ಸಚಿವ ಸಂಪುಟ ವಿಸ್ತರಣೆ ಕುರಿತಂತೆ ಬಿಜೆಪಿಯೊಳಗೆ ಎದ್ದಿರುವ ಅಪಸ್ವರಗಳಿಗೆ ಸಿಎಂ ಯಡಿಯೂರಪ್ಪ ಪ್ರತಿಕ್ರಿಯಿಸಿದ್ದಾರೆ. ಯಾವುದೇ ದೂರುಗಳಿದ್ದರೆ ಕೇಂದ್ರ ನಾಯಕರ ಬಳಿ ಕೊಂಡು ಹೋಗುವಂತೆ ಅತೃಪ್ತ ಶಾಸಕರಿಗೆ ಸಂದೇಶ ರವಾನಿಸಿದ್ದಾರೆ.
ಗುರುವಾರ ಪತ್ರಕರ್ತರೊಂದಿಗೆ ಮಾತನಾಡಿದ ಯಡಿಯೂರಪ್ಪ, ಕ್ಯಾಬಿನೆಟ್ ವಿಸ್ತರಣೆ ಕುರಿತು ಯಾವುದೇ ಶಾಸಕರಿಗೆ ಅಸಮಾಧಾನಗಳಿದ್ದರೆ ಪಕ್ಷದ ವರಿಷ್ಟರಿಗೆ ದೂರು ನೀಡಲಿ. ಅದನ್ನು ಬಿಟ್ಟು ಪಕ್ಷಕ್ಕೆ ಮುಜುಗರ ತರಿಸುವಂತಹ ಹೇಳಿಕೆಗಳನ್ನು ಬಹಿರಂಗವಾಗಿ ನೀಡಬಾರದು ಎಂದು ಸಿಎಂ ತಾಕೀತು ಮಾಡಿದ್ದಾರೆ.
ಪಕ್ಷದ ಬಗ್ಗೆ ನಕರಾತ್ಮಕವಾಗಿ ಹೇಳಿಕೆ ನೀಡುವ ಮೂಲಕ ಕರ್ನಾಟಕ ಬಿಜೆಪಿಗೆ ಕಪ್ಪುಚುಕ್ಕೆ ತರಬಾರದು. ಕೇಂದ್ರದ ನಾಯಕರ ಅಪೇಕ್ಷೆಯಂತೆ ಒಂದು ಸ್ಥಾನ ಖಾಲಿ ಇಟ್ಟು ಸಚಿವ ಸಂಪುಟ ವಿಸ್ತರಣೆ ಮಾಡಲಾಗಿದೆ. ಸಚಿವ ಸ್ಥಾನ ಸಿಗದ 10-12 ಶಾಸಕರು ಇಲ್ಲ ಸಲ್ಲದ ಆರೋಪ ಮಾಡುತ್ತಿದ್ದಾರೆ. ತನ್ನ ಇತಿ ಮಿತಿಗಳಲ್ಲಿ ಸಚಿವ ಸಂಪುಟ ವಿಸ್ತರಣೆ ಮಾಡಿದ್ದೇನೆ. ಆರೋಪ ಮಾಡುವವರು ಕೇಂದ್ರದ ನಾಯಕರಿಗೆ ದೂರು ನೀಡಬಹುದು, ಅವರನ್ನು ಅಡ್ಡಿ ಪಡಿಸುವವರು ಯಾರೂ ಇಲ್ಲ ಎಂದು ಹೇಳಿದ್ದಾರೆ.
ಸುಳ್ಳು ಆರೋಪಗಳನ್ನು ಹೇಳಿ ಗೊಂದಲ ಸೃಷ್ಟಿಸಬಾರದು, ಈ ಮೂಲಕ ಪಕ್ಷದ ಶಿಸ್ತಿಗೆ ಧಕ್ಕೆ ತರಬಾರದು. ಕೇಂದ್ರದ ಆಶೀರ್ವಾದ ಇರುವುದರಿಂದ ಮುಂದಿನ ಎರಡೂವರೆ ವರ್ಷಗಳಲ್ಲಿ ರಾಜ್ಯದ ಅಭಿವೃದ್ಧಿಗೆ ಶ್ರಮಿಸಲಾಗುವುದು. ಜನವರಿ ತಿಂಗಳಾಂತ್ಯಕ್ಕೆ ಬಜೆಟ್ ಅಧಿವೇಶನ ಆರಂಭಗೊಳ್ಳಲಿದ್ದು, ಮಾರ್ಚ್ ನಲ್ಲಿ ರಾಜ್ಯದ ಆರ್ಥಿಕ ಸ್ಥಿತಿಗತಿಗಳನ್ನು ನೋಡಿಕೊಂಡು ಉತ್ತಮವಾದ, ರೈತ ಪರವಾದ ಬಜೆಟ್ ಮಂಡಿಸಲಾಗುವುದು ಎಂದು ಮುಖ್ಯಮಂತ್ರಿ ತಿಳಿಸಿದ್ದಾರೆ.
ಕರ್ನಾಟಕ ಕ್ಯಾಬಿನೆಟ್ ವಿಸ್ತರಣೆಗೊಂಡ ಕ್ಷಣದಿಂದ ಮುಖ್ಯಮಂತ್ರಿ ರಾಜ್ಯ ಬಿಜೆಪಿ ಘಟಕದ ವಿವಿಧ ಶಾಸಕರ ಅಸಮಾಧಾನವನ್ನು ಎದುರಿಸುತ್ತಿದ್ದಾರೆ. ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಮತ್ತು ಎಂಎಲ್ಸಿ ಎ ಎಚ್ ವಿಶ್ವನಾಥ್ ಅವರು ಯಡಿಯೂರಪ್ಪ ಅವರು ‘ಬ್ಲ್ಯಾಕ್ ಮೇಲ್’ಗೆ ಬಲಿಯಾಗಿ ಮಂತ್ರಿ ಸ್ಥಾನ ನೀಡಿದ್ದಾರೆಂದು ಆರೋಪಿಸಿದರೆ, ಶಾಸಕರಾದ ಎಂ.ಸತೀಶ್ ರೆಡ್ಡಿ ಮತ್ತು ಅರವಿಂದ್ ಬೆಲ್ಲಾಡ್ ಅವರು ಕ್ಯಾಬಿನೆಟ್ನಲ್ಲಿ ಪಕ್ಷದ ಯುವ ಮುಖಂಡರಿಗೆ ಅವಕಾಶ ನೀಡದ ಕಾರಣಕ್ಕಾಗಿ ವಾಗ್ದಾಳಿ ನಡೆಸಿದ್ದರು.