ಚುನಾವಣೆಗಳನ್ನು ಗೆಲ್ಲಲು ಬಿಜೆಪಿ ಇವಿಎಂಗಳನ್ನು ಹ್ಯಾಕ್ ಮಾಡುತ್ತಿದೆ ಎಂಬ ಆರೋಪಕ್ಕೆ ಪುಷ್ಟೀಕರಣ ನೀಡಿದಂತೆ ಅಸ್ಸಾಂನ ರಾತಾಬಾರಿ ಕ್ಷೇತ್ರದ ಬಿಜೆಪಿ ಶಾಸಕನ ಕಾರಿನಲ್ಲಿ ಇವಿಎಂ ಮಷೀನ್ ಪತ್ತೆಯಾಗಿದೆ. ಇದಕ್ಕೆ ಸಂಬಂಧಿಸಿದಂತೆ ಚುನಾವಣಾ ಆಯೋಗವು ನಾಲ್ಕು ಜನ ಅಧಿಕಾರಿಗಳನ್ನು ಕೆಲಸದಿಂದ ವಜಾಗೊಳಿಸಿದ್ದು, ಯಾವ ಬೂತ್‌ನ ಇವಿಎಂ ದೊರಕಿದೆಯೋ ಅಲ್ಲಿ ಮರು ಮತದಾನ ನಡೆಸುವಂತೆ ಆದೇಶ ನೀಡಿದೆ.
ಈ ಘಟನೆ ವರದಿಯಾಗುತ್ತಿದ್ದಂತೆಯೇ, ಕರೀಮ್‌ಗಂಜ್ ಜಿಲ್ಲೆಯಲ್ಲಿ ಹಲವೆಡೆ ಮಾರಾಮಾರಿಯೂ ನಡೆದಿವೆ ಎಂದು ವರದಿಯಾಗಿದೆ. ಬಿಜೆಪಿ ಅಭ್ಯರ್ಥಿಯಾಗಿರುವ ಕೃಷ್ಣೇಂದು ಪೌಲ್ ಅವರ ವಾಹನದಲ್ಲಿ ಇವಿಎಂ ಪತ್ತೆಯಾಗಿದೆ ಎಂಬುದು ಖಚಿತವಾಗಿ ತಿಳಿದುಬಂದಿದೆ.
ಈ ಕುರಿತಾಗಿ ಅಧಿಕೃತ ಹೇಳಿಕೆ ನೀಡಿರುವ ಚುನಾವಣಾ ಆಯೋಗವು, ರಾತ್ರಿ ಸುಮಾರು 9.20ರ ವೇಳೆಗೆ ಚುನಾವಣಾ ಸಿಬ್ಬಂದಿಗಳು ಖಾಸಗಿ ಕಾರಿನಲ್ಲಿ ಇವಿಎಂಗಳ ಜತೆಗೆ ಹೊರಟಿದ್ದರು. ಈ ಸಂದರ್ಭದಲ್ಲಿ ಆ ಕಾರು ಯಾರದು ಎಂದು ತಿಳಿಯುವ ಗೋಜಿಗೆ ಅವರು ಹೋಗಲಿಲ್ಲ. ಕೃಷ್ಣೇಂದು ಪೌಲ್ ಅವರ ಪತ್ನಿಗೆ ಸೇರಿದ ಕಾರ್ ಇದಾಗಿದ್ದು, ಈ ಕುರಿತಾಗಿ ಚುನಾವಣಾ ಅಫಿಡವಿಟ್‌ನಲ್ಲಿ ಕೂಡಾ ದಾಖಲಿಸಲಾಗಿದೆ.


ಕಾರು ಸ್ಟ್ರಾಂಗ್ ರೂಂ ಬಳಿ ತಲುಪುತ್ತಿದ್ದಂತೆಯೇ, ಸ್ಥಳೀಯರ ಗುಂಪು ಒಂದು ಸ್ಥಳದಲ್ಲಿ ಜಮಾಯಿಸಿತ್ತು. ಪರಿಸ್ಥಿತಿ ಕೈ ಮೀರುತ್ತಿದ್ದದ್ದನ್ನು ಮನಗಂಡ ಅಧಿಕಾರಿಗಳು ಹಾಗೂ ವಾಹನದ ಚಾಲಕ ಸ್ಥಳದಿಂದ ಪರಾರಿಯಾದರು. ಈ ಹೊತ್ತಿಗೆ ಸ್ಥಳದಲ್ಲಿ ಜಮಾಯಿಸಿದ್ದ ಜನರು ಕಾರಿನ ಮೇಲೆ ಕಲ್ಲು ತೂರಾಟ ಆರಂಭಿಸಿದರು.
ಇದು ಇವಿಎಂ ಅನ್ನು ಹತೋಟಿಗೆ ಪಡೆದುಕೊಳ್ಳುವ ಬಿಜೆಪಿಯ ಪ್ರಯತ್ನ ಎಂದು ವಿರೋಧ ಪಕ್ಷಗಳು ಆರೋಪಿಸಿವೆ. ಅಸ್ಸಾಂನಲ್ಲಿ ಅಧಿಕಾರ ಹಿಡಿಯಲು ಬಿಜೆಪಿಗೆ ಇರುವಂತಹ ಏಕೈಕ ದಾರಿ ಇದು ಎಂದು ಕಾಂಗ್ರೆಸ್ ಮುಖಂಡ ಗೌರವ್ ಗೊಗಾಯ್ ಟೀಕಿಸಿದ್ದಾರೆ.
ಗುರುವಾರ ಎರಡನೇ ಹಂತದ ಚುನಾವಣೆ ಅಸ್ಸಾಂನಲ್ಲಿ ಮುಗಿದಿತ್ತು. ಸುಮಾರು 77% ಮತದಾರರು ಚುನಾವಣೆಯಲ್ಲಿ ತಮ್ಮ ಹಕ್ಕು ಚಲಾಯಿಸಿದ್ದರು.