ಕೇಂದ್ರವು ದೇಶದಲ್ಲಿ ಲಸಿಕೆ ಕೊರತೆಯ ಬಗೆಗಿನ ಸುದ್ದಿಗಳನ್ನು ಸಂಪೂರ್ಣ ನಿರಾಕರಿಸುತ್ತಿದೆ ಮತ್ತು ಲಭ್ಯವಿರುವ ಲಸಿಕೆಗಳನ್ನು ರಾಜ್ಯ ಸರ್ಕಾರಗಳು ಸರಿಯಾಗಿ ನಿರ್ವಹಿಸುತ್ತಿಲ್ಲ ಎಂದು ದೂಷಿಸುತ್ತಿದೆ. ಆದರೆ ಸತ್ಯವೆಂದರೆ ಕೇಂದ್ರ ಸರ್ಕಾರವೇ ಲಸಿಕೆಯ ಖರೀದಿ ಮತ್ತು ಪೂರೈಕೆಯ ಏಕಸ್ವಾಮ್ಯತೆ ಹೊಂದಿದೆ. 45 ಕ್ಕಿಂತ ಹೆಚ್ಚಿನ ವಯಸ್ಸಿನವರಿಗೆ ವ್ಯಾಕ್ಸಿನೇಷನ್ ಕಡ್ಡಾಯ ಮಾಡಿದ ನಂತರ ಲಸಿಕೆಯ ಬೇಡಿಕೆ ಎಷ್ಟಿರಬಹುದು ಎಂದು ಅಂದಾಜಿಸುವಲ್ಲಿ ಸರ್ಕಾರ ಸಂಪೂರ್ಣ ವಿಫಲವಾಗಿದೆ.
ಪ್ರಸ್ತುತ ಲಸಿಕೆಯ ಬೇಡಿಕೆ ದಿನಕ್ಕೆ 37 ಲಕ್ಷ ಲಸಿಕೆಗಳು. ಕೋವಿಶೀಲ್ಡ್ ಮತ್ತು ಕೊವಾಕ್ಸಿನ್ ತಯಾರಕರ ಒಟ್ಟು ಉತ್ಪಾದನಾ ಸಾಮರ್ಥ್ಯ ದಿನಕ್ಕೆ ಸರಿಸುಮಾರು 24 ಲಕ್ಷ ಲಸಿಕೆಗಳು. ಉತ್ಪಾದನೆ ಮತ್ತು ಬೇಡಿಕೆಯ ನಡುವಿನ ದೈನಂದಿನ ಕೊರತೆಯ ಅಂತರವೇ ದೊಡ್ಡಾದಾಗಿದೆ. ಮುಂದಿನ ವಾರಗಳಲ್ಲಿ ಅಂತರವು ಇನ್ನೂ ಹೆಚ್ಚು ತೀವ್ರಗೊಳ್ಳಲಿವೆ. ಏಕೆಂದರೆ ಉತ್ಪಾದನಾ ಸಾಮರ್ಥ್ಯವನ್ನು ಹೆಚ್ಚಳ ಮಾಡುವುದಿದ್ದರೂ ಅದು ಸಮಯ ತೆಗೆದುಕೊಳ್ಳುತ್ತದೆ.

ಮಾಧ್ಯಮಗಳ ಸುದ್ದಿಯನ್ನು ಅಲ್ಲಗಳೆದ ಯುವತಿ
ಮಾರ್ಚ್ ತಿಂಗಳಲ್ಲಿ ಸೋಂಕಿನ ಪ್ರಮಾಣವು ನಿಯಂತ್ರಣದಲ್ಲಿದ್ದುದದರಿಂದ ಬೇಡಿಕೆ ಪೂರೈಕೆಯನ್ನು ಮೀರಿರಲಿಲ್ಲ. ಆದರೆ ಏಪ್ರಿಲ್ 1 ರಿಂದ ಬೇಡಿಕೆ ಇದ್ದಕ್ಕಿದ್ದಂತೆ ಏರಿಕೆಯಾಗಿದೆ, ಸೋಂಕಿನ ಎರಡನೇ ವೇವ್ ಉಲ್ಬಣಗೊಂಡಿರುವುದು ಮತ್ತು ವ್ಯಾಕ್ಸಿನೇಷನ್ ವಯಸ್ಸಿನ ಮಿತಿಯನ್ನು 45+ ಇಳಿಸಲಾಗಿರುವುದು ಇದಕ್ಕೆ ಮುಖ್ಯ ಕಾರಣ. ಈಗಾಗಲೇ ಉತ್ಪಾದನಾ ಸಾಮರ್ಥ್ಯ ಹೆಚ್ಚಳ ಆಗಿರಬೇಕಿತ್ತು. ಆದರೆ ಈ ಬಗ್ಗೆ ಕೇಂದ್ರ ಯೋಚಿಸಲಿಲ್ಲ. ಲಸಿಕೆ ದಾಸ್ತಾನುಗಳು ಖಾಲಿಯಾದ ನಂತರ, ದೈನಂದಿನ ಬೇಡಿಕೆ-ಪೂರೈಕೆ ಅಂತರವು ದಿನಕ್ಕೆ 15 ರಿಂದ 20 ಲಕ್ಷ ಮುಟ್ಟಬಹುದು. ಉತ್ಪಾದನಾ ಸಾಮರ್ಥ್ಯವನ್ನು ಹೆಚ್ಚಿಸುವ ತುರ್ತು ಅವಶ್ಯಕತೆಯಿದೆ.
ಈ ಮಧ್ಯೆ ದಾಸ್ತಾನು ಹೆಚ್ಚಿಸಲು ಆದ್ಯತೆ ನೀಡಬೇಕಾಗಿದ್ದ ಪ್ರಧಾನಿ ಅದನ್ನು ಸಂಪೂರ್ಣ ಕಡೆಗೆಣಿಸಿ ‘ಲಸಿಕಾ ಹಬ್ಬ’ ಆಚರಿಸಲು ಕರೆ ನೀಡಿ ಬೇಜವಾಬ್ದಾರಿತನ ಮೆರೆದಿದ್ದಾರೆ.
ರಾಜಕೀಯ ಕಾರಣಗಳಿಗಾಗಿ ಮಹಾರಾಷ್ಟ್ರದಲ್ಲಿನ ಲಸಿಕೆಯ ಕೊರತೆ ಸುದ್ದಿಯಾಗಿದೆ. ಆದರೆ ಒರಿಸ್ಸಾ, ಛತ್ತೀಸ್‌ಘಡ, ತೆಲಂಗಾಣದಲ್ಲೂ ಲಸಿಕೆಯ ತೀವ್ರ ಕೊರತೆಯಿದೆ ಎಂದು ವರದಿಯಾಗಿದೆ.
ಆಂಧ್ರಪ್ರದೇಶ ಮತ್ತು ತೆಲಂಗಾಣದಲ್ಲಿ ಜಿಲ್ಲಾ ಮಟ್ಟದಲ್ಲಿ ಲಸಿಕೆ ಕೊರತೆ ಇದೆ ಎಂದು ಅಪೊಲೊ ಆಸ್ಪತ್ರೆ ಸಮೂಹದ ಸಹಮಾಲಿಕ ಸಂಗೀತಾ ರೆಡ್ಡಿ ಎನ್‌ಡಿಟಿವಿಗೆ ತಿಳಿಸಿದ್ದಾರೆ. ಛತ್ತೀಸ್‌ಘಡದ ಆರೋಗ್ಯ ಸಚಿವ ಸಿಂಗ್ ಡಿಯೋ ರಾಜ್ಯಗಳಿಗೆ ಬೇಡಿಕೆಗಿಂತ ಕಡಿಮೆ ಲಸಿಕೆಗಳನ್ನು ಪೂರೈಸಿದರೆ ಒಟ್ಟಾರೆ ಬೇಡಿಕೆಗೆ ಅನುಗುಣವಾಗಿ ಅದನ್ನು ಕೊರತೆ ಎಂದು ಪರಿಗಣಿಸಬೇಕಾಗುತ್ತದೆ ಅಂದಿದ್ದಾರೆ.
ಲಸಿಕೆಗಳ ದೈನಂದಿನ ಪೂರೈಕೆಯನ್ನು 50% ಕ್ಕಿಂತ ಹೆಚ್ಚಿಸುವ ಅವಶ್ಯಕತೆಯಿದೆ. ಆದ್ದರಿಂದ ಪ್ರತಿ ರಾಜ್ಯಕ್ಕೂ ಏಪ್ರಿಲ್ ಅಂತ್ಯದ ವೇಳೆಗೆ ಅದರ ಕೋಟಾದಲ್ಲಿ 50% ಹೆಚ್ಚು ಲಸಿಕೆ ಬೇಕಾಗಬಹುದು. ಸೋಂಕಿನ ಪ್ರಮಾಣ ಮೇ ಮಧ್ಯದವರೆಗೂ ಇದೇ ರೀತಿ ಇರಬಹುದು ಎಂದು ತಜ್ಞರು ಹೇಳುವುದರಿಂದ ಈ ಬೇಡಿಕೆ ಮತ್ತಷ್ಟು ಬೆಳೆಯಬಹುದು.
ಕೇವಲ ಎರಡು ತಯಾರಕರು ಅಸ್ತಿತ್ವದಲ್ಲಿರುವಾಗ ಉತ್ಪಾದನಾ ಸಾಮರ್ಥ್ಯವು ಮುಂದಿನ ಕೆಲವು ವಾರಗಳಲ್ಲಿ ಹೆಚ್ಚುತ್ತಿರುವ ಬೇಡಿಕೆಯನ್ನು ಪೂರೈಸಬಹುದೇ ಎಂಬುದು ಇಲ್ಲಿ ಪ್ರಮುಖ ಪ್ರಶ್ನೆಯಾಗಿದೆ. ಸೀರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾದ ಕೋವಿಶೀಲ್ಡ್ ಮತ್ತು ಭಾರತ್ ಬಯೋಟೆಕ್ನ ಕೊವಾಕ್ಸಿನ್ ಉತ್ಪಾದನೆಯನ್ನು ಎಷ್ಟು ವೇಗವಾಗಿ ಹೆಚ್ಚಿಸುತ್ತದೆ ಎಂಬುದರ ಮೇಲೆ ಮೋದಿಯವರ ‘ಲಸಿಕೆ ಹಬ್ಬ’ ಅವಲಂಬಿತವಾಗಿರುತ್ತದೆ.
ಪ್ರಸ್ತುತ ಉತ್ಪಾದನೆಯಾಗುತ್ತಿರುವ ವ್ಯಾಕ್ಸಿನ್‌ಗಳಲ್ಲಿ ಶೇಕಡಾ 90 ರಷ್ಟನ್ನು SII ಉತ್ಪಾದಿಸುತ್ತಿದೆ. ಅದು ತಿಂಗಳಿಗೆ 60 ಮಿಲಿಯನ್ ಡೋಸ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. ಆದರೆ ಉತ್ಪಾದನೆಗೆ ಮೊದಲೇ ಆದ ಒಪ್ಪಂದದ ಪ್ರಕಾರದ ಪೂರೈಸಲೇಬೇಕಾದ ರಫ್ತನ್ನು ಸದ್ಯಕ್ಕೆ ಉತ್ಪಾದಿಸಲಾಗುತ್ತಿಲ್ಲ. ಕೋವಿಶೀಲ್ಡ್‌ಗೆ ಹೋಲಿಸಿದರೆ ಕೊವ್ಯಾಕ್ಸಿನ್ ಉತ್ಪಾದನೆಯಾಗುತ್ತಿರುವುದು ಅತಿ ಕಡಿಮೆ. ಭಾರತ್ ಬಯೋಟೆಕ್ ಮತ್ತು SII ಎರಡೂ ಫೆಬ್ರವರಿ ಹೊತ್ತಲ್ಲೇ ಸರ್ಕಾರದಿಂದ ಆರ್ಥಿಕ ನೆರವು ಕೇಳಿತ್ತು. ಆದರೆ ಸರ್ಕಾರ ಆ ಬಗ್ಗೆ ಹೆಚ್ಚಿನ ಒಲವು ತೋರಿರಲಿಲ್ಲ.
ಸೋಂಕಿನ ಎರಡನೇ ಅಲೆಯನ್ನು ಎದುರಿಸಲು ಸಾಮರ್ಥ್ಯ ವಿಸ್ತರಣೆಯ ಅಗತ್ಯವಿತ್ತು ಮತ್ತು ಅದನ್ನು ಊಹಿಸಿ ಕಾರ್ಯರೂಪಕ್ಕೆ ತರುವಲ್ಲಿ ಕೇಂದ್ರವು ಸಂಪೂರ್ಣ ವಿಫಲವಾಗಿದೆ. ದೇಶದಾದ್ಯಂತ ಉತ್ಪಾದನೆ ಮತ್ತು ವಿತರಣಾ ಸಾಮರ್ಥ್ಯದ ಬಗ್ಗೆ ನಿರ್ಧಾರ ತೆಗೆದುಕೊಳ್ಳುವ ಉಸ್ತುವಾರಿಯನ್ನು ಕೇಂದ್ರದಲ್ಲಿನ ಅಧಿಕಾರಿ ವರ್ಗದವರು ವಹಿಸಿಕೊಂಡಿದ್ದಾರೆ. ಇದರಿಂದಾಗಿಯೇ ಸಮಸ್ಯೆ ಉಂಟಾಗಿದೆ. ಒಂದೆಡೆ, ಅಧಿಕಾರಶಾಹಿಗಳು ವ್ಯವಹಾರಗಳನ್ನು ನಡೆಸಬಾರದು ಎಂದು ಮೋದಿಯವರು ವಾದಿಸುತ್ತಾರೆ, ಮತ್ತೊಂದೆಡೆ, ಲಸಿಕೆಗಳನ್ನು ಸಂಗ್ರಹಿಸುವ ಮತ್ತು ವಿತರಿಸುವ ವ್ಯವಹಾರವನ್ನು ಅವರು ಸಂಪೂರ್ಣವಾಗಿ ಕೇಂದ್ರೀಕರಿಸುತ್ತಾರೆ. ಸರ್ಕಾರವು ಏಕೈಕ ಖರೀದಿದಾರನಾಗಿರುವುದರಿಂದ, ಇದು ಸಾಮರ್ಥ್ಯ ವಿಸ್ತರಣೆಯ ನಿರ್ಧಾರಗಳ ಮೇಲೆ ಪ್ರಭಾವ ಬೀರುತ್ತದೆ.
ಲಸಿಕೆಯ ಸಂಗ್ರಹಣೆಯನ್ನು ವಿಕೇಂದ್ರೀಕರಿಸಲು ಮೋದಿ ಸರ್ಕಾರ ಏಕೆ ಒಪ್ಪತ್ತಿಲ್ಲ ಎಂಬುದು ವಿವರಣೆಗೆ ಸಿಗುವುದಿಲ್ಲ. ವ್ಯವಸ್ಥೆಯಲ್ಲಿ ದೋಷವುಂಟಾದಾಗ ಅದು ರಾಜ್ಯಗಳ ವಿತರಣಾ ಸಮಸ್ಯೆ ಎಂದು ದೂಷಿಸುತ್ತದೆ. ಕೇಂದ್ರವು ಈ ಬ್ಲೇಮ್ ಗೇಮನ್ನು ನಿಲ್ಲಿಸಿ ಮೊದಲು ಜವಾಬ್ದಾರಿಯನ್ನು ಸ್ವೀಕರಿಸಬೇಕು.
ಇಲ್ಲಿಯವರೆಗೆ ಆಗಿರುವ ಹಾನಿಯನ್ನು ಸರಿಪಡಿಸಲು ಮೋದಿ ಸರ್ಕಾರ ಕೆಲವು ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳಲೇ ಬೇಕಾದ ಸಮಯ ಇದು. ಕಳೆದ ವರ್ಷ ಲಾಕ್‌ಡೌನ್ ಘೋಷಿಸಿದ ನಂತರ 18 ದಿನಗಳಲ್ಲಿ ಮಹಾಭಾರತ ಯುದ್ಧವನ್ನು ಹೇಗೆ ಗೆದ್ದರು ಎಂದು ಹೇಳುವ ಮೂಲಕ ಮೋದಿ ಆಶಾವಾದವನ್ನು ಹುಟ್ಟಿಸಿದ್ದರು. ಈಗ, ಮಾರುಕಟ್ಟೆಯಲ್ಲಿ ಲಭ್ಯವಿರುವ ಎಲ್ಲಾ ಲಸಿಕೆಗಳೊಂದಿಗೆ ನಾವು ಈ ಯುದ್ಧವನ್ನು ಗೆಲ್ಲಲು ಸಾಧ್ಯವಾಗದಿದ್ದರೆ, ಸರ್ಕಾರವು ದೂಷಿಸಬೇಕೆಂದರೂ ಯಾರೂ ಸಿಗದ ಪರಿಸ್ಥಿತಿ ನಿರ್ಮಾಣವಾಗಬಹುದು.
ದಿ ವೈರ್ ಲೇಖನ