ದೇಶದ ರಾಜಧಾನಿ ದೆಹಲಿಯಲ್ಲಿ ರೈತರ ಟ್ರ್ಯಾಕ್ಟರ್ ರ್ಯಾಲಿಯನ್ನು ಐತಿಹಾಸಿಕ ಘಟನೆ ಎಂದು ಬಣ್ಣಿಸಲಾಗುತ್ತಿದೆ. ಈ ಸಂದರ್ಭದಲ್ಲಿ ಕೆಲವು ರೈತರು ಕೆಂಪು ಕೋಟೆಯ ಮೇಲೇರಿ, ಅನ್ಯ ಧ್ವಜ ಹಾರಿಸಿದ್ದು ಈಗ ವಿವಾದಕ್ಕೆ ಎಡೆ ಮಾಡಿಕೊಟ್ಟಿದೆ. ಅದರಲ್ಲೂ, ಸಿಖ್ಖ್ ಪ್ರತಿಭಟನಾಕಾರರು ಹಾರಿಸಿದ್ದ ಖಲಿಸ್ತಾನಿ ಬಾವುಟ ಎಂಬ ಸುಳ್ಳು ವದಂತಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಕೆಲವು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ, ಭಾರತದ ರಾಷ್ಟ್ರ ಬಾವುಟವನ್ನು ಅವರೋಹಣ ಮಾಡಿ, ಖಲಿಸ್ತಾನಿ ಬಾವುಟವನ್ನು ಹಾರಿಸಲಾಗಿದೆ ಎಂದು ಹೇಳಿದ್ದಾರೆ.
ಆದರೆ, ಇದರ ಅಸಲೀಯತ್ತೇ ಬೇರೆ ಇದೆ. ದ ಕ್ವಿಂಟ್ ವರದಿ ಮಾಡಿರುವ ಪ್ರಕಾರ, ಪ್ರತಿಭಟನಾಕಾರರು ಹಾರಿಸಿದ ಬಾವುಟ ಖಲಿಸ್ತಾನಿ ಬಾವುಟವಲ್ಲ. ಬದಲಾಗಿ, ಸಿಖ್ಖ್ ಧರ್ಮದ ಬಾವುಟವಾದ ʼನಿಶಾನ್ ಸಾಹಿಬ್ʼ.
ಆದರೆ, ಈ ವಿಚಾರವನ್ನು ಮರೆಮಾಚಿ ಹಲವು ಸಾಮಾಜಿಕ ಜಾಲತಾಣದ ಬಳಕೆದಾರರು, ಸುಳ್ಳು ವದಂತಿಯನ್ನು ಹಬ್ಬಿಸುವ ಪ್ರಯತ್ನ ಮಾಡಿದ್ದಾರೆ. ಇದರೊಂದಿಗೆ ಈ ಹಿಂದೆಯೂ ಸುಳ್ಳು ಸುದ್ದಿಯನ್ನು ಪ್ರಸಾರ ಮಾಡಿ ಅಪಹಾಸ್ಯಕ್ಕೆ ಒಳಗಾಗಿದ್ದ Kreately ಎಂಬ ಬ್ಲಾಗ್, ಫೋಟೋಶಾಪ್ ಬಳಸಿ ತಿರುಚಿದ ರೈತರ ಚಿತ್ರವನ್ನು ಬಳಸಿ ಟ್ವೀಟ್ ಮಾಡಿದೆ.
ಈ ಸುಳ್ಳು ಸುದ್ದಿ ಕೇವಲ ಟ್ವಿಟರ್ ಮಾತ್ರವಲ್ಲದೇ, ಫೇಸ್ಬುಕ್ನಲ್ಲೂ ಸಾಕಷ್ಟು ಪ್ರಚಾರವನ್ನು ಪಡೆದಿದೆ.
ಕೆಂಪುಕೋಟೆಯ ಮೇಲೆ ಎರಡು ಧ್ವಜಗಳನ್ನು ಹಾರಿಸಲಾಗಿತ್ತು. ಒಂದು ನಿಶಾನ್ ಸಾಹಿಬ್ ಮತ್ತೊಂದು ರೈತ ಒಕ್ಕೂಟದ ಬಾವುಟ. ಈ ಎರಡೂ ಬಾವುಟಗಳಿಗೂ, ಖಲಿಸ್ತಾನಿ ಬಾವುಟಕ್ಕೂ ಅಜಗಜಾಂತರ ವ್ಯತ್ಯಾಸವಿದೆ.
ಪಂಜಾಬ್ ಹಾಗೂ ಅಲ್ಲಿನ ಸಂಸ್ಕೃತಿಯ ಕುರಿತು ಅವಿರತ ಸಂಶೋಧನೆ ನಡೆಸಿರುವ ಅಮನ್ದೀಪ್ ಸಂಧು ಅವರು ಹೇಳುವ ಪ್ರಕಾರ, ತ್ರಿಕೋನಾಕಾರದಲ್ಲಿ ಹಳದಿ ಅಥವಾ ಕೇಸರಿ ಬಣ್ಣದಲ್ಲಿ ಖಂಡ (ಎರಡು ಕತ್ತಿ) ಇದ್ದಲ್ಲಿ ಅದು ಸಿಖ್ಖರ ಬಾವುಟ. ಅದಕ್ಕೂ ಖಲಿಸ್ತಾನಿ ಬಾವುಟಕ್ಕೂ ಸಂಬಂಧವೇ ಇಲ್ಲ. ಅಸಲಿಗೆ, ಖಲಿಸ್ತಾನದ ಅಧಿಕೃತ ಬಾವುಟವೇ ಇಲ್ಲ, ಎಂದಿದ್ದಾರೆ.
“ರ್ಯಾಲಿಯ ಯೋಜನಾ ಕ್ರಮದಲ್ಲಿ ಬಾವುಟ ಹಾರಿಸುವ ಕುರಿತು ಉಲ್ಲೇಖವೇ ಇರಲಿಲ್ಲ. ಆದರೆ, ಭಾರತದ ತ್ರಿವರ್ಣ ಧ್ವಜವನ್ನು ಕೆಳಗಿಳಿಸಿ ಸಿಖ್ಖರ ಬಾವುಟ ಹಾರಿಸಲಾಗಿದೆ ಎಂಬ ಸುದ್ದಿ ಶುದ್ದ ಸುಳ್ಳು,” ಎಂದು ಹೇಳಿದ್ದಾರೆ.
ರೈತರ ಟ್ರ್ಯಾಕ್ಟರ್ ರ್ಯಾಲಿಯ ಸಂದರ್ಭದಲ್ಲಿ ಅಲ್ಲಲ್ಲಿ ಘರ್ಷಣೆಗಳು ನಡೆದಿದ್ದು ನಿಜವಾದರೂ, ಖಲಿಸ್ತಾನ ಬಾವುಟಕ್ಕೆ ಸಂಬಂಧಪಟ್ಟಂತಹ ಸುದ್ದಿಗಳು ಶುದ್ದ ಸುಳ್ಳು ಎಂಬುದು ದೃಢವಾಗಿದೆ.