ತಮ್ಮ ಪಾಲಿನ ಮೃತ್ಯುಪಾಶವಾಗಿರುವ ಮೂರು ಕೃಷಿ ಕಾನೂನುಗಳನ್ನು ರದ್ದುಮಾಡಬೇಕೆಂದು ಒತ್ತಾಯಿಸಿ ರೈತರು ಪ್ರತಿಭಟನೆ ನಡೆಸಲು ಆರಂಭಿಸಿ ಇಂದಿಗೆ ಸರಿಯಾಗಿ ಎರಡು ತಿಂಗಳು. 2020ರ ನವೆಂಬರ್ 26ರಂದು ‘ದೆಹಲಿ ಚಲೋ’ ಹೆಸರಿನಲ್ಲಿ ಮುಷ್ಕರ ಆರಂಭವಾಗಿತ್ತು. ಎರಡು ತಿಂಗಳ ಬಳಿಕ ಈಗ ‘ಪಾರ್ಲಿಮೆಂಟ್ ಚಲೋ’ ಎಂದು ಪರಿವರ್ತಿತಗೊಂಡಿದೆ.
ಈ ನಡುವೆ ಪ್ರತಿಭಟನಾನಿರತ ರೈತ ಸಂಘಟನೆಗಳ ಪ್ರತಿನಿಧಿಗಳು ಮತ್ತು ಕೇಂದ್ರ ಸರ್ಕಾರದ ನಡುವೆ 11 ಸುತ್ತಿನ ಮಾತುಕತೆ ಆಗಿವೆ. ರೈತರು ‘ಕೇಂದ್ರ ಸರ್ಕಾರ ಕೃಷಿ ಕಾನೂನುಗಳನ್ನು ವಾಪಸ್ ಪಡೆಯಲೇಬೇಕು, ಅದರ ಹೊರತು ಬೇರೆ ಬೇಡಿಕೆಯೂ ಇಲ್ಲ, ಬೇರೆ ಚರ್ಚೆಯೂ ಇಲ್ಲ’ ಎಂದು ಬಹಳ ಸ್ಪಷ್ಟವಾಗಿ ಹೇಳಿದ್ದಾರೆ. ತಮ್ಮ ನಿಲುವಿನ ಬಗ್ಗೆ ಅಷ್ಟೇ ಖಚಿತವಾಗಿಯೂ ಇದ್ದಾರೆ. ಕೇಂದ್ರ ಸರ್ಕಾರ ‘ಏನೇ ಆದರೂ ಕೃಷಿ ಕಾನೂನುಗಳನ್ನು ಮಾತ್ರ ಹಿಂಪಡೆಯುವುದಿಲ್ಲ’ ಎಂಬ ಹಠಮಾರಿತನವನ್ನೇ ಪ್ರದರ್ಶಿಸುತ್ತಿದೆ. ಪರಿಣಾಮವಾಗಿ ಸಮಸ್ಯೆ ಬಗೆಹರಿದಿಲ್ಲ. ಸಮಸ್ಯೆ ಬಗೆಹರಿಯದ ಕಾರಣ ರೈತರು ತಮ್ಮ ಹೋರಾಟವನ್ನು ಇನ್ನಷ್ಟು ತೀವ್ರಗೊಳಿಸಲು ಪಣ ತೊಟ್ಟಿದ್ದಾರೆ. ಅದರ ಫಲವೇ ‘ಪಾರ್ಲಿಮೆಂಟ್ ಚಲೋ’.
ಫೆಬ್ರವರಿ 01ರಂದು ದೆಹಲಿಯ ವಿವಿಧ ಭಾಗಗಳಿಂದ ರೈತರು ಪಾರ್ಲಿಮೆಂಟ್ ಕಡೆಗೆ ಪಾದಯಾತ್ರೆ ನಡೆಸುತ್ತಾರೆ ಎಂಬುದನ್ನು ಕ್ರಾಂತಿಕಾರಿ ಕಿಸಾನ್ ಯೂನಿಯನ್ ಅಧ್ಯಕ್ಷ ದರ್ಶನ್ ಪಾಲ್ ಸೋಮವಾರ ಅಧಿಕೃತವಾಗಿ ಹೇಳಿದ್ದಾರೆ. ಪಾರ್ಲಿಮೆಂಟ್ ನತ್ತ ಪಾದಯಾತ್ರೆ ತಮ್ಮ ಹೋರಾಟದ ಮುಂದುವರೆದ ಭಾಗವಾಗಿದ್ದು ಕೇಂದ್ರ ಸರ್ಕಾರ ತಂದಿರುವ ಕೃಷಿಗೆ ಸಂಬಂಧಿಸಿದ ಮೂರು ಕರಾಳ ಕಾನೂನುಗಳು ಕೊನೆಯಾಗುವವರೆಗೂ ಹೀಗೆ ಹಂತಹಂತವಾಗಿ, ಭಿನ್ನ ಭಿನ್ನವಾಗಿ ಹೋರಾಟ ಮಾಡುತ್ತಲೇ ಇರುತ್ತೇವೆ ಎಂದು ಕೂಡ ಹೇಳಿದ್ದಾರೆ
ಕೇಂದ್ರ ಸರ್ಕಾರ ಪ್ರತಿಭಟನೆ ದೆಹಲಿ ಚಲೋ ಹಂತದಲ್ಲಿ ಇದ್ದಾಗಲೇ ಸೂಕ್ತ ಪರಿಹಾರ ಕಂಡುಕೊಳ್ಳದ ಪರಿಣಾಮ ಈಗ ಪಾರ್ಲಿಮೆಂಟ್ ಚಲೋ ಚಳವಳಿಗೆ ಮುಖಾಮುಖಿ ಆಗಬೇಕು. ಈಗಲೂ ಕೇಂದ್ರ ಸರ್ಕಾರ ಉಡಾಫೆಯ ವರ್ತನೆಯನ್ನು ತೋರಬಹುದು, ತೋರದಿರಬಹುದು. ಅದನ್ನು ಈಗ ಹೇಳುವುದು ಕಷ್ಟ. ಆದರೆ ಎರಡೂ ಸಾಧ್ಯತೆಗಳಂತೂ ಇವೆ. ಏಕೆಂದರೆ ಮೊದಲಿಗೆ ರೈತರು ದೆಹಲಿ ಚಲೋ ಹಮ್ಮಿಕೊಂಡಾಗಲೂ ಹೀಗೆ ಉಡಾಫೆಯಿಂದ ವರ್ತಿಸಿತ್ತು. ‘ಎಷ್ಟು ದಿನ ಪ್ರತಿಭಟನೆ ಮಾಡುತ್ತಾರೆ ನೋಡೇಬಿಡೋಣ’ ಎಂಬ ಮನೋಸ್ಥಿತಿಯಲ್ಲಿ ಇತ್ತು. ಪ್ರತಿಭಟನೆಯನ್ನು ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಹತ್ತಿಕ್ಕಲು ಯತ್ನಿಸಿತು. ಅನ್ನದಾತರನ್ನು ಖಾಲಿಸ್ತಾನಿಗಳು, ದೇಶದ್ರೋಹಿಗಳೆಂದು ಬಿಂಬಿಸುವ ಪ್ರಯತ್ನ ಮಾಡಿತು. ಹೋರಾಟಕ್ಕೆ ರಾಜಕೀಯದ ಬಣ್ಣ ಬಳಿಯುವ ಕೆಲಸವನ್ನೂ ಮಾಡಿತು. ಅದೇ ರೀತಿ ಈಗಲೂ ಉಡಾಫೆ ತೋರಬಹುದು.
ಅಥವಾ ತಮ್ಮ ಯಾವ ವರಸೆಗೂ ರೈತರು ಬಗ್ಗುವುದಿಲ್ಲ ಎಂಬ ಕಾರಣಕ್ಕೆ ಕೇಂದ್ರ ಸರ್ಕಾರ ನಾಜೂಕಾಗಿ ನಿಭಾಯಿಸುವುದಕ್ಕೂ ಮುಂದಾಗಬಹುದು. ಉದಾಹರಣೆಗೆ ಸಿಎಎ ವಿಷಯದಲ್ಲಿ ದೆಹಲಿಯ ಶಾಹಿನ್ ಬಾಗ್ ನಲ್ಲಿ ನಡೆಯುತ್ತಿದ್ದ ಶಾಂತಯುತ ಹೋರಾಟವನ್ನು ಕೊರೋನಾ ಕಾರಣ ಕೊಟ್ಟು ಮೊಟಕುಗೊಳಿಸಲಾಯಿತು. ಅಲ್ಲಿ ಮತ್ತೆ ಅಂಥ ಪ್ರತಿಭಟನೆ, ಒಗ್ಗಟ್ಟು ಕಂಡುಬರುವುದು ಸದ್ಯಕ್ಕೆ ಕಷ್ಟ. ಅದೇ ರೀತಿ ’18 ತಿಂಗಳ ಕಾಲ ಕೃಷಿ ಕಾನೂನುಗಳನ್ನು ಅಮಾನತ್ತಿನಲ್ಲಿಡುತ್ತೇವೆ, ಇದರ ಬಗ್ಗೆ ವಿಸ್ತೃತ ಚರ್ಚೆಯಾಗಲಿ, ನಂತರ ತೀರ್ಮಾನ ಮಾಡೋಣ’ ಎಂಬ ಪ್ರಸ್ತಾಪ ಇಟ್ಟಿದ್ದಾರೆ. ಇದು ಕೂಡ ಒಂದು ರೀತಿಯಲ್ಲಿ ‘ಮೊದಲು ಪ್ರತಿಭಟನೆಯನ್ನು ಮೊಟಕುಗೊಳಿಸೋಣ, ನಂತರ ನೊಡಿಕೊಳ್ಳೋಣ’ ಎಂಬ ತಂತ್ರದಂತಿದೆ.
2020ರ ನವೆಂಬರ್ 26ರಿಂದ ಈವರೆಗೆ ರೈತರು ಹಮ್ಮಿಕೊಂಡ ಭಿನ್ನವಾದ ಪ್ರತಿಭಟನಾ ಕ್ರಮವನ್ನು ಸೂಕ್ಷ್ಮವಾಗಿ ಗಮನಿಸಿದರೆ ಅವರ ಬತ್ತಳಿಕೆಯಲ್ಲಿ ಇನ್ನೂ ಹಲವು ಬಾಣಗಳಿರಬಹುದು ಎನಿಸುತ್ತದೆ. ಇನ್ನೊಂದೆಡೆ ಕೇಂದ್ರ ಸರ್ಕಾರವು ಸದ್ಯ ರೈತರ ಪ್ರತಿಭಟನೆಗೆ ಮಣಿದು ತಾನು ತಂದಿರುವ ಕೃಷಿ ಕಾನೂನುಗಳನ್ನು ಹಿಂಪಡೆದರೆ ತನ್ನ ಮುಕುಟಮಣಿ ಕಳಚಿ ಬೀಳಲಿದೆ ಎಂದು ಭಾವಿಸಿದೆ. ನಿರ್ಣಾಯಕ ಸಮರಕ್ಕೆ ಕಹಳೆ ಊದಿರುವುದರಿಂದ ಸಂಭವನೀಯ ಸೋಲು ಗೆಲುವುಗಳಿಗೂ ಅದು ಅಣಿಯಾಗಲೇಬೇಕಿದೆ.