ಜೀವವೈವಿಧ್ಯತೆಯ ತೊಟ್ಟಿಲು ಹಸಿರು ಸ್ವರ್ಗದ ಬೀಡು ಮಲೆನಾಡು ಆದರೆ ಸರ್ಕಾರದ ಕೆಲವೊಂದು ಯೋಜನೆಗಳು ಮಲೆನಾಡಿಗರಿಗೆ ಮತ್ತು ಮಲೆನಾಡ ಸೌಂದರ್ಯಕ್ಕೆ ಕುತ್ತು ತರುವಂತಿದೆ. ಇಲ್ಲಿನ ಪ್ರಜ್ಞಾವಂತ ಸಮುದಾಯ ಎಚ್ಚೆತ್ತುಕೊಂಡು ಹೋರಾಟಕ್ಕೆ ಮುಂದಾಗಿದೆ. ಒಂದು ಕಡೆ ಕಸ್ತೂರಿ ರಂಗನ್ ವರದಿ ಅನುಷ್ಠಾನದ ಭೀತಿ ಇನ್ನೊಂದೆಡೆ ಶಿವಮೊಗ್ಗದ ಭದ್ರಾವತಿ ಮೈಸೂರು ಕಾರ್ಖಾನೆಗೆ ನೀಡಿದ್ದ 20 ಸಾವಿರ ನಡುತೋಪುಗಳ ಗುತ್ತಿಗೆ ಅವಧಿಯನ್ನು ಮತ್ತೆ 40 ವರ್ಷಗಳಿಗೆ ಮುಂದೂಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿರುವುದು ಇಲ್ಲಿನ ರೈತರಿಗೆ ಆತಂಕ ಸೃಷ್ಟಿಸಿದೆ.
ಸುಮಾರು 40 ವರ್ಷಗಳ ಹಿಂದೆ ಜಲಾಶಗಳ ನಿರ್ಮಾಣದಿಂದ ಸಾವಿರಾರು ಎಕರೆ ಕೃಷಿಭೂಮಿ ಸರ್ಕಾರದ ಅಧೀನವಾಯಿತು. ಪರಿಹಾರದ ಹಣ ತಕ್ಷಣಕ್ಕೆ ಅನುಕೂಲವಾದರು ಎಷ್ಟೋ ಕುಟುಂಬಗಳು ಇಂದಿಗೂ ಶಾಶ್ವತವಾಗಿ ನೆಲೆಯೂರಲು ಸಾಧ್ಯವಾಗಿಲ್ಲ, ಇನ್ನೊಂದೆಡೆ ಸಾವಿರಾರು ಕುಟುಂಬಗಳು ಸ್ವಂತ ಭೂಮಿ ಮನೆಮಠಗಳನ್ನು ತೊರೆದು ಒಕ್ಕಲೇಳುವ ಸ್ಥಿತಿ ಎದುರಾಗಿತ್ತು.
ಇದು ಕೃಷಿಯನ್ನೆ ನಂಬಿದ ಸಣ್ಣ ಹಿಡುವಳಿದಾರರ ಬದುಕಿಗೆ ಕುತ್ತು ತಂದಿತ್ತು. ಇಂದಿಗೂ ಮಲೆನಾಡಿನ ಗುಡ್ಡಗಾಡು ಪ್ರದೇಶದಲ್ಲಿ ನೆಲೆನಿಂತ ಕುಟುಂಬಗಳು ಸ್ವಲ್ಪಮಟ್ಟಿನ ಜಮೀನು ಹೊಂದಿ ಜೀವನ ನಡೆಸುತ್ತಿದ್ದರು, ಅವರ ಜಮೀನಿಗೆ ವಾಸಸ್ಥಳಕ್ಕೆ ಆಧಾರ ಪತ್ರ ದೊರೆತ ಸಂಖ್ಯೆ ಕಡಿಮೆಯಿದೆ. ಜಲಾಶಯಗಳ ನಿರ್ಮಾಣದಿಂದ ಕೃಷಿ ಭೂಮಿ ಮುಳುಗಡೆಯಾಗಿ ರೈತರ ಬದುಕೂ ಮುಳುಗಿ ಹೋಗಿತ್ತು. ಇದರಿಂದ ಚೇತರಿಸಿಕೊಳ್ಳುವ ಹೊತ್ತಲ್ಲಿಯೇ ಮಲೆನಾಡಿಗರಿಗೆ ಮತ್ತೊಂದು ಆತಂಕ ಶುರುವಾಗಿದೆ.
ಮಲೆನಾಡಿನ ಅತಿ ಸೂಕ್ಷ್ಮ ಪರಿಸರ ವಲಯಕ್ಕೆ ಸೇರ್ಪಡೆಗೊಳಿಸಿದ ಕೇಂದ್ರದ ಕಸ್ತೂರಿ ರಂಗನ್ ವರದಿ ದೇಶದ ಪಶ್ಚಿಮಘಟ್ಟ ರಾಜ್ಯಗಳಿಗೆ ಸಂಕಷ್ಟಕೀಡು ಮಾಡಿದೆ. ಪಶ್ಚಿಮಘಟ್ಟಗಳ ಒಟ್ಟು 1,64,280 ಚದರ ಕಿಲೋ ಮೀಟರ್ ಪ್ರದೇಶದಲ್ಲಿ 59,940 ಚದರ ಕಿಲೋ ಮೀಟರ್ ಪ್ರದೇಶ ಸೂಕ್ಷ್ಮ ಪರಿಸರ ವಲಯಕ್ಕೆ ಸೇರುತ್ತದೆ. ಮಹಾರಾಷ್ಟ್ರ, ಗುಜರಾತ್, ಗೋವಾ, ಕೇರಳ, ತಮಿಳುನಾಡು ಸೇರಿದಂತೆ ಕರ್ನಾಟಕ ರಾಜ್ಯದ 11 ಜಿಲ್ಲೆಗಳ 1,592 ಕ್ಕೂ ಹೆಚ್ಚು ಹಳ್ಳಿಗಳ 20,668 ಪ್ರದೇಶ ಸೂಕ್ಷ್ಮ ಪರಿಸರ ಪ್ರದೇಶಕ್ಕೆ ಸೇರಲಿದೆ. ಇದರಲ್ಲಿ ಹೆಚ್ಚಾಗಿ ಮಲೆನಾಡಿನ ತೀರ್ಥಹಳ್ಳಿ, ಹೊಸನಗರ, ಸಾಗರ, ಮಡಿಕೇರಿ, ಕೊಡಗು ಭಾಗಗಳ ಭೂ ಪ್ರದೇಶ ಅಧಿಕ ಪ್ರಮಾಣದಲ್ಲಿ ಸೂಕ್ಷ್ಮ ಪರಿಸರ ವಲಯಕ್ಕೆ ಸೇರಲಿವೆ, ಇಲ್ಲಿ ನೆಲೆನಿಂತಿರುವ ಗ್ರಾಮೀಣ ಭಾಗದ ರೈತ ಸಮುದಾಯ ನಾವು ಒಕ್ಕಲೇಳುವ ಪರಿಸ್ಥಿತಿ ಎದುರಾಗಬಹುದೆಂಬ ಭಯ ಶುರುವಾಗಿ ಹೋರಾಟಕ್ಕೆ ಮುಂದಾಗಿದ್ದಾರೆ.
ಒಂದುಕಡೆ ಬಡವರಿಗೆ ಸಣ್ಣ ಹಿಡುವಳಿದಾರರಿಗೆ ಬದುಕಿನ ಪ್ರಶ್ನೆಯಾದರೆ, ಮತ್ತೊಂದೆಡೆ ಕ್ವಾರೆ, ಮರಳು ದಂಧೆ ಗಣಿಗಾರಿಕೆ ಭೂ ಮಾಫಿಯಾ ನಡೆಸುವವರಿಗೆ ಈ ವರದಿ ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ. ಜೀವವೈವಿಧ್ಯತೆ ಮತ್ತು ಪರಿಸರ ಸಂರಕ್ಷಣೆಯ ದೃಷ್ಟಿಯಿಂದ 20 ಸಾವಿರ ಚದರ ಮೀಟರ್ಗಿಂತ ಅಂದರೆ 2 ಎಕರೆ 1 ಹೆಕ್ಟೆರ್ ಪ್ರದೇಶದಷ್ಟು ಜಾಗದಲ್ಲಿ ಕೈಗಾರಿಕೆ, ಬಿಲ್ಡಿಂಗ್, ಲೇಔಟ್ ನಿರ್ಮಿಸುವ ಹಾಗಿಲ್ಲ, ಶಾಖೋತ್ಪನ್ನ ವಿದ್ಯುತ್ ಯೋಜನೆಗೆ ಅವಕಾಶವಿಲ್ಲ ಎಂದು ವರದಿ ತಿಳಿಸುತ್ತದೆ. ಗ್ರಾಮೀಣ ಭಾಗದ ಜನತೆಗೆ ವರದಿಯ ಸರಿಯಾದ ಮಾಹಿತಿ ತಿಳಿದಿರುವುದು ಕಡಿಮೆಯೇ, ಒಂದು ವೇಳೇ ವರದಿ ಅನುಷ್ಠಾನವಾದರೆ ತಕ್ಷಣ ಒಕ್ಕಲೇಳಬೇಕೆಂಬ ಆತಂಕ ಶುರುವಾಗಿದೆ. ಇತ್ತ ಗಣಿ, ಮರಳು, ಟಿಂಬರ್ ದಂಧೆ, ಭೂ ಮಾಫಿಯಾ ಮಾಡುವವರಿಗೆ ಕಸ್ತೂರಿ ರಂಗನ್ ವರದಿಯಲ್ಲಿರುವ ಅಂಶಗಳು ಮುಳುವಾಗಿ ಪರಿಣಮಿಸಿದೆ. ಜೊತೆಗೆ ಕೃಷಿಯನ್ನೆ ನಂಬಿ ಬದುಕು ಕಟ್ಟಿಕೊಂಡವರು ನಿಜವಾಗಿಯೂ ಸಮಸ್ಯೆ ಎದುರಿಸುವಂತಾಗುತ್ತೆ.
ಮತ್ತೊಂದೆಡೆ ಕಸ್ತೂರಿ ರಂಗನ್ ವರದಿ ಅವೈಜ್ಞಾನಿಕವಾಗಿದೆ ಕೃಷಿಕ್ಷೇತ್ರದ ಮೇಲೆ ಹೆಚ್ಚು ಪರಿಣಾಮ ಬೀರುತ್ತದೆ ಎಂದು ಪರಿಸರ ಸಂರಕ್ಷಣೆ ಗಮನದಲ್ಲಿಟ್ಟುಕೊಂಡು ಮಾಧನ ಗಾಡ್ಗೀಳ್ ವರದಿ ರೂಪಿತಗೊಂಡಿತು. ಇದರಲ್ಲಿ ಕೆಲವೊಂದು ನಿಬಂಧನೆಗಳನ್ನು ಹೇರುವುದರ ಜೊತೆಗೆ ಇದು ಕೃಷಿಕ್ಷೇತ್ರಕ್ಕೆ ಸಾಂಪ್ರದಾಯಿಕ ಕೃಷಿಕರಿಗೆ ಅನುಕೂಲವಾಗುವಂತಹ ಅಂಶ ಪ್ರಕಟಿಸಿದೆ.
ಸಾವಯವ ಕೃಷಿಗೆ ಉತ್ತೇಜನ ನೀಡುವುದು. ಶೇಕಡಾ 30 ರಷ್ಟು ಇಳಿಜಾರು ಪ್ರದೇಶದಲ್ಲಿ ಬಹುವಾರ್ಷಿಕ ಬೆಳೆಗಳನ್ನು ಬೆಳೆಯುವುದು. ಸ್ಥಳೀಯ ತಳಿಗಳ ಸಂರಕ್ಷಣೆ, ಪ್ರೋತ್ಸಾಹದ ಜೊತೆಗೆ ಧನಸಹಾಯ ನೀಡುವುದು. ಮಣ್ಣಿನಲ್ಲಿರುವ ಇಂಗಾಲದ ಅಂಶ ಅಧಿಕಗೊಳ್ಳಲು ಧನಸಾಯ ನೀಡಬೇಕೆಂದು ಹೇಳುತ್ತದೆ. ಕೃಷಿಕರ ದೃಷ್ಟಿಯಿಂದ ಈ ವರದಿ ಗಮನಿಸಿದರೆ ಸಾಂಪ್ರದಾಯಿಕ ಕೃಷಿಗೆ ಹೆಚ್ಚಿನ ಒತ್ತು ನೀಡಿ ಸ್ಥಳೀಯ ಮಟ್ಟದ ರೈತರಿಗೆ ಪ್ರೋತ್ಸಾಹ ನೀಡಿ ರೈತರ ಆದಾಯ ಪರಿಗಣಿಸಿ ಸರ್ಕಾರ ಪ್ರತಿ ವರ್ಷ ಉತ್ತೇಜನ ಧನವನ್ನು ನೇರವಾಗಿ ರೈತರ ಖಾತೆಗೆ ಹಾಕಬೇಕೆಂದು ತಿಳಿಸುತ್ತದೆ.
ಇನ್ನೊಂದೆಡೆ ಹಸಿರಾದ ಭೂಮಿ ಬರಡು ಮಾಡುವ ಅಕೇಶಿಯ ಕಾಟ
ಲಾಭ ಗಳಿಕೆ ಮತ್ತು ಬಂಡವಾಳ ಶಾಹಿಗಳ ಬೆಂಬಲಕ್ಕೆ ನಿಂತ ರಾಜ್ಯ ಸರ್ಕಾರ ರೈತನ ಬದುಕಿನ ಬಗ್ಗೆಯಾಗಲಿ, ಭೂಮಿಯ ಫಲವತ್ತತೆಯ ಬಗ್ಗೆಯಾಗಲಿ ಕಿಂಚಿತ್ತೂ ಯೋಚಿಸದೆ, ಭದ್ರಾವತಿಯಲ್ಲಿನ ಮೈಸೂರು ಕಾಗಗದದ ಕಾರ್ಖಾನೆಗೆ 1976ರಲ್ಲಿ ರಾಜ್ಯ ಸರ್ಕಾರ 30 ಸಾವಿರ ಹೆಕ್ಟೆರ್ ಪ್ರದೇಶದಲ್ಲಿ ನೀಲಗಿರಿ, ಅಕೇಶಿಯಾ ಬೆಳೆಯಲು ಅವಕಾಶ ಕೊಡಲಾಗಿತ್ತು. ನಂತರ ಕೇಂದ್ರ ಸರ್ಕಾರದ ಅರಣ್ಯ ಸಂರಕ್ಷಣಾ ಕಾಯ್ದೆ ಅಡಿ ಪರಿಸರ ಮತ್ತು ಜೀವವೈವಿಧ್ಯತೆಯ ಸಂರಕ್ಷಣೆ ದೃಷ್ಟಿಯಿಂದ 3250 ಹೆಕ್ಟೆರ್ ಪ್ರದೇಶವನ್ನು ವನ್ಯಜೀವಿ ವಿಭಾಗಕ್ಕೆ ಸೇರಿಸಲಾಯಿತು. 20 ಸಾವಿರ ಹೆಕ್ಟರ್ ಪ್ರದೇಶ ಎಂಪಿಎಂ ವಶದಲ್ಲಿತ್ತು. ಇದೀಗ 2020 ರಲ್ಲಿ ಗುತ್ತಿಗೆ ಅವಧಿಮುಗಿದಿತ್ತು. ಆದರೀಗ ರಾಜ್ಯಸರ್ಕಾರ 40 ವರ್ಷಗಳಿಗೆ ಅವಧಿಯನ್ನು ಮುಂದೂಡಿದೆ.
ಆದರೆ ಈ ಹಿಂದೆ ನಿರ್ವಹಣೆ ಎಂಪಿಎಂ ಮತ್ತು ಅರಣ್ಯ ಇಲಾಖೆಯವರ ಕೈಯಲ್ಲಿತ್ತು. ಇದೀಗ ಸರ್ಕಾರ ಖಾಸಗೀಕರಣ ಮಾಡುವ ಆದೇಶ ಹೊರಡಿಸಿದ್ದರಿಂದ ಭೂಮಿ ಮತ್ತು ಕಾರ್ಖಾನೆ ಖಾಸಗಿಯವರ ಕೈ ಸೇರುವ ಎಲ್ಲಾ ಸಾಧ್ಯತೆಗಳಿವೆ. ಖಾಸಗಿಯವರು ಹೆಚ್ಚು ಆದಾಯಗಳಿಕೆಗೆ ಕಾರ್ಖಾನೆಯನ್ನು ಲಾಭದಾಯಕ ಉತ್ಪನ್ನಗಳ ತಯಾರಿಕೆಗೆ ಬಳಸಿಕೊಳ್ಳಬಹುದು ಜೊತೆಗೆ ಆಕೇಶಿಯಾ ನೀಲಗಿರಿ ಬೆಳೆಯುವ ಬದಲು ಬೆಲೆಬಾಳುವ ಶ್ರೀಗಂಧ ಸೇರಿದಂತೆ ಇನ್ನಿತರ ಸಸಿಗಳನ್ನು ಬೆಳೆದು ಸರ್ಕಾರ ಮತ್ತು ಸಂಸ್ಥೆಯ ಬೊಕ್ಕಸ ತುಂಬಿಸುವ ಹುನ್ನಾರ ನಡೆಯ ಬಹುದು.
ಒಂದು ವೇಳೆ ಆಕೇಶಿಯ, ನೀಲಗಿರಿ ಬೆಳೆಸಿದರೂ ಕೂಡ ಫಲವತ್ತಾದ ಭೂಮಿ ಬರುಡಾಗ ತೊಡಗುತ್ತೆ. ಇದು ಸ್ಥಳೀಯ ರೈತರ ಜಮೀನಿಗೆ ಸಾಕಷ್ಟು ಪರಿಣಾಮ ಬೀರಿ ಕೃಷಿ ಭೂಮಿ ಬರುಡು ಭೂಮಿಯಾಗುವುದರಲ್ಲಿ ಸಂಶಯವಿಲ್ಲ. ದನಕರುಗಳಿಗೂ ಮೇವು ಸಿಗದಂತಾಗುತ್ತೆ. ಇನ್ನು ಕ್ರಮೇಣ ಅಂತರ್ಜಲ ಮಟ್ಟವು ಕಡಿಮೆಯಾಗ ತೊಡಗುತ್ತೆ. ಮತ್ತೊಂದೆಡೆ ವಾತಾವರಣದಲ್ಲಿ ವೈಪರಿತ್ಯ ಉಂಟಾಗಿ ತಾಪಮಾನ ಹೆಚ್ಚಳವಾಗುತ್ತೆ.
ಇನ್ನೊಂದು ಬಹುಮುಖ್ಯ ವಿಚಾರ ಅಂದ್ರೆ ಎಂಪಿಎಂ ಅಧೀನದಲ್ಲಿರುವ ಪ್ಲಾಂಟೇಷನ್ಗಳು ಖಾಸಗಿಯವರ ಕೈಸೇರಿದ್ರೆ ಮಲೆನಾಡಿನ ಜನವಸತಿ ಮಧ್ಯೆದಲ್ಲಿರುವ ಪ್ಲಾಂಟೇಷನ್ಗಳು ಖಾಸಗಿಯವರ ಕೈ ಸೇರಿ, ಇದು ಕೂಡ ದೊಡ್ಡ ಸಮಸ್ಯೆಯಾಗಿ ಮಲೆನಾಡಿಗರನ್ನು ಕಾಡುತ್ತೆ. ಇನ್ನು ಗುಡ್ಡಗಾಡು ಪ್ರದೇಶದಲ್ಲಿ ರಸ್ತೆ ಸೇರಿದಂತೆ ಪ್ರಮುಖ ಮೂಲಭೂತ ಸೌಕರ್ಯಗಳಿಂದ ವಂಚಿತರಾಗಿದ್ದು, ಸರ್ಕಾರ ಅನುದಾನ ನೀಡಿದ್ದರೂ ರಾಜಕೀಯ ನಾಯಕರ, ಮಧ್ಯವರ್ತಿಗಳ, ಗುತ್ತಿಗೆದಾರರ ಕೈಪಾಲಾಗುತ್ತಿದೆ. ಬಡವ ಬಡವನಾಗಿಯೇ ಉಳಿದಿದ್ದಾನೆ, ಸಣ್ಣಮಟ್ಟದಲ್ಲಿ ಬದುಕು ಕಟ್ಟಿಕೊಂಡು ಜೀವನ ನಡೆಸುತ್ತಿದ್ದವರಿಗೆ ಸರ್ಕಾರದ ಯೋಜನೆಗಳು ಗಾಬರಿಗೊಳಿಸುವಂತಿದೆ.