ಶನಿವಾರದಂದು ಕರ್ನಾಟಕ ರಕ್ಷಣಾ ವೇದಿಕೆ ಆಯೋಜಿಸಿದ್ದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣರ 190ನೇ ಹುತಾತ್ಮ ದಿನಾಚರಣೆಯನ್ನು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟಿಸಿದ್ದಾರೆ.
ಬಳಿಕ ಮಾತನಾಡಿದ ಅವರು, 1948ರ ಜನವರಿ 30 ರಂದು ಮಹಾತ್ಮ ಗಾಂಧಿಯವರ ಹತ್ಯೆಯಾಯಿತು. ಅಂದಿನಿಂದ ಈ ದಿನವನ್ನು ಹುತಾತ್ಮ ದಿನವಾಗಿ ಆಚರಣೆ ಮಾಡಲಾಗುತ್ತಿದೆ. ಈ ಹುತಾತ್ಮ ದಿನದಂದು ಗಾಂಧೀಜಿಯವರನ್ನಷ್ಟೇ ಅಲ್ಲ, ದೇಶಕ್ಕಾಗಿ ತ್ಯಾಗ ಬಲಿದಾನಗೈದ ಪ್ರತಿಯೊಬ್ಬರನ್ನು ಸ್ಮರಿಸಿ, ಗೌರವಿಸುತ್ತಿದ್ದೇವೆ. ಮಹಾತ್ಮ ಗಾಂಧಿಯವರಾಗಲೀ, ಸಂಗೊಳ್ಳಿ ರಾಯಣ್ಣನೇ ಆಗಲಿ ಅಧಿಕಾರದ ಆಸೆಗಾಗಿ, ಸ್ವಾರ್ಥ ಸಾಧನೆಗಾಗಿ ಹೋರಾಟ ಮಾಡಿದವರಲ್ಲ. ದೇಶವನ್ನು ಬ್ರಿಟಿಷರ ಅಧೀನದಿಂದ ಸ್ವತಂತ್ರಗೊಳಿಸಬೇಕು ಎಂಬ ಏಕೈಕ ಉದ್ದೇಶದೊಂದಿಗೆ ಹೋರಾಡಿದರು, ಹೋರಾಟದ ಹಾದಿಯಲ್ಲೇ ಪ್ರಾಣಾರ್ಪಣೆ ಮಾಡಿದರು ಎಂದು ಹೇಳಿದ್ದಾರೆ.
ಸ್ವಾತಂತ್ರ್ಯ ಹೋರಾಟದ ರೀತಿಯಲ್ಲೆ ನೆಲ, ಜಲ, ಭಾಷೆಗಾಗಿ ಕನ್ನಡಪರ ಸಂಘಟನೆಗಳು ಸಲ್ಲಿಸುತ್ತಿರುವ ಸೇವೆ ಶ್ಲಾಘನೀಯ. ನಾಡಿನ ಎಲ್ಲ ಕನ್ನಡಪರ ಸಂಘಟನೆಗಳಿಗೆ ನನ್ನ ಕೃತಜ್ಞತೆಗಳು. ರಾಯಣ್ಣನಂತಹ ನಾಡ ಪ್ರೇಮಿಗಳು ಇವರೆಲ್ಲರ ಹೋರಾಟಕ್ಕೆ ಇನ್ನಷ್ಟು ಸ್ಪೂರ್ತಿಯಾಗಲಿ ಎಂದು ಆಶಿಸುತ್ತೇನೆ. ತಮ್ಮ ರಾಜಕೀಯ ಉಳಿವಿಗಾಗಿ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅಧಿಕಪ್ರಸಂಗತನದ ಮಾತುಗಳನ್ನು ಆಡುತ್ತಾರೆ. ಮಹಾಜನ್ ವರದಿಯ ಪ್ರಕಾರ ಬೆಳಗಾವಿ ನಮ್ಮದಾಗಿದೆ, ನಮ್ಮದಾಗಿಯೇ ಇರಲಿದೆ. ಒಮ್ಮೆ ಇತ್ಯರ್ಥವಾದ ವಿಚಾರವನ್ನು ಮತ್ತೆ ವಿವಾದ ಮಾಡಲು ಯತ್ನಿಸಿದರೆ ಅದು ಖಂಡನೀಯ ಎಂದು ಖಂಡನೆ ವ್ಯಕ್ತಪಡಿಸಿದ್ದಾರೆ.
1983ರಲ್ಲಿ ನಾನು ಪಕ್ಷೇತರ ಶಾಸಕನಾಗಿ ವಿಧಾನಸಭೆಗೆ ಆಯ್ಕೆಯಾಗಿದ್ದೆ, ಅಂದಿನ ಮುಖ್ಯಮಂತ್ರಿಯಾಗಿದ್ದ ರಾಮಕೃಷ್ಣ ಹೆಗಡೆಯವರು ಕನ್ನಡ ಕಾವಲು ಸಮಿತಿಯನ್ನು ರಚನೆ ಮಾಡಿ, ಆ ಸಮಿತಿಯ ಪ್ರಥಮ ಅಧ್ಯಕ್ಷನಾಗಿ ನನ್ನನ್ನು ನೇಮಕ ಮಾಡಿದ್ದರು. ಒಂದು ವರ್ಷಕ್ಕೂ ಹೆಚ್ಚು ಕಾಲ ರಾಜ್ಯಾದ್ಯಂತ ಸಂಚರಿಸಿ, ಸಾಕಷ್ಟು ಕೆಲಸ ಮಾಡಿದ್ದೆ. ಮಾತೃಭಾಷೆಯ ಬಗ್ಗೆ ಅಭಿಮಾನವಿರಬೇಕೇ ಹೊರತು ದುರಾಭಿಮಾನವಿರಬಾರದು. ಕನ್ನಡಿಗರಲ್ಲಿ ಸ್ವಲ್ಪ ಔದಾರ್ಯ ಗುಣ ಹೆಚ್ಚು, ಹೀಗಾಗಿಯೇ ಇಲ್ಲಿರುವ ತಮಿಳರ ಜೊತೆ ತಮಿಳಲ್ಲಿ, ಹಿಂದಿ ಮಾತನಾಡುವವರ ಜೊತೆ ಕನ್ನಡಿಗರಾದ ನಾವೇ ಹಿಂದಿಯಲ್ಲಿ ವ್ಯವಹರಿಸುತ್ತೇವೆ. ಇದರಿಂದ ನಷ್ಟವಾಗುತ್ತಿರುವುದು ಕನ್ನಡ ಭಾಷೆಗೆ ಎಂಬುದನ್ನು ನಾವೆಲ್ಲ ಅರ್ಥಮಾಡಿಕೊಳ್ಳಬೇಕು ಎಂದು ಹೇಳಿದ್ದಾರೆ.
ಕನ್ನಡ ನಾಡಿನಲ್ಲಿ ವಾಸ ಮಾಡುತ್ತಿರುವ ಪ್ರತಿಯೊಬ್ಬನು ಕನ್ನಡಿಗನೆ. ಯಾರೆಲ್ಲ ಹೊರ ರಾಜ್ಯಗಳಿಂದ ಬಂದು ಇಲ್ಲಿ ನೆಲೆ ನಿಂತಿದ್ದಾರೆ, ಅವರು ಕನ್ನಡ ಕಲಿಯಬೇಕಾದ ಅನಿವಾರ್ಯ ಪರಿಸ್ಥಿತಿ ನಿರ್ಮಾಣ ಮಾಡಿದಾಗ ಮಾತ್ರ ಭಾಷೆಯ ಬಳಕೆ ಹೆಚ್ಚಾಗಲಿದೆ. ಭಾಷೆಯೊಂದು ಹೆಚ್ಚೆಚ್ಚು ಬಳಕೆಯಾದಾಗ ಮಾತ್ರ ಬೆಳೆಯಲು ಸಾಧ್ಯ. ಕಿತ್ತೂರು ಸಂಸ್ಥಾನದ ಸೈನ್ಯದಲ್ಲಿ ಒಬ್ಬ ಸಾಮಾನ್ಯ ಸೈನಿಕನಾಗಿದ್ದ ಸಂಗೊಳ್ಳಿ ರಾಯಣ್ಣ, ಇಂದು ಮಹಾನ್ ವ್ಯಕ್ತಿಯಾಗಿ ಜನಮಾನಸದಲ್ಲಿ ಶಾಶ್ವತವಾಗಿ ಉಳಿಯಲು ಆತನಲ್ಲಿದ್ದ ದೇಶಪ್ರೇಮ, ಸ್ವಾಮಿನಿಷ್ಠೆ ಕಾರಣ. ಅವರ ತ್ಯಾಗ, ಬಲಿದಾನವನ್ನು ಈ ದಿನ ನಾವೆಲ್ಲ ಅತ್ಯಂತ ಗೌರವದಿಂದ ಸ್ಮರಿಸೋಣ. ರಾಯಣ್ಣನಂತೆ ಸಾಕಷ್ಟು ಮಂದಿ ಬ್ರಿಟಿಷರ ವಿರುದ್ಧ ಹೋರಾಡಿದ್ದಾರೆ. ಅವರೆಲ್ಲರನ್ನು ಸಮಾನವಾಗಿ ಗೌರವಿಸಬೇಕು. ಅದು ಗಾಂಧೀಜಿಯಿರಲೀ, ಭಗತ್ ಸಿಂಗ್ ಇರಲೀ, ಟಿಪ್ಪು ಸುಲ್ತಾನನಿರಲಿ. ಇತಿಹಾಸವನ್ನು ಇತಿಹಾಸವಾಗಿ ನೋಡಬೇಕೇ ವಿನಃ ಧರ್ಮದ ಕನ್ನಡಕದಿಂದಲ್ಲ. ಇತಿಹಾಸ ತಿರುಚುವ ಪ್ರಯತ್ನ ಮಾಡಿದರೆ ಅದು ದೇಶದ್ರೋಹವಾಗುತ್ತದೆ ಎಂದು ಹೇಳಿದ್ದಾರೆ.
ಧರ್ಮವೆಂದರೆ ವ್ಯಕ್ತಿಯೊಬ್ಬನ ಜೀವನಶೈಲಿ. ಇನ್ನೊಬ್ಬರಿಗೆ ಕೇಡು ಬಯಸದಿರುವುದೇ ನಿಜವಾದ ಧರ್ಮ. ಹುಟ್ಟುತ್ತಾ ಪ್ರತಿ ಮಗುವು ವಿಶ್ವಮಾನವನಾಗಿಯೇ ಹುಟ್ಟುತ್ತದೆ, ಬೆಳೆಯುತ್ತಾ ಸಮಾಜ ಆತನನ್ನು ಅಲ್ಪಮಾನವನಾಗಿಸುತ್ತದೆ ಎಂದು ಕುವೆಂಪು ಹೇಳಿದ್ದಾರೆ. ಹಾಗಾಗಿ ನಮ್ಮೆಲ್ಲರ ಪ್ರಯತ್ನ ಸದಾ ವಿಶ್ವಮಾನವತ್ವದ ಕಡೆಗೆ ಇರಬೇಕು. ದೇಶದ ಸ್ವಾತಂತ್ರ್ಯಕ್ಕಾಗಿ ಬಲಿದಾನಗೈದ ಮಹಾತ್ಮ ಗಾಂಧಿ, ಲಾಲ್ ಬಹಾದ್ದೂರ್ ಶಾಸ್ತ್ರಿ, ಸಂಗೊಳ್ಳಿ ರಾಯಣ್ಣ ಮುಂತಾದವರಿಂದ ಸ್ಪೂರ್ತಿ ಪಡೆದು, ಅವರು ಸಾಗಿದ ಹಾದಿಯಲ್ಲಿ ನಾವು ಸಾಗಬೇಕು. ಅದು ಮಹಾನ್ ವ್ಯಕ್ತಿಗಳಿಗೆ ನಾವು ಸಲ್ಲಿಸುವ ನಿಜವಾದ ಗೌರವವಾಗುತ್ತದೆ ಎಂದವರು ನುಡಿದಿದ್ದಾರೆ.
ಈ ವೇಳೆ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷರಾದ ಡಾ. ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ, ಕ.ರಾ.ವೇ ಯ ಅಧ್ಯಕ್ಷರಾದ ಟಿ.ಎ. ನಾರಾಯಣ ಗೌಡ ಸೇರಿ ಹಲವು ಗಣ್ಯರು ಉಪಸ್ಥಿತರಿದ್ದರು.