ಪಶ್ಚಿಮ ಬಂಗಾಳದಲ್ಲಿ ಎರಡನೇ ಹಂತದ ಚುನಾವಣೆ ಮುಗಿಯುತ್ತಿದ್ದಂತೆಯೇ ಮುಂದಿನ ಹಂತಗಳಿಗಾಗಿ ರಾಜಕೀಯ ಪಕ್ಷಗಳ ನಾಯಕರು ಬಿರುಸಿನ ಪ್ರಚಾರ ಕೈಗೊಂಡಿದ್ದಾರೆ. ಈ ಬಾರಿ ಹೇಗಾದರೂ ಸರಿ, ಪಶ್ಚಿಮ ಬಂಗಾಳದಲ್ಲಿ ಅಧಿಕಾರ ಹಿಡಿಯಲೇ ಬೇಕು ಎಂಬ ಹಠದೊಂದಿಗೆ ಬಿಜೆಪಿ ತನ್ನ ಪಕ್ಷದ ಅತಿರಥ ಮಹಾರಥರನ್ನು ಪ್ರಚಾರದ ಕಣಕ್ಕಿಳಿಸಿದೆ. ಪ್ರತೀ ಪ್ರಚಾರದಲ್ಲಿಯೂ ಆಡಳಿತರೂಢ ತೃಣಮೂಲ ಕಾಂಗ್ರೆಸ್ ಹಾಗೂ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ವಿರುದ್ದ ಟೀಕೆಗಳ ಸುರಿಮಳೆಗೈಯಲಾಗುತ್ತಿದೆ.
ಖಾಸಗಿ ಸುದ್ದಿವಾಹಿನಿಯೊಂದಕ್ಕೆ ಸಂದರ್ಶನ ನೀಡಿರುವ ಕೇಂದ್ರ ಗೃಹ ಮಂತ್ರಿ ಅಮಿತ್ ಶಾ ಅವರು, ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಅಧಿಕಾರಕ್ಕೆ ಬರದೇ ಇದ್ದರೆ, ಅದು ರಾಷ್ಟ್ರೀಯ ಭದ್ರತೆಗೆ ಅಪಾಯ ತಂದೊಡ್ಡುತ್ತದೆ ಎಂದು ಹೇಳಿದ್ದಾರೆ.
“ಈಶಾನ್ಯ ರಾಜ್ಯಗಳಿಗೆ ಪಶ್ಚಿಮ ಬಂಗಾಳ ರಹದಾರಿಯಾಗಿದೆ. ಅಲ್ಲದೇ, ದೇಶದ ಗಡಿಗಳಿಗೆ ಈ ರಾಜ್ಯವು ಹೊಂದಿಕೊಂಡಿದೆ. ನಾವು ಅಲ್ಲಿ ಅಕ್ರಮ ಒಳನುಸುಳುವಿಕೆ ತಡೆಯುವ ಸರ್ಕಾರ ರಚನೆ ಮಾಡಿಲ್ಲವೆಂದರೆ, ದೇಶದ ಭದ್ರತೆಗೆ ಅಪಾಯವಾಗಲಿದೆ,” ಎಂದು ಅವರು ಹೇಳಿದ್ದಾರೆ.
ಇದಕ್ಕೂ ಮೊದಲು ಸಾರ್ವಜನಿಕ ಸಭೆಯಲ್ಲಿ ಭಾಗವಹಿಸಿದ್ದ ಅಮಿತ್ ಶಾ ಅವರು, ಅಲ್ಲಿಯೂ ಅಕ್ರಮ ಒಳನುಸುಳುವಿಕೆಯನ್ನೇ ಪ್ರಮುಖ ವಿಚಾರವಾಗಿಟ್ಟುಕೊಂಡು ಬಿಜೆಪಿ ಪರ ಪ್ರಚಾರ ನಡೆಸಿದ್ದಾರೆ.
“ಪಶ್ಚಿಮ ಬಂಗಾಳದ ನಾಯಕರು ನಾಲ್ಕು ದಿನಗಳಿಗೊಮ್ಮೆ ನನ್ನ ಬಳಿ ಬಂದು ಹೇಳುತ್ತಾರೆ ಒಳನುಸುಳುವಿಕೆಯ ಕುರಿತು ಯೋಚನೆ ಮಾಡಿ ಎಂದು. ನೀವು ಅಕ್ರಮ ಒಳನುಸುಳುವಿಕೆಯಿಂದ ತೊಂದರೆಗೆ ಒಳಗಾಗಿದ್ದೀರೋ ಇಲ್ಲವೋ? ದೀದಿ ಸಿಎಂ ಆದರೆ, ಇದನ್ನು ನಿಲ್ಲಿಸುತ್ತಾರೆಯೇ? ಬಿಜೆಪಿಯಿಂದ ಮಾತ್ರ ಈ ಅಕ್ರಮ ಒಳನುಸುಳುವಿಕೆಯನ್ನು ತಡೆಯಲು ಸಾಧ್ಯ. ಬೇರೆ ಯಾರಿಂದಲೂ ಸಾಧ್ಯವಿಲ್ಲ,” ಎಂದು ಹೇಳಿದ್ದಾರೆ.
ಕೊಲ್ಕತ್ತಾ ಮತ್ತು ದೆಹಲಿಯ ನಡುವೆ ದೀದಿ ಯುದ್ದದ ಸನ್ನಿವೇಶ ಸೃಷ್ಟಿಸಿದ್ದಾರೆ. ಕೇಂದ್ರ ಸರ್ಕಾರ ಯಾವ ಯೋಜನೆಗಳನ್ನು ಬಿಡುಗಡೆ ಮಾಡಿದರೂ, ಅದು ಇಲ್ಲಿನ ಫಲಾನುಭವಿಗಳಿಗೆ ಸಿಗಲಿಲ್ಲ. ಏಕೆಂದರೆ, ಇಲ್ಲಿನ ರಾಜ್ಯ ಸರ್ಕಾರ ಅದರ ಕುರಿತಾಗಿ ಗಮನ ಹರಿಸಲಿಲ್ಲ, ಎಂದು ಅವರು ಹೇಳಿದ್ದಾರೆ.
“ನರೇಂದ್ರ ಮೋದಿ ಸರ್ಕಾರ ರೈತರಿಗೆ ರೂ. 6000 ನೀಡಿತ್ತು. ಆದರೆ, ಪಶ್ಚಿಮ ಬಂಗಾಳದ ಸರ್ಕಾರ ರೈತರ ಪಟ್ಟಿ ಕಳುಹಿಸದ ಕಾರಣ ಇಲ್ಲಿ ಯಾರಿಗೂ ಆ ಹಣ ಸಿಗಲಿಲ್ಲ. 60 ಕೋಟಿ ಬಡ ಕುಟುಂಬಗಳಿಗೆ 5 ಲಕ್ಷ ರೂ. ವರೆಗೆ ಆರೋಗ್ಯ ವಿಮೆಯನ್ನು ನೀಡಲು ಸರ್ಕಾರ ಯೋಜನೆ ಹಾಕಿಕೊಂಡಿತ್ತು. ಆದರೆ, ಅದನ್ನು ಪಶ್ಚಿಮ ಬಂಗಾಳದಲ್ಲಿ ಅನುಷ್ಟಾನ ಮಾಡಲು ಸಾಧ್ಯವಾಗಲಿಲ್ಲ. ಸರ್ಕಾರ ಆ ಯೋಜನೆಯನ್ನೇ ವಿರೋಧಿಸಿತ್ತು,” ಎಂದು ಮಮತಾ ಬ್ಯಾನರ್ಜಿ ವಿರುದ್ದ ಕಿಡಿ ಕಾರಿದ್ದಾರೆ.