತ ವ್ಯವಸ್ಥೆಯ ವಿರುದ್ಧ ದನಿ ಎತ್ತುವವರನ್ನು ವಿನಾಕಾರಣ ಬಂಧಿಸಿ, ಬಂದೀಖಾನೆಗೆ ತಳ್ಳಿ, ಕ್ರೂರ ಶಿಕ್ಷೆ ನೀಡುತ್ತಿದ್ದ ಬ್ರಿಟೀಷ್ ಆಡಳಿತಕ್ಕೂ, ದೆಹಲಿ ಗಡಿಯಲ್ಲಿ ನಡೆಯುತ್ತಿರುವ ಘಟನೆಗಳನ್ನು ವರದಿ ಮಾಡುತ್ತಿದ್ದ ಪತ್ರಕರ್ತರನ್ನು ಬಂಧಿಸುವ ನವ ಭಾರತದ ಆಡಳಿತಕ್ಕೂ ಏನಾದರೂ ವ್ಯತ್ಯಾಸ ಕಾಣಲು ಸಾಧ್ಯವೇ ?
ಪ್ರತಿಧ್ವನಿಗೆ ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ದೆಹಲಿಯ ಗಡಿಯಲ್ಲಿ ರಾತ್ರೋರಾತ್ರಿ ನಿರ್ಮಿಸುತ್ತಿರುವ ಕಾಂಕ್ರೀಟ್ ಗೋಡೆಗಳು, ತಂತಿಬೇಲಿಗಳು ಮತ್ತು ರಸ್ತೆಯಲ್ಲಿ ಹೂಳಲಾಗುತ್ತಿರುವ ಮೊನಚಾದ ಕಬ್ಬಿಣದ ಸರಳುಗಳನ್ನು ನೋಡಿದರೆ ಭಾರತ ಮತ್ತಾವುದೋ ಶತ್ರು ದೇಶದಿಂದ ಅಪಾಯಕ್ಕೊಳಗಾಗಿದೆ ಎಂದು ಭಾಸವಾಗುತ್ತದೆ. ಸಹಸ್ರಾರು ರೈತರು ತಮ್ಮ ಬದುಕುವ ಹಕ್ಕುಗಳಿಗಾಗಿ, ನಿರ್ದಿಷ್ಟ ಗುರಿಯೊಂದಿಗೆ ಸರ್ಕಾರದ ವಿರುದ್ಧ ಶಾಂತಿಯುತ ಹೋರಾಟ ನಡೆಸುತ್ತಿರುವ ಒಂದು ಪ್ರದೇಶದಲ್ಲಿ ಈ ರೀತಿಯ ಅಡ್ಡಗೋಡೆಗಳನ್ನು ನಿರ್ಮಿಸುವುದು, ಮುಳ್ಳಿನ ಮಂಚಗಳಂತೆ ರಸ್ತೆಯಲ್ಲಿ ಚೂಪಾದ ಕಬ್ಬಿಣದ ಸರಳುಗಳನ್ನು ಹೂಳುವುದು ಮತ್ತು ಬೃಹತ್ ಪ್ರಮಾಣದ ಕಬ್ಬಿಣದ ಮುಳ್ಳು ತಂತಿಗಳನ್ನು ಅಡ್ಡಲಾಗಿಟ್ಟಿರುವುದು ಒಂದು ಪ್ರಜಾತಂತ್ರ ವ್ಯವಸ್ಥೆಗೆ ಶೋಭೆ ತರುವಂತಹುದಲ್ಲ. ಬಹುಶಃ ಬ್ರಿಟೀಷ್ ವಸಾಹತು ಕಾಲದಲ್ಲೂ ಪ್ರಭುತ್ವ ಇಷ್ಟು ಕ್ರೂರ ವರ್ತನೆಯನ್ನು ಪ್ರದರ್ಶಿಸಿರಲಿಲ್ಲ ಎನ್ನಬಹುದು. ಸಂಸದೀಯ ಪ್ರಜಾತಂತ್ರ ವ್ಯವಸ್ಥೆಯಲ್ಲಿ ಒಂದು ಚುನಾಯಿತ ಸರ್ಕಾರ ತನ್ನ ಪ್ರಜೆಗಳ ಸಂವಹನ ಸ್ವಾತಂತ್ರ್ಯವನ್ನೂ ಕಸಿದುಕೊಂಡು, ಅವರ ಓಡಾಟವನ್ನು ನಿಯಂತ್ರಿಸಲು ಕ್ರೂರ ಮಾರ್ಗಗಳನ್ನು ಅನುಸರಿಸುತ್ತಿರುವುದು ಜರ್ಮನಿಯ ನಾಜಿಗಳನ್ನೂ ನಾಚಿಸುವಂತಿದೆ.
ಕೇಂದ್ರ ಸರ್ಕಾರ, ಉತ್ತರಪ್ರದೇಶ ಮತ್ತು ಹರಿಯಾಣ ಸರ್ಕಾರಗಳು ಈ ರಕ್ಷಣಾ ಕ್ರಮಗಳನ್ನು ಕೈಗೊಳ್ಳುತ್ತಿರುವುದು ಈ ದೇಶದ ಅನ್ನದಾತರ ವಿರುದ್ಧ. ತಮ್ಮ ಬದುಕಿಗಾಗಿ, ತಮ್ಮ ನಾಳೆಗಳಿಗಾಗಿ, ತಮ್ಮ ಭವಿಷ್ಯದ ಪೀಳಿಗೆಗಾಗಿ ಶಾಂತಿಯುತ ಹೋರಾಟ ನಡೆಸುತ್ತಿರುವ ಲಕ್ಷಾಂತರ ರೈತರ ನೋವು ತುಂಬಿದ ಧ್ವನಿ ಆಳುವ ವರ್ಗಗಳಿಗೆ ಶತ್ರುಪಾಳಯದ ಧ್ವನಿಯಂತೆ ಕೇಳುವುದಾದರೆ ಬಹುಶಃ ಭಾರತ ನಾಗರಿಕತೆಯನ್ನು ಕಳೆದುಕೊಂಡಿದೆ ಎಂದೇ ಹೇಳಬೇಕಾಗುತ್ತದೆ. 1919ರಲ್ಲಿ ಜಲಿಯನ್‍ವಾಲಾಬಾಗ್‍ನಲ್ಲಿ ಕ್ರೂರ ಮಿಲಿಟರಿ ಅಧಿಕಾರಿ ಜಾನ್ ಡಯರ್ ಸಹ ಅಲ್ಲಿ ನೆರೆದಿದ್ದ ನೂರಾರು ಅಮಾಯಕರನ್ನು ಹೀಗೆಯೇ ಭಾವಿಸಿದ್ದನಲ್ಲವೇ ? ನಂತರ ನಡೆದದ್ದು ಕ್ರೂರ ಇತಿಹಾಸ. ಇದೇ ಇತಿಹಾಸ ಮತ್ತೊಮ್ಮೆ ಎಲ್ಲಿ ಮರುಕಳಿಸುವುದೋ ಎನ್ನುವ ಭೀತಿ ಗಣರಾಜ್ಯೋತ್ಸವದ ದಿನದಂದು ಇಡೀ ದೇಶದ ಪ್ರಜ್ಞಾವಂತರನ್ನು, ಸೂಕ್ಷ್ಮ ಮನಸುಗಳನ್ನು ಕಾಡಿದ್ದಂತೂ ಹೌದು.
ದೆಹಲಿಯಲ್ಲಿ ಮುಷ್ಕರ ಹೂಡಿರುವವರು ರೈತರೇ ಅಲ್ಲ ಎನ್ನುವ ಒಂದು ವರ್ಗ ನಮ್ಮ ನಡುವೆ ಇದೆ. ಇವರನ್ನು ನಾವು ಸುಶಿಕ್ಷಿತರೆಂದು ಭಾವಿಸುತ್ತೇವೆ. ಕೆಲವೊಮ್ಮೆ ಸುಸಂಸ್ಕೃತರೂ ಇರುತ್ತಾರೆ. ಇದೇ ಧ್ವನಿಗಳು ಮತ್ತೊಂದು ಮಗ್ಗುಲಿಗೆ ಹೊರಳಿ, ರೈತರ ಸಮಸ್ಯೆಗೂ ನಮಗೂ ಏನು ಸಂಬಂಧ ಎಂದೂ ಕೇಳುತ್ತವೆ. ರೈತರಲ್ಲದವರು ರೈತರ ಸಮಸ್ಯೆಗಳಿಗೆ ಏಕೆ ಸ್ಪಂದಿಸಬೇಕು ಎಂದೂ ಪ್ರಶ್ನಿಸುತ್ತವೆ. ಈ ದ್ವಂದ್ವದ ನಡುವೆಯೇ ಕೇಂದ್ರ ಸರ್ಕಾರ ಈ ದೇಶದ ಸಕಲ ಸಂಪನ್ಮೂಲಗಳನ್ನೂ ಕಾರ್ಪೋರೇಟ್ ಉದ್ಯಮಿಗಳಿಗೆ ಮಾರಾಟ ಮಾಡಲು ಸಜ್ಜಾಗಿದೆ. ಸರ್ಕಾರದ ಖರ್ಚು ವೆಚ್ಚ ಮತ್ತು ಆದಾಯವನ್ನು ಬಿಂಬಿಸುವ ಬಜೆಟ್ ಎನ್ನಲಾಗುವ ಪ್ರಹಸನ ಈಗ ಹರಾಜು ಮಾರುಕಟ್ಟೆಯ ಜಗುಲಿಯಂತೆ ಕಾಣುತ್ತಿದ್ದರೆ ಅಚ್ಚರಿಯೇನಿಲ್ಲ.
ಭಾರತದ ಅರ್ಥವ್ಯವಸ್ಥೆಯನ್ನು ಹಂತಹಂತವಾಗಿ ಕಾರ್ಪೋರೇಟ್ ವಶಕ್ಕೆ ಒಪ್ಪಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಹಾಲಿ ಬಜೆಟ್ ಮೂಲಕ ಮತ್ತೊಂದು ಹೆಜ್ಜೆ ಮುಂದಿಟ್ಟಿದೆ. ಬಜೆಟ್ ಎಂದರೆ ಜನರು ಸರ್ಕಾರದಿಂದ ಏನೆಲ್ಲಾ ಸೌಲಭ್ಯಗಳು, ಸವಲತ್ತುಗಳು ಲಭಿಸುತ್ತವೆ ಎಂದು ನಿರೀಕ್ಷಿಸುತ್ತಿದ್ದ ಕಾಲವೂ ಒಂದಿತ್ತು. ಮಧ್ಯಮ ವರ್ಗದ ನೌಕರರಿಗೆ ಆದಾಯ ತೆರಿಗೆ, ಜನಸಾಮಾನ್ಯರಿಗೆ ಅವಶ್ಯ ವಸ್ತುಗಳ ಬೆಲೆಗಳು, ಗೃಹ ನಿರ್ಮಾಣ ಉಪಕರಣಗಳು, ವಾಹನದ ಬೆಲೆಗಳು, ಅಡುಗೆ ಅನಿಲ, ಪೆಟ್ರೋಲ್ ಡೀಸೆಲ್ ಬೆಲೆಗಳು, ಶಿಕ್ಷಣ ಕ್ಷೇತ್ರಕ್ಕೆ ಸರ್ಕಾರ ನೀಡುವ ಬೆಂಬಲ, ಉದ್ಯೋಗ ಸೃಷ್ಟಿ, ಗ್ರಾಮೀಣ ಬಡತನ ನಿರ್ಮೂಲನೆ, ನಿರುದ್ಯೋಗಕ್ಕೆ ಪರಿಹಾರ, ಆರೋಗ್ಯ ಕ್ಷೇತ್ರದಲ್ಲಿನ ಸುಧಾರಣೆಗಳು ಹೀಗೆ ವಾರ್ಷಿಕ ಬಜೆಟ್ ಎಂದರೆ ಸಾಮಾನ್ಯ ಜನರ ಕನಸುಗಳು ಗರಿಗೆದರುವಂತೆ ಮಾಡುವ ಒಂದು ಪ್ರಹಸನವಾಗಿತ್ತು.
ಆದರೆ 2014ರ ನಂತರ ಇದು ಬದಲಾಗುತ್ತಲೇ ಬಂದಿದೆ. ಹಾಳೆಗಳ ಸಹವಾಸ ತೊರೆದು ಗಣಕ ಯಂತ್ರದಲ್ಲೇ ತಮ್ಮ ತಂತ್ರ ಕುತಂತ್ರಗಳನ್ನೆಲ್ಲಾ ಬಚ್ಚಿಡುವ ಮೂಲಕ ಸರ್ಕಾರ ಬಿಚ್ಚಿಡಬೇಕಾದ ಮಾಹಿತಿಗಳನ್ನು ಕಂಪ್ಯೂಟರಿನ ರಹಸ್ಯ ಕಡತಗಳಲ್ಲಿ ಅವಿಸಿಡುವ ಹೊಸ ಪರಂಪರೆಗೆ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ನಾಂದಿ ಹಾಡಿದ್ದಾರೆ. ತಂತ್ರಜ್ಞಾನ ಯುಗದ ಮುನ್ನಡೆಯಲ್ಲಿ ಇದು ಸಹಜವೇನೋ ಸರಿ. ಆದರೆ ಸರ್ಕಾರ ಮಂಡಿಸುವ ಬಜೆಟ್ ಹಾಳೆಯ ಮೇಲಿರಲಿ, ಪರದೆಯ ಮೇಲಿರಲಿ ಅಂತಿಮ ಗುರಿ ಒಂದೇ ಆಗಿರುತ್ತದೆ ಎನ್ನುವ ಸರಳ ಸತ್ಯವನ್ನು ನಮ್ಮ ನಡುವಿನ ಸುಶಿಕ್ಷಿತರು ಅರ್ಥಮಾಡಿಕೊಳ್ಳಬೇಕಿದೆ. ಈ ನಿಟ್ಟಿನಲ್ಲಿ ಈ ಬಾರಿಯ ಬಜೆಟ್ ಪ್ರಸ್ತಾವನೆಗಳು ಎಂತಹ ನಿರ್ಲಿಪ್ತ ನಿಷ್ಕ್ರಿಯ ಮನಸುಗಳನ್ನೂ ಬಡಿದೆಬ್ಬಿಸುವಂತಹ ಮರ್ಮಾಘಾತವನ್ನು ನೀಡಿರುವುದು ಸ್ಪಷ್ಟ.
2014ರಲ್ಲಿ ಗುಜರಾತ್ ಮಾದರಿಯ ಅಭಿವೃದ್ಧಿ ಪಥದ ರಥವನ್ನು ದೆಹಲಿಯವರೆಗೂ ಕರೆತಂದುದೇ ಈ ದೇಶದ ಕಾರ್ಪೋರೇಟ್ ಔದ್ಯಮಿಕ ಜಗತ್ತು ಎನ್ನುವ ಸತ್ಯವನ್ನು ಇನ್ನಾದರೂ ಕಾರ್ಮಿಕ ವರ್ಗಗಳು, ಮಧ್ಯಮವರ್ಗಗಳು ಅರ್ಥಮಾಡಿಕೊಳ್ಳಬೇಕಿದೆ. ಗುಜರಾತ್ ಮಾದರಿ ಎನ್ನುವುದೇ ಒಂದು ಮಾಯಾಜಿಂಕೆಯಾಗಿತ್ತು. ಈಗ ಈ ಮಾಯಾಜಿಂಕೆಗೆ ರಾಷ್ಟ್ರೀಯ ಸ್ವರೂಪ ನೀಡಲಾಗಿದೆ. ದೇಶದ ಮುನ್ನಡೆಗಾಗಿ, ವಿಶ್ವಗುರುವಿನ ಸ್ಥಾನ ಗಳಿಸಲು ಖಾಸಗೀಕರಣ ಮತ್ತು ಕಾರ್ಪೋರೇಟೀಕರಣ ಅತ್ಯಗತ್ಯ ಎನ್ನುವ ಭ್ರಮೆಗೆ ಬಹುಪಾಲು ಸುಶಿಕ್ಷಿತ ವರ್ಗಗಳು ಬಲಿಯಾಗಿವೆ. ತಾವು ನಿಂತ ನೆಲವೇ ಕುಸಿಯುತ್ತಿದ್ದರೂ, ತಮ್ಮ ತಲೆಯ ಮೇಲಿನ ಸೂರು ಸುರಕ್ಷಿತವಾಗಿರುತ್ತದೆ ಎಂದು ನಂಬಿದ್ದ ಬ್ಯಾಂಕ್, ವಿಮೆ ಮತ್ತು ಸಾರ್ವಜನಿಕ ಉದ್ದಿಮೆಗಳ ನೌಕರರು ಈಗ ತಮ್ಮ ಅಸ್ತಿತ್ವದ ಪ್ರಶ್ನೆಯನ್ನು ಎದುರಿಸುತ್ತಾರೆ.
ಬ್ಯಾಂಕಿಂಗ್ ಮತ್ತು ವಿಮಾ ಕ್ಷೇತ್ರದ ಖಾಸಗೀಕರಣ ಒಮ್ಮೆಲೆ ಸಾಧ್ಯವಾಗುವುದಿಲ್ಲ, ಹಾಗಾಗಿಯೇ 1991ರಿಂದಲೂ ಹಂತಹಂತವಾಗಿ ಈ ಕ್ಷೇತ್ರಗಳಲ್ಲಿನ ಸರ್ಕಾರಿ ಪಾಲುದಾರಿಕೆಯನ್ನು ಕಡಿಮೆ ಮಾಡುತ್ತಲೇ ಬರಲಾಗಿದೆ. ಸರ್ಕಾರದ ಪಾಲು ಶೇ 50ರಷ್ಟಿದ್ದರೂ ತಮ್ಮ ಉದ್ಯಮ ಖಾಸಗಿ ಪಾಲಾಗುವುದಿಲ್ಲ ಎನ್ನುವ ಭ್ರಮೆಯೇ ಬಹುಶಃ ಬ್ಯಾಂಕ್ ಮತ್ತು ವಿಮಾ ನೌಕರರಲ್ಲಿ ನಿಷ್ಕ್ರಿಯತೆ ಉಂಟುಮಾಡಲು ಕಾರಣವಾಗಿತ್ತು. ಕಳೆದ ಮೂವತ್ತು ವರ್ಷಗಳಲ್ಲಿ ಎರಡೂ ಕ್ಷೇತ್ರಗಳ ಕಾರ್ಮಿಕರು ಖಾಸಗೀಕರಣದ ವಿರುದ್ಧ ಸತತ ಹೋರಾಟ ನಡೆಸುತ್ತಿದ್ದರೂ, ಸಮಗ್ರ ನೆಲೆಯಲ್ಲಿ ಸಾರ್ವಜನಿಕರನ್ನೊಳಗೊಂಡಂತಹ ಒಂದು ಹೋರಾಟ ರೂಪುಗೊಂಡಿಲ್ಲ. ಹಣಕಾಸು ಕ್ಷೇತ್ರದ ಎಲ್ಲ ಉದ್ದಿಮೆಗಳು ಒಂದಾಗಿ ರಾಷ್ಟ್ರವ್ಯಾಪಿ ದೀರ್ಘಕಾಲಿಕ ಹೋರಾಟ ಮತ್ತು ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿರುವ ಉದಾಹರಣೆಗಳು ಇಲ್ಲ.ರೈತ ಹೋರಾಟಕ್ಕೆ ಬೆಚ್ಚಿಬಿದ್ದ ಕೇಂದ್ರ: ಉಳುವವನ ತಡೆಯಲು ಮೊಳೆ ನೆಟ್ಟ ಸರ್ಕಾರ
ಕಳೆದ ಆರು ವರ್ಷಗಳಲ್ಲಿ ರಾಷ್ಟ್ರೀಕೃತ ಬ್ಯಾಂಕುಗಳನ್ನು ವಿಲೀನಗೊಳಿಸುವ ಮೂಲಕ ತನ್ನ ಖಾಸಗೀಕರಣ ನೀತಿಯನ್ನು ಅನಾವರಣಗೊಳಿಸಿದ ನಂತರವೂ ಬ್ಯಾಂಕ್ ನೌಕರ ಸಂಘಟನೆಗಳು ಸಾಂಕೇತಿಕ ಮುಷ್ಕರದಿಂದಾಚೆಗೆ ನೋಡಲಿಲ್ಲ ಎನ್ನುವುದೂ ವಾಸ್ತವ. ಈಗ ಕೇಂದ್ರ ಸರ್ಕಾರ ರಾಷ್ಟ್ರೀಕೃತ ಬ್ಯಾಂಕುಗಳ ಖಾಸಗೀಕರಣಕ್ಕೆ ನೇರವಾಗಿ ಮುಂದಾಗಿದೆ. ಎರಡು ಬ್ಯಾಂಕುಗಳು ಇಲ್ಲವಾಗಲಿವೆ. ಇದು ಮೊದಲ ಹೆಜ್ಜೆ ಮಾತ್ರ. ಬ್ಯಾಂಕಿಂಗ್ ಕ್ಷೇತ್ರದ ಖಾಸಗೀಕರಣಕ್ಕೆ ಮೊದಲ ಇಟ್ಟಿಗೆ ಇಟ್ಟು ಎರಡು ದಶಕಗಳೇ ಸಂದಿವೆ. ಈಗ ನಿರ್ಣಾಯಕ ಹಂತ ತಲುಪಿದೆ. ಮತ್ತೊಂದೆಡೆ ಜೀವ ವಿಮಾ ಕ್ಷೇತ್ರದಲ್ಲಿ ಆರು ದಶಕಗಳಿಗೂ ಹೆಚ್ಚು ಕಾಲ ಭಾರತದ ಜನಸಾಮಾನ್ಯರ ಜೀವನಾಡಿಯಾಗಿರುವ ಎಲ್‍ಐಸಿಯಲ್ಲಿ ಶೇ 74ರಷ್ಟು ವಿದೇಶಿ ನೇರ ಬಂಡವಾಳಕ್ಕೆ ಅವಕಾಶ ನೀಡುವ ಮೂಲಕ ಪ್ರಸಕ್ತ ಬಜೆಟ್‍ನಲ್ಲಿ ವಿಮಾ ಕ್ಷೇತ್ರದ ಸಮಾಧಿಗೆ ಶಿಲಾನ್ಯಾಸ ಮಾಡಲಾಗಿದೆ.
ಕೃಷಿ ಮಸೂದೆಗಳು ರೈತರಿಗೆ ಮಾತ್ರ ಸಂಬಂಧಿಸಿದ್ದು ಎನ್ನುವ ಅಪ್ರಬುದ್ಧ ತಿಳುವಳಿಕೆಯೇ ಬ್ಯಾಂಕ್ ಮತ್ತು ವಿಮಾ ಕ್ಷೇತ್ರಗಳಿಗೂ ವಿಸ್ತರಿಸುತ್ತದೆ. ಸಂಪರ್ಕ-ಸಂವಹನ, ಹಣಕಾಸು, ಉತ್ಪಾದನಾ ಕ್ಷೇತ್ರ, ಕೃಷಿ, ಬ್ಯಾಂಕಿಂಗ್, ವಿಮೆ, ರಸ್ತೆ-ರೈಲು ಸಾರಿಗೆ, ವಿಮಾನಯಾನ, ಬಂದರು ಮತ್ತು ಮಾರುಕಟ್ಟೆ ಈ ಎಲ್ಲವನ್ನೂ ಬಂಧಿಸುವ ಒಂದು ಕೊಂಡಿಯನ್ನು ಸರ್ಕಾರ ನವ ಉದಾರವಾದಿ ನೀತಿಗಳ ನೀಲನಕ್ಷೆಯಲ್ಲಿ ಸಿದ್ಧಪಡಿಸಿದೆ. ಕಳೆದ ಆರು ವರ್ಷಗಳ ವಾರ್ಷಿಕ ಬಜೆಟ್‍ಗಳನ್ನು ಪರಾಮರ್ಶಿಸಿದರೆ ಈ ಕೊಂಡಿಯನ್ನು ಹೇಗೆ ವಿಸ್ತರಿಸುತ್ತಾ ಬರಲಾಗಿದೆ ಎಂದು ಅರ್ಥವಾಗುತ್ತದೆ. ಸಾಮಾನ್ಯ ವಿಮಾ ಕಂಪನಿಗಳನ್ನೂ ಖಾಸಗೀಕರಣಗೊಳಿಸುವ ಇಂಗಿತವನ್ನು ಸರ್ಕಾರ ಈ ಬಜೆಟ್‍ನಲ್ಲಿ ಸ್ಪಷ್ಟಪಡಿಸಿದ್ದು, ರೈಲ್ವೆ ಇಲಾಖೆಯ ಖಾಸಗೀಕರಣ ಈಗಾಗಲೇ ಆರಂಭವಾಗಿದೆ.
ಈ ಬೆಳವಣಿಗೆಯ ಕಾಲಾನುಕ್ರಮವನ್ನು ಇನ್ನಾದರೂ ಅರ್ಥಮಾಡಿಕೊಳ್ಳಬೇಕಿದೆ. ಗುತ್ತಿಗೆ ಕೃಷಿ ಜಾರಿಗೆ ಬಂದರೆ, ಎಪಿಎಂಸಿ ಮಾರುಕಟ್ಟೆಯೂ ಇಲ್ಲದೆ ರೈತ ತನ್ನ ಫಸಲನ್ನು ಕಾರ್ಪೋರೇಟ್ ಉದ್ಯಮಿಗಳಿಗೆ ಮಾರಾಟ ಮಾಡಬೇಕಾಗುತ್ತದೆ. ಕೃಷಿ ಉತ್ಪನ್ನದ ಬೆಲೆಯನ್ನು ಕಾರ್ಪೋರೇಟ್ ಮಾರುಕಟ್ಟೆ ನಿರ್ಧರಿಸುತ್ತದೆ. ಅವಶ್ಯ ವಸ್ತುಗಳ ದಾಸ್ತಾನಿನ ಮೇಲೆ ನಿರ್ಬಂಧವನ್ನು ತೆಗೆದುಹಾಕುವುದರಿಂದ ಈ ಕಾರ್ಪೋರೇಟ್ ಉದ್ಯಮಿಗಳು ತಮ್ಮ ಗೋದಾಮುಗಳಲ್ಲಿ ಕೃಷಿ ಉತ್ಪನ್ನಗಳನ್ನು, ಆಹಾರ ಧಾನ್ಯಗಳನ್ನು ಸಂಗ್ರಹಿಸಿ ಮಾರುಕಟ್ಟೆ ಬೆಲೆಯನ್ನು ನಿರ್ಧರಿಸುತ್ತಾರೆ. ರೈತರು ಬೆಳೆದ ಬೆಳೆಯನ್ನು ಖಾಸಗಿ ಸಾರಿಗೆ ವ್ಯವಸ್ಥೆಯ ಮೂಲಕ ಸಾಗಾಣಿಕೆ ಮಾಡಬೇಕಾಗುತ್ತದೆ. ಭಾರತೀಯ ಆಹಾರ ನಿಗಮವನ್ನೂ ಖಾಸಗೀಕರಣ ಮಾಡುವ ಸೂಚನೆ ಈ ಬಜೆಟ್‍ನಲ್ಲಿ ದೊರೆತಿದ್ದು, ಆಹಾರ ಧಾನ್ಯಗಳ ದಾಸ್ತಾನು ಮಾಡಲೂ ಕಾರ್ಪೋರೇಟ್ ಉದ್ಯಮಿಗಳನ್ನು ಅವಲಂಬಿಸಬೇಕಾಗುತ್ತದೆ. ಈ ಪ್ರಕ್ರಿಯೆಯಲ್ಲಿ ರೈತರಿಗೆ ಹಣಕಾಸು ಸಹಾಯ ಅಗತ್ಯವಿದ್ದಲ್ಲಿ ಖಾಸಗಿ ಬ್ಯಾಂಕುಗಳನ್ನು ಸಂಪರ್ಕಿಸಬೇಕಾಗುತ್ತದೆ. ಬೆಳೆ ವಿಮೆಗೂ ಸಹ ಖಾಸಗಿ ವಿಮಾ ಕಂಪನಿಗಳೇ ಮುಂದಾಗುತ್ತವೆ. ಈ ಸರಪಳಿಯನ್ನು ತುಂಡರಿಸದೆ ಹೋದರೆ ದೇಶದ ಸಮಗ್ರ ಉತ್ಪಾದನೆ, ತಯಾರಿಕೆ ಮತ್ತು ಉತ್ಪಾದಿತ ಸರಕುಗಳ ದಾಸ್ತಾನು ಮತ್ತು ಸಾಗಾಣಿಕೆ, ಹಣಕಾಸು ಮತ್ತು ವಿಮಾ ಸೌಲಭ್ಯ ಮತ್ತು ನಾಗರಿಕ ಸಾರಿಗೆ ಇವೆಲ್ಲವೂ ಖಾಸಗಿ ಉದ್ಯಮಿಗಳ ನಿಯಂತ್ರಣಕ್ಕೆ ಬರುತ್ತದೆ. ಇವೆಲ್ಲದರ ಪರಿಣಾಮವಾಗಿ ನಿತ್ಯಾವಶ್ಯ ವಸ್ತುಗಳ ಬೆಲೆಗಳು ಗಗನಕ್ಕೇರುತ್ತವೆ. ಇದು ಈ ದೇಶದ ದುಡಿಯುವ ವರ್ಗಗಳ ಮುಂದಿರುವ ಸವಾಲು.ಯೋಗಿ ಸರ್ಕಾರದ ಷಡ್ಯಂತ್ರವನ್ನೇ ಬುಡಮೇಲುಗೊಳಿಸಿದ ರೈತ ನಾಯಕನ ಕಣ್ಣೀರು!
ದುಡಿಯುವ ವರ್ಗಗಳ ಹೋರಾಟದಲ್ಲಿ ಮುಂಚೂಣಿಯಲ್ಲಿರಬೇಕಾದ ಗುರುತರ ಜವಾಬ್ದಾರಿ ಹೊತ್ತಿದ್ದ ಸುಶಿಕ್ಷಿತ, ಸಂಘಟಿತ ಮತ್ತು ಹಿತವಲಯದ ಕಾರ್ಮಿಕ ವರ್ಗ ಈ ಸಮಗ್ರ ನೆಲೆಯಲ್ಲಿ ತಮ್ಮ ಹೋರಾಟಗಳನ್ನು ರೂಪಿಸಬೇಕಿತ್ತು. ಇಷ್ಟರ ನಡುವೆ ಈ ಎಲ್ಲ ಹೋರಾಟಗಳಿಂದ ಹೊರತಾಗಿರುವ ಅಸಂಘಟಿತ ವಲಯದ ಕಾರ್ಮಿಕರು ಮತ್ತು ಕೃಷಿ ಕಾರ್ಮಿಕರು, ಬೀದಿ ಬದಿ ವ್ಯಾಪಾರಿಗಳು ನಮ್ಮ ನಡುವೆ ಇದ್ದಾರೆ. ಹೋರಾಟದ ಬಯಲಲ್ಲಿ ಇವರ ಪ್ರಾತಿನಿಧಿತ್ವ ಇಲ್ಲವೇ ಇಲ್ಲ ಎನ್ನುವಷ್ಟು ಗೌಣ. ಈ ಶ್ರಮಜೀವಿಗಳ ಬದುಕಿಗೆ ಕಾಯಕಲ್ಪ ಒದಗಿಸುವ ನೈತಿಕ ಮತ್ತು ರಾಜಕೀಯ ಜವಾಬ್ದಾರಿ ಸಂಘಟಿತ ಕಾರ್ಮಿಕರ ಮೇಲಿದೆ. ದುರಂತ ಎಂದರೆ ಸಂಘಟಿತ ವಲಯದಲ್ಲಿ ಕಾರ್ಮಿಕ ಸಂಘಟನೆಗಳು ಅತ್ಯಂತ ಉತ್ಸಾಹದಿಂದ ಹೋರಾಟಗಳ ಮುಂಚೂಣಿಯಲ್ಲಿರುತ್ತವೆ ಆದರೆ ಅಂತರಿಕವಾಗಿ ಈ ಸಂಘಟನೆಗಳ ಸದಸ್ಯರು ಬಹುಮಟ್ಟಿಗೆ ಕೇಂದ್ರ ಸರ್ಕಾರದ ದಮನಕಾರಿ, ಕಾರ್ಮಿಕ ವಿರೋಧಿ ನೀತಿಗಳ ಪರವಾಗಿಯೇ ಇರುತ್ತಾರೆ. ಈ ದ್ವಂದ್ವವನ್ನು ಪರಿಹರಿಸದೆ ಹೋದರೆ ಬಹುಶಃ ಭಾರತ ಶೀಘ್ರಗತಿಯಲ್ಲಿ ವಸಾಹತು ಕಾಲಕ್ಕೆ ಮರಳುತ್ತದೆ.
ಈಗ ಏಪ್ರಿಲ್ 1ರಿಂದ ನೂತನ ಕಾರ್ಮಿಕ ಸಂಹಿತೆಗಳು ಜಾರಿಯಾಗಲಿವೆ. ದೇಶದ ಪ್ರತಿಷ್ಠಿತ ಸಾರ್ವಜನಿಕ ಉದ್ದಿಮೆ, ರಕ್ಷಣಾ ವ್ಯವಸ್ಥೆಗೆ ಭಾರಿ ವಾಹನಗಳನ್ನು, ಬಿಡಿಭಾಗಗಳನ್ನು ತಯಾರಿಸುವ ಬಿಇಎಂಎಲ್ ಖಾಸಗೀಕರಣವಾಗುವುದು ಬಹುಪಾಲು ನಿಶ್ಚಿತವಾಗಿದೆ. ಉಳಿದ ಸಾರ್ವಜನಿಕ ಉದ್ದಿಮೆಗಳನ್ನೂ ಸರ್ಕಾರ ಮಾರಾಟ ಮಾಡಲು ಸಿದ್ಧವಾಗಿದೆ. ದೇಶದ ಎಲ್ಲ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳು ಈಗಾಗಲೇ ಕಾರ್ಪೋರೇಟ್ ಪಾಲಾಗಿವೆ. ಬಂದರುಗಳನ್ನು, ಭಾರತೀಯ ಆಹಾರ ನಿಗಮವನ್ನು, ವಿದ್ಯುತ್ ಉತ್ಪಾದನೆ ಮತ್ತು ಪ್ರಸರಣವನ್ನು ಖಾಸಗೀಕರಣಗೊಳಿಸಲು ನೀಲನಕ್ಷೆ ಸಿದ್ಧವಾಗಿದೆ. ರೈಲು ನಿಲ್ದಾಣ, ರೈಲ್ವೆ ಮಾರ್ಗಗಳು ಈಗಾಗಲೇ ಖಾಸಗೀಕರಣದತ್ತ ನಡೆದಿವೆ. ಈಗ ಬ್ಯಾಂಕ್ ಮತ್ತು ವಿಮಾ ಕ್ಷೇತ್ರ, ವಿಶೇಷವಾಗಿ ಎಲ್‍ಐಸಿ ಖಾಸಗಿಯವರ ತೆಕ್ಕೆಗೆ ಬೀಳಲಿದೆ.
ಈ ಸವಾಲುಗಳ ನಡುವೆಯೇ ಭಾರತದ ದುಡಿಯುವ ವರ್ಗಗಳು, ಶ್ರಮಜೀವಿಗಳು, ಜನಸಾಮಾನ್ಯರು ಕೇಂದ್ರ ಸರ್ಕಾರದ ವಿರುದ್ಧ ಹೋರಾಟಕ್ಕೆ ಸಜ್ಜಾಗಬೇಕಿದೆ. ದೆಹಲಿಯ ಗಡಿಯಲ್ಲಿ ರೈತರ ಮುನ್ನಡೆಯನ್ನು ನಿಯಂತ್ರಿಸಲು ಕೇಂದ್ರ ಮತ್ತು ಕೆಲವು ರಾಜ್ಯ ಸರ್ಕಾರಗಳು ಅನುಸರಿಸುತ್ತಿರುವ ಕ್ರೂರ ಮಾರ್ಗಗಳು ಈ ಕಾರ್ಮಿಕರ ಹೋರಾಟಕ್ಕೆ ಮುನ್ನೆಚ್ಚರಿಕೆಯಾಗಿ ಕಾಣುತ್ತದೆ. ಪ್ರತಿರೋಧದ ದನಿಗಳನ್ನು ದಮನಿಸಲು ಪ್ರಭುತ್ವ ವಸಾಹತುಶಾಹಿ ನಿರಂಕುಶ ಆಡಳಿತವನ್ನೂ ಮೀರಿಸುವ ಕ್ರೂರ ಮಾರ್ಗಗಳನ್ನು ಅನುಸರಿಸಲು ಸಿದ್ಧ ಎನ್ನುವುದನ್ನು ದೆಹಲಿಯ ಗಡಿಗಳು ಕೂಗಿ ಹೇಳುತ್ತಿವೆ. ತಮ್ಮ ಮೂಲ ನೆಲೆಯನ್ನೇ ಕಳೆದುಕೊಳ್ಳುತ್ತಿರುವ ಸಂಘಟಿತ ಕಾರ್ಮಿಕ ವಲಯ ಭವಿಷ್ಯದ ಪೀಳಿಗೆಯ ಬಗ್ಗೆಯೂ ಯೋಚಿಸಿ ಮುಂದಿನ ಹೋರಾಟದ ಮಾರ್ಗಗಳನ್ನು ರೂಪಿಸಬೇಕಿದೆ.ಇಂಟರ್ನೆಟ್ ಸ್ಥಗಿತಗೊಳಿಸಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಛೀಮಾರಿ ಹಾಕಿಸಿಕೊಂಡ ಮೋದಿ ಸರ್ಕಾರ
ಭಾರತದಲ್ಲಿ ನವ ಉದಾರವಾದ ಏಕಾಂಗಿಯಾಗಿಲ್ಲ. ಬಲಪಂಥೀಯ ಫ್ಯಾಸಿಸ್ಟ್ ಆಡಳಿತದ ಬಲದೊಂದಿಗೆ ತನ್ನ ಗಜನಡೆಯನ್ನು ಆರಂಭಿಸಿದೆ. 69 ದಿನಗಳ ರೈತ ಮುಷ್ಕರದ ಸಂದರ್ಭದಲ್ಲಿ ಈ ಕ್ರೌರ್ಯವನ್ನು ನೇರವಾಗಿ ಕಂಡಿದ್ದೇವೆ. ಪತ್ರಕರ್ತರ ವಿರುದ್ಧ ಎಫ್‍ಐಆರ್ ದಾಖಲಿಸುವುದು, ಪ್ರಸಿದ್ಧ ಪತ್ರಿಕೋದ್ಯಮಿಗಳ ವಿರುದ್ಧ ದೇಶದ್ರೋಹದ ಆರೋಪ ಹೊರಿಸುವುದು, ಪ್ರತಿಭಟಿಸುವ ರೈತರನ್ನು ಬಂಧಿಸುವುದು, ಮುಷ್ಕರವನ್ನು ಭಂಗಗೊಳಿಸಲು ವಾಮಮಾರ್ಗಗಳನ್ನು ಬಳಸುವುದು, ಆಂತರಿಕ ಕ್ಷೋಭೆಯನ್ನು ಹರಡಿ ಪ್ರಕ್ಷುಬ್ಧತೆಯನ್ನು ಸೃಷ್ಟಿಸಲು ಯತ್ನಿಸುವುದು ಇವೆಲ್ಲವೂ ಮುಂಬರುವ ದಿನಗಳ ಭಯಾನಕ ಸನ್ನಿವೇಶವನ್ನು ಸೂಚಿಸುತ್ತವೆ.
ಈ ಭೀತಿಯ ವಾತಾವರಣದ ನಡುವೆಯೇ ಈ ದೇಶದ ರೈತಾಪಿ, ಕಾರ್ಮಿಕರು, ಶ್ರಮಜೀವಿಗಳು ಮತ್ತು ಶೋಷಿತರು ತಮ್ಮ ಉತ್ತಮ ಭವಿಷ್ಯಕ್ಕಾಗಿ ಹೋರಾಡಬೇಕಿದೆ. ದೇಶದ ಹಸಿರು ಹೊದಿಕೆಯನ್ನು ವಿಸ್ತರಿಸುವ ದುಡಿಯುವ ಅನ್ನದಾತರ ಕೈಗಳನ್ನೇ ಕತ್ತರಿಸುವ ಮಟ್ಟಿಗೆ ಕ್ರೌರ್ಯ ತಾಂಡವಾಡುತ್ತಿದೆ. ಇಡೀ ದೇಶಕ್ಕೆ ಅತ್ಯವಶ್ಯವಾದ ಆಹಾರವನ್ನು ಬೆಳೆಯುವ ರೈತರ ಮಾರ್ಗದಲ್ಲಿನ ಮುಳ್ಳುಗಂಟಿಗಳನ್ನು ತೆಗೆದುಹಾಕಿ ಹಾದಿ ಸುಗಮಗೊಳಿಸಬೇಕಾದ ಒಂದು ಚುನಾಯಿತ ಸರ್ಕಾರ, ರೈತರು ಮುಂದಡಿಯಿಡದಂತೆ ಶರಮಂಚಗಳನ್ನು ನಿರ್ಮಿಸುತ್ತಿರುವುದು ನವ ಉದಾರವಾದ ಮತ್ತು ಬಲಪಂಥೀಯ ಫ್ಯಾಸಿಸಂನ ಕ್ರೂರ ಮುಖವಾಡವನ್ನು ಜನತೆಗೆ ಪರಿಚಯಿಸುತ್ತಿದೆ. ಈ ಭೀತಿ, ಆತಂಕಗಳ ನಡುವೆಯೇ ದೆಹಲಿಯ ರೈತ ಮುಷ್ಕರ ಭರವಸೆಯ ಬೆಳಕನ್ನು ಮೂಡಿಸಿದೆ. ಈ ಬೆಳಕಿನಲ್ಲೇ ಮುಂದಡಿಯಿಡಲು ಭಾರತದ ಶ್ರಮಜೀವಿಗಳು, ಶೋಷಿತರು, ಅವಕಾಶವಂಚಿತರು ಮತ್ಗತು ಬಡ ಜನತೆ ಸಜ್ಜಾಗಬೇಕಿದೆ.